Sunday, May 20, 2007
ರಿಸ(ಇನ್‌ಸ)ಲ್ಟು
ಪರೀಕ್ಷೆ ದಿನ ಹೆಚ್ಚು ಟೆನ್ಶನ್ ಇರುತ್ತೊ? ರಿಸಲ್ಟ್ ದಿನಾನೊ? ಅಂತ ಯಾರಿಗಾದರೂ ಪ್ರಶ್ನೆ ಕೇಳಿ ನೋಡಿ. ರಿಸಲ್ಟಿನ ದಿನ ಅಂದಾರು. ನನ್ನ ದೃಷ್ಟೀಲಿ ರಿಸಲ್ಟ್ (ಫಲಿತಾಂಶ) ಪ್ರಕಟವಾಗೊ ದಿನಾನೇ ಹೆಚ್ಚು ಟೆನ್ಶನ್ ಇರುತ್ತೆ. ನಿಜವಾದ ಬಣ್ಣ ಗೊತ್ತಾಗೋದೇ ರಿಸಲ್ಟ್‌ನಲ್ಲಲ್ವೆ. ಪರೀಕ್ಷೆ ಆದ್ರೆ ಬರ್‍ದು ಮನೆಗೆ ಬಂದು "ಚೆನ್ನಾಗಾಗಿದೆ’ ಎಂದು ಹೇಳಿ ಬಿಟ್ಟರೆ ಮುಗೀತು. ರಿಸಲ್ಟ್‌ವರೆಗೆ ಹಾಯಾಗಿರಬಹುದು.ನಾನಂತೂ ಒಂದು ರೂಢಿ ಅಥವಾ ಚಟ ಬೆಳೆಸಿಕೊಂಡು ಬಿಟ್ಟಿದ್ದೆ. ಅದೇನಂದ್ರೆ ಪರೀಕ್ಷೆಯಲ್ಲಿ ಉತ್ತರ ಎಷ್ಟೇ ಕೆಟ್ಟದಾಗಿ ಬರೆದಿರಲಿ. ಪಾಸಾಗೋದು ಕಷ್ಟ ಅಂತ್ಲೇ ಅನಿಸಿರಲಿ. ಮನೆಗೆ ಬಂದು ಅಪ್ಪ-ಅಮ್ಮನಿಗೆ ಪರೀಕ್ಷೆ ಚಲೋ ಆಗಿದೆ ಅಂತ್ಲೇ ಹೇಳ್ತಿದ್ದೆ. ಅಟಲೀಸ್ಟ್ ಅವರು ರಿಸಲ್ಟ್ ಬರೋವರೆಗಾದ್ರೂ ಹಾಯಾಗಿರ್‍ಲಿ ಅನ್ನೋದು ನನ್ನಾಸೆ. ಪರೀಕ್ಷೆ ಚೆನ್ನಾಗಾಗಿಲ್ಲ ಅಂದ್ಬಿಟ್ರೆ ಅವತ್ನಿಂದ ರಿಸಲ್ಟ್ ಬರೋವರೆಗೂ ಟೆನ್ಶನ್. ರಿಸಲ್ಟ್ ಬಂದ್ಮೇಲೆ ಟೆನ್ಶನ್ ಆಗೋದು ಗ್ಯಾರಂಟಿ ಅಂತ ನಂಗೆ ಗೊತ್ತು. ಪರೀಕ್ಷೆ ಚೆನ್ನಾಗಾಗಿದೆ ಅಂದ್ರೆ ರಿಸಲ್ಟ್ ಬರೋತನ್ಕ ಅವರಿವರಿಂದ ಇನ್‌ಸಲ್ಟ್ (ಅವಮಾನ) ಮಾಡಿಸ್ಕೊಳ್ದೆ ನಾನೂ ಆರಾಮಾಗಿರಬಹುದಲ್ವಾ?ನಮ್ಮ ಜನಾನೇ ಹಾಗೆ ಮಕ್ಕಳ ರಿಸಲ್ಟ್ ಬಗ್ಗೆ ಮಕ್ಕಳಿಗಿಂತ ಹೆಚ್ಚು ಟೆನ್ಶನ್ ಮಾಡ್ಕೊಂಡು, ಮಕ್ಕಳಿಗೂ ಟೆನ್ಶನ್ ಕೊಡ್ತಾರೆ. ಫೇಲಾದ ಮಕ್ಳ ಅಪ್ಪ- ಅಮ್ಮ ಮಾತಾಡೋದು ನೋಡಿದ್ರೆ ಪರೀಕ್ಷೇಲಿ ಫೇಲಾದೋರು, ಕಮ್ಮಿ ಮಾರ್ಕ್ಸ್ ತಗೊಂಡೋರು ಜಗತ್ತಲ್ಲಿ ಏನೂ ಸಾಧಿಸಿಯೇ ಇಲ್ಲ ಅನ್ನಿಸಿಬಿಡುತ್ತೆ. ಸಮಾಜದಲ್ಲಿ ಸರಿಯಾಗಿ ನೋಡಿದ್ರೆ ಫಸ್ಟ್ ರ್‍ಯಾಂಕ್ ಬಂದೋರಿಗಿಂತ ಪಾಸ್ ಕ್ಲಾಸಲ್ಲಿ ಪಾಸಾದೋರು ಸಾಧಿಸಿದ್ದೇ ಹೆಚ್ಚು. ಮೊನ್ನೆ ನಮ್ಮ ಸಂಬಂಧಿಕರೊಬ್ಬರ ಪಿಯುಸಿ ಫಲಿತಾಂಶವನ್ನು ಮೊಬೈಲ್‌ನಲ್ಲಿ ಕೇಳಿದೆ. ಆಗ "ನಿಮ್ಮ ಒಟ್ಟು ಅಂಕ ೨೧೯. ನೀವು ಪರೀಕ್ಷೆಯಲ್ಲಿ ಉತ್ತೀರ್ಣರಾಗಿಲ್ಲ. ಧನ್ಯವಾದ!’ (ಉತ್ತೀರ್ಣರಾಗದೇ ಇರುವುದಕ್ಕಾ?) ಎಂದಿತು ಹೆಣ್ಣಿನ ಧ್ವನಿ.ನಂಗಂತೂ ರಿಸಲ್ಟ್ ಅಂದ್ರೆ ಸ್ವಲ್ಪಾನೂ ಹೆದರಿಕೆ ಇರ್‍ಲಿಲ್ಲ. ಒಂಬತ್ತೇ ಕ್ಲಾಸಿನವರೆಗೂ ನಾನು ಏ.೧೦ರಂದು ರಿಸಲ್ಟ್ ನೋಡಲು ಶಾಲೆಗೆ ಹೋದದ್ದೇ ಇಲ್ಲ. ನೇರವಾಗಿ ಮುಂದಿನ ಕ್ಲಾಸಿಗೆ. ನಾನು ಹೈಸ್ಕೂಲು ಕಲಿಯುವಾಗ ನನ್ಗೆ ಬರ್‍ತಿದ್ದ ಮಾರ್ಕ್ಸು ಶೇ. ೫೯-೬೦ ಅಷ್ಟೆ. ಅದೇ ನನ್ನ ಪಕ್ಕದ್ಮನೆ ಹುಡುಗೀಗೆ ಶೇ.೮೫-೯೦ ರಷ್ಟು ಮಾರ್ಕ್ಸ್ ಬರ್‍ತಿತ್ತು. ಪ್ರತೀ ಬಾರಿಯ ರಿಸಲ್ಟ್ ಬಂದಾಗ್ಲೂ ಅಮ್ಮ "ನೋಡು ಆ ಹುಡ್ಗೀನ. (ನಾನು ನೋಡ್ತಾ ಇಲ್ಲ ಅಂತಲ್ಲ) ಎಷ್ಟು ಚೆನ್ನಾಗಿ ಓದಿ ಮಾರ್ಕ್ಸ್ ತೆಗೀತಾಳೆ. ನೀನೂ ಇದ್ದೀಯಾ. ಅವಳ್ನ ನೋಡಿ ಕಲಿ. ನನಗೂ ಮಗಳೇ ಹುಟ್ಟಿದ್ರೆ ಚೆನ್ನಾಗಿತ್ತು. ಯಾಕಾದ್ರೂ ಗಂಡು ಹಡೆದೆನೋ’ ಅಂತೆಲ್ಲ ಬಯ್ದು ನನ್ನ ಇನ್‌ಸಲ್ಟ್ ಮಾಡ್ತಾ ಇದ್ರು. (ಅಮ್ಮನ ಬಯ್ಯುವಿಕೆಯಿಂದ ಪಕ್ಕದ್ಮನೆ ಹುಡುಗಿ ಮೇಲೆ ಪ್ರೀತಿ ಹುಟ್ಟೋ ಬದಲು ಸಿಟ್ಟು ಬರ್‍ತಾ ಇತ್ತು). ಪಕ್ಕದ್ಮನೆ ಹುಡುಗಿ ಅಂತಪ್ಪ ಸಂಬಂಧಿಕರ ನನ್ನದೇ ಕ್ಲಾಸಿನ ಮಕ್ಕಳು, ಪರಿಚಿತರ ಮಕ್ಕಳು ಎಲ್ಲರೂ ನನಗಿಂತ ಹುಶಾರು. ಹೀಗಾಗಿ ಅಮ್ಮ ಅವರನ್ನ ನನಗೆ ಹೋಲಿಸಿ, ತೋರಿಸಿ ಬೈದೇ ಬೈತಿದ್ರು. ಆದ್ರೆ ಅಪ್ಪ ಮಾತ್ರ ಬೈತಾನೇ ಇರ್‍ಲಿಲ್ಲ. ಬೈದ್ರೆ ನಾನು ಬೇಜಾರು ಮಾಡ್ಕೊಂಡು ಆತ್ಮ,ಹತ್ಯೆ ಮಾಡ್ಕೊಂಡು ಬಿಟ್ರೆ ಇರೋ ಒಬ್ಬ ಮಗನೂ ಇಲ್ಲದಾಗಿಬಿಟ್ರೆ ಅನ್ನೋ ಭಯ ಇತ್ತು ಅನ್ಸುತ್ತೆ. ಆದ್ರೆ ಅಮ್ಮಂಗೆ- ಏನ್ಮಾಡಿದ್ರೂ ನನ್ಮಗ ಆತ್ಮಹತ್ಯೆ ಮಾಡ್ಕೊಳಲ್ಲ ಅನ್ನೋದು ಗ್ಯಾರಂಟಿ ಗೊತ್ತಿತ್ತು.ಮುಂದೆ ಪಿಯುಸಿ ದ್ವಿತೀಯ ವರ್ಷದಲ್ಲಿ ನಾನು ಶೇ.