Wednesday, January 30, 2008

ಹಿಡಿವ ಬಸ್ಸು ಬಿಟ್ಟು, ಬಿಡುವ ಬಸ್ಸು ಹಿಡಿದು...

ಎಂಥೆಂಥದ್ದೋ ಪ್ರಕರಣಗಳ ಆರೋಪಿಗಳನ್ನು, ಚಾಲಾಕಿಗಳನ್ನು ಹಿಡಿಯುವ ಪೊಲೀಸರು ಒಮ್ಮೊಮ್ಮೆ ಎಡವಟ್ಟು ಮಾಡಿಬಿಡುತ್ತಾರೆ. ಹೋಳಿದ್ದೊಂದನ್ನು ಬಿಟ್ಟು ಇನ್ನೆಲ್ಲವನ್ನು ಅಚ್ಚುಕಟ್ಟಾಗಿ ಮಾಡಿ ಇಕ್ಕಟ್ಟಿಗೆ ಸಿಲುಕುತ್ತಾರೆ.
ಒಂದು ದಿನ (ಎರಡು ವರ್ಷದ ಹಿಂದೆ) ನಡೆದ ಈ ಘಟನೆ ಅದಕ್ಕೊಂದು ಸಾಕ್ಷಿ.
ಬೆಳಗಾಂನ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಎಸ್ಪಿ ಮಂಗಳೂರಿಗೆ ಬಂದಿದ್ದರು. ರಾತ್ರಿ ಬಸ್ಸಿಗೆ ಮರಳಿ ಬೆಳಗಾಂಗೆ ಹೋಗಬೇಕಿತ್ತು. ೧೦.೦೦ ಗಂಟೆ ಬಸ್‌ಗೆ ಟಿಕೆಟ್ ಬುಕ್ ಆಗಿತ್ತು. ಅವರು ಎಲ್ಲೆಲ್ಲೋ ಹೋಗಿ, ಏನೇನೋ ಹಕ್ಕುಗಳನ್ನು ಜಾರಿ ಮಾಡಿ ಮರಳಿ ಮಂಗಳೂರಿಗೆ ಬರುವಾಗ ರಾತ್ರಿ ೮.೩೦ ಗಂಟೆ ಆಗಿಬಿಟ್ಟಿತ್ತು. ಅವರನ್ನು ಭೇಟಿ ಮಾಡಲು ಹೆಚ್ಚುವರಿ ಎಸ್ಪಿ ಲೋಕೇಶ್ ಕುಮಾರ್, ಡಿವೈಎಸ್ಪಿ ಎಸ್.ಎಂ. ಮಂಟೂರ್ ಹಾಗೂ ಮಂಗಳೂರು ಗ್ರಾಮಾಂತರ ಸರ್ಕಲ್ ಇನ್‌ಸ್ಪೆಕ್ಟರ್ ಉದಯ್ ನಾಯ್ಕ್ ಕಾದು ಕುಳಿತಿದ್ದರು.
ಭೇಟಿ ಅಂದರೆ ಸುಮ್ಮನೆ ಆಗುತ್ಯೆ? ಸ್ವಲ್ಪ ಹೊತ್ತಿನ ಹರಟೆಯ ನಂತರ ಊಟ ಮಾಡಲು ಹೋದರು. ಎಷ್ಟೇ ಬೇಗ ಬೇಗ ಆರ್ಡರ್ ಮಾಡಿ ತರಿಸಿಕೊಂಡು ಊಟ ಮಾಡಿದರೂ ೧೦.೦೦ ಗಂಟೆ ಆಗಿಬಿಟ್ಟಿತ್ತು. ಬಸ್ ತಪ್ಪಿಹೋಗುತ್ತಲ್ಲ? ಪೊಲೀಸ್ ಬುದ್ದಿ ಕರ್ಚು ಮಾಡಿ ಕೂಡಲೆ ಸಂಚಾರ ವಿಭಾಗ ಪೊಲೀಸರಿಗೆ ವಯರ್‌ಲೆಸ್ ಮೂಲಕ ಮಾಹಿತಿ ನೀಡಿ ಬಸ್ ನಿಲ್ಲಿಸುವಂತೆ ಸೂಚಿಸಲಾಯಿತು.
ಹೆಚ್ಚುವರಿ ಎಸ್ಪಿ, ಡಿವೈಎಸ್ಪಿ ಅವರ ವಾಹನ ಕೆಂಪು ಲೈಟ್ ಹಾಕಿಕೊಂಡು ಸರ್ವೀಸ್ ಬಸ್ ನಿಲ್ದಾಣದ ಬಳಿ ನಿಲ್ಲಿಸಲಾದ ಬಸ್ ಬಳಿಗೆ ಹೋಗುವಾಗ ೧೦-೧೫ ನಿಮಿಷ ವಿಳಂಬವಾಗಿತ್ತು. ಅಲ್ಲಿ ಹೋಗಿ ನೋಡಿದರೆ ಸಂಚಾರ ಪೊಲೀಸರು ಎರಡು ಬಸ್ ಹಿಡಿದು ನಿಲ್ಲಿಸಿದ್ದರು. ಹಿರಿಯ ಅಧಿಕಾರಿಗಳ ವಾಹನ ಬಂದ ತಕ್ಷಣ ಸೆಲ್ಯೂಟ್ ಹೊಡೆದ ಒಬ್ಬ ಸರ್ ಎರಡೂ ಬಸ್ ನಿಲ್ಲಿಸಿದ್ದೇವೆ ಎಂದ ವರದಿ ಒಪ್ಪಿಸಿದ. ಹೋಗಿ ನೋಡಿದರೆ ಬೇಕಾದ ಬಸ್ಸೇ ಇರಲಿಲ್ಲ. ಸಂಚಾರ ಪೊಲೀಸರು ಗಡಿಬಿಡಿಯಲ್ಲಿ ಬೆಂಗಳೂರು ಹಾಗೂ ಹುಬ್ಬಳ್ಳಿಗೆ ಹೋಗುವ ಬಸ್ ಹಿಡಿದು ನಿಲ್ಲಿಸಿದ್ದರು. ಬೆಳಗಾಂಗೆ ಹೋಗುವ ಬಸ್ ಹೋಗಿಯಾಗಿತ್ತು!!
ನಗರ ಸಂಚಾರ ಮುಗಿಸಿ ಹೊರ ಹೋಗುತ್ತಿದ್ದ ಬಸ್ಸನ್ನು ಕೆಎಸ್‌ಆರ್‌ಟಿಸಿ ಬಳಿ ಕೊನೆಗೆ ಅಂತೂ ಇಂತೂ ಹಿಡಿದು ಬೆಳಗಾಂ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಎಸ್ಪಿಯವರನ್ನು ಹತ್ತಿಸಿದ ಅವರ ಗೆಳೆಯರು ಕೊನೆಗೂ ಸಿಕ್ಕೆದೆಯಲ್ಲ ಖಾಸಗಿ ಬಸ್ಸೆ ಎಂದು ನಿಟ್ಟುಸಿರು ಬಿಟ್ಟರು!!
ಇದು ನನಗೆ ಹೇಗೆ ಗೊತ್ತಾಯಿತು ಅಂದ್ರೆ, ನಾನು ಮನೆಗೆ ಮರಳುವಾಗ ಈ ಮೂವರು ಪೊಲೀಸ್ ಅಧಿಕಾರಿಗಳು ಆಗಷ್ಟೇ ಗೆಳೆಯನನ್ನು ಬಸ್ ಹತ್ತಿಸಿ, ಉಫ್! ಅಂತ ಉಸಿರು ಬಿಟ್ಟು, ರಸ್ತೆ ಬದಿಗೆ ಸುದ್ದಿ ಹೇಳುತ್ತ ನಿಂತಿದ್ದರು. ನಾನು ಬೈಕ್ ನಿಲ್ಲಿಸಿ ಮಾತನಾಡಿಸಿದಾಗ ಇದೆಲ್ಲ ಪುರಾಣ ಹೊರಬಿತ್ತು.

