Wednesday, April 29, 2009

ಸೋನಿಯಾಗೆ ಚಿದ್ರಚಿದ್ರವಾದ ರಾಜೀವ್ ದೇಹ ನೆನಪಾಗಲಿಲ್ಲವೇ?


ಏಷ್ಯಾದ ಅಷ್ಟೇ ಏಕೆ ವಿಶ್ವದ ಅತ್ಯಂತ ಹಳೆಯ ಹಾಗೂ ಬಲಿಷ್ಠ ಉಗ್ರಗಾಮಿ ಸಂಘಟನೆಯೆಂದರೆ ಎಲ್‌ಟಿಟಿಇ. ಅಂತಹ ಸಂಘಟನೆಯನ್ನು ಸೈನ್ಯ ಬಲದ ಮೂಲಕ ಮೂಲೆಗುಂಪು ಮಾಡಿ, ಇನ್ನೇನು ಎಲ್‌ಟಿಟಿ ಅಟಾಟೋಪ ಮುಗಿದೇ ಹೋಯಿತು ಎಂಬಂತಾಗಿರುವಾಗ, ಭಾರತ ಅನಗತ್ಯವಾಗಿ ಮೂಗು ತೂರಿಸಿದೆ.
ತಮಿಳುನಾಡಿನಲ್ಲಿ ಬಹಳ ಹಿಂದಿನಿಂದಲೂ ಎಲ್‌ಟಿಟಿಇ ರಾಜಕೀಯಕ್ಕೆ ಬಳಕೆಯಾಗುತ್ತಿದೆ. ಹಲವು ನಾಯಕರು ಎಲ್‌ಟಿಟಿಇ ಸಂಘಟನೆಯ ಮುಖ್ಯಸ್ಥರೊಂದಿಗೆ ನೇರ ಅಥವಾ ಪರೋಕ್ಷ ಸಂಪರ್ಕ ಹೊಂದಿದ್ದಾರೆ. ಈಗ ಚುನಾವಣೆ ಇರುವುದರಿಂದ ಹಾಗೂ ಎಲ್‌ಟಿಟಿಇ ನಾಯಕರನ್ನು ಬಚಾವ್ ಮಾಡುವ ಅಗತ್ಯ ಇರುವುದರಿಂದ ತಮಿಳುನಾಡಿನ ರಾಜಕಾರಣಿಗಳು ಕೇಂದ್ರದ ಮೇಲೆ ಒತ್ತಡ ಹೇರಿದ್ದಾರೆ. ತಮಿಳುನಾಡಿನಲ್ಲಿ ಕಾಂಗ್ರೆಸ್ ಹಾಗೂ ಡಿಎಂಕೆ ಮೈತ್ರಿ ಇದೆ. ಇದೇ ಒತ್ತಡದ ಕಾರಣದಿಂದ ಹಾಗೂ ಎಲ್ಲಾದರೂ ಬೇರೆ ಪಕ್ಷಗಳಿಗೆ ಹೆಚ್ಚು ಮತ ಸಿಕ್ಕೀತು ಎಂಬ ಹೆದರಿಕೆಯಿಂದ ಕೇಂದ್ರದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಶ್ರೀಲಂಕಾ ಸರಕಾರಕ್ಕೆ ‘ಇನ್ನಷ್ಟು ಸಮಯ ಯುದ್ಧ ಸ್ಥಗಿತಗೊಳಿಸಿ, ನಾಗರಿಕರಿಗೆ ಸುರಕ್ಷಿತ ಪ್ರದೇಶಕ್ಕೆ ಹೋಗಲು ಅವಕಾಶ ನೀಡಬೇಕು’ ಎಂದು ಮನವಿ ಮಾಡಿದೆ.
ಇಷ್ಟಕ್ಕೂ ಕಾಂಗ್ರೆಸ್‌ಗೆ, ಡಿಎಂಕೆಗೆ ಹೆಚ್ಚು ಮತ ಸಿಗಲಿ ಎಂಬ ಕಾರಣಕ್ಕೆ ಶ್ರೀಲಂಕಾ ಸರಕಾರ ಯಾಕೆ ಎಲ್‌ಟಿಟಿಇ ವಿರುದ್ಧ ಯುದ್ಧ ನಿಲ್ಲಿಸಬೇಕು? ಈ ಸಮಯದಲ್ಲಿ ಕೇಂದ್ರ ಸರಕಾರ ಶ್ರೀಲಂಕಾ ಸರಕಾರವನ್ನು ಒತ್ತಾಯಿಸಿದ್ದು ಆಡಳಿತ ದುರುಪಯೋಗವಲ್ಲವೇ? ಚುನಾವಣೆ ಸಮಯದಲ್ಲಿ ರಸ್ತೆ ಬದಿ ಮೂತ್ರ ಮಾಡಿದರೂ ನೀತಿಸಂಹಿತೆ ಉಲ್ಲಂಘನೆ ಎಂದು ಹೇಳುವವರಿಗೆ ಇದ್ಯಾಕೆ ಕಾಣಲಿಲ್ಲ? ಶ್ರೀಲಂಕಾ ಸರಕಾರವನ್ನು ಒತ್ತಾಯಿಸುವ ತಮಿಳು ರಾಜಕಾರಣಿಗಳು ಯಾಕೆ ಎಲ್‌ಟಿಟಿಇ ಸಂಘಟನೆಯನ್ನೇ ಶಸ್ತ್ರ ತ್ಯಜಿಸುವಂತೆ ಒತ್ತಾಯಿಸಬಾರದು?
೧೯೯೯೨ರಲ್ಲಿ ಎಲ್‌ಟಿಟಿಯಿ ಸಂಘಟನೆಯನ್ನು ಉಗ್ರಗಾಮಿ ಸಂಘಟನೆ ಎಂದು ಭಾರತವೇ ಘೋಷಿಸಿದ್ದು, ಈಗಿನ ನಮ್ಮ ಕೇಂದ್ರ ಸರಕಾರಕ್ಕೆ ಮರೆತುಹೋಗಿದೆಯೇ? ಅದು ನೆನಪಿದ್ದು ಶ್ರೀಲಂಕಾ ಸರಕಾರಕ್ಕೆ ಯುದ್ಧ ನಿಲ್ಲಿಸುವಂತೆ ಮನವಿ ಮಾಡಿದ್ದರೆ, ಪಾಕ್ ಹಾಗೂ ಅಪಘಾನಿಸ್ತಾನದಲ್ಲಿ ನಡೆಯುತ್ತಿರುವ ಉಗ್ರರ ಮೇಲಿನ ಅಮೆರಿಕ ದಾಳಿಯನ್ನು ನೋಡಿ ಭಾರತ ಸುಮ್ಮನಿರುವುದೇಕೆ?
ನಿಮಗೆ ಗೊತ್ತಿರಲಿ ವಿಶ್ವದಲ್ಲಿಯೇ ಸ್ವಂತ ವಿಮಾನ ನಿಲ್ದಾಣ, ಯುದ್ಧ ವಿಮಾನ, ಯುದ್ಧ ನೌಕೆಗಳನ್ನು ಹೊಂದಿದ್ದ ಏಕೈಕ ಸಂಘಟನೆ ಎಲ್‌ಟಿಟಿಇ. ೧೯೭೦ರ ದಶಕದಲ್ಲಿ ಶ್ರೀಲಂಕಾದಲ್ಲಿದ್ದ ತಮಿಳರ ಪ್ರತ್ಯೇಕ ರಾಜ್ಯದ ಹೋರಾಟದ ನೆಪದಲ್ಲಿ ಆರಂಭವಾದ ಎಲ್‌ಟಿಟಿಇ, ಅಧಿಕೃತವಾಗಿ ಸ್ಥಾಪನೆಯಾಗಿದ್ದು ೧೯೭೯ರ ಮೇ ೫ರಂದು. ನಂತರ ದೊಡ್ಡ ಉಗ್ರಗಾಮಿ ಸಂಘಟನೆಯಾಗಿ ಬೆಳೆಯಿತು. ಇದನ್ನು ಏಷ್ಯಾದ ಅತಿದೊಡ್ಡ ಹಾಗೂ ಅತಿಹೆಚ್ಚು ಸಮಯ ನಡೆದ ನಾಗರಿಕ ಯುದ್ಧ ಎಂದೂ ಬಣ್ಣಿಸಬಹುದು. ಆದರೆ ಎಲ್‌ಟಿಟಿಇ ಕೃತ್ಯಗಳನ್ನು ನೋಡಿದ ಭಾರತವೂ ಸೇರಿದಂತೆ ೩೨ ದೇಶಗಳೂ ಎಲ್‌ಟಿಟಿಇಯನ್ನು ಉಗ್ರಗಾಮಿ ಸಂಘಟನೆ ಎಂದು ಘೋಷಿಸಿವೆ.
ಮಕ್ಕಳಿಗೆ ಕೂಡ ಸೈನ್ಯದ ತರಬೇತಿ ಕೊಟ್ಟು ಸೇರಿಸಿಕೊಂಡಿದ್ದು, ಮಹಿಳಾ ಆತ್ಮಹತ್ಯಾ ತಂಡಗಳನ್ನು ರಚಿಸಿದ್ದು, ಬಾಂಬ್-ಬೆಲ್ಟ್ ಕಂಡು ಹಿಡಿದ ಕುಖ್ಯಾತಿ ಕೂಡ ಎಲ್‌ಟಿಟಿಇ ಸಂಘಟನೆಯದ್ದು. ಸೈನೈಡ್ ಎಂಬ ವಿನಾಶಕಾರಿ ವಿಶವನ್ನು ಕುತ್ತಿಗೆಯಲ್ಲಿ ಕಟ್ಟಿಕೊಂಡು, ಸಿಕ್ಕಿಬೀಳುವ ಸಮಯದಲ್ಲಿ ಅದನ್ನು ತಿಂದು ಸಾಯುವ ರೀತಿಯನ್ನು ಕೂಡ ಮೊದಲು ಜಾರಿ ಮಾಡಿದ್ದು ಎಲ್‌ಟಿಟಿಇ. ನಮ್ಮದೇ ಬೆಂಗಳೂರಿನಲ್ಲಿ ಎಲ್‌ಟಿಟಿಇ ಸಂಘಟನೆಯ ಶಿವರಸನ್ ಹಾಗೂ ಸಂಗಡಿಗರು ಬಂದು ಅಡಗಿಕೊಂಡು, ಸೈನೈಡ್ ತಿಂದು ಸತ್ತಿದ್ದು ಕಂಡಿದ್ದೇವೆ. ಇಂತಹ ಬಲಿಷ್ಠ ಹಾಗೂ ವಿನಾಶಕಾರಿ ಸಂಘಟನೆಯನ್ನು ಈಗ ಮೂಲೆಗೆ ತಳ್ಳಿ, ಮುಗಿಸುವ ಹಂತದಲ್ಲಿ ಶ್ರೀಲಂಕಾ ಸರಕಾರ ಸುಮ್ಮನಿದ್ದರೆ ಅದು ಮೂರ್ಖತನವಾದೀತು.
ಅಂತಹ ಮೂರ್ಖ ನಿರ್ಧಾರ ಕೈಗೊಳ್ಳುವಂತೆ ನಮ್ಮ ರಾಜಕಾರಣಿಗಳು ಮಾತ್ರ ಒತ್ತಾಯಿಸಲು ಸಾದ್ಯ.