೬೦ ಅಂಕ ಪಡೆದು ಪಾಸಾದೆ. ಪಕ್ಕದ ಮನೆ ಹುಡುಗಿ ಅದೇ ನನ್ನಮ್ಮ ಅವಳ್ನ ತೋರಿಸಿ ನನ್ಗೆ ಬೈತಿದ್ರಲ್ಲ ಅವ್ಳು ಫೇಲಾಗಿಬಿಟ್ಳು!! ನನ್ನ ಸಂಂಧಿಕರ ಹುಡುಗ, ತುಂಬ ಹತ್ತಿರದ (ನನ್ನಮ್ಮನ ದೃಷ್ಟಿಯಲ್ಲಿ ಮಹಾ ಬುದ್ದಿವಂತೆ) ಇನ್ನೊಬ್ಬಳು ಹುಡುಗಿ ಎಲ್ಲರೂ ಪಿಯುಸಿಯಲ್ಲಿ ಡುಮ್ಕಿ. ಮುಂದೆ ಡಿಪ್ಲೋಮಾ ಮಾಡಿದ್ಳು. ಅದ್ರಲ್ಲೂ ಡುಮುಕಿ. ನಾನು ರಾಹುಲ್ ದ್ರಾವಿಡ್ ಥರ ಶೇ ೫೯-೬೦ರ ಎವರೇಜ್ ಕಾದ್ಕೊಂಡು ಎಲ್ಲ ಕ್ಲಾಸಲ್ಲೂ ಪಾಸಾಗಿ ಎಂಎನೂ ಮುಗಿಸಿದೆ. ನೌಕರಿಯೂ ಸಿಕ್ಕಿತು. ಜರ್ನಲಿಸಂನಲ್ಲಿ ಚಿನ್ನದ ಪದಕ ಗೆದ್ದೋರು ಯಾವ್ಯಾವುದೋ ಲಾಟ್‌ಪುಟ್ ನೌಕರಿ ಮಾಡ್ಕೊಂಡಿದ್ದಾರೆ. ಎಂಎಯಲ್ಲಿ ನನಗಿಂತ ಹೆಚ್ಚು ಅಂಕ ಪಡೆದವರು ಕಾಲ್ ಸೆಂಟರ್ ಹಾಗೂ ಪಿಆರ್‌ಒ ಕೆಲಸ ಮಾಡಿಕೊಂಡಿದ್ದಾರೆ.ಪಕ್ಕದ್ಮನೆ ಹುಡುಗಿ ಅಂತಲ್ಲ ನನ್ನಮ್ಮ ಯಾರ್‍ಯಾರ ಉದಾಹರಣೆ ಕೊಟ್ಟು ಅವರ ಥರ ನೀನಾಗು ಅಂತ ನನಗೆ ಬೈದಿದ್ರೋ ಅವರ್‍ಯಾರೂ ಜೀವನದಲ್ಲಿ ಈವರೆಗೆ ಒಂದು ದಡ ಸೇರಿಲ್ಲ. ಪಾಪ! ನನ್ನಮ್ಮ ಅವರ್‍ನ ತೋರಿಸಿ ನನಗೆ ಬೈದ ತಪ್ಪಿಗೆ ಅವರು ಈಗ ಕಷ್ಟ ಅನುಭವಿಸ್ತಾ ಇದ್ದಾರೆ. ನಾನು ಪತ್ರಿಕೇಲಿ ಬೆದು ಒಂದಷ್ಟು ಜನರಿಗೆ ಪರಿಚಿತನಾದೆ. ನನಗೆ ಕೆಲಸ ಕೊಡಿಸಿದವರ ಗೌರವವನ್ನೂ ಉಳಿಸಿದೆ. ಈಗ ನನ್ನಮ್ಮನಿಗೆ ನಾನು ಅಂದ್ರೆ ಬಾರೀ ಗೌರವ. ಸಾರ್ವಜನಿಕ ವಲಯದಲ್ಲಿ ಮಗ ಒಳ್ಳೆ ಹೆಸರು ಮಾಡಿದ್ದಾನೆ ಎಂಬ ಹೆಮ್ಮೆ.ಔಟ್‌ಸ್ವಿಂಗ್: ಪರೀಕ್ಷೇಲಿ ಕಮ್ಮಿ ಮಾಕ್ಸ್ ತಗೊಂಡ ವಿದ್ಯಾರ್ಥಿಗಳನ್ನ ಕೇಳಿದರೆ ನಾನ್ ಚೆನ್ನಾಗಿಯೇ ಬರ್‍ದಿದ್ದೆ ಪೇಪರ್ ನೋಡ್ದೋರು ಮಾರ್ಕ್ಸ್ ಕೊಟ್ಟಿಲ್ಲ ಅಂತಾರೆ. ಅದೇ ಶೇ. ೯೫ಕ್ಕಿಂತ ಹೆಚ್ಚು ಮಾರ್ಕ್ಸ್ ತಂಗೊಂಡೋರ್‍ಯಾರೂ ಪೇಪರ್ ನೋಡ್ದೋರು ಒಳ್ಳೆ ಮಾರ್ಕ್ಸ್ ಕೊಟ್ಟಿದಾರೆ ಅಂತ ಹೇಳೋದೇ ಇಲ್ಲ. ಯಾಕೆ?
Saturday, May 19, 2007
ಪರೀಕ್ಷೇಲಿ ಫೇಲು: ನೇಣಾಗದಿರಲಿ ಶಾಲು
ಎಸ್ಸೆಸ್ಸೆಲ್ಸಿಯಲ್ಲಿ ಬಂಪರ್ ಬೆಳೆ ಬಂದರೂ, ಪಿಯುಸಿಯಲ್ಲಿ ಶೇ.೪೯.೩೬ ಶೇ. ವಿದಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಅಂದರೆ ೨,೨೫,೬೭೩ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಇಷ್ಟು ದೊಡ್ಡ ಮೊತ್ತದ ವಿದ್ಯಾರ್ಥಿಗಳ ಮನಸ್ಥಿತಿ ಹೇಗಿರಬಹುದು ಎಂಬುದನ್ನು ವಿಚಾರ ಮಾಡಿದರೆ ಮನಸ್ಸು ಕಲ್ಲವಿಲವಾಗುತ್ತದೆ. ಅವರ ಬದುಕಿನ ಬಗ್ಗೆ ಮನಸ ತುಂಬ ಆತಂಕ. ಪಿಯುಸಿ ಫಲಿತಾಂಶ ಬಂದ ಎರಡೇ ದಿನದಲ್ಲಿ ರಾಜ್ಯದಲ್ಲಿ ಆರು ಮಂದಿ ವಿದ್ಯಾರ್ಥಿಗಳು ಆತ್ಮಹತ್ಯೆ ಮೂಲಕ ಜೀವನ ಅಂತ್ಯಗೊಳಿಸಿದ್ದಾರೆ.
ಪರೀಕ್ಷೆಯಲ್ಲಿ ವಿಫಲವಾದ ವಿದ್ಯಾರ್ಥಿ ಮಾನಸಿಕವಾಗಿ ಕುಗ್ಗಿ ಹೋಗುತ್ತಾನೆ. ಮನೆಯವರ ಮುಖ ನೋಡಲು, ಪಕ್ಕದ ಮನೆಯವರೊಡನೆ ಮಾತಾಡಲು, ಗೆಳೆಯರೊಂದಿಗೆ ಮಾತಾಡಲೂ ಆಗದ ಸ್ಥಿತಿ ತಲುಪಿಬಿಡುತ್ತಾರೆ. ಮನೆಯವರ ಕೆಂಗಣ್ಣು, ಪಕ್ಕದ ಮನೆಯವರ ಕೀಟಲೆ ಮಿಶ್ರಿತ ಓರೆಗಣ್ಣ ನೋಟ, ಸಂಬಂಧಿಕರ ಚಚ್ಚುಮಾತು, ಫೇಲಾದ್ದರಿಂದ ಮನಸ್ಸಿನಲ್ಲಿ ಉಂಟಾದ ಸೋಲಿನ ಭಾವನೆ, ಪಾಸಾಗುವ ಮೂಲಕ ಗೆದ್ದ ಗೆಳೆಯ ಇವೆಲ್ಲ ವಿದ್ಯಾರ್ಥಿ ಮನಸ್ಸಿನ ಮೇಲೆ ನಿಯಂತ್ರಿಸಲಾಗದ ಪರಿಣಾಮ ಬೀರುತ್ತವೆ.
ಇದಕ್ಕೆಲ್ಲ ಪರೀಕ್ಷೆಯನ್ನು ನಾವು ನೋಡುವ, ಅದರಲ್ಲಿ ಅನುತ್ತೀರ್ಣರಾದರೆ ಜೀವನೇ ಮುಗಿದು ಹೋಯಿತು ಎಂಬಂತೆ ವರ್ತಿಸುವ ನಮ್ಮ ವರ್ತನೆಗಳೇ ಕಾರಣ. ಪಾಲಕರಿಗೆ ಮಕ್ಕಳ ಮೇಲೆ ಹೆಚ್ಚಿದ ನಿರೀಕ್ಷೆ, ಮಕ್ಕಳು ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನೇ ಪಾಲಕರು ಪ್ರತಿಷ್ಠೆಯ, ಅಂತಸ್ತಿನ ಪ್ರಶ್ನೆಯಾಗಿಸಿಕೊಂಡಿರುವುದು, ಹೆಚ್ಚಿದ ಸ್ಪರ್ಧೆ ಮಕ್ಕಳನ್ನು ಪರೀಕ್ಷೆಯಲ್ಲಿ ಹಾಗೂ ಫಲಿತಾಂಶದ ಸಮಯದಲ್ಲಿ ಅಪಾರ ಒತ್ತಡಕ್ಕೆ ಸಿಲುಕಿಸುತ್ತಿದೆ.
ಆ ಗೊಂದಲ, ಒತ್ತಡದಲ್ಲಿ ಈ ಎಲ್ಗ ಕಷ್ಟಕ್ಕೂ ಪರಿಹಾರದ ಸುಲಭ ಮಾರ್ಗವಾಗಿ ಅವರಿಗೆ ಕಾಣಿಸುವುದು ಆತ್ಮಹತ್ಯೆ ಮಾತ್ರ. ತಾನು ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದರಿಂದ ತಂದೆ-ತಾಯಿ ಗೌರವ ಹಾಳಾಗಿದೆ. ಇದ್ದು ಅವರಿಗೆ ಇನ್ನಷ್ಟು ಅವಮಾನ ಕೊಡುವುದಕ್ಕಿಂತ ಸಾಯುವುದೇ ಮೇಲು ಅಂತ ಅವರ ಸಣ್ಣ ಮನಸ್ಸು ದೊಡ್ಡ ತೀರ್ಮಾನ ತೆಗೆದುಕೊಂಡು ಬಿಡುತ್ತದೆ. ಹೆದರಿದವನಿಗೆ ಹೂವೂ ಹಾವಾಗುವಂತೆ ಆತ್ಮಹತ್ಯೆಯತ್ತ ಮುಖ ಮಡಿದವರಿಗೆ ಶಾಲೂ ನೇಣಾಗುತ್ತದೆ.
