Saturday, June 21, 2008

ಅಂದು ನೋಡಿದ ದಿಲ್ಲಿ ಹಾಗೇ ಇದೆ ಇಲ್ಲಿ


ಶಾಂತವಾದ, ಹಳೆಯ ಬೆಂಗಳೂರನ್ನು ನೆನಪಿಸುವ ಸೌತ್ ಎವಿನ್ಯು. ಚಿಕ್ಕ ಓಣಿಯಂತಿರುವ ಮೈಸೂರು ಕೆಫೆ. ನಮ್ಮೂರ ಹೆದ್ದಾರಿಯನ್ನೂ ಮೀರಿಸುವಷ್ಟು ಅಗಲವಿರುವ, ವಾಹನಗಳೆಲ್ಲಿ ಜಾರಿಬಿಡುತ್ತವೋ ಅನ್ನುವಂತಹ ರಸ್ತೆಗಳು. ಸೌತ್ ಎವಿನ್ಯುವಿನ ಅಗಲವಾದ ರಸ್ತೆಯಲ್ಲಿ ನಡೆಯುತ್ತಿದ್ದರೆ ಕಣ್ಣೆದುರಿಗೆ ರಾಷ್ಟ್ರಪತಿ ಭವನದ ಭವ್ಯ ದೃಶ್ಯ.

ಅಂದು ನೋಡಿದ, ಮನಸಲ್ಲಿ ಅಚ್ಚೊತ್ತಿದ್ದ ದಿಲ್ಲಿ ಚಿತ್ರಕ್ಕೆ ಈಗಿನ ಚಿತ್ರ ಕರೆಕ್ಟಾಗಿ ಮ್ಯಾಚ್ ಆಗುತ್ತಿದೆ!
೮ ವರ್ಷದ ಹಿಂದೆ ವಿದ್ಯಾರ್ಥಿಯಾಗಿ ದಿಲ್ಲಿಗೆ ಬಂದಿಳಿದಿದ್ದೆ. ಆಗ ರಾಜಧಾನಿ ಮಂಜಿನ ಮುಸುಕು ಹೊದ್ದು ಮಲಗಿದಂತಿತ್ತು. ಮಂಜಿನ ಮಬ್ಬು ಮಬ್ಬು ಮುಸುಕಿನಲ್ಲಿ ರಾಷ್ಟ್ರಪತಿ ಭವನ ನೋಡಿದ್ದೆ. ಮೊದಲ ಬಾರಿ. ಮಂಜು ಮುಸಿಕಿದ ಹಾದಿಯಲ್ಲೇ ನಡೆದುಕೊಂಡು ನಾವು ನಾಲ್ಕೈದು ಮಂದಿ ಇಂಡಿಯಾ ಗೇಟ್‌ಗೆ ನಡೆದುಕೊಂಡು ಹೋಗಿದ್ದೆವು. ಆಹಾ ಎಂಥಾ ಬೆರಗು!