ಈ ಹಿಂದೆ ಬೇಕಾದಷ್ಟು ಶಾಂತಿ ಮಾತುಕತೆಗಳಾಗಿವೆ. ೨೦೦೨ರಲ್ಲಿ ಶಾಂತಿ ಮಾತುಕತೆ ನಡೆದಿದೆ. ೨೦೦೬ರಲ್ಲಿ ಶಾಂತಿ ಮಾತುಕತೆ ಮುರಿದು ಬಿದ್ದ ಮೇಲೆ ಶ್ರೀಲಂಕಾ ಸೈನಿಕರು ಎಲ್‌ಟಿಟಿಇ ಮೇಲೆ ಮುರಕೊಂಡು ಬಿದ್ದಿದ್ದರು. ೧೯೮೭ರಲ್ಲಿ ಭಾರತೀಯ ಶಾಂತಿ ಸ್ಥಾಪನಾ ಪಡೆ ಕಳುಹಿಸುವ ಹಾಗೂ ತಮಿಳು ಆಕ್ರಮಿತ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ಬಗ್ಗೆ ಭಾರತ ಸರಕಾರ ಮುಂದಾಗಿ ಶ್ರೀಲಂಕಾ ಸರಕಾರದೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಇದನ್ನು ಬಹುತೇಕ ತಮಿಳು ಸಂಘಟನೆಗಳು ಒಪ್ಪಿಕೊಂಡಿದ್ದವು. ಆದರೆ ಆಗಲೇ ಸಾಕಷ್ಟು ಸೊಕ್ಕಿದ್ದ ಎಲ್‌ಟಿಟಿಇ ಅದನ್ನೂ ತಿರಸ್ಕರಿಸಿತು.ಇದೇ ಕಾರಣಕ್ಕೆ ಆತ್ಮಹತ್ಯಾ ಬಾಂಬ್ ದಾಳಿ ಮೂಲಕ ೧೯೯೧ರಲ್ಲಿ ರಾಜೀವ ಗಾಂಧಿ ಹತ್ಯೆ ಮಾಡಿತು. ನಂತರ ೧೯೯೩ಲ್ಲಿ ಶ್ರೀಲಂಕಾ ಅಧ್ಯಕ್ಷ ರಣಸಿಂಗೆ ಪ್ರೇಮದಾಸ ಅವರ ಹತ್ಯೆ ಮಾಡಲಾಯಿತು. ೧೯೯೪ರಲ್ಲಿ ಚುನಾವಣೆಯಲ್ಲಿ ಚಂದ್ರಿಕಾ ಕುಮಾರತುಂಗಾ ಅಧ್ಯಕ್ಷೆಯಾಗಿ ಆಯ್ಕೆಯಾದ ನಂತರ ಶಾಂತಿ ಮಾತುಕತೆಗಳು ಮತ್ತೆ ಆರಂಭವಾದವು. ಆದರೆ ಎಲ್‌ಟಿಟಿಇ ೧೯೯೫ರಲ್ಲಿ ಶ್ರೀಲಂಕಾ ಸೈನ್ಯದ ೨ ಹಡಗನ್ನು ಮುಳುಗಿಸಿ, ಶಾಂತಿ ಮಾತುಕತೆಗೆ ಅಂತ್ಯಹಾಡಿತು. ಆಗ ಭಯಂಕರ ದಾಳಿ ನಡೆಸಿದ ಶ್ರೀಲಂಕಾ ಸೈನ್ಯ, ಎಲ್‌ಟಿಟಿಇ ವಶದಲ್ಲಿದ್ದ ಹಲವಾರು ಪ್ರದೇಶಗಳನ್ನು ವಶಪಡಿಸಿಕೊಂಡಿತ್ತು. ಆಗ ಮತ್ತದೇ ಶಾಂತಿ ನೆಪದಲ್ಲಿ ಯುದ್ಧ ನಿಂತಿತು. ಆದರೆ ೧೯೯೮ರ ನಂತರ ಮತ್ತೆ ಎಲ್‌ಟಿಟಿಇ ಪ್ರಬಲವಾಯಿತು.
೨೦೦೧ರಲ್ಲಿ ಪ್ರತ್ಯೇಕ ರಾಜ್ಯದ ಬೇಡಿಕೆ ಕೈಬಿಟ್ಟ ಎಲ್‌ಟಿಟಿಇ, ಪ್ರಾದೇಶಿಕ ಸ್ವಾಮ್ಯತೆ ಬೇಕು ಎಂಬ ಬೇಡಿಕೆ ಮುಂದಿಟ್ಟಿತು. ೨೦೦೨ರಲ್ಲಿ ಎಲ್‌ಟಿಟಿ ಹಾಗೂ ಶ್ರೀಲಂಕಾ ಸರಕಾರ ಒಪ್ಪಂದಕ್ಕೆ ಸಹಿ ಹಾಕಿದವು. ೬ ಸುತ್ತು ಶಾಂತಿ ಮಾತುಕತೆಗಳೂ ನಡೆದವು. ಆದರೆ ಮತ್ತೆ ಕ್ಯಾತೆ ತೆಗೆದ ಎಲ್‌ಟಿಟಿಇ ಮಾತುಕತೆ ಮುರಿಯುವಂತೆ ಮಾಡಿತು. ಈಗ ಮಹಿಂದಾ ರಾಜಪಕ್ಸಾ ಅವರು ಶ್ರೀಲಂಕಾ ಅಧ್ಯಕ್ಷರಾದ ನಂತರ ಎಲ್‌ಟಿಟಿಇ ವಿರುದ್ಧ ಉಗ್ರ ಸಮರ ಸಾರಿದ್ದಾರೆ. ಯಾವ ಒತ್ತಡಕ್ಕೂ ಹಿಂಜರಿಯದೆ ಎಲ್‌ಟಿಟಿಇ ನಾಶ ಮಾಡಿಯೇ ಸಿದ್ಧ ಎಂದು ಹೊರಟಿದ್ದಾರೆ. ಯುದ್ಧ ವಲಯದಲ್ಲಿರುವ ನಾಗರಿಕರಿಗೆ ಸುರಕ್ಷಿತ ಪ್ರದೇಶಕ್ಕೆ ೨೪ ಗಂಟೆ ಅವಧಿಯನ್ನೂ ನೀಡಿದ್ದರು.ಅದು ನಿಜವಾಗಿಯೂ ಸರಿಯಾದ ನಿರ್ಧಾರ. ಇನ್ನೂ ಎಷ್ಟು ವರ್ಷ ಶ್ರೀಲಂಕಾ ಎಂಬ ಸಣ್ಣ ರಾಜ್ಯ ಎಲ್‌ಟಿಟಿಇ ಎಂಬ ದೊಡ್ಡ ಸಮಸ್ಯೆಯೊಂದಿಗೆ ಸೆಣಸಬೇಕು? ಒಂದು ಬಾರಿ ಸಮಸ್ಯೆ ಬಗೆಹರಿಯಬೇಕು. ಅದಕ್ಕೆ ಎಲ್‌ಟಿಟಿಇ ಅಂತ್ಯವೊಂದೇ ದಾರಿ.
ಹೀಗೆ ಕಠಿಣ ನಿರ್ಧಾರದ ಫಲವಾಗಿಯೇ ಇಂದು ತಮಿಳು ಹುಲಿ ಗಾಯಗೊಂಡು ಏದುಸಿರು ಬಿಡುತ್ತಿದೆ. ಬಲೆಗೆ ಬೀಳುವ ಅನಿವಾರ್ಯದಲ್ಲಿದೆ.
ಇಂತಹ ಸಂದರ್ಭದಲ್ಲಿ ನಮ್ಮ ರಾಜಕಾರಣಿಗಳು ಕೇವಲ ಮತಕ್ಕಾಗಿ ಯುದ್ಧ ನಿಲ್ಲುಸುವಂತೆ ಹೇಳುತ್ತಿರುವುದು ಯಾವ ನ್ಯಾಯ? ಎಲ್‌ಟಿಟಿಇ ಈ ವರೆಗೆ ಎಷ್ಟು ಬಾಂಬ್ ದಾಳಿ ಮಾಡಿದೆ. ಅದರ್‍ಲಿ ಸತ್ತವರ ಜೀವಕ್ಕೆ, ಅವರ ಸಂಬಂಧಿಗಳ ದುಃಖಕ್ಕೆ ಬೆಲೆ ಇಲ್ಲವೇ? ನಮ್ಮದೇ ಪ್ರಧಾನಿ ಒಬ್ಬರನ್ನು ಎಲ್‌ಟಿಟಿಇ ಹತ್ಯೆ ಮಾಡಿದ್ದನ್ನು ಇದೇ ಕಾಂಗ್ರೆಸ್ಸಿಗರು ಮತಕ್ಕಾಗಿ ಮರೆತುಬಿಟ್ಟರೆ? ಪತಿ ಹತ್ಯೆ ಮಾಡಿದ ಸಂಘಟನೆಯ ವಿರುದ್ಧ ಯುದ್ಧ ನಿಲ್ಲಿಸುವಂತೆ ಕೇಂದ್ರ ಸರಕಾರ ಒತ್ತಾಯಿಸುವಾಗ ಸೋನಿಯಾ ಅವರಿಗೆ ಒಂದು ಬಾರಿಯೂ ಚಿದ್ರಚಿದ್ರವಾದ ರಾಜೀವ್ ಗಾಂಧಿ ದೇಹ ನೆನಪಾಗಲಿಲ್ಲವೇ? ಇಂದಿಗೂ ರಾಜೀವ್ ಫೋಟೋ ಹಾಕಿ ಮತ ಕೇಳುವ ಕಾಂಗ್ರೆಸ್ ನಾಯಕರಿಗೆ, ಅವರ ಹತ್ಯೆ ಮಾಡಿದ ಸಂಘಟನೆಯ ವಿರುದ್ಧ ಯುದ್ಧ ನಿಲ್ಲಿಸುವಂತೆ ಹೇಳುವ ಮನಸ್ಸಾದರೂ ಹೇಗೆ ಬಂತು?
ನಮ್ಮ ದೇಶದಲ್ಲಿ ಸಮಸ್ಯೆಗಳು ದೊಡ್ಡದಾಗುತ್ತಿರುವುದೇ ಹೀಗೆ. ನಕ್ಸಲೀಯರ ಹಾವಳಿ ಇಷ್ಟೆಲ್ಲ ಹೆಚ್ಚಲು ನಮ್ಮ ಸರಕಾರಗಳ ಅರೆಬರೆ ನೀತಿಗಳೇ ಕಾರಣ. ಎಲ್‌ಟಿಟಿಇ ಸಂಘಟನೆ ಮೇಲೆ ಶ್ರೀಲಂಕಾ ಈಗ ಮುರಕೊಂಡು ಬಿದ್ದಂತೆ ನಮ್ಮ ಸರಕಾರಗಳೂ ನಕ್ಸಲೀಯರ ವಿರುದ್ಧ ಕೈತೊಳೆದು ಬೆನ್ನುಹತ್ತಿದ್ದರೆ ಇಷ್ಟೊತ್ತಿಗೆ ನಕ್ಸಲೀಯರ ಹುಟ್ಟಡಗಿಹೋಗುತ್ತಿತ್ತು. ಆದರೆ ನಮ್ಮಲ್ಲಿ ಹಾಗೆ ಮಾಡುವುದರಿಂದ ಆಗುವ ಒಳಿತಿಗಿಂತ, ತಮಗೆ, ತಮ್ಮ ಪಕ್ಷಕ್ಕೆ ಆಗುವ ಮತದ ಲಾಭ-ನಷ್ಟ ಯೋಚಿಸಲಾಗುತ್ತದೆ.
ಇಂತಹ ಸ್ವಂತ ಲಾಭದ ಯೋಚನೆಗಳನ್ನು ನಮ್ಮ ದೇಶಕ್ಕಷ್ಟೇ ಸೀಮಿತವಾಗಿರಿಸದ ರಾಜಕಾರಣಿಗಳು ಈಗ ಅದನ್ನು ನಮ್ಮ ವಿದೇಶಾಂಗ ನೀತಿಯಲ್ಲೂ ತೂರಿಸಿದ್ದಾರೆ. ಅಮೆರಿಕಾ ಅಪಘಾನಿಸ್ತಾನದಲ್ಲಿ ಉಗ್ರರ ವಿರುದ್ಧ ಯುದ್ಧ ಆರಂಭಿಸಿದಾಗ ಸುಮ್ಮನಿದ್ದ ಭಾರತ ಈಗಲೂ ಇದನ್ನು ಶ್ರೀಲಂಕಾದ ಆಂತರಿಕ ಸಮಸ್ಯೆ ಎಂದು ಸುಮ್ಮನಿರುವುದು ಬುದ್ದಿವಂತ ನಿರ್ಧಾರ. ಇಷ್ಟಕ್ಕೂ ಎಲ್‌ಟಿಟಿಇ ಸಂಘಟನೆಯನ್ನು ಉಳಿಸಿದರೆ ಅದೇನು ಬಂದು ನಮ್ಮನ್ನು ಉದ್ಧಾರ ಮಾಡುವುದಿಲ್ಲ.
ಯಾಕೆಂದರೆ ಹಾವಿಗೆ ಹಾಲರೆದೇನು ಫಲ? ನೀವು ಹಾಲು ಕುಡಿಸಿದರೂ ಹೊರಬುರುವುದು ಹಾಲಾಹಲವೇ. ತಮಿಳು ಹುಲಿ ಈಗ ಗಾಯಗೊಂಡಿರಬಹುದು. ಗಾಯಗೊಂಡಾಗ ಹೊಡೆಯುವುದು ಬೇಡ ಎಂದು ಸುಮ್ಮನಿದ್ದರೆ, ಗಾಯ ಗುಣವಾಗಿ ಅದು ನಮ್ಮ ಮೇಲೆ ದಾಳಿ ನಡೆಸುವ ಸಾದ್ಯತೆಯಿದೆ. ಹಾಗಾಗಿ ಗಾಯಗೊಂಡು ಬಿದ್ದಿರುವ ಹುಲಿಯನ್ನು ಹೊಡೆಯುವುದೇ ಜಾಣತನ. ಅದನ್ನು ಶ್ರೀಲಂಕಾ ಸರಕಾರ ಮಾಡಲಿಬಿಡಿ.