Tuesday, January 22, 2008

ಹೊಂಗನಸು ಅಲ್ಲವಿದು ಕೆಟ್ಟ ಕನಸು!

ಆ ಮನೆಯ ಯಜಮಾನ ಆಗಷ್ಟೇ ಸತ್ತಿರುತ್ತಾನೆ. ಅಂತ್ಯ ಸಂಸ್ಕಾರಕ್ಕೆಂದು ಆತನ ಹೆಣವನ್ನು ಗುಡ್ಡದ ಮೇಲೆ ತೆಗೆದುಕೊಂಡು ಹೋಗಿ ಇಟ್ಟಿರುತ್ತಾರೆ. ಆಗ ಅಷ್ಟೂ ಹೊತ್ತು ನಿಮಗೆ ಗೊತ್ತಿಲ್ಲದ ಒಬ್ಬ ವ್ಯಕ್ತಿ ಬರುತ್ತಾನೆ. ಸತ್ತವನ ಹೆಂಡತಿ ಬಳಿ ಹೋಗಿ, ಏನಿಲ್ಲ ವರ್ಷದೊಳಗೆ ಮನೆಯಲ್ಲಿ ಶುಭ ಕಾರ್ಯ ನೆರವೇರಿದರೆ ಎಲ್ಲ ಸರಿ ಹೋಗುತ್ತದೆ. ನಿನ್ನ ಮಗಳಿಗೆ ಒಂದು ಸಂಬಂಧ ಇದೆ ನೋಡಲೆ? ಎನ್ನುತ್ತಾನೆ.
ಇಂತಹ ಘಟನೆ, ಸನ್ನಿವೇಶವನ್ನು ನೀವೆಲ್ಲೂ ನೋಡಿಲ್ಲವೆಂದರೆ ಖಂಡಿತ ಹೊಂಗನಸು ಸಿನಿಮಾ ನೋಡಿ. ಅದರಲ್ಲಿ ಅಪ್ಪನ ಹೆಣ ಇರಿಸಿಕೊಂಡೇ ಮಗಳ ಮದುವೆ ಮಾತನಾಡುವ ಸನ್ನಿವೇಶ ಇದೆ! ನಿಮಗೆ ಇಷ್ಟವಾಗಬಹುದು!!
ಚಿತ್ರದ ನಾಯಕ ಮತ್ತು ನಾಯಕಿ ಹಳ್ಳಿ ಮತ್ತು ನಗರದಲ್ಲಿ ವಾಸವಾಗಿರುವವರು. ಆದರೆ ಹಾಡಲ್ಲಿ ಮಾತ್ರ ಇವರು ಟೈಗರ್ ಪ್ರಭಾಕರ್‌ನ ‘ಕಾಡಿನ ರಾಜ’ ಅಥವಾ ಎಂ.ಪಿ. ಶಂಕರ್‌ನ ಚಿತ್ರಗಳಲ್ಲಿ ಕಾಣುತ್ತಿದ್ದ ‘ಜುಂಬಲಿಕ್ಕಾ ಜುಂಬಿಕ್ಕಾ ಜುಂಬ ಜುಂಬಾಲೆ’ ಹಾಡಿನ ನಮೂನೆಯ ಕಾಡು ಮನುಷ್ಯರ ಬಟ್ಟೆ ಧರಿಸಿ ಬೆರಗು ಮೂಡಿಸುತ್ತಾರೆ. ಇನ್ನು ನಾಯಕಿಯೋ? ಅವಳ ಮುಖ, ನಟನೆ ನಿರ್ದೇಶಕರಿಗೇ ಚೆಂದ.
ನಾಯಕನ ಜತೆ ನಾಯಕಿ ಹಾಗೂ ಗೆಳತಿಯರು ಕೇರಳಕ್ಕೆ ಓಣಂಗಾಗಿ ತೆರಳುತ್ತಾರೆ. ಆಗ ಚಹಾ ತೋಟದಿಂದ ಕಂಗೊಳಿಸುವ ಮುನಾರ್ ತೋರಿಸಲಾಗುತ್ತದೆ. ನಂತರ ಕೆಲವೇ ಕ್ಷಣದಲ್ಲಿ ಆ ಮನೆಯ ಮಾಲಿಕ ಕನ್ನಡದಲ್ಲಿ ಮಾತನಾಡಿ ಬೆಚ್ಚಿ ಬೀಳಿಸುತ್ತಾನೆ. ಅವರದ್ದೇ ಬಾಯಲ್ಲಿ "ಕಾಸರಗೋಡು ಮೊದಲು ಕರ್ನಾಟಕದ ಭಾಗವಾಗಿತ್ತು. ನೀವು ಅದನ್ನು ಉಳಿಸಿಕೊಳ್ಳಲಿಲ್ಲ.’ ಎಂಬ ಡೈಲಾಗುಗಳನ್ನು ನಿರ್ದೇಶಕ ಮಹಾಶಯರು ಹೇಳಿಸುತ್ತಾರೆ. ಆದರೆ ಕಾಸರಗೋಡಿನಲ್ಲಿ ಚಹಾ ತೋಟವೇ ಇಲ್ಲ!
