Tuesday, May 26, 2009

ಬ್ಲಾಗು, ಹೂಂಸು ಮತ್ತು ಬಕ್‌ಬಕ್!



ಬಹಳ ಜನರಿಗೆ ಬ್ಲಾಗು ಬೋರಾಗುತ್ತಿದೆ!
ನಾವು ಭಾರತೀಯರೇ ಹಾಗೆ. ನಮಗೆ ಆರಂಭ ಶೂರತ್ವ. ಬ್ಲಾಗು ಎಂಬ ಹೊಸ ಲೋಕ ತೆರೆದುಕೊಂಡಾಗ ಎಲ್ಲರೂ ಬ್ಲಾಗು ಆರಂಭಿಸಿದ್ದೇ ಆರಂಭಿಸಿದ್ದು. ಈಗ ಬಹುತೇಕ ಜನ ಅದನ್ನು ನಿಲ್ಲಿಸಿದ್ದಾರೆ. ನನ್ನಂಥ ಕೆಲವರು ಆಗಾಗ ನೆಪಕ್ಕೆ ಏನೋ ಬರೆದು ಸುಮ್ಮನಾಗುತ್ತಿದ್ದಾರೆ.
ಬ್ಲಾಗಿನ ಬಗೆಗಿದ್ದ ಬೆರಗು ಕಡಿಮೆಯಾಗಿದೆ. ಬರೆಯುವ ತೆವಲು ತೀರಿದೆ!
ನನ್ನ ಬಹಳ ಆತ್ಮೀಯರೊಬ್ಬರು ಯಾವಾಗಲು ಬ್ಲಾಗು ಬರವಣಿಗೆಯನ್ನು ಟೀಕಿಸುತ್ತಿರುತ್ತಾರೆ. ಅವರು ಇತ್ತೀಚೆಗೆ ಬ್ಲಾಗಿನ ಬಗ್ಗೆ ಹೇಳುತ್ತ ‘ಬ್ಲಾಗೆಂದರೆ ಒಂದು ಕೋಣೆಯಲ್ಲಿ ಒಬ್ಬನೇ ಕುಳಿತು ಹೂಂಸು ಬಿಟ್ಟು ಒಬ್ಬನೇ ಆಸ್ವಾದಿಸಿದಂತೆ’ ಎಂದು ವ್ಯಾಖ್ಯಾನಿಸಿದ್ದರು.
ಅವರ ಮಾತಿಗೆ ನಾನು ನಕ್ಕು ಸುಮ್ಮನಾಗಿದ್ದೆ. ಆದರೆ ನಂತರ ಯೋಚಿಸುವಾಗ ಬ್ಲಾಗೆಂದರೆ ಒಬ್ಬನೇ ಹೂಂಸು ಬಿಟ್ಟು ಒಬ್ಬನೇ ಆಸ್ವಾದಿಸುವುದಾದರೆ, ಪತ್ರಿಕೆಗಳಿಗೆ ಬರೆಯುವುದು ಹೂಂಸು ಬಿಟ್ಟು ಊರಿಗೆಲ್ಲ ನಾಥ ಕೊಟ್ಟಂತೆಯಾ? ಎಂಬ ಅನುಮಾನ ಶುರುವಾಗಿಬಿಟ್ಟಿತು!
ಬ್ಲಾಗು ಯಾರು ಓದುತ್ತಾರೆ? ಓದಿದರೂ ಎಷ್ಟು ಜನ ಓದಿಯಾರು? ಅದರಿಂದ ಸಿಗುವುದೇನು? ಬ್ಲಾಗಿಗೆ ಬರೆಯುವ ಸಮಯವನ್ನು ಬೇರೆಯದಕ್ಕೆ ಬಳಸಿಕೊಳ್ಳಬಹುದಲ್ಲವಾ? ಎಂಬುದು ಅವರ ಪ್ರಶ್ನೆ.
ಅದು ಸರಿಯೇ ಬ್ಲಾಗೇನು ಲಕ್ಷಾಂತರ ಜನ ಓದುವುದಿಲ್ಲ. ಆದರೆ ನಮಗೆ ಅನ್ನಿಸಿದ್ದನ್ನೆಲ್ಲ ಬರೆಯಲು ಬ್ಲಾಗೊಂದು ವೇದಿಕೆ ಅಷ್ಟೆ. ನಾಲ್ಕೇ ಜನ ಓದಲಿ. ಇಬ್ಬರೇ ಪ್ರತಿಕ್ರಿಯಿಸಲಿ. ಅಷ್ಟೇ ಸಮಾದಾನ. ನನ್ನ ಮನದೊಳಗಿನ ಮಾತನ್ನು ಒಂದಿಬ್ಬರಾದರೂ ಕೇಳಿಸಿಕೊಂಡರೆ ಅಷ್ಟೇ ಸಾಕು. ಅದಕ್ಕಾಗಿ ಬ್ಲಾಗು ಬರೆಯೋದು.
ಲಕ್ಷಾಂತರ ಜನ ಓದಲಿ, ನೋಡಲಿ. ಅದರಿಂದ ನನಗೆ ಸಾವಿರಾರು ಆದಾಯ ಬರಲಿ ಎಂದು ಬಯಸುವವರು ಖಂಡಿತ ಬ್ಲಾಗು ಬರೆಯುವುದಿಲ್ಲ.
