Thursday, March 26, 2009

ಫಿರಾಕ್: ಹೇಳೋ ಹಾಗಿಲ್ಲ ಬಹುಪರಾಕ್


ಅದೊಂದು ಸಿನಿಮಾ ಅಂತ ಅನ್ನಿಸಲೇ ಇಲ್ಲ. ಸಾಕ್ಷ್ಯಚಿತ್ರದಂತಿತ್ತು.
ಫಿರಾಕ್ ಸಿನಿಮಾ ನೋಡಬೇಕು ಅಂತ ಯಾಕೋ ಅನ್ನಿಸಿತ್ತು. ಸಾಮಾನ್ಯವಾಗಿ ಬಿಡುಗಡೆಯ ಮೊದಲ ದಿನ ಚಿತ್ರಮಂದಿರದತ್ತ ಸುಳಿಯದ ನಾನು ‘ಫಿರಾಕ್’ ಬಿಡುಗಡೆಯಾದ ಮೊದಲ ದಿನವೇ ನೋಡಿಬಿಟ್ಟೆ!
ಸತ್ಯವಾಗಿ ಹೇಳ್ತೀನಿ ಬೋರ್ ಬರಲಿಲ್ಲ. ಜೋರ್ ಇಷ್ಟವಾಗಲೂ ಇಲ್ಲ. ಗುಜರಾತ್ ನ ಮಲ್ಟಿಫ್ಲೆಕ್ಸ್ ಗಳು ಈ ಚಿತ್ರ ತೋರಿಸಲು ನಿರಾಕರಿಸಿವೆ ಎಂಬ ಸುದ್ದಿಯಿಂದ ಈ ಸನಿಮಾದಲ್ಲಿ ‘ಎಂಥದೋ’ ಇದೆ ಅಂದುಕೊಂಡೆ. ಅದರಲ್ಲೂ ಗುಜರಾತ್‌ನ ಗೋದ್ರಾ ಗಲಭೆ ನಂತರದ ಸಂಗತಿಯ ಸಿನಿಮಾ ಅಂದಾಗ ಸಹಜವಾಗಿ ಕುತೂಹಲ ಮೂಡಿತ್ತು. ಆ ಕುತೂಹಲ ತಣಿಯಿತು. ಗುಜರಾತ್ ನ ಮಲ್ಟಿಫ್ಲೆಕ್ಸ್ ಗಳು ಈ ಚಿತ್ರ ತೋರಿಸಲು ಯಾಕೆ ನಿರಾಕರಿಸಿವೆ ಎಂಬುದೂ ತಿಳಿಯಿತು. ಈ ಸಿನಿಮಾ ಮಲ್ಟಿಫ್ಲೆಕ್ಸ್ ಗಳಲ್ಲಿ ತೋರಿಸುವ ಗುಣಮಟ್ಟ ಹೊಂದಿಲ್ಲ.
ಸ್ವಲ್ಪ ಮಟ್ಟಿಗೆ ಗಲಭೆ ನಂತರದ ಪರಿಸ್ಥಿತಿಯನ್ನು ಬಿಂಬಿಸಲು ನಿರ್ದೇಶಕಿ ನಂದಿತಾ ದಾಸ್ ಸಫಲರಾಗಿದ್ದಾರೆ. ಆದರೆ ಆಕೆಯ ಮೊದಲ ಚಿತ್ರವಾದ್ದರಿಂದ ಅವರಿನ್ನೂ ಸಾಕ್ಷ್ಯ ಚಿತ್ರದ ಗುಂಗಿನಿಂದ ಹೊರಬಂದಿಲ್ಲ ಎಂಬುದು ಕಾಣುತ್ತಿತ್ತು.
ಚಿತ್ರದ ಆರಂಭದಲ್ಲಿ ಟಿಪ್ಪರ್ ಲಾರಿಯೊಂದರಲ್ಲಿ ಹೆಣಗಳನ್ನು ತಂದು ಕಲ್ಲು ಸುರಿದಂತೆ ಸುರಿವ ದೃಶ್ಯ ನಿಮ್ಮನ್ನು ಕಲಕಿ ಹಾಕಿಬಿಡುತ್ತದೆ. ನಿಮ್ಮ ಮನಸ್ಸಿನಲ್ಲಿ ಅಚ್ಚೊತ್ತಿ ಕುಳಿತುಬಿಡುತ್ತದೆ. ಆದರೆ ಹೀಗೇ ಇಡೀ ಸಿನಿಮಾ ಮನಸಿನಲ್ಲಿ ಅಚ್ಚೊತ್ತುವಂತೆ ಮಾಡುವಲ್ಲಿ ನಂದಿತಾ ವಿಫಲರಾಗಿದ್ದಾರೆ.
