Friday, July 20, 2007
ರಾಷ್ಟ್ರಪತ್ನಿ!?
ಒಬ್ಬ ಗೆಳೆಯ ಸಿನಿಮಾ ಟಾಕೀಸಿನಲ್ಲಿ ಟಿಕೆಟ್ ಕ್ಯೂನಲ್ಲಿ ನಿಂತಾದ ಸಿಗುತ್ತಾನೆ. ಆದರೂ ಆತ ಕೇಳೋದು "ಸಿನಿಮಾಕ್ಕಾ’? ಸಿನಿಮಾ ಟಿಕೆಟ್ ತಗೊಂಡು ಸಿನೆಮಾಕ್ಕಲ್ಲದೆ ವಿಮಾನದಲ್ಲಿ ಹೋಗೋಕಾಗುತ್ತಾ? ಬೆಳಗ್ಗೆ ಚೆನ್ನಾಗಿ ಡ್ರೆಸ್ ಮಾಡಿ ಬುಕ್ ಹಿಡ್ದು ಕಾಲೇಜಿಗೆ ಹೊರಟಿದ್ರೆ ಪಕ್ಕದ ಮನೆಯವ ಎದುರಿಗೆ ಬಂದು "ಕಾಲೇಜಿಗಾ?’ ಅನ್ನುತ್ತಾನೆ. ಸಿಟ್ಟು ಬಂದ್ರೆ ಇಲ್ಲಾ ಸುಡುಗಾಡಿಗೆ ಅನ್ನಬೇಕಷ್ಟೆ! ನಡ್ಕೊಂಡು ಹೊರಟ್ರೆ ಎದುರಿಗೆ ಸಿಕ್ಕಿದ ಪರಿಚಿತರು ಆರಾಮಾ? ಅಂತಾರೆ. ಎಲಾ ಇವನಾ! ಆರಾಮಿಲ್ಲದೇ ಹೋಗಿದ್ದರೆ ಹೀಗೆ ನಡ್ಕೊಂಡು ಬರೋಕಾಗ್ತಿತ್ತಾ? ಬೆಳಗ್ಗೆ ಸಿಕ್ಕರೆ ತಿಂಡಿ ಆಯ್ತಾ ಅಂತ ಕೇಳ್ತಾರೆ. ಅಕಸ್ಮಾತ್ ನೀವು ಇಲ್ಲಾ ಅಂತ ಹೇಳಿ ನೋಡಿ. ಆತನೇನೂ ನಿಮ್ಮನ್ನ ಹೋಟೆಲ್ಗೆ ಕರ್ಕೊಂಡು ಹೋಗಿ ತಿಂಡಿ ತಿನ್ಸಲ್ಲ. ಆರಾಮಿಲ್ಲ ಅಂತಂದ್ರೆ ಆಸ್ಪತ್ರೆ ಕರ್ಕೊಂಡು ಹೋಗಿ ಔಷಧಿ ಕೊಡಿಸಲ್ಲ.ಪ್ರಶ್ನೆ ಕೇಳೋರಿಗೂ ಗೊತ್ತು ನೀವು ಹೊರಟಿದ್ದು ಸಿನೇಮಾಕ್ಕೆ, ಕಾಲೇಜಿಗೆ ಅಂತ. ಆದ್ರೆ ಎದ್ರು ಕಂಡ ಕೂಡ್ಲೆ ಏನಾದ್ರೂ ಮಾತಾಡ್ಬೇಕಲ್ವಾ? ಅದ್ಕೆ ಹಾಗೆಲ್ಲ ಕೇಳೀಬಿಡ್ತಾರೆ. ನಾವು ಕೂಡ ಅದ್ಕೆ ಹೊರತಲ್ಲ.