ಅವರು ಧಾರಾವಾಹಿ ಬರೆಯುತ್ತಾರೆ!
ಬರವಣಿಗೆಯ ಲೋಕದಲ್ಲಿ ಅಂಬೆಗಾಲಿಡುತ್ತಿರುವ ನನ್ನಂಥಹ ಅದೆಷ್ಟೋ ಮಂದಿಗೆ ಬ್ಲಾಗು ಸಹಾಯಮಾಡಿದೆ. ನಮಗನ್ನಿಸಿದ್ದನ್ನು ಬರೆದು, ಅದರ ಬಗ್ಗೆ ಬೇರೆಯವರ ಅಭಿಪ್ರಾಯ ತಿಳಿದುಕೊಳ್ಳಲು, ನಮ್ಮ ಬರವಣಿಗೆ ಶೈಲಿ ಉತ್ತಮ ಪಡಿಸಿಕೊಳ್ಳಲು ಬ್ಲಾಗು ಸಾಧನವಾಗಿದೆ. ಇದರಿಂದಲೇ ಪರಿಚಯವಾದರು ಅದೆಷ್ಟೋ ಮಂದಿ. ಅವರ ಊರು, ಜಾತಿ ಯಾವುದೂ ಗೊತ್ತಿಲ್ಲ. ಬ್ಲಾಗು ಗೆಳೆತನಕ್ಕೂ ದಾರಿ ಮಾಡಿಕೊಟ್ಟಿದೆ.
ಹಾಗಂತ ಬ್ಲಾಗೇನು ಮಹಾ ಸುಬಗರ ಬೀಡಾಗೇನೂ ಉಳಿದಿಲ್ಲ. ಹುಡುಗಿಯರ ಬ್ಲಾಗಿಗೆ ಕೆಟ್ಟ ಕಾಮೆಂಟು ಹಾಕುವ, ಅನಾಮಧೇಯವಾಗಿ ಅನಗತ್ಯ ಟೀಕಿಸಿ ಬರೆಯುವವರೂ ಬ್ಲಾಗನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ನಮಗಾಗದವರ ಬಗ್ಗೆ ಬರೆಯಲೂ ಬಳಸಿದ್ದಾರೆ. ಏನೇನೋ ಬರೆಯುತ್ತೇನೆ ಎಂದು ಹೆದರಿಸುವವರೂ ಇದ್ದಾರೆ. ನನಗೆ ಬಹಳ ಗೊತ್ತಿದೆ ಎಂದು ಆತ್ಮ ರತಿಯಲ್ಲಿ ಮುಳುಗಿದವರೂ ಇದ್ದಾರೆ.
ಇದೆಲ್ಲ ಏನೇ ಇರಲಿ ಬ್ಲಾಗಿಗೆ ಮೊದಲಿನ ಬೆರಗು ಉಳಿದಿಲ್ಲ ಎಂಬುದಂತೂ ಸತ್ಯ. ಅದೇನು ಬ್ಲಾಗಿನ ಸಂಖ್ಯೆ ಹೆಚ್ಚಾಗಿದ್ದಕ್ಕೋ ಅಥವಾ ದಿನಕಳೆದಂತೆ ಪ್ರತಿಯೊಂದೂ ಆಕರ್ಷಣೆ ಕಳೆದುಕೊಳ್ಳುತ್ತದೆ ಎಂಬ ನಿಯಮ ಬ್ಲಾಗಿಗೂ ಅನ್ವಯವಾದದ್ದಕ್ಕೋ ತಿಳಿಯದಾಗಿದೆ.
ಅಂತೂ ಒಬ್ಬರು ಬ್ಲಾಗು ಟೀಕಿಸಿದ್ದಕ್ಕೆ ಈ ಚಿಕ್ಕ ಬರಹ ಹುಟ್ಟಿಕೊಂಡಿತು. ಇಂಥದ್ದನ್ನೆಲ್ಲ ಬ್ಲಾಗಿನಲ್ಲಿ ಬರೆಯದೇ ವಿಜಯ ಕರ್ನಾಟಕದಲ್ಲಿ ಪ್ರಕಟಿಸಲು ಸಾದ್ಯವೇ? ಅಥವಾ ಇಂಥದ್ದಕ್ಕಾಗಿ ನಾನೇ ಒಂದು ಪತ್ರಿಕೆ ಆರಂಭಿಸೋದು ಸಾದ್ಯವೇ? ಇಲ್ಲ.
ಹೀಗಾಗಿ ಬ್ಲಾಗು. ಇದಕ್ಕೇನು ಮಹಾ ಸಮಯ ಬೇಕಾಗಿಲ್ಲ. ಇದಿಷ್ಟು ಬರೆಯಲು ೫ ನಿಮಿಷ ಸಾಕು. ಆದ್ದರಿಂದ ಬ್ಲಾಗು ಬರವಣಿಗೆಯಿಂದ ಮಹಾ ಸಮಯ ಹಾಳು ಎಂಬುದು ಸರಿಯಲ್ಲ ಎಂಬುದು ನನ್ನ ವಾದ.
ಹೂಂ ಅಂತೀರಾ? ಉಹೂಂ ಅಂತೀರಾ?