Friday, April 24, 2009

ಕಪ್ಪು ಹಣ ತರುವುದು ಹೇಳಿದಷ್ಟು ಸುಲಭವೇ?



ಯಾರೂ ನಿರೀಕ್ಷಿಸದ ರೀತಿಯಲ್ಲಿ ೨೦೦೯ರ ಲೋಕಸಭಾ ಚುನಾವಣಾ ವಿಷಯವಾಗಿ ಹೊರಹೊಮ್ಮಿದ್ದು ಸ್ವಿಸ್ ಬ್ಯಾಂಕ್‌ನಲ್ಲಿರುವ ಕಪ್ಪು ಹಣ. ಚುನಾವಣೆ ಘೊಷಣೆಯಾಗುವವರೆಗೂ ಇದೊಂದು ಚುನಾವಣಾ ವಿಷಯ ಅಂತ ಯಾರಿಗೂ ಅನಿಸಿರಲೇ ಇಲ್ಲ. ಹಾಗಾಗಬಹುದು ಎಂಬ ಕಲ್ಪನೆಯೂ ಇರಲಿಲ್ಲ. ಆದರೆ ಬಿಜೆಪಿ ಚುನಾವಣಾ ವಿಷಯವೆಂದು ಪರಿಗಣಿಸಿದ್ದ ಹಣದುಬ್ಬರ ಕಡಿಮೆಯಾಗಿ, ದರಗಳು ಸ್ವಲ್ಪ ನಿಯಂತ್ರಣಕ್ಕೆ ಬಂದಿದ್ದರಿಂದ ಅದನ್ನು ಚುನಾವಣಾ ವಿಷಯವಾಗಿ ಬಳಸಿಕೊಳ್ಳೂವುದು ಸಾದ್ಯವಿರಲಿಲ್ಲ. ಭಯೋತ್ಪಾದನೆ ಬಗ್ಗೆ ಮಾತಾಡ ಹೊರಟರೆ ಕಾಂಗ್ರೆಸ್ಸಿಗರು ‘ಕಂದಹಾರ್ ಪ್ರಕರಣ’ವನ್ನು ಪ್ರತಿ ಅಸ್ತ್ರವಾಗಿ ಬಳಸಿದರು.
ಹೀಗಾಗಿ ಬಿಜೆಪಿಗೆ ಹೊಸತೊಂದು ಚುನಾವಣಾ ವಿಷಯ ಬೇಕಿತ್ತು. ಬ್ರಹ್ಮಾಸ್ತ್ರದಂತೆ ಸಿಕ್ಕಿದ್ದು ಸ್ವಿಸ್ ಬ್ಯಾಂಕ್‌ನಲ್ಲಿರುವ ಕಪ್ಪು ಹಣ. ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಕೂಡ ಇದನ್ನು ಪ್ರಸ್ತಾಪಿಸಿತು. ಇದೊಂದು ಚುಣಾವಣಾ ವಿಷಯ ಆಗಬಹುದು ಎಂದು ಕಾಂಗ್ರೆಸ್ ನಿರೀಕ್ಷಿಸಿರಲಿಲ್ಲ. ಹಾಗಾಗಿ ಆ ವಿಷಯದ ಬಗ್ಗೆ ಅದು ಮೌನವಾಗಿತ್ತು. ಯಾವಾಗ ಬಿಜೆಪಿ ಅದನ್ನೊಂದು ಚುನಾವಣಾ ಅಸ್ತ್ರವಾಗಿ ಬಳಸಲಾರಂಭಿಸಿತೊ ಆಗ ಅದು ವಿದೇಶದಲ್ಲಿರುವ ಕಪ್ಪು ಹಣದ ಬಗ್ಗೆ ಬಾಯ್ಬಿಡತೊಡಗಿತು.
ಎರಡೂ ಪಕ್ಷಗಳ ಆರೋಪ ಪ್ರತ್ಯಾರೋಪಗಳ ನಡುವೆ ಜನ ಗೊಂದಲಕ್ಕೆ ಸಿಲುಕಿದ್ದಾರೆ. ಆ ಗೊಂದಲಗಳಿಗೆ ಉತ್ತರ ಹುಡುಕುವ ಸಣ್ಣ ಯತ್ನ ಇದು.
ಬಹುತೇಕವಾಗಿ ಸ್ವಿಸ್ ಬ್ಯಾಂಕ್ ಹೆಸರು ಮಾತ್ರ ಕೇಳಿಬರುತ್ತಿದ್ದರೂ, ಸ್ವಿಟ್ಜರ್‌ಲ್ಯಾಂಡ್, ಮಾರಿಶಸ್, ಸಿಪ್ರಸ್ ದೇಶದ ಬ್ಯಾಂಕುಗಳು ಇದ್ದುದರಲ್ಲಿ ಪ್ರಸಿದ್ಧ. ಇವುಗಳಲ್ಲಿ ಭಾರತದ ಪ್ರಜೆಗಳು ಎಷ್ಟು ಹಣ ಇಟ್ಟಿದ್ದಾರೆ ಎಂಬುದು ಬ್ಯಾಂಕ್ ಅಧಿಕಾರಿಗಳಿಗೆ ಬಿಟ್ಟರೆ ಬೇರೆ ಯಾರಿಗೂ ಗೊತ್ತಿಲ್ಲ. ಯಾಕೆಂದರೆ ಬ್ಯಾಂಕುಗಳು ಈ ಮಾಹಿತಿಯನ್ನು ಈವರೆಗೆ ಬಹಿರಂಗಗೊಳಿಸಿಲ್ಲ. ಗೌಪ್ಯವೇ ಆ ಬ್ಯಾಂಕುಗಳ ಬಡವಾಳ. ಬಿಜೆಪಿ ಪ್ರಕಾರ ೨೫,೦೦,೦೦ ಕೋಟಿ ರೂ. ಕಪ್ಪು ಹಣ ವಿದೇಶಿ ಬ್ಯಾಂಕುಗಳಲ್ಲಿದೆ. ಇದೊಂದು ಅಂದಾಜು ಅಷ್ಟೆ. ಅದು ಹೆಚ್ಚೂ ಆಗಿರಬಹುದು. ಕಡಿಮೆಯೂ ಆಗಿರಬಹುದು.
ಬಿಜೆಪಿ ಹೇಳುತ್ತಿರುವ ವಿದೇಶಿ ಬ್ಯಾಂಕುಗಳಲ್ಲಿರುವ ಹಣದ ಮೊತ್ತದ ಬಗ್ಗೆಯೇ ಕಾಂಗ್ರೆಸ್ ತಕರಾರು ತೆಗೆದಿದೆ. ಅದಕ್ಕೆ ಯಾವುದೇ ಆಧಾರವಿಲ್ಲ ಎಂದಿದೆ. ಹೌದು. ಬಿಜೆಪಿ ಹೇಳುತ್ತಿರುವ ಮೊತ್ತಕ್ಕೆ ಸೂಕ್ತ ಆಧಾರವಿಲ್ಲ. ಆದರೆ ಎಷ್ಟಿದ್ದರೇನು? ಬೇಕಾದರೆ ಒಂದು ಲಕ್ಷ ರೂ. ಇರಲಿ. ಅದನ್ನು ದೇಶಕ್ಕೆ ತರುವುದರಲ್ಲಿ ಖಂಡಿತ ತಪ್ಪಿಲ್ಲವಲ್ಲ. ಹೀಗಾಗಿ ಎಷ್ಟು ಹಣವಿದೆ ಎಂದು ಕಾಂಗ್ರೆಸ್ ಪಕ್ಷ ಪ್ರಶ್ನಿಸುತ್ತಿರುವುದರಲ್ಲಿ ಅಥವಾ ಎಷ್ಟು ಹಣ ಇರಬಹುದು ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳುವುದರಲ್ಲಿ ಅರ್ಥವಿಲ್ಲ. ಎಷ್ಟಾದರೂ ಇರಲಿ. ಅದನ್ನು ತರೋಣ.
ಅಮೆರಿಕ ಇತ್ತೀಚೆಗಷ್ಟೇ ಸ್ವಿಸ್ ಬ್ಯಾಂಕ್‌ನಲ್ಲಿರುವ ಅಮೆರಿಕ ಪ್ರಜೆಗಳ ಖಾತೆಗಳ ವಿವರ ಪಡೆದುಕೊಳ್ಳಲು ಯಶಸ್ವಿಯಾಗಿದೆ. ಸ್ವಿಸ್‌ಬ್ಯಾಂಕ್‌ನಲ್ಲಿದ್ದ ತನ್ನ ದೇಶದ ಪ್ರಜೆಗಳ ಹಣ ಪಡೆದುಕೊಳ್ಳಲು ಐರ್‍ಲೆಂಡ್ ಯಶಸ್ವಿಯಾಗಿದೆ. ಆದರೆ ಇದೆಲ್ಲ ಸಾದ್ಯವಾಗಿದ್ದು, ಆಯಾ ದೇಶಗಳ ಆಂತರಿಕ ತನಿಖಾ ತಂಡಗಳು ಸೂಕ್ತ ದಾಖಲೆಗಳನ್ನು ಒದಗಿಸಿದ ಮೇಲೆ ಎಂಬುದು ಗಮನಾರ್ಹ. ಇದನ್ನು ಭಾರತ ಸರಿಯಾಗಿ ಮಾಡಲು ಸಾದ್ಯವೇ ಎಂಬುದು ಈಗಿರುವ ಪ್ರಶ್ನೆ.
ಬಿಜೆಪಿ ಬಾಯಲ್ಲಿ ಹೇಳಿದಷ್ಟು ಸುಲಭವಲ್ಲ ವಿದೇಶಿ ಬ್ಯಾಂಕುಗಳಲ್ಲಿರುವ ಕಪ್ಪು ಹಣ ತರುವುದು. ಯಾಕೆಂದರೆ ನಮ್ಮಲ್ಲಿ ಎಂತೆಂತಹ ಪ್ರಕರಣಗಳು ಹೇಗೆ ಹಳ್ಳ ಹಿಡಿದಿವೆ ಎಂಬುದನ್ನು ನಾವು ಕಣ್ಣಾರೆ ಕಂಡಿದ್ದೇವೆ. ಸಿಬಿಐನಂತಹ ಉನ್ನತ ತನಿಖಾ ಸಂಸ್ಥೆ ಕೂಡ ದೇಶದ ನಾಗರಿಕರ ನಂಬಿಕೆ ಕಳೆದುಕೊಂಡಿದೆ. ಒಂದು ಪಕ್ಷದ ಸರಕಾರ ಇದ್ದಾಗ ಒಂದು ನಮೂನೆ ತನಿಖೆಯಾದರೆ, ಇನ್ನೊಂದು ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ತನಿಖೆ ಇನ್ನೊಂದು ರೀತಿಯಲ್ಲಿ ಮುಕ್ತಾಯವಾಗುವುದನ್ನು ಕಂಡಿದ್ದೇವೆ. ೧೯೮೪ರ ಗಲಭೆ ಪ್ರಕರಣದಲ್ಲಿ ಜಗದೀಶ್ ಟೈಟ್ಲರ್ ಹಾಗೂ ಸಜ್ಜನ್ ಕುಮಾರ್‌ರನ್ನು ಆರೋಪ ಮುಕ್ತ ಎಂದು ವರದಿ ನೀಡಿರುವುದು ಇತ್ತೀಚಿನ ಉದಾಹರಣೆ. ಅದನ್ನು ಸಿಖರು ಉಗ್ರವಾಗಿ ಖಂಡಿಸಿದ್ದು ಜನಕ್ಕೆ ಸಿಬಿಐ ಮೇಲೆ ಕೂಡ ನಂಬಿಕೆ ಹೊರಟುಹೋಗಿದೆ ಎಂಬುದಕ್ಕೆ ಸೂಚನೆ.