ಈ ವಿಷಯದಲ್ಲಿ ಮಕ್ಕಳಿಗಿಂತ ಪಾಲಕರಿಗೆ ಹೆಚ್ಚು ತಿಳವಳಿಕೆ ಇರಬೇಕಾದ್ದು ಅಗತ್ಯ. ಯಾಕೆಂದರೆ ಪಾಲಕರು ಹಿರಿಯರು. ಜೀವನ ಅರಿತವರು. ಮಕ್ಕಳು ಪರೀಕ್ಗಷೆಯಲ್ಲಿ ಫೇಲಾಗಿರುವುದನ್ನೇ ದೊಡ್ಡ ರಂಪ ಮಾಡಬಾರದು. ಫಲಿತಾಂಶ ಬಂದಾಗಿದೆ. ರಂಪ ಮಾಡಿ ಪ್ರಯೋಜನವೇನೂ ಇಲ್ಲ ಎಂಬುದನ್ನು ಅರಿಯಬೇಕು. ನಿಮಗಿಂತ ಕೆಟ್ಟ ಮನಸ್ಥಿತಿಯಲ್ಲಿ ಮಕ್ಕಳಿರುತ್ತಾರೆ ಎಂದು ಅರ್ಥ ಮಾಡಿಕೊಳ್ಳಬೇಕು. ಇದನ್ನು ಅರಿಯದೆ ಪಾಲಕರು ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಮಕ್ಕಳನ್ನು ಹಿಗ್ಗಾಮುಗ್ಗಾ ಬಯ್ಯುತ್ತಾರೆ. ಇಷ್ಟೆಲ್ಲ ವ್ಯವಸ್ಥೆ ಮಾಡಿಕೊಟ್ಟೂ ನೀನು ಇಷ್ಟೇ ಮಾಡಿದ್ದು, ಆಚೆ ಮನಯೆ ಹುಡುಗಿ ಅಥವಾ ಹುಡುಗನ್ನು ನೋಡು ಎಂದು ಹೋಳಿಕೆ ಮಾಡಿ ಜರೆಯುತ್ತಾರೆ. ಈತ ಬದುಕಿರುವುದೇ ವೇಸ್ಟು ಎಂಭರ್ಥದಲ್ಲಿ ಬಯ್ಯುತ್ತಾರೆ. ಇದು ಮಕ್ಕಳ ಮೇಲೆ ಎಂಥ ಪರಿಣಾಮ ಬೀರಬಹುದು ಎಂಬುದನ್ನು ಆ ಕ್ಷಣಕ್ಕೆ ಅವರು ಗಮನಿಸುವುದಿಲ್ಲ. ನಂತರ ಮಕ್ಕಳು ಆತ್ಮಹತ್ಯೆ ಮಾಡಿಕೊಂಡರೆ, ಮನೆ ಬಿಟ್ಟು ಹೋದರೆ ಆಗ ಗೋಳೋ ಎಂದು ಕಣ್ಣೀರಿಡುತ್ತ ಪರಿತಪಿಸುತ್ತಾರೆ.
ತಮ್ಮ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳಬಹುದೆಂದು ಯಾರೂ ಎಣಿಸಿರುವುದಿಲ್ಲ. ಆದರೆ ಮಕ್ಕಳು ಪರೀಕ್ಷೆಯಲ್ಲಿ ಅನುತ್ತೀರ್ಣರಾದರೆ ಹದಿನೈದು ದಿನದ ಮಟ್ಟಿಗಾದರೂ ಅವರನ್ನು ಏಕಾಂಗಿಯಾಗಿ ಬಿಡದಿರುವುದು ಒಳ್ಳೆಯದು. ಏಕಾಂಗಿಯಾದರೆ ಮಕ್ಕಳಿಗೆ ಆತ್ಮಹತ್ಯೆ ಮಾಡುವ ಅವಕಾಶ ದೊರೆತಂತಾಗುತ್ತದೆ. ಏಕಾಂಗಿಯಾಗಿರುವಾಗ ಇಲ್ಲದ ಆಲೋಚನೆಗಳೂ ಮಕ್ಕಳ ತಲೆಯಲ್ಲಿ ಬಂದು ಅವರು ಆತ್ಮಹತ್ಯೆ ನಿರ್ಧಾರದತ್ತ ನಡೆದು ಹೋಗುವಂತೆ ಮಾಡುತ್ತದೆ. ಅದರ ಬದಲು ಯಾರಾದರೂ ಸದಾ ಅವರ ಜತೆ ಇದ್ದರೆ ಮನಸ್ಸಿಗೂ ಸ್ವಲ್ಪ ಸಮಾದಾನ. ಆತ್ಮಹತ್ಯೆ ಅವಕಾಶಗಳೂ ದೊರೆಯುವುದಿಲ್ಲ.
ಇದೆಲ್ಲಕ್ಕಿಂತ ಮುಖ್ಯವಾಗಿ ನಮ್ಮ ಪಾಲಕರು ಮಕ್ಕಳನ್ನು ಇಂತಹ ಸನ್ನಿವೇಶಕ್ಕೆ ಸಿದ್ಧಗೊಳಿಸುವುದನ್ನು, ಸ್ವತಃ ತಾವು ಸಿದ್ಧಗೊಳ್ಳುವುದನ್ನು ಕಲಿಯಬೇಕಿದೆ. ಯಾರೂ ತಮ್ಮ ಮಕ್ಕಳು ಫೇಲಾಗಲೆಂದು ಬಯಸುವುದಿಲ್ಲ. ಆದರೆ ಒಂದೊಮ್ಮೆ ಫೇಲಾದರೆ ಎಂಬುದನ್ನೂ ಚಿಂತಿಸಿಟ್ಟುಕೊಂಡರೆ ಅಷ್ಟು ಸಮಸ್ಯೆಯಾಗಲಾರದು.
ಪ್ರತಿ ಪಾಲಕರು ಪರೀಕ್ಷೆಗೆ, ಫಲಿತಾಂಶ ನೋಡಲು ಹೋಗುವ ಮಕ್ಕಳನ್ನು ಕೂರಿಸಿ ಒಂದೈದು ನಿಮಿಷ ಮಾತಾಡಬೇಕು. ‘ಪರೀಕ್ಷೆ ಫಲಿತಾಂಶವೊಂದೇ ಮುಖ್ಯವಲ್ಲ. ಪರೀಕ್ಷೆಯಲ್ಲಿ ಫೇಲಾದ ಎಷ್ಟೋ ಜನ ಜೀವನದ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ. ಪರೀಕ್ಷೆಯಲ್ಲಿ ಅತ್ಯಂತ ಕಡಿಮೆ ಅಂಕ ತೆಗೆದುಕೊಂಡವರು ಜೀವನ ಪರೀಕ್ಷೆಯಲ್ಲಿ ಫಸ್ಟ್ ರೆಂಕ್ ಪಡೆದಿದ್ದಾರೆ. ಎಂಬಿಎ ಕಲಿಯದ ವಿಜಯ ಸಂಕೇಶ್ವರ ಅಷ್ಟು ದೊಡ್ಡ ವಿಆರ್‌ಎಲ್ ಸಂಸ್ಥೆ ಸ್ಥಾಪಿಸಿದ್ದಾರೆ. ಕಾಲೇಜಿಗೂ ಹೋಗದ ಆರ್.ಎನ್. ಶೆಟ್ಟಿ ಯಶಸ್ವೀ ಉದ್ಯಮಿಯಾಗಿದ್ದಾರೆ. ಇವುಗಳನ್ನು ಮಕ್ಕಳಿಗೆ ಹೇಳಬೇಕು.’ ಪರೀಕ್ಷೆ ಫಲಿತಾಂಶ ಜೀವನದ ಒಂದು ಭಾಗ. ಪರೀಕ್ಷೆ ಮುಂದಿನ ವರ್ಷವೂ ಬರುತ್ತದೆ ಎಂಬುದನ್ನೂ ಅವರಿಗೆ ಅರುಹಬೇಕು. ಆಗ ಫಲಿತಾಂಶ ನೋಡಲು ಹೋಗುವ ಮಕ್ಕಳ ಮನಸ್ಸು ಸ್ವಲ್ಪ ತಿಳಿಯಾದೀತು.
ಇನ್ನಾದರೂ ಪಾಲಕರು ತಮ್ಮ ಮಕ್ಕಳ ಬಗೆಗಿರುವ ಅತೀ ಆಸೆ ಬಿಡಬೇಕು. ಮಕ್ಕಳು ಎಂಜಿನಿಯರ್ ಆಗಬೇಕು, ವೈದ್ಯನಾಗಬೇಕು. ಆ ಮೂಲಕ ತಾನು ಸಮಾಜದಲ್ಲಿ ಪ್ರತಿಷ್ಠೆ ಹೆಚ್ಚಿಸಕೊಳ್ಳಬೇಕು ಎಂಬ ಆಸೆ ಮನಸ್ಸಿನಲ್ಲಿದ್ದರೆ, ನೀವೇ ಇಟ್ಟುಕೊಳ್ಳಿ. ಅದನ್ನು ಮಕ್ಕಳ ಮೇಲೆ ಹೇರಲು ಹೋಗಬೇಡಿ. ಎಂಜಿನಿರಿಂಗ್, ವೈದ್ಯ, ಸಾಫ್ಟ್‌ವೇರ್ ಅಲ್ಲದೇ ಪ್ರಪಂಚದಲ್ಲಿ ಸಾಕಷ್ಟು ವೃತ್ತಿಗಳಿವೆ ಮತ್ತು ಆ ವೃತ್ತಿ ಮಾಡುವ ಜನರು ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ ಎಂಬುದನ್ನು ಪಾಲಕರು ಅರ್ಥ ಮಾಡಿಕೊಂಡು,ಅದನ್ನು ಮಕ್ಕಳಿಗೂ ಅರ್ಥ ಮಾಡಿಸಬೇಕು.
ಇದನ್ನೆಲ್ಲ ಪಾಲಕರು ಅರ್ಥ ಮಾಡಿಕೊಂಡರೆ ಮಾತ್ರ ಫಲಿತಾಂಶದ ನಂತರ ಮಕ್ಕಳನ್ನು ಆವರಿಸುವ ಆತಂಕ, ಆತ್ಮಹತ್ಯೆಯ ಸನ್ನಿ ನಿವಾರಣೆಯಾದೀತು. ಒಂದಷ್ಟು ಎಳೆ ಜೀವಗಳು ಉಳಿದೀತು.