ಇಡೀ ಸಿನಿಮಾದಲ್ಲಿ ನಗು ಬರೋದು ಒಂದೆರಡು ಕಡೆ ಮಾತ್ರ. ಶರಣ್ ಫೋಟೋಗ್ರಾಫರ್ ಆಗಿ ನಗಿಸುತ್ತಾನೆ. ಅರ್ಧ ಸಿನಿಮಾದಿಂದ ಈತ ಕಾಣೆ. ಅಟ್ ಲೀಸ್ಟ್ ಸಿನಿಮಾದ ಅಂತ್ಯದಲ್ಲಿ ನಡೆಯುವ ಮದುವೆಗೆ ಫೋಟೋ ತೆಗೆಯುವ ಆರ್ಡರನ್ನಾದರೂ ಆತನಿಗೆ ನಿರ್ದೇಶಕರು ದಯಪಾಲಿಸ ಬಹುದಿತ್ತು.!
ನಿಜ ಹೇಳೇಕೆಂದರೆ ಹೊಂಗನಸು ಚಿತ್ರಕ್ಕೆ ಈ ಹೆಸರು ಸ್ವಲ್ಪವೂ ಹೊಂದಿಕೊಳ್ಳುವುದಿಲ್ಲ. ಬದಲಾಗಿ ಈ ಚಿತ್ರಕ್ಕೆ ‘ಅತ್ಗೆಗಾಗಿ’ ಎಂದು ಇಟ್ಟಿದ್ದರೆ ಅತ್ಯಂತ ಸೂಕ್ತವಾಗಿತ್ತು. ಯಾಕೆಂದರೆ ನಾಯಕ ಸಿನಿಮಾದುದ್ದಕ್ಕೂ ಆತ ಏನೇ ಮಾಡಿದರೂ ಅದು ಅತ್ತಿಗೆಗಾಗಿ. ಅದೂ ಅಣ್ಣನನ್ನು ಮದುವೆಯಾಗದ!
ಅನಂತನಾಗು ಮತ್ತು ರಮೇಶ್ ಭಟ್ ಗೆಳೆಯರು. ಚಿಕ್ಕವರಿರುವಾಗಲೇ ಅನಂತನಾಗಿನ ಹಿರಿಯ ಮಗನಿಗೂ, ರಮೇಶ ಭಟ್ ಮಗಳಿಗೂ ಮದುವೆ ಎಂದು ಮಾತಾಡಿಕೊಂಡಿರುತ್ತಾರೆ. ಇದನ್ನು ಮದುವೆಯಾಗಬೇಕಾದ ಹಿರಿಯ ಮಗಿನಿಂದ ಕಿರಿಯ ಮಗ (ಚಿತ್ರದ ನಾಯಕ) ಹೆಚ್ಚು ನೆನಪಿಟ್ಟುಕೊಳ್ಳುತ್ತಾನೆ. ಅಂದಿನಿಂದಲೇ ಅವನ ವರ್ತನೆಗಳು ಅತ್ತಿಗೆಯನ್ನು ಬೆಂಬಲಿಸುತ್ತದೆ. ಎಷ್ಟರ ಮಟ್ಟಿಗೆ ಅಂದರೆ ಅವಳನ್ನು ಎಲ್ಲರೂ ಸಾಗರ್‌ನ (ಚಿತ್ರದಲ್ಲಿ ನಾಯಕ ಹೆಸರು) ಅತ್ತಿಗೆ ಎಂದೇ ಕರೆಯುತ್ತಾರೆ. ಇವನೋ ಅತ್ತಿಗೆಗಾಗಿ ಏನೂ ಮಾಡಬಲ್ಲ. ಅಥವಾ ಆತ ಏನೇ ಮಾಡಿದರೂ ಅದು ಅತ್ತಿಗೆಗಾಗಿ (ಕಡಗೆ ಅಣ್ಣ ಇದೇ ಕಾರಣಕ್ಕೆ ಅವಳನ್ನು ಮದುವೆಯಾಗಲು ಒಪ್ಪುವುದಿಲ್ಲ.) ಅತ್ತಿಗೆಗಾಗಿಯೇ ಒಂದು ಹುಡುಗಿಯನ್ನು ಹುಡುಕಿ, ಪ್ರೀತಿಸಿ ಮದುವೆಯಾಗುತ್ತಾನೆ!