ಭಾರತದ ವಿದೇಶಾಂಗ ನೀತಿ ಕೂಡ ಕಪ್ಪು ಹಣ ತರಲು ಅಡ್ಡಿಯಾಗಬಹುದು. ಹಲವಾರು ಅಂತರಾಷ್ಟ್ರೀಯ ಕಾನೂನುಗಳು ಅಡೆತಡೆ ಒಡ್ಡಬಹುದು. ಇದನ್ನೆಲ್ಲ ಸರಿಪಡಿಸಿ, ಕಪ್ಪು ಹಣ ತರುವುದು ಎಂದರೆ ಕಪ್ಪು ಆನೆಯನ್ನು ತೊಳೆದು ಬಿಳಿ ಮಾಡಿದಂತೆಯೆ. ಅದೊಂದು ಸಾಹಸವೇ ಸರಿ. ಆದರೆ ದೇಶದ ಒಳಿತಿಗಾಗಿ ಅಂತಹ ಸಾಹಸ ಮಾಡುವುದೇ ಉತ್ತಮ.
ಈ ವಿಷಯವನ್ನು ಬಿಜೆಪಿ ಚುನಾವಣಾ ಅಸ್ತ್ರವನ್ನಾಗಿ ಬಳತೊಡಗಿದ ನಂತರ ಕಾಂಗ್ರೆಸ್ ಕಂಗಾಲಾಗಿದ್ದು ಸತ್ಯ. ಅದರ ವಕ್ತಾರರು ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡಿ, ಇನ್ನಷ್ಟು ಗೊಂಲದ ಸೃಷ್ಟಿಸಿದರು. ಆದರೆ ಕಾಂಗ್ರೆಸ್ ಆರೋಪದಂತೆ ಚುನಾವಣೆ ಹೊಸ್ತಿಲಲ್ಲಿ ಬಿಜೆಪಿ ಈ ವಿಷಯ ಆರಂಭಿಸಿಲ್ಲ. ಚುನಾವಣೆ ಸಮಯದಲ್ಲಿ ಇದರ ಬಗ್ಗೆ ಹೆಚ್ಚಾಗಿ ಮಾತಾಡಿರಬಹುದು. ಆದರೆ ೨೦೦೮ರ ಏಪ್ರಿಲ್ ತಿಂಗಳಲ್ಲಿಯೇ ಪ್ರಧಾನಿ ಮನಮೋಹನ ಸಿಂಗ್ ಅವರೊಂದಿಗೆ ಚರ್ಚಿಸಿದ್ದರು. ಜರ್ಮನಿ ಸರಕಾರ ವಿದೇಶಿ ಬ್ಯಾಂಕೊಂದರಲ್ಲಿದ್ದ ಜರ್ಮನ್ ಪ್ರಜೆಗಳ ವಿವರ ಪಡೆದುಕೊಂಡ ಸುದ್ದಿ ಗಮನಿಸಿದ ಅಡ್ವಾಣಿ, ಪ್ರಧಾನಿಗೆ ಪತ್ರ ಬರೆದು ಗಮನ ಸೆಳೆದಿದ್ದರು. ಅದಕ್ಕೆ ಆಗ ಹಣಕಾಸು ಸಚಿವರಾಗಿದ್ದ ಪಿ. ಚಿದಂಬರಂ ಉತ್ತರ ಬರೆದು, ‘ಈ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು.’
ಇದಾದ ಸ್ವಲ್ಪ ಸಮಯದಲ್ಲೇ ಹಣಕಾಸು ಇಲಾಖೆ ಹಿರಿಯ ಅಧಿಕಾರಿಯೊಬ್ಬರು ಜರ್ಮನಿಯಲ್ಲಿರುವ ಭಾರತದ ರಾಯಬಾರಿ ಅವರಿಗೆ ‘ಕಪ್ಪು ಹಣದ ವಿವರ ಬಹಿರಂಗಕ್ಕೆ ಅಲ್ಲಿನ ಸರಕಾರದ ಮೇಲೆ ಜಾಸ್ತಿ ಒತ್ತಡ ಹೇರುವ ಅಗತ್ಯವಿಲ್ಲ’ ಎಂಬರ್ಥದ ಪತ್ರ ಬರೆದಿರುವ ವಿಷಯ ಕೂಡ ಬಹಿರಂಗಗೊಂಡಿತ್ತು. ಲೋಕಸಭೆಯಲ್ಲಿ ಕೂಡ ಚರ್ಚೆಯಾಗಿದೆ. ಪಿ. ಚಿದಂಬರಂ ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ‘ಕೇಂದ್ರ ಸರಕಾರ ಸ್ವಿಸ್ ಬ್ಯಾಂಕ್‌ಗೆ ಭಾರತದ ಪ್ರಜೆಗಳ ಖಾತೆ ವಿವರ ನೀಡುವಂತೆ ಪತ್ರ ಬರೆದಿದೆ. ೬ ತಿಂಗಳಾದರೂ ಬೇಕು ಉತ್ತರ ಬರಲು’ ಎಂದು ಹೇಳಿದ್ದರು.
ಆದರೆ ಏಪ್ರಿಲ್ ೧೮ರಂದು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ಸ್ವಿಸ್ ರಾಯಭಾರಿ ಅವರ ಹೇಳೀಕೆಯನ್ನು ಆಧರಿಸಿ ಲೇಖನವೊಂದನ್ನು ಪ್ರಕಟಿಸಿದೆ. ಸ್ವಿಸ್ ರಾಯಭಾರಿ ಅವರ ಪ್ರಕಾರ ‘ಅವರು ಈವರೆಗೆ ಸ್ವಿಸ್ ಸರಕಾರ ಅಂತಹ ಯಾವುದೇ ಮನವಿ ಅಥವಾ ಪತ್ರವನ್ನು ಸ್ವೀಕರಿಸಿಲ್ಲ’ ಎಂದಿದ್ದಾರೆ. ಇಷ್ಟೆಲ್ಲ ಆದಮೇಲೆ ಅದನ್ನೊಂದು ಚುನಾವಣಾ ವಿಷಯವನ್ನಾಗಿ ಮಾಡಿ, ಜನರ ಪ್ರತಿಕ್ರಿಯೆ ನಿರೀಕ್ಷಿಸಿದರೆ ತಪ್ಪೇನು?
ಇಷ್ಟೆಲ್ಲ ಚರ್ಚೆ ನಡೆಯುವ ಸಮಯದಲ್ಲಿ ಸಾಮಾನ್ಯ ಜನರ ಮನಸಲ್ಲಿ ಮೂಡುವ ಮತ್ತೊಂದು ಪ್ರಶ್ನೆಯೆಂದರೆ ಇದೆಲ್ಲ ಚರ್ಚೆಯಿಂದ ಸ್ವಿಸ್‌ಬ್ಯಾಂಕ್‌ನಲ್ಲಿ ಹಣ ಇಟ್ಟವರು ಅದನ್ನು ತೆಗೆದು ಬೇರೆಡೆ ಸಾಗಿಸಲಾರರೇ ಎಂಬುದು. ಈ ಸಾದ್ಯತೆಯಿದೆ. ಆದರೆ ಈ ಕಪ್ಪು ಹಣವನ್ನು ಅವರು ತೆರಿಗೆದಾರರ ಸ್ವರ್ಗ ಎಂದು ಕರೆಯಲಾಗುವ ಬೇರೆ ರಾಷ್ಟ್ರಗಳ ಬ್ಯಾಂಕ್‌ಗಳಲ್ಲಿ ಇಡಬೇಕಾಗುತ್ತದೆ. ಅಲ್ಲದೆ ದಿಢೀರನೆ ದೊಡ್ಡ ಮೊತ್ತದ ಹಣವನ್ನು ಬೇಕಾದಲ್ಲಿಗೆ ಸಾಗಿಸುವುದು ಕೂಡ ಅಷ್ಟು ಸುಲಭವಲ್ಲ.
ಒಂದಂತೂ ಸತ್ಯ. ವಿದೇಶಿ ಬ್ಯಾಂಕುಗಳಲ್ಲಿರುವ ನಮ್ಮ ದೇಶದ ಪ್ರಜೆಗಳ ಕಪ್ಪು ಹಣ ತರಲು ರಾಜಕೀಯ ಇಚ್ಛಾ ಶಕ್ತಿ ಅತ್ಯಂತ ಅಗತ್ಯ. ಯಾಕೆಂದರೆ ದೇಶದೊಳಗೆ ಕಠಿಣ ತನಿಖೆ ನಡೆಸಿ ಕಪ್ಪು ಹಣ ಇಟ್ಟಿರುವವರ ಬಗ್ಗೆ ಸೂಕ್ತವಾದ ಸಾಕ್ಷ್ಯ ಸಂಗ್ರಹಿಸಬೇಕು. ಅದರ ಜೊತೆ ಜೊತೆಗೆ ವಿದೇಶಾಂಗ ವ್ಯವಹಾರ ನೀತಿಗಳ ಮೂಲಕ ವಿದೇಶಿ ಬ್ಯಾಂಕು ಹಾಗೂ ಸರಕಾರಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಅವುಗಳ ಜತೆ ಅಗತ್ಯ ಒಪ್ಪಂದಗಳನ್ನು ಮಾಡಿಕೊಳ್ಳಬೇಕು. ಒಟ್ಟು ೭೦ ತೆರಿಗೆದಾರರ ಸ್ವರ್ಗ ಎಂದು ಕರೆಯಲಾಗುವ ದೇಶಗಳೊಂದಿಗೆ ಇಂತಹ ವ್ಯಾವಹಾರಿಕ ಒಪ್ಪಂದ ಮಾಡಿಕೊಂಡು ಅವರ ಬ್ಯಾಂಕುಗಳಲ್ಲಿರುವ ಹಣ ತರಿಸುವ ಹೊತ್ತಿಗೆ ದಶಕಗಳೇ ಬೇಕಾಗಬಹುದು. ಅಷ್ಟು ಸಮಯವೂ ರಾಜಕೀಯ ಇಚ್ಛಾ ಶಕ್ತಿಯನ್ನು ಕಾಪಾಡಿಕೊಂಡು ಕೆಲಸ ಮಾಡುವ ಅಗತ್ಯವಿರುತ್ತದೆ.
ಆದರೆ ಕಪ್ಪು ಹಣ ಈ ಬಾರಿ ಚುನಾವಣಾ ವಿಷಯವಾಗುವುದರಿಂದ ದೇಶಾದ್ಯಂತ ಈ ಬಗ್ಗೆ ಜನಾಭಿಪ್ರಾಯ, ಜಾಗೃತಿ ಮೂಡುತ್ತಿದೆ. ಬಿಜೆಪಿಯೊಂದೇ ಅಲ್ಲ ಸಿಪಿಎಂ, ಎಸ್ಪಿ, ಬಿಎಸ್ಪಿ, ಎಐಎಡಿಎಂಕೆ ಮುಂತಾದ ಪಕ್ಷಗಳು ಕೂಡ ಕಪ್ಪು ಹಣ ತರುವ ಬಗ್ಗೆ ಒಲವು ವ್ಯಕ್ತಪಡಿಸಿವೆ. ಈ ನಡುವೆ ರಾಮಜೇಠ ಮಲಾನಿಯಂತಹ ಪ್ರಸಿದ್ಧ ವಕೀಕಲರು ಕಪ್ಪು ಹಣದ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ದಾವೆ ಖೂಡ ಹೂಡಿದ್ದಾರೆ. ಏನೇ ಹೆಣಗಾಡಿದರೂ ಹಣ ತರಲು ವರ್ಷಗಟ್ಟಲೆ ಹೆಣಗಬೇಕಾಗಬಹುದು. ಅದರ ಬಗ್ಗೆ ಉತ್ತಮ ಆರಂಭವನ್ನಂತೂ ಮಾಡಿದಂತಾಗಿದೆ.
ಆದರೆ ಇದು ಕೇವಲ ಚುನಾವಣಾ ಪ್ರಚಾರಕ್ಕೆ ಸೀಮಿತವಾಗದಿರಲಿ. ದೇಶಕ್ಕೆ ಒಳಿತಾಗಲಿ.