Thursday, May 17, 2007
ನಿದ್ರೆ- ಬಂದ್ರೆ
ರಮಾನಾಥ ರೈಗೆ ಸಭೇಲಿ, ವಿಧಾನಸಭೇಲಿ ನಿಧಾನವಾಗಿ ನಿದ್ರೆ ಬಿದ್ಬಿಡುತ್ತೆ. ದೇವೇಗೌಡ್ರ ಬಳಿ ನಿದ್ರೆ ಮಾಡ್ತೀರಲ್ರಿ ಅಂದ್ರೆ ಇಲ್ರೀ ದೇಶದ ಬಗ್ಗೆ ಚಿಂತೆ ಮಾಡ್ತಾ ಇದೀನಿ ಅಂದ್ರಂತೆ. ಯು.ಟಿ. ಫರೀದರಂತೂ ಕೂತಲ್ಲೆಲ್ಲ ನಿದ್ರಾ ದೇವೀನ ಅಪ್ಕೋತಿದ್ರು. ಕೆಲವರಿಗೆ ಬಸ್ ಹತ್ತುತ್ತಿದ್ದಂತೆ ನಿದ್ರೆ. ಕೆಲವರಿಗೆ ಕಂಡಕ್ಟರ್ ಹತ್ತಿರ ಬಂದ್ಕೂಡ್ಲೆ ಘಾಡ ನಿದ್ರೆ. ಇನ್ನು ಕೆಲವರಿಗೆ ಕಂಡಕ್ಟರ್ ಅವರನ್ನ ದಾಟಿ ಹೋಗೋವರೆಗೂ ನಿದ್ರೆ. ಹೀಗೆ ಕಚೇರಿ, ಬಸ್ಸು, ರೈಲು, ವಿಮಾನ, ಹಾಸಿಗೆ, ಪುಟ್‌ಪಾತು, ಕ್ಲಾಸ್ ರೂಮು, ಬೀಚು, ಸಭೆ, ಮನೆ ಹೀಗೆ ಎಲ್ಲಂದರಲ್ಲಿ ನಮಗೇ ಗೊತ್ತಿಲ್ಲದೆ ಆವರಿಸಿಕೊಂಡು ಬಿಡುತ್ತೆ ನಿದ್ರೆ. ಕೂತ್ಕೊಳೋಕೆ, ತಲೆ ಕೊಡೋಕೆ ಒಂದು ಜಾಗ ಅದು ಬಸ್ಸಿನ ಮುಂದಿನ ಸೀಟಾದರೂ ಆಗಬಹುದು ಇಲ್ಲಾ ಪಕ್ಕದ ಪ್ರಯಾಣಿಕನ ಭುಜವಾದರೂ ನಡೆದೀತು!
ಬಸ್ಸಲ್ಲಿ ನಿದ್ರೆ ಮಾಡೋರ ನೋಡಿದ್ರೆ ಚಾರ್ಲಿ ಚಾಪ್ಲಿನ್ ಸಿನಿಮಾ ನೋಡ್ದಂಗಿರುತ್ತೆ. ಒಮ್ಮೆ ಆಚೆ ಕೂತವನ ಮೇಲೆ ಬೀಳುತ್ತಾ. ಸಾರಿ ಕೇಳುತ್ತಾ. ಬ್ರೇಕ್ ಹಾಕಿದಾಗೊಮ್ಮೆ ಎದುರಿನ ಸೀಟಿಗೆ ಹಣೆ ಘಟ್ಟಿಸುತ್ತಿರುತ್ತಾರೆ.
ಹಾಗಂತ ಎಲ್ರಿಗೂ ಎಲ್ಲೆಂದರಲ್ಲಿ ನಿದ್ರೆ ಬರೋದಿಲ್ಲ. ಎಷ್ಟೋ ಜನಕ್ಕೆ ಮನೆ ಬೆಡ್ ರೂಂನಲ್ಲಿ ಮೆತ್ತನೆ ಹಾಸಿಗೆ, ಎಸಿ ಇರುತ್ತೆ. ಗಿರಗಿರನೆ ತಿರುಗಿ ಗಾಳಿ ಬೀಸೋ ಫ್ಯಾನ್ ಇರುತ್ತೆ. ಆದ್ರೆ ಕರೆಂಟೇ ಇರೊಲ್ಲ. ಕರೆಂಟು ಇತ್ತು ಅಂತ್ಲೇ ಇಟ್ಕೊಳೋಣ ಅವನಿಗೇನೋ ಚಿಂತೆ. ಇವತ್ತು ಬಿಜೆನೆಸ್‌ನಲ್ಲಾದ ಲಾಸು. ವಿರೋಧ ಪಕ್ಷದವ ಮಾಡಿದ ಟೀಕೆ. ನಾಳೆ ಮಾಡಬೇಕಾದ ಕೆಲಸ. ಮಗ ಕೆಟ್ಟ ಚಟ ಕಲಿತದ್ದು. ಮಗಳು ಯಾರನ್ನೋ ಪ್ರೀತಿಸುತ್ತಿರುವುದು. ಇಲ್ಲವೇ ಮಕ್ಕಳು ಶಿಕ್ಷಣದಲ್ಲಿ ಹಿಂದಿರುವುದು. ಹೆಂಡತಿಗೆ ತನ್ನ ಬಗ್ಗೆ ಪ್ರೀತಿ ಕಡಿಮೆ ಆಗಿದೆ ಎಂಬ ಅನುಮಾನ. ಅಯ್ಯೋ ಸಮಸ್ಯೆಯ ಸರಮಾಲೆ. ಆಕಾಶವೇ ಬಿದ್ದಿದೆ ತಲೆಮ್ಯಾಲೆ!
ಜಗತ್ತಿನಲ್ಲಿ ಅತ್ಯಂತ ಸುಖಿ ಯಾರು? ಎಂಬ ಪ್ರಶ್ನೆಗೆ ಕರೆದ ಕೂಡಲೆ ಯಾರಿಗೆ ನಿದ್ರೆ ಬರುತ್ತೋ ಆತ ಎಂದು ಉತ್ತರಿಸಬಹುದು. ತುಂಬ ದುಡ್ಡಿದ್ದು, ಎಲ್ಲ ಸೌಕರ್ಯವಿದ್ದು, ಎಸಿ ಬೆಡ್ ರೂಂ ಇದ್ದೂ ನಿದ್ರೆ ಬಾರದೆ ಹೋದರೆ ಪ್ರಯೋಜನವೇನು? ಖಂಡಿತ ಆತ ಸುಖಿಯಲ್ಲ. ಅದಕ್ಕೇ ಅಲ್ಲವೆ ಹಿರಿಯರು ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ರೆ ಅಂದಿರೋದು.
ಫುಟ್‌ಪಾತ್‌ನಲ್ಲಿ ಹಾಯಾಗಿ ಗಾಳಿಗೆ ಮಯ್ಯೊಡ್ಡಿ ಭೂಮ್ತಾಯನ್ನೇ ಮಂಚವಾಗಿಸಿ, ಆಕಾಶಾನೇ ಸೂರಾಗಿಸಿ ಪವಡಿಸಿದ ಮಾಸಲು ಬಟ್ಟೆ ತೊಟ್ಟ ಮನುಷ್ಯನ್ನ ನೋಡಿ. ಎಂಥ ಹಾಯಾಗಿ ಮಲ್ಕೊಂಡಿದಾನೆ. ನೆಮ್ಮದಿಯ ಅಪರಾವತಾರ. ಹಾಯಾಗಿ ನಿದ್ರೆ ಬರೋಕೂ ಪುಣ್ಯ ಮಾಡಿರ್‍ಬೇಕು ಅಂತಾರೆ. ಪುಣ್ಯವೋ? ಪಾಪವೋ? ಗೊತ್ತಿಲ್ಲ. ಮನಸ್ಸು ನಿರುಮ್ಮಳವಾಗಿದ್ದರೆ ನಿದ್ರಾದೇವಿ ತಟ್ಟನೆ ಬಂದು ತಬ್ಕೋತಾಳೆ. ಆಕೆಗೆ ತಲೆಬಿಸಿ ಇರೋರ್‍ನ ಕಂಡ್ರೆ ಅಲರ್ಜಿ.
ಒಬ್ಬ ಮನುಷ್ಯ ದಿನಕ್ಕೆ ಕನಿಷ್ಟ ಆರು ತಾಸಾದರೂ ನಿದ್ರಾದೇವಿಯ ತೆಕ್ಕೆಯಲ್ಲಿರಬೇಕು ಅಂತಾರೆ ನಿದ್ರೆ ಮಹಿಮೆ ತಿಳಿದೋರು. ಸರಿಯಾದ ನಿದ್ರೆಯಿಂದ ನೆನಪಿನ ಶಕ್ತಿ ಹೆಚ್ಚುತ್ತೆ. ಮನಸು ಫ್ರೆಶ್ ಆಗುತ್ತೆ. ಮೆದುಳಿಗೆ, ಕಣ್ಣಿಗೆ ಅಷ್ಟೇ ಏಕೆ ಇಡೀ ದೇಹಕ್ಕೆ ವಿಶ್ರಾಂತಿ ಸಿಗುತ್ತೆ. ರಕ್ತ ಚೆನ್ನಾಗಿ ಪ್ರವಹಿಸುತ್ತೆ. ಅದಕ್ಕೂ ಹೆಚ್ಚೆಂದರೆ ಒಂದೊಳ್ಳೆ ಕನಸು ಬೀಳುತ್ತೆ. ಇಷ್ಟೆಲ್ಲ ಒಳ್ಳೇ ಗುಣಗಳಿರೋ ನಿದ್ರೆ ಯಾರಿಗೆ ತಾನೆ ಬೇಡ.
ಇಂತಹ ಸುಂದರ ನಿದ್ರೆ ಬಿದ್ರೆ ಆಗೋ ಅನಾಹುತಗಳಿಗಳು ಒಂದೆರಡೇ?
ವಾಹನ ಚಲಾಯಿಸುವಾಗ ಚಾಲಕನಿಗೆ ಒಂದು ಸೆಕೆಂಡು ಕಣ್ಣು ತೂಕಡಿಸಿದರೂ ಒಂದಿಷ್ಟು ಜನ ಶಾಶ್ವತವಾಗಿ ಕಣ್ಮುಚ್ಚುತ್ತಾರೆ. ಕಚೇರೀಲಿ ನಿದ್ರೆ ಮಾಡಿದಾಗ ಹಿರಿಯ ಅಧಿಕಾರಿ ಬಂದ್ರೆ ಉಗಿಸ್ಕೋಬೇಕು. ಮನೇಲಿ ಜನ ಮಲ್ಕೊಂಡಿರುವಾಗಲೇ ಕಳ್ಳರು ಮನೆಗೆ ನುಗ್ಗಿ ಕಳ್ಳತನ ಮಾಡೋದಿದೆಯಲ್ಲ ಅದು ನಿದ್ರೆಯಿಂದಾಗೋ ಅನಾಹುತದ ಪರಮಾವಧಿ. ಇತ್ತೀಚೆಗೆ ಮೂಡುಬಿದಿರೆಯ ಮನೆಯೊಂದರಲ್ಲಿ ತುಂಬಾ ಸೆಖೆಯೆಂದು ಎಲ್ಲರೂ ಮನೆಯ ಹೊರಗೆ ಮಲಗಿದ್ದರು. ಕಳ್ಳ ಒಳಗಿದ್ದದ್ದನ್ನೆಲ್ಲ ತೆಗೆದುಕೊಂಡು ಹೋಗಿದ್ದ.