11 comments:

http://santasajoy-vasudeva.blogspot.com said...

ನಿಮ್ಮ ಮಾತು ನೂರಕ್ಕೆ ನೂರರಷ್ಟು ಸತ್ಯ ವಿನಾಯಕ್.ನೀವು ಯಾವ ಆತ್ಮೀಯರ ಬಗ್ಗೆ ಹೇಳಿದ್ದಿರಿ ಅಂತಲೂ ನಾ ಬಲ್ಲೆ.ಬ್ಲಾಗ್ ನಮ್ಮ ಮನದ ಪ್ರತಿರೂಪ.ಸಾಕಷ್ಟು ಸರ್ತಿ ಹೇಳಬೇಕಾಗಿರುವ ಮಾತು ಮನದಲ್ಲೇ ಉಳಿದಾಗ ಅದು ಈ ರೀತಿ ಪ್ರಕಟಗೊಳ್ಳುತ್ತದೆ.ಒಂದರ್ಥದಲ್ಲಿ ಬ್ಲಾಗ್ನಿಂದ ಬರೆಯುವ ವ್ಯಕ್ತಿಗೆ ಹಣ ,ಪ್ರಚಾರ ಸಿಗದೇ ಹೋದರು ಕನಿಷ್ಠ ಆತ್ಮ ತೃಪ್ತಿ ಸಿಗುತ್ತದೆ.ಎಲ್ಲವನ್ನು ಹಣದಿಂದಲೇ ಅಳೆದರೆ,ತುಂಬಾ ಕಷ್ಟ.ನನಗೆ ನಿಮ್ಮ ಅನಿಸಿಕೆ ತುಂಬಾ ಇಷ್ಟ ಆಯ್ತು.ಎಂದಿಗೂ ಬ್ಲಾಗ್ ಬರವಣಿಗೆ ನನ್ನ ಪ್ರಕಾರ ಕೆಲಸವಿಲ್ಲದ್ದಲ್ಲ..ಹಾಗಾದರೆ ಓರ್ವ ಲೇಖಕ -ಬರಹಗಾರ ತಮ್ಮ ಬರಹಗಳಿಗೆ ಪ್ರತಿಕ್ರಿಯೆಯ ಪತ್ರಗಳನ್ನು ನಿರೀಕ್ಷಿಸುವುದು ಎಷ್ಟು ಸರಿ? ಅಂದ್ರೆ ಹೊಗಳಿಕೆಗೆ ಮಾತ್ರ ಬರಹಗಳು ಇರಬೇಕು ಎಂದಾಯ್ತಲ್ಲ

ಶಿವಪ್ರಕಾಶ್ said...