ಸಿನಿಮಾ ಆರಂಭವಾಗಿ ಅರ್ಧ ಮುಗಿಯುವವೆಗೂ ಈ ಸುದ್ದಿಯೇ ಇರುವುದಿಲ್ಲ. ನಾಯಕ- ನಾಯಕಿ ಆಕಸ್ಮಿಕವಾಗಿ ಒಂದೆರಡು ಬಾರಿಯಲ್ಲ ಪ್ರೇಕ್ಷಕರಿಗೆ ಬೇಜಾರು ಬರುವಷ್ಟು ಬಾರಿ ಭೇಟಿಯಾಗುತ್ತಾರೆ. ಅಂತೂ ಅರ್ಧ ಮುಗೀತು ಅಂತ ಹೊರ ಹೋಗಿ ಬಂದು ಕುಳಿತರೆ, ಮೊದಲಿನರ್ಧಕ್ಕೆ ಸಂಬಂಧವೇ ಇಲ್ಲದಂತೆ ಕತೆ ಮುಂದುವರಿಯುತ್ತದೆ. ಹೆಚ್ಚು ಕಮ್ಮಿ ಸಿನಿಮಾ ಮುಗಿಯುವವರೆಗೂ ಪ್ರೇಕ್ಷಕರಿಗೆ ಎರಡು ಸಿನಿಮಾ ನೋಡಿದ ಅನುಭವವಾದರೆ, ಆರಂಭದಿಂದ ಮಧ್ಯಂತರವರೆಗೆ ಹಾಗೂ ಮಧ್ಯಂತರದಿಂದ ಅಂತ್ಯದವರೆಗೆ ಎರಡು ಸಿನಿಮಾಗಳನ್ನು ನಿರ್ಮಿಸಿ, ಎರಡನ್ನೂ ಜೋಡಿಸಿದರೆ ಹೇಗಾಗುತ್ತದೆ? ಹಾಗಾಗಿಗೆ ಎಂದು ‘ಹೊಂಗನಸು’ ಸಿನಿಮಾ ಮುಗಿಯುವ ಹೊತ್ತಿಗೆ ಅನಿಸಿರುತ್ತದೆ.
‘ಹೊಂಗನಸು’ ಸಿನಿಮಾವನ್ನು ಪ್ರೇಕ್ಷಕರು ಒಂದು ಕೆಟ್ಟ ಕನಸು ಎಂದು ಮರೆಯಬೇಕಾದ ಸ್ಥಿತಿ ಇದೆ. ಮಂಗಳವಾರ ‘ಗಾಳಿಪಟ’ ಸಿನಿಮಾ ನೋಡಲೆಂದು ಹೋಗಿದ್ದೆವು. ಟಿಕೆಟ್ ಸಿಗದೆ ನಮ್ಮ ಆಸೆಗಳು ದಾರ ಹರಿದ ಗಾಳಿಪಟದಂತೆ ಎಲ್ಲೆಲ್ಲೋ ಸುತ್ತಾಡಿ ಅಂತಿಮವಾಗಿ ಹೊಂಗನಸಾಗಿ ಮಾರ್ಪಾಟಾದವು. ಈಗ ಆ ಹೊಂಗನಸನ್ನು ಕೆಟ್ಟ ಕನಸೆಂದು ಮರೆಯಬೇಕಾಗಿದೆ.
ಆದರೆ ಸಿನಿಮಾಕ್ಕೆ ಹೋಗುವಾಗ ತಲೆನೋವೆಂದು ಹೇಳುತ್ತಿದ್ದ ನನ್ನ ಹೆಂಡತಿಗೆ ಹೊಂಗನಸು ನೋಡಿ ಹೊರಬರುವಾಗ ತಲೆ ನೋವು ಮಂಗಮಾಯವಾಗಿದ್ದು ಮಾತ್ರ ಸತ್ಯ. ಅಷ್ಟರ ಮಟ್ಟಿಗೆ ನಿರ್ದೇಶಕ ಯಶಸ್ವಿಯಾಗಿದ್ದಾನೆ.
ಗೂಗ್ಲಿ: ಹೊಂಗನಸಿನಂತಹ ಸಿನಿಮಾಗಳನ್ನೂ ನೋಡಬೇಕು. ಯಾಕೆಂದರೆ ಒಳ್ಳೆಯ ಸಿನಿಮಾಕ್ಕೂ ಕೆಟ್ಟ ಸಿನಿಮಾಕ್ಕೂ ಇರುವ ವ್ಯತ್ಯಾಸ ಅರಿಯಲು.