ನಾನೂ ಎಲ್ಲೆಂದರಲ್ಲಿ ನಿದ್ರೆ ಮಾಡಬಲ್ಲೆ. ಅಷ್ಟರಮಟ್ಟಿಗೆ ನಾನು ಸುಖಿ. ಸ್ವಲ್ಪ ಸಮಯವಿದ್ದರೆ ಸಣ್ಣ ನಿದ್ದೆ ಮಾಡಿ ತಟ್ಟನೆ ಫ್ರೆಶ್ ಆಗಬಲ್ಲೆ. ದೊಡ್ಡ ನಿದ್ದೆಗಿಂತ ೧೦ ನಿಮಿಷದ ಸಣ್ಣ ನಿದ್ರೆ ದೊಡ್ಡ ರಿಲೀಫ್ ಕೊಡಬಲ್ಲದು. ಒಮ್ಮೆ ಪಾಂಡೇಶ್ವರ ಇನ್‌ಸ್ಪೆಕ್ಟರ್ ವೆಂಕಟೇಶ ಪ್ರಸನ್ನರನ್ನು ಭೇಟಿ ಮಾಡಲು ಹೋಗಿದ್ದೆ. ಠಾಣೆಗೆ ಹೋದರೆ ಆಯಪ್ಪ ಇರಲಿಲ್ಲ. ಕೇಳಿದ್ದಕ್ಕೆ ೧೫ ನಿಮಿಷದಲ್ಲಿ ಬರ್‍ತೀನಿ ಅಂದ್ರು. ಸರಿ ಅಂತ ಅಲ್ಲೇ ಗೋಡೆಗೆ ತಲೆ ಒರಗಿಸಿ ಕುಳಿತಿದ್ದವನಿಗೆ ನಿದ್ರೆ. ಇನ್‌ಸ್ಪೆಕ್ಟರ್ ಬಂದು ಎಬ್ಬಿಸಿದ್ರು. ಏನ್ ಸ್ವಾಮಿ ನಿದ್ರೇನಾ ಅಂದ್ರು. ಅದ್ಕೆ ನಾನಂದೆ ಹೌದು ಸ್ವಾಮಿ ಪೊಲೀಸ್ ಠಾಣೆಗೆ ಬಂದೂ ನಿಶ್ಚಿಂತವಾಗಿ ನಿದ್ರೆ ಮಾಡೋ ಧೈರ್ಯ ಪತ್ರಕರ್ತರಿಗಲ್ಲದೆ ಇನ್ಯಾರಿಗಿರುತ್ತೆ ಅಂದೆ. ಅವರಿಗೂ ಈ ಮಾತು ಸತ್ಯ ಅನ್ನಿಸಿರಬೇಕು. ನಕ್ಕು ಸುಮ್ಮನಾದರು.
ಕೆಲವು ಘಟನೆ ನೋಡಿದರೆ ಪುರುಷರಿಗಿಂತ ಸ್ತ್ರೀಯರಿಗೆ ನಿದ್ರೆ ಅಷ್ಟು ಒಳ್ಳೇದಲ್ಲ ಅನಿಸಿಬಿಡುತ್ತೆ. ಹಂಗಂತ ನನ್ನ (ಇ)ಸ್ತ್ರೀ ವಿರೋಧಿ ಅಂದ್ಕೋಬೇಡಿ.
ಬುದ್ಧ
ಜಗವೆಲ್ಲ ಮಲಗಿರಲು
ಅವನೊಬ್ಬ ನೆದ್ದ
ಮನೆಯಿಂದ ಹೊರಬಿದ್ದ
ಜಗದ ಜಂಜಡ ಗೆದ್ದ... ಅನ್ನೋದು ಕರೆಕ್ಟಾ?
ಅವನ ಹೆಂಡತಿಗೆ ಅಷ್ಟೇ ಏಕೆ ಮನೆಯ ಯಾರಿಗೇ ಆದರೂ ಅವನೆದ್ದು ಮನೆಯಿಂದ ಹೊರನಡೆಯುತ್ತಿರುವುದು ಗೊತ್ತಾಗಿದ್ದರೆ ಬಹುಶಃ ಬುದ್ಧನಿಗೆ ಬುದ್ಧ ಎಂದು ಕರೆಸಿಕೊಳ್ಳುವ ಅವಕಾಶವೇ ತಪ್ಪಿ ಹೋಗುತ್ತಿತ್ತೇನೊ.
ನಳ- ದಮಯಂತಿಯನ್ನು ಬಿಟ್ಟು ನಡೆದದ್ದೂ ಆಕೆ ನಿದ್ರಿಸುತ್ತಿರುವಾಗಲೇ ಅಲ್ಲವೇ? ಆದ್ದರಿಂದ ಸ್ರೀಯರೇ ನಿದ್ರಿಸುವಾಗ ಎಚ್ಚರ!
ಟಿಕ್ಲಿ ಕುಂಕುಮ ನುಂಗಿತ್ತ...
ಕೋಡಗನ ಕೋಳಿ ನುಂಗಿತ್ತ ನೋಡವ್ವ ತಂಗಿ... ಹಾಡು ಕೇಳಿದ್ದೀರಲ್ಲ. ಕೋಡಗನ ಕೋಳಿ ನುಂಗಲು ಸಾಧ್ಯವೊ ಇಲ್ಲವೊ? ನೀವೇ ಯೋಚನೆ ಮಾಡಿ. ನನಗಂತೂ ಪುರುಸೊತ್ತಿಲ್ಲ. ಆದರೆ ಎಷ್ಟೋ ಸಂಗತಿಗಳು ನಮ್ಮ ನಿಮ್ಮ ನಡುವಿನ ಹಲವನ್ನು ನುಂಗಿ ನೀರು ಕುಡಿದಿವೆ. ಎಷ್ಟು ನುಣ್ಣಗೆ ಅಂದರೆ ಅವು ಒಂದನ್ನೊಂದು ನುಂಗುತ್ತಿರುವುದು ಅಥವಾ ನುಂಗಿವೆ ಅಂತ ನನಗೆ-ನಿಮಗೆ ಗೊತ್ತೇ ಆಗಿಲ್ಲ.
ನನ್ನ ಅಲ್ಲಲ್ಲ ನಮ್ಮೆಲ್ಲರ ಅಜ್ಜಿ ಹಣೆಗೆ ಕುಂಕುಮ ಇಡುತ್ತಿದ್ದರು. ಬರೋಬ್ಬರಿ ಒಂದು ರೂಪಾಯಿ ನಾಣ್ಯದಷ್ಟು ದೊಡ್ಡದು (ಉದಾ: ಪಾರ್ವತಮ್ಮ). ಅಂತಹ ಕುಂಕುಮವನ್ನು ಇಂದು ಒಂದು ಬಾಲ್ ಪೆನ್ ತುದಿಯಷ್ಟು ಅಗಲ ಇಲ್ಲದ ಟಿಕ್ಲಿ ನುಂಗಿ ಹಾಕಿದೆ. ಈಗಿನವರು ಹಣೆಗೆ ಇಟ್ಟಿದ್ದಾರೊ ಇಲ್ಲವೊ ಎಂಬುದನ್ನು ಮುಟ್ಟಿ ನೋಡಿ!! ಅಥವಾ ಅತಿ ಹತ್ತಿರದಿಂದ ನೋಡಿಯೇ ಹೇಳಲು ಸಾಧ್ಯ.
ಮುಖಕ್ಕೆ ಅರಿಶಿನ ಹಚ್ಚುತ್ತಿದ್ದರು. ಅದನ್ನು ಫ್ಯಾರ್ ಆಂಡ್ ಲೌಲಿ (ಆರು ವಾರಗಳಲ್ಲಿ ಟ್ಯೂಬ್ ಖಾಲಿ!!!) ಹೊಟ್ಟೆಗೆ ಹಾಕಿಕೊಂಡಿದೆ. ಸನ್‌ಸಿಲ್ಕ್, ಆಲ್‌ಕ್ಲಿಯರ್ (ಕಿಸೇನಾ? ಕೂದಲಾ?), ಕ್ಲಿನಿಕ್ ಪ್ಲಸ್ (ಹೇರ್ ಪ್ಲಸ್ ಅಂತ ಇಡಬಹುದಿತ್ತು), ತಲೆ ಮತ್ತು ಹೆಗಲು (ಹೆಡ್ ಆಂಡ್ ಶೋಲ್ಡರ್‍ಸ್) ಕಂಪನಿಗಳ ಶ್ಯಾಂಪೂಗಳು ಶೀಗೇಕಾಯಿ ಪುಡಿಯನ್ನು ಬಚ್ಚಲು ಮನೆಯಿಂದ ಓಡಿಸಿವೆ. ಅಪ್ಪ-ಗಂಡಂದಿರ ಕಿಸೆಗೆ ಕೈ ಹಾಕಿವೆ.
ರೆಡಿಮೇಡ್ ಬಟ್ಟೆ, ಹೊಸ ಫ್ಯಾಶನ್‌ಗಳು ಹೊಲಿಗೆಯವರ ಅನ್ನ ನುಂಗಿವೆ. ಟೀವಿ ಮನೆಯೊಳಗೆ ಬಂದು ಮನೆ ಜನರ ನಡುವಿನ ಮಾತು-ಬಾಂಧವ್ಯವನ್ನು ಮನೆಯಿಂದ ಹೊರಹಾಕಿದೆ. ರೇಡಿಯೋವನ್ನು ಮಾತಾಡದಂತೆ ಮಾಡಿದೆ. ಸಿಡಿ ಕ್ಯಾಸೆಟ್‌ಗಳನ್ನು ಸುತ್ತಿ ಆಚೆಗೆಸೆದು, ಧೂಳು ತಿನ್ನುವಂತೆ ಮಾಡಿದೆ. ಚಾನಲ್‌ಗಳು ಚಿತ್ರ ಮಂದಿರಕ್ಕೆ ಹೋಗುವ ಜನರನ್ನು ನುಂಗಿವೆ. ಟೆರಿಕೋಟ್ ಮತ್ತು ಆಧುನಿಕ ಮಾದರಿ ಸೀರೆ, ಡ್ರೆಸ್ ಮಟಿರಿಯಲ್‌ಗಳು ಗಾಂಧಿ ಅಜ್ಜನಿಗೆ ಪ್ರೀತಿಯಾಗಿದ್ದ ಹತ್ತಿ ಬಟ್ಟೆಗಳನ್ನು ಮರೆಸಿವೆ. ಸಿಗರೇಟು ಹೊಗೆಯಲ್ಲಿ ಬೀಡಿ ಕಾಣದಾಗಿದೆ. ಗ್ಯಾಸ್‌ನ ಹೀಟಿಗೆ ಮಣ್ಣಿನ ಒಲೆ ಒಡೆದೇ ಹೋಗಿದೆ. ಮಣಿನ್ಣ ಮಡಕೆ, ಅಲ್ಯೂಮಿನಿಯಂ- ತಾಮ್ರದ ಪಾತ್ರಗಳು ಸ್ಟೀಲ್ ಪಾತ್ರದ ಹೊಳಪಲ್ಲಿ ಕಾಣದಾಗಿವೆ.
