Thursday, June 26, 2008

ಶಾಲಭಂಜಿಕೆ ಓದಲೇಕೆ ಅಂಜಿಕೆ?



ಅದೇನೋ ಅಂಜಿಕೆ. ಶಾಲಭಂಜಿಕೆ ಎಂಬ ಹೆಸರು, ಅದರಲ್ಲಿನ ಅಪರೂಪದ ಸೆಳೆತಕ್ಕೆ ಸಿಕ್ಕೇ ಅದನ್ನು ತಂದಿದ್ದೆ. ಅದೇ ಅಪರೂಪತ್ವ ಅದನ್ನು ಓದಲು ಅಡ್ಡಿಯಾಯಿತು!

ಇದರ ಪರಿಣಾಮ ಶಾಲಭಂಜಿಕೆ ಪುಸ್ತಕ ಕಪಾಟಿನಲ್ಲಿ ಇತರ ಪುಸ್ತಕಗಳ ನಡುವೆ ಕಣ್ಣಾಮುಚ್ಚಾಲೆ ಆಡುವವರಂತೆ ಅಡಗಿ ಕುಳಿತಿತ್ತು. ಸಾಕಷ್ಟು ಹೊಸ ಪುಸ್ತಕಗಳನ್ನು ತರುತ್ತಿದ್ದೆನಾದ್ದರಿಂದ ಹಳೆಯ ಪುಸ್ತಕಗಳು ನೆನಪಿನಾಳದಲ್ಲಿ ಹೂತುಹೋಗುತ್ತಿದ್ದವು. ಅದನ್ನು ಎಂದೂ ಕೆದಕುತ್ತಿರಲಿಲ್ಲ.

ಆದರೀಗ ದಿಲ್ಲಿಗೆ ಬಂದ ಮೇಲೆ ಹೊಸ ಪುಸ್ತಕಗಳು ಸಿಗದು. ಹೀಗಾಗಿ ಓದದೇ ಕಪಾಟಿನಲ್ಲಿಟ್ಟ ಪುಸ್ತಕಗಳಿಗೆ ಬಿಡುಗಡೆಯ ಭ್ಯಾಗ್ಯ. ಅಂತಹ ಓದದೇ ಉಳಿದ ಪುಸ್ತಕಗಳ ನಡುವಿಂದ ಅಂಜಿಕೆಯಿಂದಲೇ ಕೈಗೆತ್ತಿಕೊಂಡ ಪುಸ್ತಕ ಶಾಲಭಂಜಿಕೆ.

ಲೇಖಕರು ನನ್ನ ಮಟ್ಟಿಗೆ ಹೊಸಬರು. ಡಾ. ಕೆ.ಎನ್. ಗಣೇಶಯ್ಯ. ಅವರ ಬಗ್ಗೆ ಕೇಳಿದ್ದಿಲ್ಲ. ಓದಿದ್ದಂತೂ ಮೊದಲೇ ಇಲ್ಲ. ಆದರೆ ಶಾಲಭಂಜಿಕೆ ಎಂಬ ಹೆಸರೇ ವಿಚಿತ್ರವಾಗಿದೆ. ಪುಸ್ತಕವೂ ವಿಚಿತ್ರವಾಗಿಯೇ ಇರಬಹುದು ಎಂದುಕೊಂಡೇ ಅತ್ರಿ ಬುಕ್‌ಸ್ಟಾಲ್‌ನಿಂದ ಕೊಂಡುತಂದಿದ್ದೆ. ಹಾಗೇ ಇಟ್ಟಿದ್ದೆ. ನಿನ್ನೆ ಕೂಡ ಪುಸ್ತಕ ತೆರೆದಾಗ ಮನದಲ್ಲಿ ಶಾಲಂಜಿಕೆ ಬಗ್ಗೆ ಅಂಜಿಕೆ ಇದ್ದೇ ಇತ್ತು. ಆದರೆ ಓದುತ್ತ ಹೋದಂತೆ ಅಂಜಿಕೆ ದೂರವಾಗಿ ಆಸಕ್ತಿ ಕೆರಳಿತು. ಪುಟ ಪುಟದಲು ಪುಟಿದೆದ್ದಿತು...