Friday, January 18, 2008

ಸಿನಿಮಾ ನೋಡಿ ಅಳದೇ ಅದೆಷ್ಟು ವರ್ಷವಾಗಿತ್ತು!


ಸಿನಿಮಾ ನೋಡಿ ನಾನು ಅತ್ತಿದ್ದು ಯಾವಾಗ?

ಎಷ್ಟು ಪ್ರಯತ್ನಪಟ್ಟರೂ ನೆನಪಾಗುತ್ತಿಲ್ಲ.

ನನಗೆ ತಿಳಿಯಲು ಆರಂಭವಾದಾಗಿನಿಂದ ಸಿನಿಮಾ ನೋಡಿ ಅತ್ತಿದ್ದು ಹೆಚ್ಚೆಂದರೆ ಒಂದೆರಡು ಬಾರಿ ಮಾತ್ರ. ಹೈಸ್ಕೂಲ್ ದಾಟಿದ ಮೇಲೆ ಸಿನಿಮಾ ನೋಡಿ ಅತ್ತ ದಾಖಲೆಯೇ ಇಲ್ಲ.

ಆದರೆ ಮೊನ್ನೆ ಅತ್ತುಬಿಟ್ಟೆ. ತಾರೆ ಜಮೀನ್ ಪರ್ ಸಿನಿಮಾ ನೋಡಿ ಅತ್ತುಬಿಟ್ಟೆ. ಅತ್ತುಬಿಟ್ಟೆ ಅನ್ನುವುದಕ್ಕಿಂತ ಹಲವು ಬಾರಿ ಅಳು ಬಂತು ಅನ್ನುವುದು ಹೆಚ್ಚು ಸೂಕ್ತ.

ಸಾಮಾನ್ಯವಾಗಿ ಸಿನಿಮಾ ನೋಡಿ ನಾನು ಅಳುವುದಿಲ್ಲ. ಸಿನಿಮಾವನ್ನು ಕೇವಲ ಸಿನಿಮಾ ಎಂದು ನೋಡಿದವನು ನಾನು. ಅದರಲ್ಲೂ ಒಬ್ಬ ಪತ್ರಿಕೋದ್ಯಮ ವಿದ್ಯಾರ್ಥಿಯಾಗಿ, ಸಿನಿಮಾ ನೋಡುವುದು ಹೇಗೆ ಎಂಬುದನ್ನು ಮೇಸ್ಟ್ರರಿಂದ ಹೇಳಿಸಿಕೊಂಡವನಾಗಿ ಸಿನಿಮಾದೊಳಗೆ ಭಾವನಾತ್ಮಕವಾಗಿ ಸೇರಿ ಹೋಗುವುದು ಬಹಳ ಕಡಿಮೆ. ಆದರೆ ತಾರೆ ಜಮೀನ್ ಪರ್ ನೋಡುವಾಗ ಮಾತ್ರ ಅದು ಸಾಧ್ಯವೇ ಆಗಲಿಲ್ಲ.

ಯಾಕಿರಬಹುದು?

ನಾನೂ ಚಿಕ್ಕವನಿರುವಾಗ ಬೇಕಾದಷ್ಟು ಬಾರಿ ಅಪ್ಪನಿಂದ ಬೈಸಿ, ಹೊಡೆಸಿಕೊಂಡಿದ್ದಕ್ಕಾ? ಕಡಿಮೆ ಮಾರ್ಕ್ಸ್ ತಗೊಂಡೆ ಎಂದು ಬೈಸಿಕೊಂಡಿದ್ದಕ್ಕಾ? ಹೆಚ್ಚು ಮಾರ್ಕ್ಸ್ ಪಡೆಯದೇ, ಓದದೇ, ಕ್ರಿಕೆಟ್ ಆಡಿದ್ದಕ್ಕೆ ಒಂದಿಡೀ ದಿನ ಮನೆಯ ಹೊರಗೇ ನಿಲ್ಲುವ ಶಿಕ್ಷೆ ಅನುಭವಿಸಿದ್ದಕ್ಕಾ? ಇದೆಲ್ಲದರ ಪರಿಣಾಮ ನಾನು ತಾರೆ ಜಮೀನ್ ಪರ್ ಹಿರೋ ಬಾಲಕನ ಜತೆ ನನ್ನನ್ನೇ ಗುರುತಿಸಿಕೊಂಡೆನಾ?

ಬಹುಶಃ ಹೌದು. ಅದರ ಪರಿಣಾಮವೇ ಕಣ್ಣು ನೀರಾಡಿದ್ದು.

ನಾನಾದರೋ ಕಲಿಯುವಾಗ ಅಷ್ಟೇನೂ ಸ್ಪರ್ಧೆ ಇರಲಿಲ್ಲ. ಕಲಿಯದಿದ್ದರೆ, ಶೇ.೮೫ಕ್ಕಿಂತ ಹೆಚ್ಚು ಮಾರ್ಕ್ಸ್ ಪಡೆಯದಿದ್ದರೆ ಕೆಲಸ ಸಿಗದೇ ನಿಷ್ಪ್ರಯೋಜಕ ಎನಿಸಿಕೊಳ್ಳಬೇಕಾದ ಸ್ಥಿತಿ ಬರುತ್ತದೆ ಎಂಬ ಸ್ಥಿತಿ ಇರಲಿಲ್ಲ. ಈಗಿನ ಹಾಗೆ ೧೦೦ಕ್ಕೆ ೯೯, ೯೮ ಮಾರ್ಕ್ಸ್‌ಗಳೂ ಆಗ ಸಿಗುತ್ತಿರಲಿಲ್ಲ. ನಾನು ಯಾರ ಬಳಿಯೂ ಟ್ಯೂಶನ್ ಹೇಳಿಸಿಕೊಳ್ಳದೆ ಎಂಎ ಮುಗಿಸಿದೆ. ಈಗ ನೋಡಿದರೆ ೧-೨-೩ನೇ ತರಗತಿಗೇ ಟ್ಯೂಶನ್. ಎಸ್ಸೆಸ್ಸೆಲ್ಸಿ, ಪಿಯುಸಿ ಮಕ್ಕಳಿಗಂತೂ ಬೆಳಗ್ಗೆ ಟ್ಯೂಶನ್, ನಂತರ ಕ್ಲಾಸು. ಅದರ ನಂತರ ಮತ್ತೆ ಸಂಜೆ ಟ್ಯೂಶನ್, ರಜೆಯಲ್ಲಿ ಟ್ಯೂಶನ್. ಆ ಮಕ್ಕಳ ಮೇಲೆ ಅದೆಷ್ಟು ಒತ್ತಡ ಇರಬಹುದು? ಶೇ.೯೦, ೮೦ ಅಂಕ ಪಡೆಯುವ ಮಕ್ಕಳು ಒಳಗೊಳಿಂದೊಳಗೆ ಅದೆಷ್ಟು ಕುಸಿಯುತ್ತಿರಬಹುದು? ಕಲ್ಪನೆಗೂ ನಿಲುಕದ್ದು.