ಹಿಂದು-ಮುಸ್ಲಿಮರ ಗೆಳೆತನ. ಒಳ್ಳೆಯ ಹಿಂದು-ಮುಸ್ಲಿಂ, ಕೆಟ್ಟ ಹಿಂದು-ಮುಸ್ಲಿಂ ಇಬ್ಬರನ್ನೂ ತೋರಿಸಿದ್ದಾಳೆ ನಂದಿತಾ. ಆದರೆ ಪೊಲೀಸರನ್ನು ಮಾತ್ರ ಕೆಟ್ಟದಾಗಿ ಚಿತ್ರಿಸಿದ್ದಾಳೆ. ಎಲ್ಲೋ ಒಂದಿಬ್ಬರು ಪೊಲೀಸರು ಗುಜರಾತ್ ಗಲಭೆ ಸಂದರ್ಭ ಕೆಟ್ಟದಾಗಿ ನಡೆದುಕೊಂಡಿರಬಹುದು. ಆದರೆ ಎಲ್ಲ ಪೊಲೀಸರು ಹಾಗಲ್ಲ ಎಂಬುದನ್ನು ತೋರಿಸಲು ನಂದಿತಾ ಮರೆತಿದ್ದಾಳೆ. ಗಲಭೆಯ ಒಂದು ತಿಂಗಳ ನಂತರದ ಕತೆ ಅನ್ನುತ್ತಾಳೆ. ಹಾಗೆಯೇ ಪೊಲೀಸ್ ಒಬ್ಬನ ಬಾಯಲ್ಲಿ ಮುಸ್ಲಿಮನೊಬ್ಬನಿಗೆ ‘ಹೋಗು ಹೋಗು ಪಾಕಿಸ್ತಾನಕ್ಕೇ ಹೋಗು. ಇಲ್ಯಾಕೆ ಇದೀಯಾ’ ಎಂದು ಹೇಳಿಸುತ್ತಾರೆ ನಂದಿತಾ.
ಹೀಗಾಗಿ ಪಾಕಿಸ್ತಾನದಲ್ಲಿ ನಡೆದ ಚಲನಚಿತ್ರೋತ್ಸವದಲ್ಲಿ ಪ್ರಥಮ ಬಹುಮಾನ ಬಂದುದರಲ್ಲಿ ಆಶ್ಚರ್ಯವಿಲ್ಲ!
ನೀವೇ ಹೇಳಿ ಯಾವ ಪೊಲೀಸ್ ಹೀಗೆ ಹೇಳಲು ಸಾದ್ಯ?
ಅಕಸ್ಮಾತ್ ಒಬ್ಬ ಹೇಳಿದ್ದರೂ, ಅದನ್ನು ಎಲ್ಲ ಪೊಲೀಸರಿಗೆ ಅನ್ವಯಿಸುವ ಅಗತ್ಯವಿರಲಿಲ್ಲ. ಇಡೀ ಚಿತ್ರದುದ್ದಕ್ಕೂ ಪೊಲೀಸರನ್ನು ಕೆಟ್ಟದಾಗಿಯೇ ಚಿತ್ರಿಸಿರುವ ನಂದಿತಾ, ಪೊಲೀಸರ ಮೇಲೆ ಸಮಾಜಕ್ಕೆ ನಂಬಿಕೆ ಹೋಗುವಂತೆ ಮಾಡುವುದು ಎಷ್ಟು ಅಪಾಯಕಾರಿ ಎಂಬುದನ್ನು ಮರೆತಂತೆ ಕಾಣುತ್ತಾರೆ.