ಕಾಂಕ್ರೀಟ್ ಕಾಡುಗಳು, ಮನುಷ್ಯನ ದುರಾಸೆಗಳು ಕಾಡನ್ನು ನುಂಗಿ ನೀರು ಕುಡಿದಿವೆ. ಬೇಟೆಯ ಹುಚ್ಚು ಪ್ರಾಣಿಗಳನ್ನು ಕಣ್ಣಿಗೆ ಕಾಣದಂತೆ ಮಾಡಿದೆ. ಮನುಷ್ಯನ ದುರಾಸೆ, ಅತಿ ಆಸೆ ಅಂತರ್ಜಲವನ್ನೇ ಹೀರಿ ಬಿಟ್ಟಿದೆ. ಟೆಂಪೋಗಳಿಂದ ಎತ್ತಿನ ಗಾಡಿಯೂ, ರಿಕ್ಷಾಗಳಿಂದ ಜಟಕಾ ಬಂಡಿಗಳೂ ನಾಪತ್ತೆಯಾಗಿವೆ. ಬೈಕು- ಕಾರುಗಳು ನಡೆಯುವ ಹವ್ಯಾಸ ಬಿಡಿಸಿವೆ. ವಾಹನದ ಹೊಗೆ ಶುದ್ಧ ಗಾಳಿಯನ್ನು ಸೇವಿಸದಂತೆ ಮಾಡಿದೆ. ಕ್ರಿಕೆಟ್ ಗ್ರಾಮೀಣ ಆಟಗಳಾದ ಖೊ ಖೊ, ಕಬಡ್ಡಿಗಳನ್ನು ಮೈದಾನದಿಂದ ಔಟ್ ಮಾಡಿದೆ.
ಮೊಬೈಲ್ ಪೇಜರನ್ನು ನಾಪತ್ತೆ ಮಾಡಿದೆ. ವಿದ್ಯುತ್ ಚಿಮಣಿ ಬುರಡೆಗೆ ಡಸ್ಟ್ ಮತ್ತು ರಸ್ಟ್ ಹಿಡಿಯುವಂತೆ ಮಾಡಿದೆ. ಫೋನು ಪತ್ರಗಳನ್ನು ಅಗಿದು, ನುಂಗಿದೆ. ಕಂಪ್ಯೂಟರ್ ಹಲವರ ಕೆಲಸ ಕಸಿದುಕೊಂಡಿದೆ. ಎಳನೀರು, ಎಳ್ಳು ನೀರು, ಮಜ್ಜಿಗೆಗಳ ಜಾಗದಲ್ಲಿ ಕೋಲಾಗಳು ಕುಳಿತು ಕೇಕೆ ಹಾಕಿದೆ. ಏನ್ಮಾಡೋದು...
ಕುಂಕುಮವ ಟಿಕ್ಲಿ ನುಂಗಿತ್ತ... ನೋಡವ್ವ ತಂಗಿ....
ಅರಿಶಿಣವ ಪ್ಯಾರ್ ಆಂಡ್ ಲೌಲಿ ನುಂಗಿತ್ತ...
ಬೈಕು ಪೆಟ್ರೋಲ ನುಂಗಿ, ಎಂಜಿನ್ನು ಪೆಟ್ರೋಲ ನುಂಗಿ
ಅದು ಬಿಟ್ಟ ಹೊಗೆ ನಮ್ಮನೆ ನುಂಗಿತ್ತ ನೋಡವ್ವ....
Tuesday, May 01, 2007
ಹೀಗೂ ಒಂದು ಶಿಕ್ಷೆ...!
ಪೊಲೀಸ್ ಇಲಾಖೆಯಲ್ಲಿ ತಪ್ಪಿಗೊಂದು ಶಿಕ್ಷೆ ಗ್ಯಾರಂಟಿ. ಹೆಚ್ಚಾಗಿ ವರ್ಗಾವಣೆ, ಅಮಾನತು ಸಾರ್ವಜನಿಕರಿಗೆ ಕಾಣುವ ಶಿಕ್ಷೆ. ಪೊಲೀಸ್ ಅಧಿಕಾರಿಗಳನ್ನು ಕಚೇರಿ ಒಳಗಿನ ಕೆಲಸಕ್ಕೆ ಸೀಮಿತಗೊಳಿಸುವುದು ಅಥವಾ ಸಾರ್ವಜನಿಕ ಕರ್ತವ್ಯಕ್ಕೆ ನೇಮಿಸದಿರುವುದೂ ಇಲಾಖೆಯ ಶಿಕ್ಷಾ ನೀತಿಯಲ್ಲೊಂದು. ಆದರೆ ಇಲ್ಲಿ ಹೇಳುತ್ತಿರುವ ಶಿಕ್ಷೆ ಒಂಥರಾ ವಿಶಿಷ್ಟ ಮತ್ತು ವಿಚಿತ್ರ. ಸುಮ್ಮನೆ ನೋಡಿದವರಿಗೆ ಅದು ಶಿಕ್ಷೆ ಎಂದು ಅನಿಸುವುದೇ ಇಲ್ಲ. ಶಿಕ್ಷೆ ಅನುಭವಿಸುತ್ತಿರುವವನಿಗೆ ಹಾಗೂ ಶಿಕ್ಷೆ ಕೊಟ್ಟವರಿಗೆ ಮಾತ್ರ ಗೊತ್ತು ಅದು ಶಿಕ್ಷೆಯೆಂದು...
ಪೊಲೀಸರಿಗೆ ರೇಶನ್ (ಅಕ್ಕಿ, ಗೋದಿ, ಸಕ್ಕರೆ) ಬರುತ್ತೆ. ಹೆಚ್ಚು ಉಳಿದರೆ ಅದನ್ನು ಹಿಂತಿರುಗಿಸಲಾಗುತ್ತದೆ. ಸಾಧಾರಣವಾಗಿ ಪೊಲೀಸರು ಬೇರೆ ಬೇರೆ ಕಡೆ ಕರ್ತವ್ಯ ನಿರ್ವಹಿಸುವುದರಿಂದ ಎಲ್ಲರೂ ರೇಶನ್ ತೆಗೆದುಕೊಂಡು ಹೋಗುವವರೆಗೂ ರೇಶನ್ ಹಿಂತಿರುಗಿಸುವುದಿಲ್ಲ. ಒಮ್ಮೆ ೫೨ ಮಂದಿ ಇನ್ನೂ ರೇಶನ್ ತೆಗೆದುಕೊಂಡಿರಲಿಲ್ಲ. ಆದರೂ ರೇಶನ್ ಹಿಂತಿರುಗಿಸಲಾಯಿತು. ೫೨ ಮಂದಿ ರೇಶನ್‌ನಿಂದ ವಂಚಿತರಾದರು.
ಈ ವಿಷಯ ಹಿರಿಯ ಅಧಿಕಾರಿಗಳ ಕಿವಿ ತಲುಪಿತು. ತಪ್ಪಿಗೊಂದು ಶಿಕ್ಷೆಯಾಗಲೇಬೇಕಲ್ಲ. ರೇಶನ್ ವಿತರಣೆ ಜವಾಬ್ದಾರಿ ಹೊತ್ತಿದ್ದ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕಾನ್‌ಸ್ಟೇಬಲ್‌ಗೆ ಹೆಚ್ಚುವರಿ ಎಸ್ಪಿ ಲೋಕೇಶ್ ಕುಮಾರ್ ಕೊಟ್ಟ ಶಿಕ್ಷೆ ಏನು ಗೊತ್ತಾ? ಆತ ಏಳು ದಿನ ಲೋಕೇಶ್ ಕುಮಾರ್ ಅವರ ಕಚೇರಿಯ ಬಾಗಿಲಲ್ಲಿ ಭಾರದ ಗನ್ ಹಿಡಿದು ನಿಂತಿರಬೇಕು ಅಷ್ಟೆ. ದಿನವೂ ಲೋಕೇಶ್ ಕುಮಾರ್ ಬರುವುದಕ್ಕಿಂತ ಮೊದಲೇ ಬರಬೇಕು. ಅವರು ಊಟಕ್ಕೆ ಹೋದಾಗ ಈತನೂ ಊಟ ಮಾಡಿ ಬರಬೇಕು. ರಾತ್ರಿ ಅವರು ಹೋದ ನಂತರ ಮನೆಗೆ ಹೋಗಬೇಕು. ಅವರ ಕಚೇರಿಗೆ ನಿಮಿಷಕ್ಕೊಮ್ಮೆ ಬರುವ ಪೊಲೀಸ್ ಅಧಿಕಾರಿಗಳಿಗೆ ಸೆಲ್ಯೂಟ್ ಹೊಡೀಬೇಕು.
ನೋಡೋಕೆ ಇದು ಶಿಕ್ಷೆ ಅನಿಸದು. ಆದರೆ ಎಸ್ಪಿ ಕಚೇರಿ ಹೋದವರಿಗೆ, ಅಲ್ಲಿ ಹೊರಗೆ ಕುಳಿತವರಿಗೆ ಗೊತ್ತು... ಅಲ್ಲಿ ಹೊರಗೆ ನಿಲ್ಲೋದೂ ಒಂದು ಶಿಕ್ಷೆ ಅಂತ. ಯಾಕಂದ್ರೆ ಮಂಗಳೂರಿನ ಅರ್ಧ ಸೊಳ್ಳೆ ಎಸ್ಪಿ ಕಚೇರಿಯಲ್ಲೇ ಇರುತ್ತೆ. ಸಂಜೆ ೫.೦೦ ಗಂಟೆ ನಂತರ ಹೆಚ್ಚುವರಿ ಎಸ್ಪಿ ಲೋಕೇಶ್ ಕುಮಾರ್ ಅವರ ಕಚೇರಿ ಹೊರಗೆ ಅರ್ಧ ಗಂಟೆ ಕುಳಿತರೆ ಸಾಕು "ಬರಿಗೈಯಲ್ಲಿ ಸೊಳ್ಳೆ ಹೊಡೆಯುವ ಕಲೆ’ ಎಂಬ ವಿಷಯದ ಕುರಿತು ಒಂದು ಪ್ರಬಂಧ ಮಂಡಿಸಿ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪಡೆದುಕೊಳ್ಳಬಹುದು. ಅಷ್ಟು ಸೊಳ್ಳೆ. ಸೈಜೂ ಭಾರಿಯಾಗಿಯೇ ಇರುತ್ತೆ.