ಹೆಚ್ಚು ಅಂಕ ಪಡೆಯಲು ಮಕ್ಕಳ ಮೇಲೆ ಒತ್ತಡ ಹೇರುವ ಪಾಲಕರು ತಾರೆ ಜಮೀನ್ ಪರ್ ಸಿನಿಮಾ ನೋಡುವುದೊಳಿತು.

Tuesday, January 15, 2008

ಮನಸು ಮರೆಯದ ಮುನಾರ್

ಮೈ ಕೊರೆವ ಚಳಿ, ನೋಡಿದಲ್ಲೆಲ್ಲ ಹಚ್ಚ ಹಸಿರು. ಜತೆಯಲ್ಲಿ ಪ್ರೇಯಸಿಯ (ಹೆಂಡತಿಯದ್ದೂ ಆಗಬಹುದು) ಬೆಚ್ಚನೆಯ ಉಸಿರು. ಸ್ವರ್ಗಕ್ಕೆ ಕಿಚ್ಚು ಹಚ್ಚಲು ಇನ್ನೇನು ಬೇಕು?

ಒಂದಲ್ಲ ಎರಡಲ್ಲ 22 ಸಾವಿರ ಹೆಕ್ಟೇರ್ ಚಹಾ ತೋಟ! ಕಣ್ಣೋಟದುದ್ದಕ್ಕೂ ಸಮತಟ್ಟಾದ ಹಸಿರು! ಹದವಾಗಿ ಸುರಿಯುವ ಮಂಜು. ಅದರಿಂದುಂಟಾದ ಮಸುಕು ವಾತಾವರಣ. ಹತ್ತಿಯುಂಡೆಗಳಂತೆ ಕೈಗೆಟಕುವಷ್ಟು ದೂರದಲ್ಲಿ ಕಾಣುವ ಮೋಡಗಳು. ಸಿನಿಮಾಗಳಲ್ಲಿ ಹೊಗೆ ಹಾಕಿ ತೋರಿಸುವ ದೇವಲೋಕದ ಚಿತ್ರ ನೆನಪಾಗುತ್ತದೆ.
ಇದೆಲ್ಲ ಇಲ್ಲದೆ ಅದನ್ನು ದೇವರನಾಡು ಎಂದು ಕರೆಯುತ್ತಾರಾ?

ನಾನು ಕೇರಳದ ಮುನಾರ್ಗೆ ಹೋಗಿ ಬಂದು ಆಗಲೇ ಏಳು ತಿಂಗಳಾಯಿತು. ಮನಸಲ್ಲಿ ಮಾತ್ರ ಮುನಾರ್ ಸ್ವಲ್ಪವೂ ಮಸುಕಾಗಿಲ್ಲ. ಅಷ್ಟರಲ್ಲೇ ಮತ್ತೊಮ್ಮೆ ಮುನಾರ್‌ಗೆ ಹೋಗುವ ಆಸೆ ಮನಸಲ್ಲಿ. ಮುನಾರ್ ನಿಜಕ್ಕೂ ಕಣ್ಣು- ಮನಸ್ಸುಗಳಿಗೆ ಹಬ್ಬ! ನನ್ನ ಗೆಳೆಯ ಮಂಜು (ಮಿಸ್ಟ್ ಅಲ್ಲ) ಮುನಾರಿನ ಮಂಜಿನ ನಡುವೆ ತೆಗೆದ ಚಿತ್ರಗಳು ಆಗಾಗ ಮುನಾರ್ ನೆನಪನ್ನು ಹಸಿರಾಗಿಸಿ, ಮನಸನ್ನು ಹಸಿ ಮಾಡುತ್ತಲೇ ಇರುತ್ತವೆ.
ಮುನಾರ್ನಲ್ಲಿರುವ ರಾಜಮಲೈ ನಿಜಕ್ಕೂ ಭೂಲೋಕದ ಸ್ವರ್ಗ. ಅಪರೂಪದ ಮತ್ತು ವಿನಾಶದಂಚಿನಲ್ಲಿರುವ ನೀಲಗಿರಿ ಥಾರ್ ಹೆಸರಿನ ಆಡು ಜಾತಿಗೆ ಸೇರಿದ ಪ್ರಾಣಿಗಳು ಇಲ್ಲಿ ಮಾತ್ರ ಇವೆ. ಅತಿ ಎತ್ತರದ ಬೆಟ್ಟದ ಮೇಲಿರುವ ಈ ಸ್ಥಳಕ್ಕೆ ಅರಣ್ಯ ಇಲಾಖೆ ವಾಹನದಲ್ಲಿ ನಿಮ್ಮನ್ನು ಕರೆದುಕೊಂಡು ಹೋಗಿ ಬಿಡಲಾಗುತ್ತದೆ. ಅಲ್ಲಿ ಎಷ್ಟೊತ್ತು ಬೇಕಾದರೂ ನೀವು ಇರಬಹುದು. ಯಾರೂ ತಕರಾರು ಮಾಡುವುದಿಲ್ಲ.

ಈ ಸ್ಥಳದ ವಿಶೇಷತೆಯೆಂದರೆ ಪ್ರತಿ ೧೫ ನಿಮಿಷಕ್ಕೊಮ್ಮೆ ಇಲ್ಲಿ ವಾತಾವರಣ ಬದಲಾಗುತ್ತದೆ. ಅರೆಕ್ಷಣಕ್ಕೆ ಮಂಜು ಆವರಿಸಿಕೊಂಡು ಕೈ ಅಳತೆ ಅಂತರದಲ್ಲಿದ್ದವರು ಕಾಣದಂತಾಗುತ್ತದೆ. ಮಂಜೇ ಮಳೆಯಾಗಿ ಬದಲಾಗುತ್ತದೆ. ನಿಧಾನವಾಗಿ ಮಂಜು ಸರಿದು ತಿಳಿಯಾಗುತ್ತದೆ. ಮಂಜು ನಿಧಾನವಾಗಿ ಆಗಮಿಸಿ, ನಿಮ್ಮನ್ನಾವರಿಸಿ ಆಚೆ ಹೋಗುವುದನ್ನು ಇಲ್ಲಿ ಅನುಭವಿಸಬಹುದು.

ಇಲ್ಲಿ ಹೋದರೆ ಸಮಯ, ಮನೆ, ಕೆಲಸ, ಕೊನೆಗೆ ಪಕ್ಕದಲ್ಲಿರುವ ಹೆಂಡತಿ ಎಲ್ಲವೂ ಮರೆತೇ ಹೋಗುತ್ತದೆ. ಕೇರಳ ಸರಕಾರ ಅನುಮತಿ ಕೊಟ್ಟರೆ ಅಲ್ಲೇ ಸಣ್ಣದೊಂದು ಗುಡಿಸಲು ಕಟ್ಟಿಕೊಂಡು ಇದ್ದುಬಿಡೋಣ ಅನಿಸುವಷ್ಟು ಚೆಂದಗಿದೆ ಆ ಸ್ಥಳ.

ಹತ್ತಿರದಲ್ಲೇ ಒಂದೆರಡು ಡ್ಯಾಂಗಳಿವೆ. ಸಂಜೆಯಾದರೆ ಅದರ ಹಿನ್ನೀರು ಪ್ರದೇಶದಲ್ಲಿ ಆನೆಗಳು ನೀರಿಗೆಂದು ಬೆಟ್ಟ ಇಳಿದು ಬರುತ್ತವೆ. ಜತೆಗೇ ಮರಿಗಳೂ ಇದ್ದರೆ ಅದು ನಿಮಗೆ ಬೋನಸ್.

ಮುನಾರ್ ಬಹಳ ದೂರವೇನಿಲ್ಲ. ಮಂಗಳೂರಿನಿಂದ ೫೩೦ ಕಿ.ಮೀ. ಮಂಗಳೂರಿನಿಂದ ರೈಲಿನಲ್ಲಿಯೂ ಪ್ರಯಾಣಿಸಬಹುದು. (ಪೂರ್ತಿ ಮುನಾರ್‌ವರೆಗೆ ಅಲ್ಲ). ಆದರೆ ನಾವೇ ವಾಹನ ಮಾಡಿಸಿಕೊಂಡು ಹೋದರೆ ಅದರ ಮಜವೇ ಬೇರೆ. (ನಾವು ಸ್ಕಾರ್ಪಿಯೋ ತೆಗೆದುಕೊಂಡು ಹೋಗಿದ್ದೆವು.) ಕೇರಳ ನೋಡಿ ಕಲೀಬೇಕು ಕಣ್ರೀ ನಾವು ಕರ್ನಾಟಕದೋರು.

ಮುನಾರ್ ಎಂಬ ಊರನ್ನು ಆವರಿಸಿಕೊಂಡಿರುವ 22 ಸಾವಿರ ಹೆಕ್ಟೇರ್ ಚಹಾ ತೋಟ ಟಾಟಾದವರಿಗೆ ಸೇರಿದ್ದು. ಖಾಸಗಿಯವರಿಗೆ ಚಹಾ ತೋಟ ಮಾಡಲು ಕೊಟ್ಟೂ, ಅದನ್ನು ಪ್ರವಾಸಿ ತಾಣವಾಗಿ ಮಾಡುವಲ್ಲಿ ಮತ್ತು ಯಾವ ಪ್ರವಾಸಿಗರಿಗೂ ಅದೊಂದು ಖಾಸಗಿ ಚಹಾ ತೋಟ ಎಂಬ ಭಾವನೆ ಬರದ ರೀತಿಯಲ್ಲಿ ನಿಭಾಯಿಸಲಾಗಿದೆ. ಚಹಾ ತೋಟಗಳ ಮೇಲಿನ ಗುಡ್ಡದಲ್ಲಿ ರಾಜಮಲೈನಂತರ ಸುಂದರ ಸ್ಥಳವಿದೆ. ಅಲ್ಲಿ ನೀಲಗಿರಿ ಥಾರ್ ಎಂಬ ಅಪರೂಪದ ಪ್ರಾಣಿಗಳ ವಂಶವೃದ್ಧಿ ನಡೆದಿದೆ.
ನಮ್ಮ ರಾಜ್ಯದಲ್ಲೂ ಪ್ರವಾಸಿ ತಾಣಗಳಿವೆ. ಅವುಗಳನ್ನು ಜನರಿಗೆ ಸರಿಯಾಗಿ ಬಿಂಬಿಸಲು, ಸೌಲಭ್ಯ ಕಲ್ಪಿಸಲು ನಮ್ಮ ಸರಕಾರಕ್ಕೆ ಸಾಧ್ಯವಾಗಿಲ್ಲ. ನನ್ನ ಜಿಲ್ಲೆಯಾದ ಉತ್ತರ ಕನ್ನಡಕ್ಕೆ ಜಲಪಾತಗಳ ತವರೂರು ಎಂಬ ಹೆಸರಿದೆ. ಜೋಗ ಜಲಪಾತವನ್ನೂ ಮೀರಿಸುವಷ್ಟು ಸುಂದರವಾಗಿರುವ, ಹೆಚ್ಚು ನೀರಿರುವ ಜಲಪಾತಗಳು ಉತ್ತರ ಕನ್ನಡ ಜಿಲ್ಲೆಯಲ್ಲಿದೆ. ಆದರೆ ಅಲ್ಲಿಗೆ ಹೊರಟಿರೋ, ಒಂದು ರಸ್ತೆಗೂ ಸರಿಯಾದ ಬೋರ್ಡ್ ಇಲ್ಲ. ಹೊಸಬರು ನೇರವಾಗಿ ಜಲಪಾತದ ದಾರಿಗೆ ಹೋಗುವುದು ಸಾಧ್ಯವೇ ಇಲ್ಲ. ರಸ್ತೆಗಳ ಬಗ್ಗೆ ಮಾತಾಡದಿರುವುದೇ ಒಳ್ಳೆಯದು. ಯಾಣದಂತಹ ಪ್ರವಾಸಿ ತಾಣ ಪ್ರಸಿದ್ಧವಾಗಬೇಕಾದರೆ ನಮ್ಮೂರ ಮಂದಾರ ಹೂವೆ ಚಿತ್ರದಲ್ಲಿ ಅದನ್ನು ತೋರಿಸಬೇಕಾಯಿತು.
ಕೇರಳವನ್ನು ಸ್ವಲ್ಪ ಮಟ್ಟಿಗಾದರೂ ಅನುಸರಿಸಿದರೆ ಕರ್ನಾಟಕವೂ ದೇವರ ರಾಜ್ಯವಾದೀತು. ಏನಂತೀರಾ?