Tuesday, April 07, 2009

ಹಿಂದೂ ಪರವೆಂದರೆ ಮುಸ್ಲಿಮರನ್ನು ವಿರೋಧಿಸುವುದೇ?


'ಮುಸ್ಲಿಮರು ಪುಂಡಾಟಿಕೆ ನಡೆಸಿದರೆ ಬಕ್ರೀದ್, ಈದ್ ಮಿಲಾದ್ ಆಚರಿಸುವುದು ಕಷ್ಟವಾದೀತು. ನನ್ನ ಮೇಲೆ ೬೩ ಕ್ರಿಮಿನಲ್ ಪ್ರಕರಣಗಳಿವೆ. ಚುನಾವಣಾ ಆಯೋಗ ಇನ್ನೊಂದು ಪ್ರಕರಣ ದಾಖಲಿಸಲಿ. ನನಗೆ ಅಲ್ಪಸಂಖ್ಯಾತರ ಒಂದೇ ಒಂದು ಮತವೂ ಬೇಡ’ ಇಂತಹ ಹೇಳಿಕೆಯನ್ನು ಉತ್ತರ ಕನ್ನಡದ ಸಂಸದನೊಬ್ಬನಿಂದ ಯಾರೂ ಖಂಡಿತ ನಿರೀಕ್ಷಿಸಿರಲಿಲ್ಲ.

ದಕ್ಷಿಣ ಕನ್ನಡ ಅಥವಾ ಉಡುಪಿ, ಚಿಕ್ಕಮಗಳೂರು ಜಿಲ್ಲೆಯ ರಾಜಕಾರಣಿಗಳು ಈ ರೀತಿ ಹೇಳಿದರೆ, ಅವರು ಯಾಕೆ ಹಾಗೆ ಹೇಳಿದರು ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು. ಆದರೆ ಉತ್ತರ ಕನ್ನಡದಂತಹ ಜಿಲ್ಲೆಯ ರಾಜಕಾರಣಿಗಳಿಗೆ ಖಂಡಿತ ಇಂತಹ ಹೇಳಿಕೆಗಳ ಅಗತ್ಯವಿಲ್ಲ. ಯಾಕೆಂದರೆ ಉತ್ತರ ಕನ್ನಡದಲ್ಲಿ ಅಂತಹ ಹೇಳಿಕೆಗಳಿಂದ ಓಟು ಪಡೆಯಲು ಸಾದ್ಯವಿಲ್ಲ. ಆದರೆ ಅನಂತಕುಮಾರ ಹೆಗಡೆಯಂತಹ ಸಂಸದರಿಂದ ಇನ್ನೇನು ನಿರೀಕ್ಷಿಸಲು ಸಾದ್ಯ?

