ನಾಯಿಗೆ ಇನ್ನೊಂದು ಹೆಸರೇ ಕಾವಲು ನಾಯಿ. ನಂಬಿಕೆಯನ್ನೂ ಕೆಲವೊಮ್ಮೆ ನಾಯಿಗೆ ಹೋಲಿಸೋದಿದೆ. ಮನೆ ಮತ್ತು ಮಂದಿಯನ್ನು ಕಾಯೋದೇ ಅದರ ಡ್ಯೂಟಿ. ಮನೆಗೆ ಕಳ್ಳ ಬಂದರೆ ಕೂಗಲಿ ಅಂತ ನಾಯಿ ಸಾಕುವವರೇ ಹೆಚ್ಚು. ಕೆಲವರ ಮನೆಯ ನಾಯಿಯ ಸೈಜು ನೋಡಿದರೆ ಕಳ್ಳ ಕೂಗಿಕೊಳ್ಳುವ ಸಾಧ್ಯತೆಗಳೂ ಹೆಚ್ಚಿವೆ!
ಎಷ್ಟೋ ಬಾರಿ ಕಳ್ಳತನಗಳು ನಡೆಯುವಾಗ ಕಳ್ಳನ ಪತ್ತೆಗೆ ಪೊಲೀಸರು ನಾಯಿ ಕರೆಸುತ್ತಾರೆ. ಮನುಷ್ಯರಿಗಿಂತ ನಾಯಿಯ ಸುಳಿವಿನ ಬಗ್ಗೆ ಹೆಚ್ಚು ನಂಬಿಕೆ. ಕೆಲವು ಸಾರಿ ಕಳ್ಳತನ ಆಗದಿರಲು ನಾಯಿ ಸಾಕಿ ಎಂದು ಪೊಲೀಸರೇ ಸಲಹೆ ನೀಡೋದೂ ಇದೆ. ಅಶ್ಟಕ್ಕೆ ಸುಮ್ಮನಾಗದೆ ಪೊಲೀಸರೇ ನಾಯಿ ಮರಿ ಕೂಡ ತಂದುಕೊಟ್ಟ ಉದಾಹರಣೆಗಳಿವೆ.
ಆದರೆ ನಾಯಿಯೇ ಕಳುವಾದರೆ?
ಹೌದು. ಮಂಗಳೂರಿನಲ್ಲೊಂದು ಇಂತಹ ಪ್ರಕರಣ ನಡೆದಿದೆ. ಬರೀ ಕಳವಾಗಿದ್ದರೆ ನನಗೆ ಗೊತ್ತಾಗುತ್ತಿರಲಿಲ್ಲವೇನೊ. ಕಳವಾದ ನಾಯಿ ಹುಡುಕುವ ಕಾರ್ಯ ಪೊಲೀಸರ ಪಾಲಿಗೆ ಬಂದಿತ್ತು. ಅವರ ಮೂಲಕ ನನ್ನ ಕಿವಿಗೂ ಬಿತ್ತು.
ತಮ್ಮ ಮನೆಯಲ್ಲಿದ್ದ ಏಳೂವರೆ ವರ್ಷದ ಬಾಕ್ಸರ್ ನಾಯಿ ೨೦೦೫ರ ಆ.೧೭ರಂದು ಕಳವಾಗಿತ್ತು. ಅದನ್ನು ಹುಡುಕಿಕೊಡುವಂತೆ ಮಂಗಳೂರಿನ ಬಲ್ಮಠ ನಿವಾಸಿ ಪ್ಯಾಟ್ರಿಕ್ ಸಲ್ಡಾನಾ ಅವರು ಕದ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ನಾಯಿ ೨೦೦೨ರ ನಾಯಿ ಸ್ಪರ್ಧೆಯಲ್ಲಿ ಉತ್ತಮ ಥಳಿಯ ನಾಯಿ ಪ್ರಶಸ್ತಿ ಪಡೆದಿತ್ತು. ಬಾಕ್ಸರ್ ಥಳಿಯಲ್ಲಿ ಮಂಗಳೂರಿನಲ್ಲಿದ್ದ ಏಕೈಕ ಗಂಡು ನಾಯಿ ಎಂಬ ಹೆಗ್ಗಳಿಕೆಯೂ ಇದಕ್ಕಿತ್ತು! ಎಂದೂ ಅವರು ದೂರಿನಲ್ಲಿ ತಿಳಿಸಿದ್ದರು.