ಆಗಲೂ ಈಗಲೂ ದಿಲ್ಲಿಗೆ ಎಂದು ಹೊರಟು ಬಂದಿಳಿದಿದ್ದು ನಿಜಾಮುದ್ದೀನ್ ರೈಲ್ವೆ ನಿಲ್ದಾಣಕ್ಕೆ. ಅಲ್ಲಿಂದ ಪಯಣ ಸೌತ್ ಎವಿನ್ಯುಗೆ. ಆಗ ಬಂದಾಗ ಸಂಸದ ಸನದಿ ಅವರ ಮನೆಯಲ್ಲಿ ಉಳಿದಿದ್ದೆವು. ಈ ಬಾರಿ ಧಾರವಾಡ ಉತ್ತರ ಕ್ಷೇತ್ರದ ಸಂಸದ ಪ್ರಹ್ಲಾದ ಜೋಷಿ ಅವರ ಮನೆಯಲ್ಲಿ. ಒಬ್ಬನೇ ರೈಲಿನಲ್ಲಿ ಬಂದು ನಿಜಾಮುದ್ದೀನ್‌ನಲ್ಲಿ ಇಳಿದು, ರಿಕ್ಷಾ ಹತ್ತಿ ಸೌತ್‌ಎವಿನ್ಯುಗೆ ಬಂದಿಳಿದೆ. ಅದೊಂದು ಅಪರಿಚಿತ, ಹೊಸ ಜಾಗ ಅನ್ನಿಸಲೇ ಇಲ್ಲ. ನಾನು, ನನ್ನ ಮತ್ತು ಗೆಳೆಯರ ಅಧ್ಯಯನ ಪ್ರವಾಸದ ಗೆಜ್ಜೆ ಗುರುತುಗಳು ಸ್ಪಷ್ಟವಾಗಿ ಅಲ್ಲಿ ಕಾಣುತ್ತಿದ್ದವು. ಸಮೀಪದಲ್ಲಿರುವ ಸರ್ದಾರ್ಜಿಯ ಪರಾಟ ಹೋಟೆಲ್, ಹಾಲಿನ ಡೇರಿ, ತರಕಾರಿ ಅಂಗಡಿ, ಗೆಳೆಯರು ಕುಳಿತು ಸುದ್ದಿ ಹೇಳಿದ, ಪ್ರೀತಿಯ ವಿಷಯಕ್ಕೆ ಜಗಳ ಮಾಡಿದ ಕಟ್ಟೆ ಹೀಗೆ ಎಲ್ಲವೂ ಪರಿಚಿತ ಅನ್ನಿಸಿತು. ಸೌತ್ ಎವಿನ್ಯು ವಿಶೇಷವೇ ಅದು. ದಕ್ಷಿಣ ಭಾರತದವರ ಮಟ್ಟಿಗೆ ಸೌತ್ ಎವಿನ್ಯು ನಮ್ಮದೇ ಊರಿನಂತೆ ಅನ್ನಿಸುತ್ತದೆ. ಸೌತ್ ಎವಿನ್ಯು ಒಂದರ್ಥದಲ್ಲಿ ದಿಲ್ಲಿಯ ಕರ್ನಾಟಕ. ಕರ್ನಾಟಕದವರು ಬಂದರೆ ಉಳಿಯುವುದು ಸೌತ್ ಎವಿನ್ಯುದಲ್ಲೇ ಹೆಚ್ಚು. ಅಲ್ಲಿದ್ದರೆ ನಿಮಗೆ ಕರ್ನಾಟಕದಿಂದ ಬಹಳ ದೂರದಲ್ಲಿದ್ದೇವೆ ಎಂಬ ಅನುಭವವೇ ಆಗದು.