ಕೆಲವರು ಸಭೆ ಸಮಾರಂಭಗಳಲ್ಲಿ ಮಾತನಾಡುವುದನ್ನು ಗಮನಿಸುತ್ತ ಹೋದರೆ ನಗು ಬರುತ್ತದೆ. ಗಮನಿಸಿದರೆ ನಿಮಗೂ ಇಂಥವು ಸಾಕಷ್ಟು ಸಿಕ್ಕಾವು. ಕೆಲವರು ಮಾತನಾಡುವಾಗ "ನಮ್ಮ ಘನ ಸರಕಾರದ’... ಅಂತ್ಲೇ ಮಾತಿಗೆ ಶುರುವಿಡುತ್ತಾರೆ. ಅಂದರೆ ದ್ರವ ಸರಕಾರ, ಅನಿಲ ಸರಕಾರ ಅಂತ ಬೇರೆ ಸರಕಾರಗಳಿವೆಯೇ? ಅವರು ಮಾತನ್ನು ಮುಂದುವರಿಸುತ್ತ ನಮ್ಮ ಘನ ಸರಕಾರದ ಗೌರವಾನ್ವಿತ ಮಂತ್ರಿಯವರಾದ... ಅನ್ನುತ್ತಾರೆ. ಅರೆ! ಗೌರವಾನ್ವಿತ ಸಚಿವರು ಅಂದರೆ? ಅಗೌರವಾನ್ವಿತ ಸಚಿವರೂ ಇದ್ದಾರೆಯೇ? ಎಂಬ ಸಂಶಯ ಹುಟ್ಟಿಕೊಂಡು ಬಿಡುತ್ತದೆ. ಕೆಲವರು ಗೌರವಾನ್ವಿತ ಶಬ್ದದ ಬದಲು ಮಾನ್ಯ (ಅಮಾನ್ಯ ಸಚಿವರು ಇದ್ದಾರಾ?) ಬಳಸ್ತಾರೆ. ಇನ್ನೂ ಕೆಲವರಿದ್ದಾರೆ ಅವರು ಪೂಜ್ಯ (ಸೊನ್ನೆ-ಝೀರೊ) ಮೇಯರ್ ಅಂತೆಲ್ಲ ಕರೆದು ಅವರನ್ನು (ಅವ)ಮಾನಿಸ್ತಾ ಇರ್ತಾರೆ. ಆದ್ರೂ ಪಾಪ ನಮ್ಮ ರಾಜಕಾರಣಿಗಳಿಗೆ ಗೊತ್ತಾಗೋದೇ ಇಲ್ಲ!! ಅವರು ಅದನ್ನೇ ದೊಡ್ಡ ಗೌರವದ ಶಬ್ದ ಅಂದ್ಕೊಡು ಹುಳ್ಳನೆಯ ನಗುವಿನ ಪೋಜ಼ು ಕೊಡುತ್ತಿರುತ್ತಾರೆ.ಸ್ವಾಮೀಜಿಗಳ ವಿಷಯದಲ್ಲೂ ಅಷ್ಟೆ. ಶ್ರೀ ಶ್ರೀ ಶ್ರೀ ಹೀಗೆ ಎಷ್ಟು ಸಾಧ್ಯವೋ ಅಷ್ಟು ಶ್ರೀಗಳನ್ನು ಹಿಂದೆ ಸಿಕ್ಕಿಸಿಯೇ ಅವರ ಹೆಸರು ಬರೆಯಲಾಗುತ್ತದೆ. ಸ್ವಾಮೀಜಿಗಳಿಗೆ ಈ ಶ್ರೀ ಬಗ್ಗೆ ತೀವ್ರ ಆಸಕ್ತಿ- ಆಕ್ಷೇಪ ಇಲ್ಲದಿದ್ದರೂ, ಅಭಿಮಾನಿಗಳಿಗೆ ಮಾತ್ರ ಸ್ವಾಮೀಜಿ ಹೆಸರಿನ ಹಿಂದೆ ಎಷ್ಟು ಸಾಧ್ಯವೋ ಅಷ್ಟು ಶ್ರೀ ಹಾಕಿದಾಗ ಮಾತ್ರ ಸಮಾಧಾನ. ಸತ್ಯವಾಗಿ ಹೇಳಬೇಕೆಂದರೆ ಸ್ವಾಮೀಜಿ ಶಬ್ದ ಇದೆಯಲ್ಲ ಅದರಲ್ಲಿ "ಜಿ’ ಅದು ಗೌರವ ಸೂಚಕ ಶಬ್ಧ. ಹೀಗಿರುವಾಗ ಪುನಃ ಹಿಂದೆ ಶ್ರೀ ಶ್ರೀ ಶ್ರೀ ಬೇಕೆ? ಹೀಗೆ ಹೇಳಿದೆ ಅಂತ ಅಡಿಕೆ ಪತ್ರಿಕೆ ಸಂಪಾದಕರ ಹೆಸರನ್ನು (ಶ್ರೀಪಡ್ರೆ) ಶ್ರೀ ಬಳಸದೇ ಬರೆಯ(ಹೇಳ)ಬೇಡಿ!!ನಮ್ಮ ಕಚೇರಿಯ ಒಬ್ಬರನ್ನು ಕೇಳಿಕೊಂಡು ಒಂದು ದಿನ ಒಬ್ರು ಕಚೇರಿಗೆ ಬಂದಿದ್ರು. ನಾನು ಅವರಿಲ್ಲ ನಾಲ್ಕು ಗಂಟೆ ಮೇಲೆ ಬರ್ತಾರೆ ಅಂದೆ. ಅಷ್ಟಂದದ್ದೇ ಸಾಕು ಅಲ್ಲೇ ಸಮೀಪದಲ್ಲಿದ್ದ ಉಜಿರೆ ಕಾಲೇಜು ವಿದ್ಯಾರ್ಥಿ ವಿನುತ "ಸರ್ ನಾಲ್ಕು ಗಂಟೆ ಮೇಲೆ’ ಅಂದೆ ಏನು? ಎನ್ನಬೇಕೆ. ಅದಕ್ಕೆ ಅದೇ ಕಾಲೇಜಿನ ಚೇತನಾ ಕೂಡ ಧ್ವನಿಗೂಡಿಸಿದರು. ಅವರನ್ನು ಯಾವಾಗಲೂ ಇಕ್ಕಟ್ಟಿಗೆ ಸಿಲುಕಿಸುತ್ತಿದ್ದ ನನ್ನನ್ನು ಪೇಚಿಗೀಡು ಮಾಡುವುದು ಅವರ ಉದ್ದೇಶವಾಗಿತ್ತು. ಆದರೆ ನಮ್ಮ ಕಚೇರಿ ಮೊದಲ ಮಹಡಿಯಲ್ಲಿರುವುದರಿಂದ ನಾಲ್ಕು ಗಂಟೆಗೆ ಅವರು ಮೇಲೆ (ಮೊದಲ ಮಹಡಿಗೆ) ಬರುತ್ತಾರೆ. ಅದನ್ನೇ ನಾನು ನಾಲ್ಕು ಗಂಟೆ ಮೇಲೆ ಬರುತ್ತಾರೆ ಎಂದದ್ದು ಎಂದು ವಿವರಿಸಿ ಇಕ್ಕಟ್ಟಿನಿಂದ ಬಚಾವಾದೆ. ಆದರೆ ನಾನಾಡಿದ ಮಾತು ವಾಸ್ತವದಲ್ಲಿ ತಪ್ಪೇ ಆಗಿತ್ತು.ಕೆಲವು ಪದವಿ ಸೂಚಕಗಳನ್ನು ನಾವು ಸ್ತ್ರೀಲಿಂಗ, [ಲ್ಲಿಂಗ ಬಳಸಿ ಕರೆಯೋದರ ಕುರಿತು ಸಾಲಿಗ್ರಾಮದ ನರಸಿಂಹ ಐತಾಳ್ ಅವರು ನನ್ನ ಬಳಿ ಯಾವಾಗಲೂ ತಕರಾರು ತೆಗೆಯುತ್ತಾರೆ. ಅಧ್ಯಕ್ಷ ಶಬ್ದವನ್ನು