ಈ ಪುಸ್ತಕದಲ್ಲಿರುವ ೮ ಕತೆಗಳು ಒಂದಷ್ಟು ಇತಿಹಾಸ ಜ್ಞಾನ, ಹಲವು ದೇಶದ ಕೇಳರಿಯದ ವಿಷಯಗಳ ಜತೆಗೆ ರೋಚಕ ತಿರುವುಗಳನ್ನು ಒದಗಿಸುತ್ತವೆ. ಇಲ್ಲಿನ ಕಥೆಗಳ ವಿಶೇಷವೆಂದರೆ ಪ್ರತಿ ಕಥೆಯೂ ಸತ್ಯಘಟನೆಗಳೊಂದಿಗೆ, ಇತಿಹಾಸದೊಂದಿಗೆ ಥಳಕು ಹಾಕಿಕೊಂಡಿವೆ. ಕೆಲವು ಕತೆಗಳಂತೂ ಗಣೇಶಯ್ಯ ಬರೆದಿದ್ದೇ ಸತ್ಯವಿರಬಹುದೇ ಅನ್ನಿಸಿಬಿಡುತ್ತದೆ. ಈ ಕಥೆಗಳು ಓದಿನ ಸುಖದ ಜತೆಗೆ ಒಂದಷ್ಟು ಜ್ಞಾನವನ್ನೂ ಅರಿಯದಂತೆ ನಿಮ್ಮ ತಲೆಯೊಳಗೆ ತುರುಕಿಬಿಡುತ್ತವೆ.

ನಂಜಾದ ಮಧು ಕಥೆಯಲ್ಲಿ ಜೇನುಹುಳಗಳು ಜೇನು ಸಂಗ್ರಹಿಸಿ ಬಂದ ನಂತರ ಗೂಡಿನಲ್ಲಿ ನೃತ್ಯ ಮಾಡುತ್ತವೆ. ಈ ನೃತ್ಯದ ಮೂಲಕ ಅವು ಇತರ ಹುಳುಗಳಿಗೆ ತಾನು ಜೇನಿನ ಮರ ಇರುವ ದಿಕ್ಕು ಮತ್ತು ದೂರವನ್ನು ತಿಳಿಸುತ್ತವೆ. ಜೇನು ಮೆದ್ದು ಗೊತ್ತಿದ್ದರೂ ಈ ವಿಷಯ ನನಗೆ ತಿಳಿದಿರಲಿಲ್ಲ. ಬಹುಶಃ ಜೇನು ಸಾಕುವ, ತಿನ್ನುವ ಎಷ್ಟೋ ಜನರಿಗೆ ಗೊತ್ತಿಲ್ಲ. ಆದರೆ ಈ ಕಥೆ ಮೂಲಕ ಅದು ಗೊತ್ತಾಯಿತು. ಅದೇರೀತಿ ಹುಲಿಯ ಮಡಿಲ ಹುಳು ಮೂಲಕ ಶ್ರೀಲಂಕಾದಿಂದ ಕಾಫಿ ಹಣ್ಣಿನ ಹುಳುಗಳು ಭಾರತಕ್ಕೆ ಬಂದಿದ್ದು, ಪರಾಗ ತ್ಯಾಗದ ಮೂಲಕ ಆಯಿಲ್ ಪಾಮ್ ಗಿಡಗಳ ವಿಷಯ ತಿಳಿಯುವಂತಾಯಿತು.

ಇದರ ಜತೆಗೆ ಅನಿರೀಕ್ಷಿತ, ಅನೂಹ್ಯ ತಿರುವುಗಳು ಕತೆಯನ್ನು ಓದೆಬಲ್ ಆಗಿಸಿವೆ. ತಡ ಇನ್ನೇಕೆ? ಶಾಲಭಂಜಿಕೆ ಓದಲು ಬೇಡ ಅಂಜಿಕೆ. ಹಾಗಂತ ನಿಮಗೆಲ್ಲ ತಿಳಿಸಲು ಇದನ್ನು ಇಲ್ಲಿ ಬ್ಲಾಗಿಸಿದ್ದೇನೆ.

ಗಣೇಶಯ್ಯ ಕೃಷಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಂತೆ. ಅವರು ಕತೆ ಬರೆದಷ್ಟೇ ಆಸಕ್ತಿಕರವಾಗಿ ಪಾಠ ಮಾಡಿದಲ್ಲಿ ಅವರ ಬಳಿ ಕಲಿತವರು ಪುಣ್ಯವಂತರು. ಯಾಕೆಂದರೆ ನಮ್ಮ ವಿಶ್ವವಿದ್ಯಾಲಯದ ಹೆಚ್ಚಿನ ಪ್ರಾಧ್ಯಾಪಕರು ಆಸಕ್ತಿ ಮೂಡಿಸುವಂತೆ ಕಲಿಸುವುದನ್ನೇ ಮರೆತಿದ್ದಾರೆ. ಬರೆಯುವುದಂತೂ ಗೊತ್ತೇ ಇಲ್ಲ ಬಿಡಿ. ಇದಕ್ಕೆ ಗಣೇಶಯ್ಯ ಅಪವಾದದಂತಿದ್ದಾರೆ.

7 comments:

ಸುನಿಲ್ ಜಯಪ್ರಕಾಶ್ said...