ಆದರೂ ಎಂದಿನಂತೆ ನಾಸಿರುದ್ದೀನ್ ಷಾ ನಟನೆ ಇಷ್ಟವಾಯಿತು. ವಯಸ್ಸಾದ ಉಸ್ತಾದನ ವೇಷದಲ್ಲಿ ಅವರ ಬಾಡಿ ಲಾಂಗ್ವೇಜ್ ನೋಡಲಾದರೂ ಸಿನಿಮಾ ನೋಡಬಹುದು. ಉಳಿದಂತೆ ಗಲಭೆ ನಂತರ ತಂದೆ-ತಾಯಿ ಕೊಲೆಯಾದದ್ದನ್ನು ಕಣ್ಣಾರೆ ಕಂಡ ಮುಸ್ಲಿಂ ಬಾಲಕನೊಬ್ಬನ ತಳಮಳಗಳು ಚೆನ್ನಾಗಿ ಮೂಡಿಬಂದಿವೆ. ಆತನನ್ನು ಮೋಹನನನ್ನಾಗಿ ಮಾಡಿ ಮನೆಯಲ್ಲಿಟ್ಟುಕೊಳ್ಳಲು ಯತ್ನಿಸುವ ಹಿಂದು ತಾಯಿಯೊಬ್ಬಳ ತವಕ, ಅವಳ ತುಡಿತ, ಗಾಬರಿ ಚೆನ್ನಾಗಿ ಮೂಡಿಬಂದಿದೆ. ಗಲಭೆ ನಂತರದ ಕೆಲವು ದೃಶ್ಯಗಳು ಕೂಡ ಮನಕಲಕುವಂತಿದೆ.
ಆದರೂ ಸಿನಿಮಾದುದ್ದಕ್ಕೂ ಬೆರಳು ಹಾಕಿಕೊಂಡರೂ ಕಣ್ಣಿಂದ ನೀರು ಬರುವುದಿಲ್ಲ!ಮಾರ್ಚ್ ೧೮ರಂದು ಹೊಸದಿಲ್ಲಿಯಲ್ಲಿ ‘ಫಿರಾಕ್’ ಚಿತ್ರ ಪ್ರದರ್ಶನವಿತ್ತು. ಅದರಲ್ಲಿ ಅವಳ ತಂದೆ ಪ್ರಸಿದ್ಧ ಕಲಾವಿದ ಜತಿನ್ ದಾಸ್ ಕಣ್ಣೀರ್ ಗರೆದರು ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಅದೇನು ಮಗಳು ಇಂತಹ ಸಿನಿಮಾ ಮಾಡಿದ್ದಾಳೆ ಅಂತ ಅತ್ತರೋ? ಜನ ನೋಡಲಿಕ್ಕಿಲ್ಲ ಅಂತ ಅನಿಸಿ ಅತ್ತರೋ? ಇಲ್ಲ ದೃಶ್ಯ ನೋಡಿ ಅತ್ತರೋ? ಎಂಬುದು ಸ್ಪಷ್ಟವಾಗಿಲ್ಲ. ಸಿನಿಮಾ ಮುಸ್ಲಿಂ ಪರ ಎಂಬ ಆರೋಪಕ್ಕೆ ಉತ್ತರಿಸಿರುವ ನಂದಿತಾ ‘ಗಲಭೆ ನಂತರ ಮುಸ್ಲಿಮರ ಕಷ್ಟಗಳನ್ನು ಚಿತ್ರಿಸಿದ್ದೇನೆ’ ಎಂದಿದ್ದಾರೆ. ಗಲಭೆ ಅಂದ ಮೇಲೆ ಎರಡೂ ಕಡೆಯವರಿಗೆ ಹಾನಿಯಾಗಿರುತ್ತದೆ. ದೇಶದ ಯಾವುದೇ ಕೋಮುಗಲಭೆ ತೆಗೆದು ನೋಡಿ ಅದರಲ್ಲಿ ಒಂದೇ ಕೋಮಿನ ಜನ ಸತ್ತಿರುವುದಿಲ್ಲ ಅಥವಾ ಒಂದೇ ಕೋಮಿನ ಜನರಿಗೆ ಹಾನಿಯಾಗಿರುವುದಿಲ್ಲ. ಲೆಕ್ಕಾಚಾರ ಯಾವಾಗಲೂ ಸಮನಾಗಿಯೇ ಇರುತ್ತದೆ.