೮ ವರ್ಷ ಹಿಂದಿನ ಅಧ್ಯಯನ ಪ್ರವಾಸ ನನ್ನ ದಿಲ್ಲಿ ಉದ್ಯೋಗದ ಪ್ರಯಾಸ ಕಡಿಮೆ ಮಾಡಿತು.
ನಿಜ ಹೇಳಬೇಕೆಂದರೆ ಸಂಪಾದಕು ದಿಲ್ಲಿಯಲ್ಲಿ ವರದಿಗಾರನಾಗುವ ಅವಕಾಶ ಇರುವ ಬಗ್ಗೆ ತಿಳಿಸಿದಾಗ ನಾನು ಒಪ್ಪಿಕೊಳ್ಳಲು ಅಧ್ಯಯನ ಪ್ರವಾಸವೇ ಕಾರಣ. ನನಗೆ ರಶ್ ಅಂದರೆ ಆಗದು. ಟ್ರಫಿಕ್ ಜಾಂ, ಎಲ್ಲಿ ನೋಡಿದರಲ್ಲಿ ರಶ್. ಹೀಗಾದರೆ ನೆಮ್ಮದಿಯ ಜೀವನ ಅಸಾಧ್ಯ. ನನ್ನ ಮಟ್ಟಿಗೆ. ಆದರೆ ಅಧ್ಯಯನ ಪ್ರವಾಸಕ್ಕೆ ಬಂದಾಗ ನೋಡಿದ ದಿಲ್ಲಿ, ಇಲ್ಲಿನ ಅಗಲವಾದ ರಸ್ತೆ, ಸಿಗ್ನಲ್‌ಗಳ ಬದಲು ವೃತ್ತಗಳು, ಮಂಜು ಮುಸಿಕಿದ ವಾತಾವರಣ ಇವೆಲ್ಲ ನನ್ನನ್ನು ಆಕರ್ಷಿಸಿದ್ದವು. ದಿಲ್ಲಿಯಲ್ಲಿ ವರದಿಗಾರನಾಗಲು ಒಪ್ಪಿಕೊಳ್ಳಲು ಇದೂ ಒಂದು ಕಾರಣವಾಯಿತು. ಬಹುಶಃ ಅಧ್ಯಯನ ಪ್ರವಾಸದ ನೆಪದಲ್ಲಿ ದಿಲ್ಲಿ ನೋಡದೇ ಹೋಗಿದ್ದರೆ ಇಲ್ಲಿಗೆ ಬರಲು ಮನಸ್ಸು ಒಪ್ಪುತ್ತಿರಲಿಲ್ಲವೇನೊ. ಅಥವಾ ಬಂದರೂ ಸ್ವಲ್ಪ ಕಷ್ಟವಾಗುತ್ತಿತ್ತೇನೊ.
ಹಾಗಂತ ದಿಲ್ಲಿಯಲ್ಲಿ ಟ್ರಾಫಿಕ್ ಜಾಂ ಇಲ್ಲ. ರಸ್ತೆಗಳಲ್ಲಿ ಹೊಂಡಗಳೇ ಇಲ್ಲ ಎಂದು ನಾನುಹೇಳುತ್ತಿಲ್ಲ. ಇಲ್ಲೂ ಆಗಾಗ ಟ್ರಾಫಿಕ್ ಜಾಂ ಸಿಗುವುದಿದೆ. ಆದರೆ ಬೆಂಗಳೂರಿನಷ್ಟಲ್ಲ! ಇಲ್ಲೂ ಹೊಂಡಗಳಿವೆ ಆದರೆ ರಾಷ್ಟ್ರೀಯ ಹೆದ್ದಾರಿ ೧೭ ಮತ್ತು ೪೮ರಷ್ಟಲ್ಲ!!
ಅದೇ ಸಮಾದಾನ. ಇನ್ನೂ ಒಂದು ಸಮಾದಾನವೆಂದರೆ ಪೆಟ್ರೋಲ್, ಡೀಸೆಲ್ ಬೆಲೆ ಉಳಿದ ಕಡೆಗಿಂತ ಕಡಿಮೆ ಇದೆ!

4 comments:

VENU VINOD said...

ಇನ್ನೂ ಒಂದು ಸಮಾದಾನವೆಂದರೆ ಪೆಟ್ರೋಲ್, ಡೀಸೆಲ್ ಬೆಲೆ ಉಳಿದ ಕಡೆಗಿಂತ ಕಡಿಮೆ ಇದೆ!

ತಿರುಗೋದಕ್ಕೆ ಇನ್ನೂ ಒಂದು ಕಾರಣ ಇದು :)

shailesh ujire said...

bhatre..
hegiddeeri.. mangalorannu neevu miss madida haage naavu nimmannu miss maadtha iddeve.. monne university valuation time nalli nimma nenapu tumbaa aythu.. neravaagi nishturavagi ee kade bareyoru tumba kammi.. iddavarella ondondu karanagalannu heli uru bittu hogtha iddare..

illiruvaga neevu torisida atmiyathe nenaplli..
shubhashayagalondige
shailesh
ujire

ವಿನಾಯಕ ಭಟ್ಟ said...

ha ha ha Sariyagi heliddeeya...

ವಿನಾಯಕ ಭಟ್ಟ said...

Thank Shailesh for your comment. ಇದ್ದಷ್ಟು ದಿನ, ಪತ್ರಿಕೆಗೆ, ಅಲ್ಲಿನ ಜನಕ್ಕೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದೇನೆ ಎಂಬ ನೆಮ್ಮದಿ ನನಗಿದೆ. ನಿಮ್ಮಂಥವರ ಇಂತಹ ಪ್ರ್ತಿಕ್ರಿಯೆಗಳು ನನ್ನ ಆ ನಂಬಿಕೆಯನ್ನು ಇನ್ನಷ್ಟು ಹೆಚ್ಚಿಸುತ್ತವೆ.
ನಾನೆಲ್ಲೇ ಇದ್ದರೂ ನಿಮ್ಮ ಮೇಲಿನ ಪ್ರೀತಿ, ಗೌರವ ಹಾಗೇ ಇರುತ್ತದೆ. ಖಂಡಿತ ದಿಲ್ಲಿಗೊಮ್ಮೆ ಬನ್ನಿ.