ಅಂಥ ಸೊಳ್ಳೆ ಇರುವಲ್ಲಿ ಅರ್ಧ ಗಂಟೆ ಇರೋದೇ ಶಿಕ್ಷೆ ಅನಿಸುವಾಗ, ಲೋಕೇಶ್ ಕುಮಾರ್ ಮನೆಗೆ ಹೋಗುವವರೆಗೆ ಅಂದರೆ ಕನಿಷ್ಟ ರಾತ್ರಿ ೯.೩೦ರವರೆಗೆ ಆ ಕಾನ್‌ಸ್ಟೇಬಲ್ ಅವರ ಕಚೇರಿ ಹೊರಗೆ ನಿಂತಿರಬೇಕಲ್ಲ. ಬಹುಶಃ ಆತ ಮಾಡಿದ ತಪ್ಪಿಗೆ ಅದಕ್ಕಿಂತ ದೊಡ್ಡ ಶಿಕ್ಷೆ ಕೊಡೋಕೆ ಸಾಧ್ಯವೇ ಇರಲಿಲ್ಲವೇನೊ?
ಇದಪ್ಪ ಲೋಕೇಶ್ ಕುಮಾರ್ ಐಡಿಯಾ ಅಂದ್ರೆ!
ಪೊಲೀಸರಿಗೆ ರೇಶನ್ (ಅಕ್ಕಿ, ಗೋದಿ, ಸಕ್ಕರೆ) ಬರುತ್ತೆ. ಹೆಚ್ಚು ಉಳಿದರೆ ಅದನ್ನು ಹಿಂತಿರುಗಿಸಲಾಗುತ್ತದೆ. ಸಾಧಾರಣವಾಗಿ ಪೊಲೀಸರು ಬೇರೆ ಬೇರೆ ಕಡೆ ಕರ್ತವ್ಯ ನಿರ್ವಹಿಸುವುದರಿಂದ ಎಲ್ಲರೂ ರೇಶನ್ ತೆಗೆದುಕೊಂಡು ಹೋಗುವವರೆಗೂ ರೇಶನ್ ಹಿಂತಿರುಗಿಸುವುದಿಲ್ಲ. ಒಮ್ಮೆ ೫೨ ಮಂದಿ ಇನ್ನೂ ರೇಶನ್ ತೆಗೆದುಕೊಂಡಿರಲಿಲ್ಲ. ಆದರೂ ರೇಶನ್ ಹಿಂತಿರುಗಿಸಲಾಯಿತು. ೫೨ ಮಂದಿ ರೇಶನ್‌ನಿಂದ ವಂಚಿತರಾದರು.
ಈ ವಿಷಯ ಹಿರಿಯ ಅಧಿಕಾರಿಗಳ ಕಿವಿ ತಲುಪಿತು. ತಪ್ಪಿಗೊಂದು ಶಿಕ್ಷೆಯಾಗಲೇಬೇಕಲ್ಲ. ರೇಶನ್ ವಿತರಣೆ ಜವಾಬ್ದಾರಿ ಹೊತ್ತಿದ್ದ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕಾನ್‌ಸ್ಟೇಬಲ್‌ಗೆ ಹೆಚ್ಚುವರಿ ಎಸ್ಪಿ ಲೋಕೇಶ್ ಕುಮಾರ್ ಕೊಟ್ಟ ಶಿಕ್ಷೆ ಏನು ಗೊತ್ತಾ? ಆತ ಏಳು ದಿನ ಲೋಕೇಶ್ ಕುಮಾರ್ ಅವರ ಕಚೇರಿಯ ಬಾಗಿಲಲ್ಲಿ ಭಾರದ ಗನ್ ಹಿಡಿದು ನಿಂತಿರಬೇಕು ಅಷ್ಟೆ. ದಿನವೂ ಲೋಕೇಶ್ ಕುಮಾರ್ ಬರುವುದಕ್ಕಿಂತ ಮೊದಲೇ ಬರಬೇಕು. ಅವರು ಊಟಕ್ಕೆ ಹೋದಾಗ ಈತನೂ ಊಟ ಮಾಡಿ ಬರಬೇಕು. ರಾತ್ರಿ ಅವರು ಹೋದ ನಂತರ ಮನೆಗೆ ಹೋಗಬೇಕು. ಅವರ ಕಚೇರಿಗೆ ನಿಮಿಷಕ್ಕೊಮ್ಮೆ ಬರುವ ಪೊಲೀಸ್ ಅಧಿಕಾರಿಗಳಿಗೆ ಸೆಲ್ಯೂಟ್ ಹೊಡೀಬೇಕು.
ನೋಡೋಕೆ ಇದು ಶಿಕ್ಷೆ ಅನಿಸದು. ಆದರೆ ಎಸ್ಪಿ ಕಚೇರಿ ಹೋದವರಿಗೆ, ಅಲ್ಲಿ ಹೊರಗೆ ಕುಳಿತವರಿಗೆ ಗೊತ್ತು... ಅಲ್ಲಿ ಹೊರಗೆ ನಿಲ್ಲೋದೂ ಒಂದು ಶಿಕ್ಷೆ ಅಂತ. ಯಾಕಂದ್ರೆ ಮಂಗಳೂರಿನ ಅರ್ಧ ಸೊಳ್ಳೆ ಎಸ್ಪಿ ಕಚೇರಿಯಲ್ಲೇ ಇರುತ್ತೆ. ಸಂಜೆ ೫.೦೦ ಗಂಟೆ ನಂತರ ಹೆಚ್ಚುವರಿ ಎಸ್ಪಿ ಲೋಕೇಶ್ ಕುಮಾರ್ ಅವರ ಕಚೇರಿ ಹೊರಗೆ ಅರ್ಧ ಗಂಟೆ ಕುಳಿತರೆ ಸಾಕು "ಬರಿಗೈಯಲ್ಲಿ ಸೊಳ್ಳೆ ಹೊಡೆಯುವ ಕಲೆ’ ಎಂಬ ವಿಷಯದ ಕುರಿತು ಒಂದು ಪ್ರಬಂಧ ಮಂಡಿಸಿ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪಡೆದುಕೊಳ್ಳಬಹುದು. ಅಷ್ಟು ಸೊಳ್ಳೆ. ಸೈಜೂ ಭಾರಿಯಾಗಿಯೇ ಇರುತ್ತೆ.
ಅಂಥ ಸೊಳ್ಳೆ ಇರುವಲ್ಲಿ ಅರ್ಧ ಗಂಟೆ ಇರೋದೇ ಶಿಕ್ಷೆ ಅನಿಸುವಾಗ, ಲೋಕೇಶ್ ಕುಮಾರ್ ಮನೆಗೆ ಹೋಗುವವರೆಗೆ ಅಂದರೆ ಕನಿಷ್ಟ ರಾತ್ರಿ ೯.೩೦ರವರೆಗೆ ಆ ಕಾನ್‌ಸ್ಟೇಬಲ್ ಅವರ ಕಚೇರಿ ಹೊರಗೆ ನಿಂತಿರಬೇಕಲ್ಲ. ಬಹುಶಃ ಆತ ಮಾಡಿದ ತಪ್ಪಿಗೆ ಅದಕ್ಕಿಂತ ದೊಡ್ಡ ಶಿಕ್ಷೆ ಕೊಡೋಕೆ ಸಾಧ್ಯವೇ ಇರಲಿಲ್ಲವೇನೊ?
ಇದಪ್ಪ ಲೋಕೇಶ್ ಕುಮಾರ್ ಐಡಿಯಾ ಅಂದ್ರೆ!
ತೆಂಗಿನ ಕಾಯಿ ಕಳವು
ಉಳ್ಳಾಲದ ಮನೆಯೊಂದರಲ್ಲಿ ಏನು ಮಾಡಿದರೂ ನಿಲ್ಲದ ತೆಂಗಿನ ಕಾಯಿ ಕಳವು. ಅಜ್ಜ- ಅಜ್ಜಿ ಮಾತ್ರ ಇರುವ ಆ ಮನೆ ಮೇಲೆ ಕಳ್ಳರ ಕಣ್ಣು ಶಾಶ್ವತವಾಗಿ ನೆಟ್ಟಿರುತ್ತಿತ್ತು. ಅಜ್ಜ- ಅಜ್ಜಿ ಬೆಳಗ್ಗೆ ಏಳುವುದರೊಳಗೆ ತೆಂಗಿನಕಾಯಿಗಳು ನಾಪತ್ತೆಯಾಗಿ ಬಿಡುತ್ತಿದ್ದವು!
ಈ ಸಮಸ್ಯೆ ಕುರಿತು ಅವರು ಪೊಲೀಸರ ಬಳಿ ದೂರಿಕೊಂಡರು. ಸರಿ ಪೊಲೀಸರು ರಾತ್ರಿ ಅವರ ಮನೆ ಬಳಿ ಗಸ್ತು ಮಾಡುತ್ತಿದ್ದರು. ಆದರೂ ಕಳವು ನಿರಂತರವಾಗಿತ್ತು. ಏನು ಮಾಡಿದರೂ ಹೆಚ್ಚಿನ ತೆಂಗಿನಕಾಯಿಗಳು ಕಳ್ಳತನ ಆಗುವುದರಿಂದ ಮರವನ್ನೇ ಕಡಿಸಿಬಿಡಿ ಎಂಬ ಪೊಲೀಸರ ಸಲಹೆಗೆ ಅಜ್ಜ ಒಪ್ಪಲಿಲ್ಲ. ಪೊಲೀಸರಿಗೆ ಅಜ್ಜನ ಕಾಟ ತಪ್ಪಲಿಲ್ಲ. ಅಜ್ಜಾ ನಿಮ್ಮ ಮನೆ ಕಂಪೌಂಡೆಲ್ಲ ಕಾಣುವ ಹಾಗೆ ಲೈಟ್ ಹಾಕಿಸಿ, ಆಗ ಕಳ್ಳರು ಬರುವುದಿಲ್ಲ. ಬಂದರೂ ಲೈಟ್ ಇರುವುದರಿಂದ ಕಾಣಿಸುತ್ತಾರೆ ಎಂದು ಪುಕ್ಕಟೆ ಸಲಹೆ ಎಸೆದರು.