Thursday, January 03, 2008

ಮಾಂಸಾಹಾರಿ ಆಡು


ಆಡಿನ ಮಾಂಸ ಮನುಷ್ಯ ತಿನ್ನೋದು ಗೊತ್ತು. ಆಡು ಮಾಂಸ ತಿನ್ನೋದೇ?

ನಂಬಲಸಾಧ್ಯ. ಆದರೆ ನಂಬದೆ ಬೇರೆ ದಾರಿಯಿಲ್ಲ. ದೇವಸ್ಥಾನಗಳ ರಾಜ್ಯ ಎಂದೇ ಹೆಸರಾಗಿರುವ ಓರಿಸ್ಸಾದಲ್ಲಿ ಇಂತಹದ್ದೊಂದು ಆಡಿದೆ. ಅದು ಮಾಂಸವನ್ನೂ ತಿನ್ನುತ್ತದೆ ಸಾರಾಯಿ ಕುಡಿದು ಟೈಟೂ ಆಗುತ್ತದೆ. ಈ ವಿಶೇಷತೆಯೇ ಈ ಆಡಿನ ದೀರ್ಘಾಯಸ್ಸಿನ ಮೂಲ!

ಓರಿಸ್ಸಾದ ರಾಜಧಾನಿ ಭುವನೇಶ್ವರದಿಂದ ೩೫೦ ಕಿ.ಮೀ. ದೂರದಲ್ಲಿ ಹೆದ್ದಾರಿ ಬದಿಯಲ್ಲೇ ಇರುವ ಸನಾ ಬಡಾ ದಾಬಾದಲ್ಲಿದೆ ಈ ಆಡು. ಅದರ ಹೆಸರು ಮಂಟು. ಎರಡೂವರೆ ವರ್ಷದ ಈ ಮಂಟುವಿಗೆ ಬೇಯಿಸಿದ ಮಾಂಸ ತಿನ್ನುತ್ತದೆ. ದಾಬಾದಲ್ಲಿ ಆಡು ಕಡಿದು ಬೇಯಿಸಿ ಮಾಡುವ ಮಾಂಸವನ್ನೇ ಈ ಆಡು ತಿನ್ನುತ್ತದೆ. ಇದು ಮಾತು ಕೂಡ ಕೇಳುತ್ತದೆ. ಟೈಟಾದಾಗ ಕೂಡ! ಸತ್ತಂತೆ ಮಲಗಲು, ಹೊಡೆದಾಟದ ಪೋಸು ನೀಡಲು ಹೇಳಿದರೆ ಅರೆ ಕ್ಷಣದಲ್ಲಿ ಮಾಡಿ ತೋರಿಸುತ್ತದೆ ಈ ಆಡು.

ದಾಬಾದ ಮಾಲಿಕ ಸನಾ ನಾಯಕ್ ದಾಬಾದಲ್ಲಿ ಅಡುಗೆಗೆಂದೇ ಆಡು ಸಾಕುತ್ತಾರೆ. ಆದರೆ ಈ ವಿಶೇಷತೆ ಇರುವುದರಿಂದ ಮಂಟುವನ್ನು ಕಡಿದು ಅಡುಗೆ ಮಾಡಿಲ್ಲ. ಈ ಆಡಿನ ಆಕರ್ಷಣೆಗೆ ಜನ ಬರುತ್ತಾರೆ. ಜನ ಆಡಿನೊಂದಿಗೆ ಆಹಾರ ಹಂಚಿಕೊಳ್ಳುತ್ತಾರೆ ಎನ್ನುತ್ತಾನೆ ಮಾಲಿಕ.ಇಷ್ಟೇ ಅಲ್ಲ, ಗ್ರಾಕರ ಆಕರ್ಷಣೆಯ ಕೇಂದ್ರವಾಗಿರುವ ಈ ಆಡಿನ ಮದುವೆಯನ್ನು ಧಾಂ ಧೂಂ ಜೋರಾಗಿ ನಡೆಸಲು ಮಾಲಿಕ ಸಿದ್ಧತೆ ನಡೆಸಿದ್ದಾನೆ. ಸಚಿವರು, ಶಾಸಕರನ್ನೂ ಕರೆಸುವ ಯೋಚನೆ ಮಾಡಿದ್ದಾನೆ. ಅನುರೂಪವಾದ ಹೆಣ್ಣು (ಆಡು) ಸಿಗಬೇಕಷ್ಟೆ!