ಚುನಾವಣೆಗಳು ಬಂದಾಗ ರಾಜಕೀಯ ನಾಯಕರುಗಳಿಗೆ ಜಾತಿ, ಧರ್ಮ ಎಲ್ಲ ನೆನಪಾಗುತ್ತದೆ. ಹಾಗೆಯೇ ಪರಸ್ಪರ ಟೀಕೆಗಳು ಕೇಳಿಬರುತ್ತವೆ. ಅದು ಸಾಮಾನ್ಯ. ಆದರೆ ೩ ಬಾರಿ ಉತ್ತರ ಕನ್ನಡದಿಂದ ಸಂಸದರಾಗಿ ಆಯ್ಕೆಯಾಗಿರುವ ಅನಂತ ಕುಮಾರ್ ಹೆಗಡೆಗೆ ಚುನಾವಣೆಗೆ ೬ ತಿಂಗಳಿರುವಂತೆ ದಿಢೀರನೆ ಮುಸ್ಲಿಂ ವಿರೋಧಿ ಭಾವ ಜಾಗೃತವಾಗಿಬಿಟ್ಟಿದೆ. ಹೋದಲ್ಲೆಲ್ಲ ಮುಸ್ಲಿಮರನ್ನು ಬಯ್ಯುವುದೇ ಅವರ ಏಕಂಶ ಕಾರ್ಯಕ್ರಮ. ಅಲ್ಪಸಂಖ್ಯಾತರ ಒಂದೇ ಒಂದು ಮತ ಬೇಡ. ನಾನು ಬಹುಸಂಖ್ಯಾತರ ಮತದಿಂದಲೇ ಗೆದ್ದು ಬರುತ್ತೇನೆ ಎಂಬ ಅಹಂಕಾರದ ಮಾತುಗಳನ್ನಾಡಿದ್ದಾರೆ. ಇರಲಿ ಅನಂತ ಕುಮಾರ ಹೆಗಡೆ ಅವರು ಬಹುಸಂಖ್ಯಾತರ ಮತದಿಂದಲೇ ಗೆದ್ದುಬರಲಿ. ಅವರು ಯಾರ ಮತದಿಂದಲೇ ಗೆದ್ದು ಬಂದರೂ ಅವರು ಇಡೀ ಜಿಲ್ಲೆಯ ಸಂಸದ ಎಂಬುದನ್ನು ಅವರು ಮರೆಯಬಾರದು. ಗೆದ್ದುಬಂದ ಮೇಲೆ ಮತ ಹಾಕಿದವನಿಗೂ, ಮತ ಹಾಕದವನಿಗೂ ಅವರೇ ಸಂಸದರು ಎಂಬ ಸರಳ ಸತ್ಯವನ್ನು ಅವರು ಮರೆತಂತಿದೆ.

ಉತ್ತರ ಕನ್ನಡ ಶಾಂತಿಯುತ ಜಿಲ್ಲೆ. ಜಿಲ್ಲೆಯಲ್ಲಿ ಸಾಕಷ್ಟು ಹೋರಾಟಗಳು ನಡೆದಿವೆಯಾದರೂ, ಯಾವುದೂ ತೀವ್ರ ಹಿಂಸಾರೂಪ ತಾಳಿದ್ದಿಲ್ಲ. ಭಟ್ಕಳದಲ್ಲಿ ಘೋರ ಗಲಭೆ ಆಗಿಲ್ಲವೇ? ಅಂತ ನೀವು ಕೇಳಬಹುದು. ಹೌದು ಭಟ್ಕಳದಲ್ಲಿ ಗಲಭೆಯಾಗಿದೆ. ಆದರೆ ಅದು ಭಟ್ಕಳ ದಾಟಿ ಬಂದಿಲ್ಲ. ಭಟ್ಕಳ ಹೊತ್ತಿ ಉರಿಯುತ್ತಿದ್ದಾಗಲೂ ಪಕ್ಕದ ಹೊನ್ನಾವರ, ಕುಮಟಾಗಳಲ್ಲಿ ಜನಜೀವನ ಸಾಮಾನ್ಯವಾಗಿತ್ತು. ಇಲ್ಲೆಲ್ಲ ಯಾವ ಮುಸ್ಲಿಮನಾಗಲಿ, ಹಿಂದುವಾಗಲಿ ಭಯ ಭೀತನಾಗಲಿಲ್ಲ. ಭಟ್ಕಳದಲ್ಲಿ ಗಲಭೆಯಾಯಿತು ಎಂದು ತಾವೂ ಗಲಭೆಗಿಳಿಯಲಿಲ್ಲ.

ಹಾಗೆಯೇ ಭಟ್ಕಳದ ಇನ್ನೊಂದು ವಿಶೇಷವೆಂದರೆ ಬೇರೆಡೆಯ ಕೋಮು ಗಲಭೆಗಳು ಕೂಡ ಭಟ್ಕಳದಲ್ಲಿ ಪ್ರತಿಫಲನಗೊಳ್ಳುವುದಿಲ್ಲ.

ರಾಮಜನ್ಮ ಭೂಮಿ ಚಳವಳಿ ಸಂದರ್ಭದಲ್ಲಿ ಇಟ್ಟಿಗೆ ಸಂಗ್ರಹದಲ್ಲೂ ಉತ್ತರ ಕನ್ನಡದಲ್ಲಿ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿರಬಹುದು. ಹಾಗಂದಾಕ್ಷಣ ಉತ್ತರ ಕನ್ನಡದ ಜನ ಮುಸ್ಲಿಂ ವಿರೋಧಿಗಳು ಅಂತ ತೀರ್ಮಾನಿಸಬೇಕಿಲ್ಲ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕು ಎಂಬ ಆಸೆ ಇರಬಹುದು. ಹಾಗಂದಾಕ್ಷಣ ಅವರೆಲ್ಲ ಮುಸ್ಲಿಮರನ್ನು ವಿರೋಧಿಸುತ್ತಾರೆ ಎಂದು ಅರ್ಥೈಸುವ ಅಗತ್ಯ ಖಂಡಿತ ಇಲ್ಲ. ಉತ್ತರ ಕನ್ನಡದ ಜನ ಸೌಹಾರ್ದದಿಂದಲೇ ಜೀವನ ನಡೆಸುತ್ತಿದ್ದಾರೆ. ದೊಡ್ಡ ಗಲಭೆ ನಂತರ ಭಟ್ಕಳದಲ್ಲೂ ಗಲಭೆಗಳಾಗಿಲ್ಲ. ಜಿಲ್ಲೆಯ ಬೇರೆ ಪ್ರದೇಶದಲ್ಲಿ ಕೂಡ ಗಲಭೆಯ ಇತಿಹಾಸ ಇಲ್ಲ. ಅನಂತಕುಮಾರ ಹೆಗಡೆಯ ಕ್ಷೇತ್ರದೊಳಗೇ ಇರುವ ಕುಮಟ ತಾಲೂಕಿನ ಚಂದಾವರಕ್ಕೊಮ್ಮೆ ಹೋಗಿ ನೋಡಲಿ ಅವರು. ಅಲ್ಲಿ ಸಾಕಷ್ಟು ಮುಸ್ಲಿಮರಿದ್ದಾರೆ. ಹಿಂದುಗಳೂ ಇದ್ದಾರೆ. ಇಬ್ಬರ ಜನಜೀವನ ಎಷ್ಟು ಹಾಸುಹೊಕ್ಕಾಗಿದೆಯೆಂದರೆ ನೀವು ಹಿಂದು-ಮುಸ್ಲಿಂ ವ್ಯತ್ಯಾಸ ಗುರುತಿಸುವುದೂ ಕಷ್ಟ. ಮಾತಿನಿಂದ ಗೊತ್ತು ಮಾಡಬಹುದಷ್ಟೆ. ಈವರೆಗೆ ಒಂದೇ ಒಂದು ಅತಿರೇಕದ ಘಟನೆ ಅಲ್ಲಿ ನಡೆದಿದ್ದರೆ ಹೇಳಿ. ಊಹುಂ. ಅಲ್ಲಿ ಸದಾ ಶಾಂತಿ. ರಾಮಜನ್ಮಭೂಮಿ ಗಲಾಟೆ ಸಂದರ್ಭದಲ್ಲೂ ಉತ್ತರ ಕನ್ನಡ ಶಾಂತವಾಗೇ ಇತ್ತು. ಚಂದಾವರ ಕೂಡ!

ಅನಂತಕುಮಾರ ಹೆಗಡೆ ಹೆಚ್ಚು ಮತ ಪಡೆದು, ಚುನಾವಣೆ ಗೆದ್ದು ಜಿಲ್ಲೆಯನ್ನು ದೇಶದ ಉನ್ನತ ಸ್ಥಾನವಾಗ ಲೋಕಸಭೆಯಲ್ಲಿ ಪ್ರತಿನಿಧಿಸುವ ಅಧಿಕಾರ ಪಡೆದಿರಬಹುದು. ಹಾಗಂತ ಜಿಲ್ಲೆಯ ನೆಮ್ಮದಿ, ಸೌಹಾರ್ದ, ಶಾಂತಿ ಕೆಡಿಸುವ ಅಧಿಕಾರವನ್ನು ಅವರಿಗೆ ಯಾರೂ ಕೊಟ್ಟಿಲ್ಲ. ಅದಕ್ಕೆ ಉತ್ತರ ಕನ್ನಡದ ಜನ ಅವಕಾಶ ಕೊಡಲೂಬಾರದು.

ನನ್ನನ್ನು ಬಹಳ ಕಾಡುತ್ತಿರುವ ಇನ್ನೊಂದು ಪ್ರಶ್ನೆಯೆಂದರೆ ನೀವು ಹಿಂದೂ ಪರವಾಗಿರಬೇಕು ಅಥವಾ ಹಿಂದೂ ಪರ ಎಂದು ತೋರಿಸಿಕೊಳ್ಳಬೇಕು ಎಂದಾದರೆ ಮುಸ್ಲಿಮರನ್ನು ವಿರೋಧಿಸಲೇ ಬೇಕೆ? ಮುಸ್ಲಿಂ ವಿರೋಧಿಗಳೆಲ್ಲ ಹಿಂದೂ ಪರವೇ?