ಮಾತು ನಂಬಿದ ಅಜ್ಜ ಲೈಟ್ ಹಾಕಿಸಿದ. ಸಲಹೆಯನ್ನು ಸ್ವಲ್ಪ ಜೋರಾಗಿಯೇ ಜಾರಿಗೆ ತಂದ ಅಜ್ಜ ೧೦೦ ವೋಲ್ಟ್‌ನ ಬಲ್ಬ್ ಹಾಕಿ ಇಡೀ ಕಂಪೌಂಡ್ ಜಗಜಗಿಸುವಂತೆ ಮಾಡಿದ. ಆದರೂ ಕಳವು ನಡೆಯುತ್ತಿತ್ತು. ಒಂದು ತಿಂಗಳು ಹೀಗೇ ಕಳೆಯಿತು. ಬಿಲ್ ಬರುವಾಗ ೧೦೦ ವೋಲ್ಟಿನ ಬಲ್ಬ್‌ನ ಶಕ್ತಿ ಗೊತ್ತಾಗಿತ್ತು. ಬಿಲ್ ಅಜ್ಜನಿಗೆ ಶಾಕ್ ಕೊಟ್ಟಿತ್ತು. ಪೊಲೀಸ್ ಠಾಣೆಗೆ ಕರೆ ಮಾಡಿದ ಅಜ್ಜ "ಲೈಟ್ ಹಾಕಿಸಿದ್ದರಿಂದ ಕಳ್ಳತನ ನಿಲ್ಲಲಿಲ್ಲ. ಬದಲಾಗಿ ಬಿಲ್ ಹೆಚ್ಚು ಬಂದಿದೆ. ಲೈಟ್ ಹಾಕಿದರೂ ತೆಂಗಿನಕಾಯಿ ಕಳವು ಮುಂದುವರಿದಿರುವುದರಿಂದ ಲೈಟ್ ತೆಗೆಸುತ್ತೇನೆ’ ಅಂದ. ಅಂದಂತೆ ಮಾಡಿಯೂ ಬಿಟ್ಟ.
ಪೊಲೀಸರಿಗೂ ಅಜ್ಜನ ದೂರು ಕೇಳಿ ಬೇಜಾರಾಗಿತ್ತು. ಕನಿಕರವೂ ಮೂಡಿತ್ತು. ಅಜ್ಜನ ಮನೆಯ ತೆಂಗಿನಕಾಯಿ ಕಳುವು ಮಾಡುವವರನ್ನು ಹಿಡಿಯಲು ನಿರ್ಧರಿಸಿದರು. ಐನಾತಿ ಐವಿಯಾ ಮಾಡಿದರು. ಯೋಜನೆಯಂತೆ ಒಂದಷ್ಟು ತೆಂಗಿನ ಕಾಯಿಗಳನ್ನು ಮರದ ಕೆಳಗೇ ಇಟ್ಟಿದ್ದರು. ಅದನ್ನು ಕಳ್ಳರು ತೆಗೆದುಕೊಂಡು ಹೋಗುವಾಗ ಅವರನ್ನು ಅಡಗಿ ಕುಳಿತ ಪೊಲೀಸರು ಹಿಡಿಯುವುದು ಯೋಜನೆ. ಕಳ್ಳರನ್ನು ಹಿಡಿಯುವ ಕನಸು ಕಾಣುತ್ತ ಅಜ್ಜ ಹಾಯಾಗಿ ಮಲಗಿದ.
ಬೆಳಗ್ಗೆ ಎದ್ದು ನೋಡಿದರೆ ತೆಂಗಿನ ಕಾಯಿ ಇಲ್ಲ. ಹಾಗಾದರೆ ಕಳ್ಳನನ್ನು ಪೊಲೀಸರು ಹಿಡಿದಿರಬಹುದು ಎಂದು ಖುಶಿಯಲ್ಲಿ ಪೊಲೀಸ್ ಠಾಣೆಗೆ ಫೋನಾಯಿಸಿದ. ಆದರೆ ಹಿಂದಿನ ದಿನ ರಾತ್ರಿ ಉಳ್ಳಾಲ ಪರಿಸರದಲ್ಲಿ ಕೊಲೆ ನಡೆದದ್ದರಿಂದ ತೆಂಗಿನಕಾಯಿ ಕಳ್ಳನ ಹಿಡಿಯಲು ಕಾದು ಕೂರಬೇಕಿದ್ದ ಪೊಲೀಸರು ಬಂದೇ ಇರಲಿಲ್ಲ! ಮನೆಯೊಳಗೆ ಭದ್ರವಾಗಿದ್ದ ತೆಂಗಿನಕಾಯಿಗಳೂ ಕಳ್ಳರ ಪಾಲಾಗಿದ್ದವು!
ಹೇಗಿದೆ? ಕಳ್ಳ ಪೊಲೀಸ್ ಆಟ?
ಈ ಸಮಸ್ಯೆ ಕುರಿತು ಅವರು ಪೊಲೀಸರ ಬಳಿ ದೂರಿಕೊಂಡರು. ಸರಿ ಪೊಲೀಸರು ರಾತ್ರಿ ಅವರ ಮನೆ ಬಳಿ ಗಸ್ತು ಮಾಡುತ್ತಿದ್ದರು. ಆದರೂ ಕಳವು ನಿರಂತರವಾಗಿತ್ತು. ಏನು ಮಾಡಿದರೂ ಹೆಚ್ಚಿನ ತೆಂಗಿನಕಾಯಿಗಳು ಕಳ್ಳತನ ಆಗುವುದರಿಂದ ಮರವನ್ನೇ ಕಡಿಸಿಬಿಡಿ ಎಂಬ ಪೊಲೀಸರ ಸಲಹೆಗೆ ಅಜ್ಜ ಒಪ್ಪಲಿಲ್ಲ. ಪೊಲೀಸರಿಗೆ ಅಜ್ಜನ ಕಾಟ ತಪ್ಪಲಿಲ್ಲ. ಅಜ್ಜಾ ನಿಮ್ಮ ಮನೆ ಕಂಪೌಂಡೆಲ್ಲ ಕಾಣುವ ಹಾಗೆ ಲೈಟ್ ಹಾಕಿಸಿ, ಆಗ ಕಳ್ಳರು ಬರುವುದಿಲ್ಲ. ಬಂದರೂ ಲೈಟ್ ಇರುವುದರಿಂದ ಕಾಣಿಸುತ್ತಾರೆ ಎಂದು ಪುಕ್ಕಟೆ ಸಲಹೆ ಎಸೆದರು.
ಮಾತು ನಂಬಿದ ಅಜ್ಜ ಲೈಟ್ ಹಾಕಿಸಿದ. ಸಲಹೆಯನ್ನು ಸ್ವಲ್ಪ ಜೋರಾಗಿಯೇ ಜಾರಿಗೆ ತಂದ ಅಜ್ಜ ೧೦೦ ವೋಲ್ಟ್‌ನ ಬಲ್ಬ್ ಹಾಕಿ ಇಡೀ ಕಂಪೌಂಡ್ ಜಗಜಗಿಸುವಂತೆ ಮಾಡಿದ. ಆದರೂ ಕಳವು ನಡೆಯುತ್ತಿತ್ತು. ಒಂದು ತಿಂಗಳು ಹೀಗೇ ಕಳೆಯಿತು. ಬಿಲ್ ಬರುವಾಗ ೧೦೦ ವೋಲ್ಟಿನ ಬಲ್ಬ್‌ನ ಶಕ್ತಿ ಗೊತ್ತಾಗಿತ್ತು. ಬಿಲ್ ಅಜ್ಜನಿಗೆ ಶಾಕ್ ಕೊಟ್ಟಿತ್ತು. ಪೊಲೀಸ್ ಠಾಣೆಗೆ ಕರೆ ಮಾಡಿದ ಅಜ್ಜ "ಲೈಟ್ ಹಾಕಿಸಿದ್ದರಿಂದ ಕಳ್ಳತನ ನಿಲ್ಲಲಿಲ್ಲ. ಬದಲಾಗಿ ಬಿಲ್ ಹೆಚ್ಚು ಬಂದಿದೆ. ಲೈಟ್ ಹಾಕಿದರೂ ತೆಂಗಿನಕಾಯಿ ಕಳವು ಮುಂದುವರಿದಿರುವುದರಿಂದ ಲೈಟ್ ತೆಗೆಸುತ್ತೇನೆ’ ಅಂದ. ಅಂದಂತೆ ಮಾಡಿಯೂ ಬಿಟ್ಟ.
ಪೊಲೀಸರಿಗೂ ಅಜ್ಜನ ದೂರು ಕೇಳಿ ಬೇಜಾರಾಗಿತ್ತು. ಕನಿಕರವೂ ಮೂಡಿತ್ತು. ಅಜ್ಜನ ಮನೆಯ ತೆಂಗಿನಕಾಯಿ ಕಳುವು ಮಾಡುವವರನ್ನು ಹಿಡಿಯಲು ನಿರ್ಧರಿಸಿದರು. ಐನಾತಿ ಐವಿಯಾ ಮಾಡಿದರು. ಯೋಜನೆಯಂತೆ ಒಂದಷ್ಟು ತೆಂಗಿನ ಕಾಯಿಗಳನ್ನು ಮರದ ಕೆಳಗೇ ಇಟ್ಟಿದ್ದರು. ಅದನ್ನು ಕಳ್ಳರು ತೆಗೆದುಕೊಂಡು ಹೋಗುವಾಗ ಅವರನ್ನು ಅಡಗಿ ಕುಳಿತ ಪೊಲೀಸರು ಹಿಡಿಯುವುದು ಯೋಜನೆ. ಕಳ್ಳರನ್ನು ಹಿಡಿಯುವ ಕನಸು ಕಾಣುತ್ತ ಅಜ್ಜ ಹಾಯಾಗಿ ಮಲಗಿದ.
ಬೆಳಗ್ಗೆ ಎದ್ದು ನೋಡಿದರೆ ತೆಂಗಿನ ಕಾಯಿ ಇಲ್ಲ. ಹಾಗಾದರೆ ಕಳ್ಳನನ್ನು ಪೊಲೀಸರು ಹಿಡಿದಿರಬಹುದು ಎಂದು ಖುಶಿಯಲ್ಲಿ ಪೊಲೀಸ್ ಠಾಣೆಗೆ ಫೋನಾಯಿಸಿದ. ಆದರೆ ಹಿಂದಿನ ದಿನ ರಾತ್ರಿ ಉಳ್ಳಾಲ ಪರಿಸರದಲ್ಲಿ ಕೊಲೆ ನಡೆದದ್ದರಿಂದ ತೆಂಗಿನಕಾಯಿ ಕಳ್ಳನ ಹಿಡಿಯಲು ಕಾದು ಕೂರಬೇಕಿದ್ದ ಪೊಲೀಸರು ಬಂದೇ ಇರಲಿಲ್ಲ! ಮನೆಯೊಳಗೆ ಭದ್ರವಾಗಿದ್ದ ತೆಂಗಿನಕಾಯಿಗಳೂ ಕಳ್ಳರ ಪಾಲಾಗಿದ್ದವು!
ಹೇಗಿದೆ? ಕಳ್ಳ ಪೊಲೀಸ್ ಆಟ?
Subscribe to:
Posts (Atom)