ಈ ದೂರು ದಾಖಲಾದ ನಂತರ ಕದ್ರಿ ಪೊಲೀಸರು ಕಂಡ ಕಂಡ ನಾಯಿಯನ್ನೆಲ್ಲ ಪರೀಕ್ಷಿಸಿ ನೋಡುತ್ತಿದ್ದಾರೆ. ಕೆಲವು ಬಾರಿ ಬಾಲ ಎತ್ತಿ!? ಎರಡು ವರ್ಷ ಕಳೆದರೂ ನಾಯಿ ಪತ್ತೆಯಾಗಿಲ್ಲ. ಪೊಲೀಸ್ ಇಲಾಖೆಯಲ್ಲಿ ಅಪರಾಧ ಪತ್ತೆ ದಳ, ರೌಡಿ ನಿಗ್ರಹ ದಳ, ಬಾಂಬ್ ಪತ್ತೆ ದಳ ಹೀಗೆ ಬೇರೆ ಬೇರೆ ದಳಗಳಿವೆ. ಶ್ವಾನ ದಳವೂ ಇದೆ. ಆದರೆ ಶ್ವಾನ ಪತ್ತೆ ದಳ ಎಂಬುದು ಇನ್ನೂ ರಚನೆಯಾಗಿಲ್ಲ. ಕದ್ರಿ ಪೊಲೀಸರಿಗೆ ಬೇಕಾದಷ್ಟು ಕೆಲಸಗಳಿವೆ. ಅದರಿಂದಾಗಿ ನಾಯಿಯ ವಾಸನೆ ಹಿಡಿದು ಹೊಗಲು ಸಾಧ್ಯವಾಗಿಲ್ಲ. ನಾಯಿ ಪತ್ತೆ ದಳ ಎಂಬುದೊಂದು ಇದ್ದರೆ ಅದಕ್ಕೆ ಈ ಪ್ರಕರಣ ವಹಿಸಿಕೊಟ್ಟು ಸುಮ್ಮನಾಗಬಹುದಿತ್ತು. ನಾಯಿ ಪತ್ತೆ ದಳ ಇಲ್ಲದ ಕಾರಣ ಕಳವಾದ ನಾಯಿ ಪತ್ತೆ ಅಸಾಧ್ಯವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆದರೂ ಶ್ವಾನ ದಳದ (ಅಂದರೆ ಹೆಣ್ಣು ನಾಯಿಯ) ಸಹಾಯ ಬಳಸಿಕೊಂಡು ಕಳವಾಗಿರುವ ಅಥವಾ ನಾಪತ್ತೆಯಾಗಿರುವ ಮಂಗಳೂರಿನ ಏಕೈಕ ಗಂಡು ಬಾಕ್ಸರ್ ನಾಯಿಯನ್ನು ಹುಡುಕಲು ಪೊಲೀಸರು ತಂತ್ರ ರೂಪಿಸುವ ಸಾಧ್ಯತೆಗಳಿವೆ. ಈ ಬಗ್ಗೆ ಪೊಲೀಸರು ಕಾನೂನು ಸಲಹೆ ಕೇಳಲು ತೀರ್ಮಾನಿಸಿದ್ದಾರಂತೆ!
ಅದೇನೇ ಇರಲಿ ಕಳವಾದ ಬಾಕ್ಸರ್ ನಾಯಿ ಯಾವುದಾದರೂ ಹೆಣ್ಣು ನಾಯಿಯ ಜತೆಗೆ ಬಂದು ನಿಮ್ಮ ಮನೆ ಹಿತ್ತಲಲ್ಲೇನಾದರೂ ಮಲಗಿದ್ದರೆ, ಅಥವಾ ನೀವೇ ಅದನ್ನು ಇಟ್ಟುಕೊಂಡಿದ್ದರೆ ಅದನ್ನು ಪೊಲೀಸರಿಗೆ ಕೊಟ್ಟುಬಿಡಿ.
ಇಷ್ಟಕ್ಕೂ ಇದು ಸತ್ಯಕತೆ. ನಂಬಿ ಪ್ಲೀಸ್!!
7 comments:
ಕಳೆದುಹೋದ ಮನುಷ್ಯರೇ ಸಿಗುವುದಿಲ್ಲ, ಇನ್ನು ನಾಯಿ ಹೇಗೆ ಸಿಕ್ಕೀತು?
ನಿಮ್ಮ ನಾಯಿಯ ಗುರುತನ್ನಾದ್ರೂ ಹೇಳಿದ್ರೆ ಹುಡುಕಬಹುದಿತ್ತು.... :P
naayi kathe nambade irutteveye?! aa naayi vaasane hidiyalu innondu naayi bidabahuditteno?!
nayi bagge kuda swarasyakaravagi bareda viayaka bhattarige dhanyavadagalu.
Ganesh
ದೂರು ಕೊಟ್ಟವನನ್ನೊಮ್ಮೆ ಭೇಟಿ ಮಾಡಬೇಕೆಂದೆನಿಸಿದೆ!!
ಪ್ರತಿಕ್ರಿಸಿದವರಿಗೆ, ಓದಿದವರಿಗೆ, ನಾನು ಹೊಸದೇನು ಬರೆಯದಿದ್ದರೂ ಬಂದು ಇಣುಕಿ ಹೋಗುತ್ತಿದ್ದವರಿಗೆ ಬ್ಲಾಗು ಮಾಲಿಕನ ಧನ್ಯವಾದಗಳು
nayi kate nivu helidri adare odida mele kushi ayitu sir
Post a Comment