ಇತ್ತೀಚೆಗೆ ಇಂತಹ ಅಪಾಯಕಾರಿ ಬೆಳವಣಿಗೆ ಕಾಣುತ್ತಿದೆ. ಮುಸ್ಲಿಮರನ್ನು ಟೀಕಿಸಿದಾಕ್ಷಣ ಆತ ಹಿಂದೂ ಪರವಾಗಿಬಿಡುತ್ತಾನೆ ಅಥವಾ ಹಿಂದುಗಳನ್ನು ಟೀಕಿಸಿದಾಕ್ಷಣ ಅಥವಾ ಮುಸ್ಲಿಮರನ್ನು ವಿರೋಧಿಸಿ ಭಾಷಣ ಮಾಡಿದ್ದನ್ನು ಖಂಡಿಸಿದಾಕ್ಷಣ ಆತ ಮುಸ್ಲಿಂ ಪರವಾಗಿಬಿಡುತ್ತಾನೆ. ಆದರೆ ಅನಂತಕುಮಾರ ಹೆಗಡೆಯಂತಹ ರಾಜಕಾರಣಿಗಳಿಗೆ ಮುಸ್ಲಿಮರನ್ನು ವಿರೋಧಿಸದೆಯೂ ಹಿಂದೂ ಪರವಾಗಿರಬಹುದು ಎಂಬುದು ಯಾಕೆ ಅರ್ಥವಾಗುತ್ತಿಲ್ಲ? ಅನಂತ ಕುಮಾರ್ ಹೆಗಡೆ ‘ಅಲ್ಪಸಂಖ್ಯಾತರ ಒಂದು ಮತವೂ ಬೇಡ’ ಎಂದು ಹೇಳಿದ್ದರಿಂದ ಹಾಗೂ ಅವರು ಕೋಮು ದ್ವೇಷ ಮೂಡಿಸುವ ಮಾತುಗಳಾಡಿದ್ದರಿಂದ ಅವರನ್ನು ಕೆಲವು ಪ್ರಶ್ನೆ ಕೇಳಲೇ ಬೇಕಾಗಿದೆ.

ಅನಂತಕುಮಾರ್ ಹೆಗಡೆ ಅವರು ಮಹಾನ್ ಮುಸ್ಲಿಂ ವಿರೋಧಿಯಾಗಿದ್ದರೆ ಅಥವಾ ಹಿಂದು ಪರವಾಗಿದ್ದರೆ ಸಂಸದರಾಗಿರುವಾಗ ಅವರು ಅದಕ್ಕಾಗಿ ಏನು ಮಾಡಿದ್ದಾರೆ? ಭಟ್ಕಳದಲ್ಲಿ ಉಗ್ರಗಾಮಿ ಚಟುವಟಿಕೆಗಳು ಇರುವ ಬಗ್ಗೆ ಗಲಭೆ ನಂತರ ತನಿಖೆಗೆ ನೇಮಕಗೊಂಡ ನ್ಯಾಯಮೂರ್ತಿ ಜಗನ್ನಾಥ ಶೆಟ್ಟಿ ಆಯೋಗ ವರದಿಯಲ್ಲಿ ಪ್ರಸ್ತಾಪಿಸಿದೆ. ಅದರ ಬಗ್ಗೆ ಲೋಕಸಭೆಯಲ್ಲಿ ಗಮನ ಸೆಳೆದರೆ? ಗೃಹ ಇಲಾಖೆ ಗಮನಕ್ಕೆ ತಂದರೆ? ಈಗಂತೂ ರಾಜ್ಯದಲ್ಲಿ ಅವರದ್ದೇ ಬಿಜೆಪಿ ಸರಕಾರವಿದೆ ಅದರ ಬಗ್ಗೆ ಏನಾದರೂ ಪ್ರಯತ್ನ ಮಾಡಿದರೇ? ಭಟ್ಕಳದಲ್ಲಿ ನಡೆದ ಡಾ. ಚಿತ್ತರಂಜನ್ ಹಾಗೂ ತಿಮ್ಮಪ್ಪ ಶೆಟ್ಟಿ ಕೊಲೆ ಪ್ರಕರಣಗಳು ಇನ್ನೂ ಬಗೆಹರಿದಿಲ್ಲ. ಇಬ್ಬರೂ ಭಟ್ಕಳದಲ್ಲಿ ಹಿಂದೂ ನಾಯಕರಾಗಿದ್ದರು. ಅವರ ಕೊಲೆಗಾರರ ಪತ್ತೆಗೆ ಅನಂತಕುಮಾರ್ ಹೆಗಡೆ ಯಾರ ಮೇಲಾದರೂ ಒತ್ತಡ ಹಾಕಿದ್ದಾರೆಯೇ?ಅವರು ಅಷ್ಟು ಮುಸ್ಲಿಂ ವಿರೋಧಿ ಹಾಗೂ ಹಿಂದುಗಳ ಪರವಾಗಿದ್ದರೆ ಈ ನಾಯಕರ ಕೊಲೆಗಾರರ ಪತ್ತೆಗೆ ಒತ್ತಾಯಿಸಿ ಹೋರಾಟಗಳನ್ನು ಯಾಕೆ ರೂಪಿಸಲಿಲ್ಲ? ಡಾ. ಚಿತ್ತರಂಜನ್ ಕೊಲೆ ಪ್ರಕರಣದ ತನಿಖೆ ಸಿಬಿಐ ವಶದಲ್ಲಿದೆ. ದಿಲ್ಲಿಯಲ್ಲಿ ಸಿಬಿಐ ಅಧಿಕಾರಿಗಳ ಮೇಲೆ ತನಿಖೆ ಚುರುಕುಗೊಳಿಸಲು ಅನಂತಕುಮಾರ ಹೆಗಡೆ ಒತ್ತಡ ತರಬಹುದಿತ್ತು. ಲೋಕಸಭೆಯಲ್ಲಿ ಈ ಬಗ್ಗೆ ಮಾತನಾಡಿ, ಪ್ರಶ್ನೆ ಕೇಳಿ ತನಿಖೆ ಯಾವ ಹಂತದಲ್ಲಿದೆ ಎಂಬುದನ್ನು ಇಡೀ ದೇಶಕ್ಕೆ ತಿಳಿಸಬಹುದಿತ್ತು. ಮುಸ್ಲಿಮರ ಕಟ್ಟರ್ ವಿರೋಧಿಯಂತೆ ಈಗ ವೀರಾವೇಷದ ಭಾಷಣ ಮಾಡುತ್ತಿರುವ ಅವರು ಇದನ್ನೆಲ್ಲ ಯಾಕೆ ಮಾಡಲಿಲ್ಲ?

ಮುಂಬಯಿ ಮೇಲೆ ದಾಳಿಯಾಯಿತು. ಮುಂಬಯಿಯಂತೆಯೇ ಕಾರವಾರವೂ ಸಮುದ್ರ ತೀರದಲ್ಲಿದೆ. ಕಾರವಾರದಲ್ಲಿ ಅಣುವಿದ್ಯುತ್ ಸ್ಥಾವರವಿದೆ. ಅಲ್ಲಿಗೂ ಉಗ್ರರು ದಾಳಿ ಮಾಡಬಹುದು. ಗೋಕರ್ಣ, ಮುರ್ಡೇಶ್ವರ ಮುಂತಾದ ಪ್ರಸಿದ್ಧ ಧಾರ್ಮಿಕ ಹಾಗೂ ಪ್ರವಾಸಿ ಸ್ಥಳಗಳು ಕರಾವಳಿಯಲ್ಲಿವೆ. ಅಲ್ಲಿಗೂ ದಾಳಿ ನಡೆಯಬಹುದು. ಹೀಗಿದ್ದರೂ ಅನಂತಕುಮಾರ್ ಹೆಗಡೆ ಈ ಎಲ್ಲ ವಿಷಯಗಳ ಬಗ್ಗೆ ಲೋಕಸಭೆಯಲ್ಲಿ ಯಾಕೆ ದೇಶದ ಗಮನ ಸೆಳೆಯಲಿಲ್ಲ? ಕರಾವಳಿ ರಕ್ಷಣಾ ಪಡೆ ಠಾಣೆಗೆ ಬರಬೇಕಾದ ಬೋಟು ಮುಂತಾದ ಸೌಲಭ್ಯಗಳನ್ನು ಇನ್ನೂ ಕೇಂದ್ರ ಸರಕಾರ ಒದಗಿಸಿಲ್ಲ. ಅವುಗಳ ಬಗ್ಗೆ ಯಾಕೆ ಒಮ್ಮೆಯೂ ಅನಂತ ಕುಮಾರ್ ಮಾತಾಡಲಿಲ್ಲ? ಕರಾವಳಿ ಮೂಲಕ ಅಕ್ರಮ ಚಟುವಟಿಕೆ ನಡೆಯಬಹುದು, ಸ್ಪೋಟಕಗಳೂ ಬರಬಹುದು. ಆದ್ದರಿಂದ ಕರಾವಳಿ ಭದ್ರತೆ ಬಗ್ಗೆ ಏಕೆ ಕೇಂದ್ರ ಸರಕಾರದ ಗಮನ ಸೆಳೆಯಲಿಲ್ಲ?

ಅನಂತಕುಮಾರ ಹೆಗಡೆ ಅವರ ೫ ವರ್ಷದ ಇತಿಹಾಸ ನೋಡಿದರೆ ಇದ್ಯಾವುದನ್ನೂ ಅವರು ಲೋಕಸಭೆಯಲ್ಲಿ ಚರ್ಚಿಸಿಲ್ಲ. ಇತರೆ ಕಾರ್ಯಕ್ರಮಗಳಲ್ಲೂ ಮಾತಾಡಿಲ್ಲ. ಇದೆಲ್ಲ ಹೋಗಲಿ ಸಂಸದರಾಗಿ ೩ನೇ ಬಾರಿಗೆ ಆಯ್ಕೆಯಾಗಿರುವ ಅನಂತಕುಮಾರ ಹೆಗ್ಡೆ ಅವರಿಗೆ ಮತ ನೀಡಿದ ಜನರ ಕೈಗೆ ಎಷ್ಟು ಸಿಗುತ್ತಾರೆ? ತಮ್ಮ ಮೊಬೈಲ್‌ನಲ್ಲಿ ನಂಬರ್ ಇಲ್ಲದವರ ದೂರವಾಣಿ ಕರೆ ಸ್ವೀಕರಿಸದ ಸಂಸದರಿಂದ ಜನಕ್ಕೆ ಎಷ್ಟು ಉಪಯೋಗವಾದೀತು?ಇವುಗಳನ್ನೆಲ್ಲ ಹೇಗಾದರೂ ಉತ್ತರ ಕನ್ನಡದ ಜನ ಸಹಿಸಿಕೊಂಡಿರಬಹುದು. ಯಾಕೆಂದರೆ ಉತ್ತರ ಕನ್ನಡದ ಯಾವ ರಾಜಕಾರಣಿಯೂ ಜಿಲ್ಲೆಗೆ ಮಾಡಿದ ಸಹಾಯ ಅಷ್ಟರಲ್ಲೇ ಇದೆ. ಉತ್ತರ ಕನ್ನಡದ ಜನ ಕೂಡ ರಾಜಕಾರಣಿಗಳ ಬೆನ್ನು ಬಿದ್ದು ಕೆಲಸ ಮಾಡಿಸಿಕೊಳ್ಳುವ ಬಗ್ಗೆ ತೀವ್ರ ಆಸಕ್ತಿ ಹೊಂದಿದವರೇನಲ್ಲ. ರಸ್ತೆಗಳು ಹಾಳಾಗಿದ್ದರೆ ಶಾಪ ಹಾಕಿಯಾರು ಹೊರತು ಹೋರಾಟ, ಗಲಾಟೆಗಳಿಗೆ ಇಳಿಯುವವರಲ್ಲ. ಇದ್ದುದರಲ್ಲೇ ಸುಖವಾಗಿದ್ದಾರೆ ಉತ್ತರ ಕನ್ನಡದ ಜನ. ಕೆಲಸ ಮಾಡದ ರಾಜಕಾರಣಿಗಳನ್ನಾದರೂ ಕ್ಷಮಿಸಬಹುದು. ಆದರೆ ಜಿಲ್ಲೆಯ ಶಾಂತಿ, ನೆಮ್ಮದಿಯನ್ನೇ ಕದಡ ಹೊರಟರೆ ಅದನ್ನು ಕ್ಷಮಿಸುವುದು ಅಪಾಯಕಾರಿ.