ಆರೋಪಗಳೇನೆ ಇರಲಿ. ಸಿನಿಮಾ ನೋಡಿದರೆ ನಿಮಗದು ಸಂಪೂರ್ಣ ಮುಸ್ಲಿಂ ಪರ ಅನಿಸುವುದಿಲ್ಲ. ಸಂಗತಿಗಳನ್ನು ‘ಬ್ಯಾಲೆನ್ಸ್’ ಮಾಡಲು ನಂದಿತಾ ಯತ್ನಿಸಿದ್ದಾರೆ. ಆದರೆ ಯಾವುದನ್ನೂ ಸರಿಯಾಗಿ ಹೇಳಿಲ್ಲ. ಅಂತಿಮವಾಗಿ ಪೊಲೀಸರನ್ನು ಕೆಟ್ಟದಾಗಿ ಚಿತ್ರಿಸಿದ್ದಾರೆ. ನಾಸಿರುದ್ದೀನ್ ಷಾ, ಪರೇಶ್ ರಾವಲ್ ಅವರಂತಹ ನಟರನ್ನು ಸರಿಯಾಗಿ ಬಳಸಿಕೊಳ್ಳಲೂ ನಿರ್ದೇಶಕಿಯಾಗಿ ನಂದಿತಾ ವಿಫಲರಾಗಿದ್ದಾರೆ.
ಈ ಸಿನಿಮಾಕ್ಕೆ ಕ್ಷಮಿಸಿ ಸಾಕ್ಷ್ಯಚಿತ್ರಕ್ಕೆ ೫ ಚಲನಚಿತ್ರೋತ್ಸವ ಪ್ರಶಸ್ತಿಗಳು ಬಂದಿವೆ. ಪ್ರಶಸ್ತಿ ಬಂದ ಸಿನಿಮಾಗಳನ್ನು ನೋಡುವ ಗೀಳಿನವರಾಗಿದ್ದರೆ ಆ ಕಾರಣಕ್ಕಾದರೂ ನೀವು ಇದನ್ನು ನೋಡಬಹುದು. ಇಲ್ಲವಾದಲ್ಲಿ ನೀವು ತುಂಬ ಬುದ್ದಿವಂತರು ಅಂತ ನೀವಂದುಕೊಂಡಿದ್ದರೆ ತಪ್ಪದೆ ನೋಡಿ. ಯಾಕೆಂದರೆ ಬಹುತೇಕ ದೃಶ್ಯಗಳು, ಡೈಲಾಗ್‌ಗಳ ಅರ್ಥ ಸೂಚ್ಯವಾಗಿದೆ. ಆದ್ದರಿಂದ ಸಾಮಾನ್ಯ ನೋಡುಗ ಅರ್ಥ ಮಾಡಿಕೊಳ್ಳುವುದು ಕಷ್ಟ. ಸಿನಿಮಾ ಮುಗಿದಾಗ ನನ್ನ ಅಕ್ಕಪಕ್ಕದಲ್ಲಿದ್ದವರೆಲ್ಲಾ ‘ಮುಗಿದೇ ಹೋಯಿತಾ’ ಎಂಬರ್ಥದ ಮುಖಮುದ್ರೆ ಹೊತ್ತು ‘ಅರ್ಥವೇ ಆಗಲಿಲ್ಲ’ ಎಂಬಂತೆ ಕೈ ತಿರುಗಿಸದ್ದೇ ಇದಕ್ಕೆ ಸಾಕ್ಷಿ.
ಅವರಿಗಿಂತ ನಾನೇ ಬುದ್ದಿವಂತ ಅಂತ ಸಾಮಾದಾನ ಮಾಡಿಕೊಂಡು ಹೊರಬಂದೆ.