ಮಹಿಳೆಯರಿಗೆ ಅಧ್ಯಕ್ಷೆ ಎಂದು ಬಳಸುವುದು ತಪ್ಪು ಎಂಬುದು ಅವರ ಅಂಬೋಣ. ಅದೇರೀತಿ ಉಪಾಧ್ಯಕ್ಷೆ, ಪ್ರಾಂಶುಪಾಲೆ, ರಾಜ್ಯಪಾಲೆ ಅಂತೆಲ್ಲ ಬಳಸುತ್ತಾರೆ. ಆದರೆ ಕಾರ್ಯದರ್ಶಿ ಸ್ಥಾನದಲ್ಲಿ ಸ್ತ್ರೀಯರಿದ್ದಾಗ ಕಾರ್ಯ"ದರ್ಶಿನಿ’ ಎಂದು ಬಳಸಬಹುದಲ್ಲ ಅಂತ ಅವರು ಹೇಳುತ್ತಿರುತ್ತಾರೆ.ನಾನು ಅವರು ಒಂದೆರಡು ಬಾರಿ ಈ ವಿಷಯದಲ್ಲಿ ಚರ್ಚಿಸಿದ್ದಿದೆ. ಈ ಚರ್ಚೆ ಏನಿದ್ದರೂ ನಮ್ಮೊಳಗೆ ಇತ್ತು. ಆದರೆ ಇದೇ ಚರ್ಚೆ ರಾಷ್ಟ್ರದಾದ್ಯಂತ ಚರ್ಚೆಗೆ ಬಂದೀತು ಎಂದು ನಾನ್ಯಾವತ್ತೂ ಅಂದುಕೊಂಡಿರಲಿಲ್ಲ. ಪ್ರತಿಭಾ ಪಾಟೀಲ್ ರಾಷ್ಟ್ರಪತಿ ಸ್ಥಾನದ ಅಭ್ಯರ್ಥಿಯಾಗುವುದರೊಂದಿಗೆ ಅದೂ ಆಗಿಹೋಯಿತು.ಔಟ್ಸ್ವಿಂಗ್: ಅಧ್ಯಕ್ಷೆ, ಪ್ರಾಂಶುಪಾಲೆ, ರಾಜ್ಯಪಾಲೆ ಎಂದೆಲ್ಲ ಕರೆಯಬಹುದಾದರೆ ಮಹಿಳೆ ರಾಷ್ಟ್ರಪತಿ ಹುದ್ದೆ ಅಲಂಕಿಸಿದರೆ ಆಗ ರಾಷ್ಟ್ರಪತ್ನಿ ಎಂದೂ, ವಿಶ್ವವಿದ್ಯಾಲಯದ (ಕುಲಪತಿ) ಮುಖ್ಯಸ್ಥರಾದ ಮಹಿಳೆಯರನ್ನು "ಕುಲಪತ್ನಿ’ದು ಕರೆದರೂ ಕರೆಯಬಹುದು!!
Subscribe to:
Post Comments (Atom)
4 comments:
ಏನು ಮಾರಾಯರೇ ನೀವು ಇಲ್ಲಿಗೆ ಲಗ್ಗೆ ಇಟ್ಟಿರಲ್ಲ. ಒಂದು ಸುದ್ದಿಯನ್ನಾದರೂ ಹೇಳಬಾರದೇ.
ಸುದ್ದಿ ಹೇಳೋಕೆ ನಿಮ್ಮ ಸುದ್ದಿ ನಮಗೆ ಸಿಗ್ತಿರ್ಲಿಲ್ವಲ್ಲ. ಇನ್ಮುಂದೆ ಕೊಡೋಣ. ಅಂದಹಾಗೆ ಹೇಗೆ ನಡೀತಿದೆ ಕೆಕೆ ಕೆಲಸ?
nice
Nice one...
Post a Comment