ಕೆ.ಎನ್.ಗಣೇಶಯ್ಯ ಅವರ ಕಾದಂಬರಿಗಳು ಸುಧಾದಲ್ಲಿ ಪ್ರಕಟವಾಗುತ್ತಿದೆ. ಈಗ್ಗೆ ಕೆಲವು ತಿಂಗಳುಗಳ ಹಿಂದೆ, ವಿಜಯನಗರದ ನಿಧಿಯನ್ನು ಕುರಿತಾದ "ಕರಿಸಿರಿಯಾನ" ಎಂಬ ಕಾದಂಬರಿ ತೀವ್ರ ಕುತೂಹಲ ಕೆರಳಿಸಿತ್ತು. ಈಗ ಕಪಿಲಿಪಿಸಾರ ಎಂಬುದು ಪ್ರಕಟವಾಗುತ್ತಿದೆ. www.sudhaezine.comನಲ್ಲಿ ಓದಿ.

ದೀಪಸ್ಮಿತಾ said...

ಗಣೇಶಯ್ಯನವರ ಕತೆಗಳು, ಕಾದಂಬರಿಗಳು ತುಂಬಾ ರೋಚಕವಾಗಿರುತ್ತವೆ. ಇತಿಹಾಸದಲ್ಲಿರುವ ಅನೇಕ ರಹಸ್ಯಗಳನ್ನು, ದಂತಕತೆಗಳನ್ನು ಹೆಕ್ಕಿ, ಕತೆ ಕಾದಂಬರಿ ರೂಪ ಕೊಟ್ಟು, thrillerಗಳನ್ನು ರಚಿಸುತ್ತಾರೆ. ಅವರ ’ಕನಕ ಮುಸುಕು’ ರಮೇಶ್ ನಿರ್ದೇಶನದಲ್ಲಿ ಸಿನೆಮಾ ಆಗುವುದರಲ್ಲಿ ಇದೆ.

ವಿನಾಯಕ ಭಟ್ಟ said...

ಗಣೇಶಯ್ಯ ಅವರ ಬಗ್ಗೆ ಇನ್ನಸ್ಟು ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು. ರಮೇಶ್ ನಿರ್ದೇಶನದಲ್ಲಿ ಅಂದರೆ ಒಂದಷ್ಟು ನಿರೀಕ್ಷೆ ಇರಿಸಿಕೊಳ್ಳಬಹುದು.

ನಾವಡ said...

ಒಳ್ಳೆ ಪುಸ್ತಕ ಕಣಯ್ಯಾ, ಚೆನ್ನಾಗಿದೆ. ನಾನೂ ಹೀಗೇ ಸಪ್ನಾ ಬುಕ್ ಹೌಸ್ ಗೆ ಹೋದಾಗ ಪುಸ್ತಕ ನೋಡಿ ಕೊಂಡುಕೊಂಡೆ. ಅದ್ಭುತವಾಗಿದೆ. ಚೆನ್ನಾಗಿ ಬರೀತಾರೆ.
ನಾವಡ

ವಿನಾಯಕ ಭಟ್ಟ said...

ನೀವು ಹೇಳಿದ್ದು ಸತ್ಯ ನಾವಡ ಸರ್. ಪುಸ್ತಕ ಓದಿದ ನಂತರ ನನಗೂ ಹಾಗೇ ಅನ್ನಿಸಿತು.

Unknown said...

ganeshayya writes well.his fictions are full of real and valuable notes.his knowledge is really amazing.

Mohan Hegade said...

ವಿನಾಯಕಜಿ,
ಈ "ಶಾಲಭಂಜಿಕೆ" ಯನ್ನು ಉಡುಪಿ ರಂಗಭೂಮಿಯು ನಡೆಸುವ ರಾಜ್ಯ ಮಟ್ಟದ ಕನ್ನಡ ನಾಟಕ ಸ್ಪರ್ದೆಯಲ್ಲಿ ಕಲಾ ಜ್ಯೋತಿ ತಂಡ ಶಿವಮೊಗ್ಗದವರು ಅದ್ಬುತವಾಗಿ ಅಬಿನಯಿಸಿ ಪ್ರಥಮ ಬಹುಮಾನವನ್ನು ಕೂಡ ಪಡೆದಿದ್ದಾರೆ. ನೀನು ಹೇಳಿದ ಲೇಖಕರದೆನಾ ಅಲ್ಲವಾ ಎನ್ನುವುದು ಗೊತ್ತಿಲ್ಲ, ಆದರೆ ಶ್ರೀ ಗಿರೀಶ್ ಎನ್ನುವವರು ನಿರ್ದೆಸಿಸಿದ್ದರು. ಸುಂದರ್ ಹಾಗು ಅಸ್ತೆ ಕುತೂಹಲ ಮುಡಿಸಿದ ಕತೆ ಮತ್ತು ಅಬಿನಯ.
ದನ್ಯರಿ,
ಮೋಹನ ಹೆಗಡೆ.