ನಾನು ಹೂಂ ಅಂತೀನಿ.
ಕೆಲವೊಮ್ಮೆ ಹಾಗೆನ್ನಿಸುತ್ತದೆ.
ಆದ್ರೆ ಬ್ಲಾಗ್ ಒಂದ್ಸಾರಿ ಇಷ್ಟ ಆದ್ರೆ ಸಾಕು, drug addict ಥರ ಬ್ಲಾಗ್ ಅಡಿಕ್ಟ್ ಅಗ್ಬಿಡ್ತಿವಿ.

ವಿ.ರಾ.ಹೆ. said...

ಹೂಂ aMtini :)

ಹರೀಶ ಮಾಂಬಾಡಿ said...

ಭಟ್ರೆ, ಕೆಲವು ‘ಒಳ್ಳೆಯ’ ಜನರು ತಾವು ಬರೆಯಬಹುದಾದಷ್ಟು ಬರೆದು, ಗಳಿಸಬೇಕಾದ ಖ್ಯಾತಿಯನ್ನೆಲ್ಲಾ ಗಳಿಸಿ ಇನ್ನೊಬ್ಬ ತನಗನ್ನಿಸಿದ್ದನ್ನು ಗೀಚಲು ಹೊರಟಾಗ ಇಂಥದ್ದನ್ನೆಲ್ಲಾ ಹೇಳುತ್ತಾರೆ ಅಂತ ನನಗನಿಸುತ್ತದೆ. ಬರೆಯುವುದನ್ನು ತಡೆಯಲು ಸಾಧ್ಯವೇ

ಮಿಥುನ ಕೊಡೆತ್ತೂರು said...

ನೀವು ಹೇಳಿದ್ದು ಸರಿ ಸರಿ ಸರಿ

Unknown said...

my view is u should write the blog ... don't take it serious about the silly comments of "blog write is waste" ..
by u r blog only i can read u r article if u r article is not there in vijaya karnataka... please don't stop ... please don't consider the silly comments also ...

VENU VINOD said...

ಬ್ಲಾಗ್ ಒಂಥರಾ ಸಾರ್ವಜನಿಕ ಡೈರಿ ಇದ್ದ ಹಾಗೆ...ನಮ್ಮ ಸಂಗತಿಗಳನ್ನೇ ಉಳಿದವರಿಗೂ ಮುದ ನೀಡುವಂತೆ ಪ್ರಸ್ತುತ ಪಡಿಸಲು ಸಹಾಯಕ...ನಿಮ್ಮ ಹಾಗೇ ನನಗೂ ಬರವಣಿಗೆ ಒಂದಷ್ಟು ಚುರುಕುಗೊಳಿಸಲು ಸಹಾಯ ಮಾಡಿದೆ, ಗೆಳೆಯರನ್ನು ಕೊಟ್ಟಿದೆ....so blog is good

ಪೂರ್ಣಿಮಾ ಭಟ್ಟ, ಸಣ್ಣಕೇರಿ said...

ನಂಗಂತೂ ಬ್ಲಾಗ್ ಬರೆಯಿಂಗ್ - ಅದಕ್ಕಿಂತ ಬ್ಲಾಗ್ ಓದಿಂಗ್ ಎರಡೂ ಇಷ್ಟ :-)

Shishir Hegde said...

hu anteeni.. ;-)

Kadasiddeshwar Karaguppi said...

ಹೂಂ ಅಂತೀನಿ :)

navilugari somu said...

naaave haad barkoteevi.... naave compose maadteevi, naave haadteevi, naave kelteevi.... naave khushi padteevi....

idu tappu andor maathu tappu antha helde irode tappu alva bhatre....:)