೧೯೯೬ರಲ್ಲಿ ಅನಂತಕುಮಾರ ಹೆಗಡೆ ಲೋಕಸಭೆ ಚುನಾವಣೆಗೆ ನಿಂತಾಗ ಅವರಿಗಿದ್ದ ಒಂದೇ ಒಂದು ಅರ್ಹತೆ ಎಂದರೆ ‘ಅವರು ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ದೇಶದ ಧ್ವಜ ಹಾರಿಸಿದ್ದರು’ ಎಂಬುದು ಮಾತ್ರ. ಆಗ ಪೋರ ನೋಡಲೂ ಚೆಂದವಿದ್ದ. ಭರವಸೆ ಮೂಡಿಸುವಂತಿದ್ದ. ಮಾತಿನ ಮನೆ ಕಟ್ಟುತ್ತಿದ್ದ. ಕಾಂಗ್ರೆಸ್‌ನ ಮುದಿ ಸಂಸದರನ್ನು ನೋಡಿ ನೋಡಿ ಜನರಿಗೂ ಸಾಕಾಗಿತ್ತು. ಅದಕ್ಕೆ ಸರಿಯಾಗಿ ಭಟ್ಕಳದಲ್ಲಿ ಶಾಸಕ ಡಾ. ಚಿತ್ತರಂಜನ್ ಅವರ ಕೊಲೆಯಾಯಿತು. ಅನುಕಂಪದ ಅಲೆಯಲ್ಲಿ ತೇಲಿದ ಅನಂತಕುಮಾರ್ ಹೆಗಡೆ ಗೆದ್ದುಬಿಟ್ಟರು. ಆದರೆ ಉತ್ತರ ಕನ್ನಡದ ಜನ ಅವರ ಮೇಲಿರಿಸಿದ್ದ ನಂಬಿಕೆ, ನಿರೀಕ್ಷೆಗಳನ್ನೆಲ್ಲ ಅವರು ಹುಸಿಗೊಳಿಸಿದ್ದಾರೆ. ಜನರ ಕಷ್ಟಗಳಿಗೆ ಸ್ಪಂಧಿಸುವುದು ಬಿಡಿ, ಜನರಿಗೆ ಸ್ಪಂದಿಸುವುದನ್ನೇ ಅವರು ಮರೆತಿದ್ದಾರೆ. ಅದರ ನಂತರ ಅವರ ಕೆಲಸಕ್ಕಿಂತ ಹೆಚ್ಚಾಗಿ ಕಾಂಗ್ರೆಸ್‌ನ ಅಸಮರ್ಥ ಅಭ್ಯರ್ಥಿಯ ಕಾರಣದಿಂದಲೇ ಅವರು ಗೆಲ್ಲುತ್ತಿದ್ದಾರೆ.

ಸದ್ಯದ ಸ್ಥಿತಿ ಗಮನಿಸಿದರೆ ಅನಂತಕುಮಾರ್ ಹೆಗಡೆ ಅವರ ಹೇಳಿಕೆ ‘ತಪ್ಪು ಮುಚ್ಚಿಕೊಳ್ಳುವ’ ಸಾಧನವಾಗಿ ಕಾಣುತ್ತಿದೆ. ತಾವು ಐದು ವರ್ಷದಲ್ಲಿ ಕೆಲಸ ಮಾಡದೆ ಇರುವುದನ್ನು, ಜನರ ಕೈಗೆ ಸಿಗದಿರುವುದನ್ನು ಮುಸ್ಲಿಂ ವಿರೋಧಿ ಭಾಷಣದ ಮೂಲಕ ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆ ಎಂಬುದು ಸ್ಪಷ್ಟ. ಇಷ್ಟಕ್ಕೇ ಸುಮ್ಮನಾಗದ ಅವರು ‘ನಾನು ಪಾಕಿಸ್ತಾನ, ಅಪಘಾನಿಸ್ತಾನದ ಜನರ ಬಳಿ ಮತ ಕೇಳುತ್ತಿಲ್ಲ. ನಾನು ಹಿಂದುಸ್ತಾನದ ಜನರ ಬಳಿ ಮತ ಕೇಳುತ್ತಿದ್ದೇನೆ’ ಅಂದಿದ್ದಾರೆ. ಆದರೆ ಹಿಂದುಸ್ತಾನದಲ್ಲಿ ಹಿಂದುಗಳಲ್ಲದೆ ಬೇರೆ ಧರ್ಮದವರೂ ಇದ್ದಾರೆ ಎಂಬುದನ್ನು ಅವರು ಮರೆತಂತಿದೆ. ಚುನಾವಣೆಯಲ್ಲಿ ತಮ್ಮ ಗೆಲುವಿಗಾಗಿ ಅವರು ಜಿಲ್ಲೆಯ ಶಾಂತಿ, ಸೌಹಾರ್ದವನ್ನೇ ಬಲಿಕೊಡಲು ಹೊರಟಿದ್ದಾರೆ.ಅವರು ಕೋಮು ಪ್ರಚೋದಿ ಭಾಷಣ ಮಾಡಿದ್ದರ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಆರ್.ವಿ. ದೇಶಪಾಂಡೆ ಚುನಾವಣಾ ಆಯೋಗಕ್ಕೆ ದೂರು ನೀಡಿದರೆ, ‘ರಿಯಾಜ್ ಭಟ್ಕಳ ದೇಶಪಾಂಡೆ ಸಾಕುಮಗನಾ?’ ಎಂಬ ಪ್ರತಿಕ್ರಿಯೆ ನೀಡಿದ್ದಾರೆ. ಕೋಮು ದ್ವೇಷದ ಭಾಷಣದ ವಿರುದ್ಧ ದೂರು ನೀಡಿಬಿಟ್ಟರೆ ‘ರಿಯಾಝ್ ಭಟ್ಕಳನ ಬೆಂಬಲಿಗರಾಗಿಬಿಡುತ್ತಾರಾ?’ ರಿಯಾಝ್ ಭಟ್ಕಳನ ವಿರುದ್ಧ ಮಾತನಾಡಲಿಲ್ಲ ಅಂದಾಕ್ಷಣ ಅವರೆಲ್ಲ ಆತನ ಬೆಂಬಲಿಗರು ಅಂತ ಅರ್ಥೈಸುವುದು ಮೂರ್ಖತನ. ಹಾಗೇನಾದರೂ ಅರ್ಥೈಸಿದರೆ ಅದನ್ನು ‘ಅಪ್ರಬುದ್ಧ ಮತ್ತು ಸಮತೋಲನ ತಪ್ಪಿದ ಮನಸ್ಸು’ ಎಂದು ಕರೆಯಬೇಕಾಗುತ್ತದೆ. ರಿಯಾಝ್ ಭಟ್ಕಳ ಹಾಗೂ ಕೆಲವರು ಉಗ್ರಗಾಮಿ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎಂದಾಕ್ಷಣ ಜಿಲ್ಲೆಯ ಮುಸ್ಲಿಮರನ್ನೆಲ್ಲ ಉಗ್ರಗಾಮಿ ಚಟುವಟಿಕೆಯಲ್ಲಿ ತೊಡಗಿದ್ದಾರೆ ಅಂದುಕೊಳ್ಳಬೇಕಿಲ್ಲ. ಅವರ ವಿರುದ್ಧ ಮಾತನಾಡದವರೆಲ್ಲ ಉಗ್ರಗಾಮಿಗಳ ಬೆಂಬಲಿಗರು ಅಂತ ತೀರ್ಮಾನಿಸುವುದು ಮೂರ್ಖತನ.

ರಿಯಾಜ್ ಭಟ್ಕಳ ಸೇರಿದಂತೆ ಭಟ್ಕಳದ ಕೆಲವರು ಉಗ್ರಗಾಮಿ ಚಟುವಟಿಕೆಯಲ್ಲಿದ್ದಾರೆ ಎಂಬುದು ಗುಪ್ತಚರ ಇಲಾಖೆ ಮಾಹಿತಿ. ಆತನ ಬಂಧನಕ್ಕೆ ಪೊಲೀಸರು ಯತ್ನಿಸುತ್ತಿದ್ದಾರೆ. ಕಾನೂನಿದೆ. ಉಗ್ರಗಾಮಿಗಳನ್ನು ಎಲ್ಲರೂ ವಿರೋಧಿಸಬೇಕು ಎಂಬುದು ನಿರ್ವಿವಾದ. ಹಾಗೆಯೇ ಅನಗತ್ಯವಾಗಿ ಜನರಲ್ಲಿ ಕೋಮು ದ್ವೇಷ ಬಿತ್ತಿ, ಶಾಂತ ಜಿಲ್ಲೆಯ ನೆಮ್ಮದಿ ಕೆಡಿಸುವ ಅನಂತಕುಮಾರ ಹೆಗಡೆಯಂತಹ ರಾಜಕಾರಣಿಗಳನ್ನೂ ವಿರೋಧಿಸಬೇಕಾಗುತ್ತದೆ.ಇಲ್ಲವಾದಲ್ಲಿ ಉತ್ತರ ಕನ್ನಡ ಜಿಲ್ಲೆ ಕೂಡ ಇನ್ನೊಂದು ಕೋಮು ಸೂಕ್ಷ್ಮ ಜಿಲ್ಲೆಯಾಗಿ, ನೆಮ್ಮದಿ ಕಳೆದುಕೊಳ್ಳುವ ಅಪಾಯವಿದೆ.