ನನ್ನ ಬುದ್ದಿಗೆ ದಕ್ಕಿದಷ್ಟನ್ನು ಬರೆದಿದ್ದೇನೆ. ನಾನು ಬುದ್ದಿವಂತನಲ್ಲ. ತುಂಬ ವಿಚಾರವಾದಿಗಳ, ಸಾಹಿತ್ಯಿಕ, ಸೂಚ್ಯಾರ್ಥವುಳ್ಳ ಸಿನಿಮಾಗಳು ನನಗಿಷ್ಟವಾಗುವುದಿಲ್ಲ. ಸಿನಿಮಾಗಳನ್ನು ಶುದ್ಧ ಮನೋರಂಜನೆ ದೃಷ್ಟಿಯಿಂದ ನೋಡುವ ನಾನು ಜಗ್ಗೇಶ್ ರ ಹಳೆ ಸಿನಿಮಾಗಳನ್ನು ಇಷ್ಟಪಟ್ಟವ. ಅದಿಲ್ಲವಾದರೆ ಪೊಲೀಸ್ ಕತೆಗಳು ನಂಗಿಷ್ಟ. ಈಗೀಗ ನನ್ನ ಬುದ್ದಿ ಬೆಳೆಯುತ್ತಿರುವ ಅಥವಾ ಕೆಡುತ್ತಿರುವ ಲಕ್ಷಣವೋ ಏನೊ ‘ಫೀರಾಕ್’ನಂತಹ ಸಿನಿಮಾಗಳನ್ನು ನೋಡಲಾರಂಭಿಸಿದ್ದೇನೆ. ಸರಿಯಾಗಿ ಅರ್ಥವಾಗಲಿಲ್ಲ ಅನ್ನೋದು ಬೇರೆ ಮಾತು. ಹೀಗಾಗಿ ನೀವು ನೋಡಿ. ಬುದ್ದಿವಂತರಾಗಿದ್ದರೆ ನಿಮಗೆ ಖಂಡಿತಾ ಅರ್ಥವಾದೀತು.
ಒಂದು ಸಾಲು ವಿಮರ್ಶೆ: ಫಿರಾಕ್ ಸಿನಿಮಾ ನೋಡಲು ದುಡ್ಡು ಖರ್ಚು ಮಾಡಿದರೆ ಮಾತ್ರ ಸಾಲದು, ಬುದ್ದಿಯನ್ನೂ ಖರ್ಚು ಮಾಡಬೇಕು!

Friday, March 20, 2009

ಅದು ಓದಿ ಬರೆದದ್ದು ಇದು!


ಧಾರಾವಾಡದ ಕಾಲೇಜೊಂದರಲ್ಲಿ ಒಂದು ದಿನ ಶಿವರಾಮ ಕಾರಂತರ ಉಪನ್ಯಾಸ ಕಾರ್ಯಕ್ರಮ ಇತ್ತಂತೆ. ಶಿವರಾಮ ಕಾರಂತ ಮಾತನಾಡುತ್ತಿದ್ದಾಗ ಒಬ್ಬಾಕೆ ವಿದ್ಯಾರ್ಥಿನಿ ಕೀಟಲೆ ಮಾಡುತ್ತಲೋ, ಅಕ್ಕಪಕ್ಕದವರಲ್ಲಿ ಮಾತನಾಡುತ್ತಲೋ ಇದ್ದಳಂತೆ. ಕೊನೆಗೆ ಕಾರ್ಯಕ್ರಮ ಮುಗಿದ ಬಳಿಕ ಆಕೆ ಕಾರಂತರಲ್ಲಿ ಅಟೋಗ್ರಾಫ್ ಕೊಡಿ ಪ್ಲೀಸ್ ಎಂದು ಕೇಳಿದಾಗ ಕಾರ್ಯಕ್ರಮದುದಕ್ಕೂ ಆಕೆಯ ಚಟುವಟಿಕೆಯನ್ನು ಗಮನಿಸಿದ್ದ ಕಾರಂತರು ಬರೆದದ್ದು;

'ನನ್ನ ಕೈಬರೆಹದಿಂದ ನಿನ್ನ ಹಣೆ ಬರೆಹವನ್ನು ತಿದ್ದಲಾಗದು!'


ಇಂಥಹದೊಂದು ಬರಹವನ್ನು ಗೆಳೆಯ ಮಿಥುನ್ ಬ್ಲಾಗಿಸಿದ್ದ. ಅದನ್ನು ಓದುತ್ತಿದ್ದಂತೆ ಬಹಳ ದಿನಗಳಿಂದ ಸುಮ್ಮನಿದ್ದ ನನ್ನ ಕೀಟಲೆ ಮನಸ್ಸು ಜಾಗೃತವಾಯಿತು. ಆಗ ಹೀಗೆ ಅನಿಸಿತು.....

* ಹಣೆ ಬರಹದಿಂದಲೂ ಕೆಲವರ ಕೈ ಬರಹ ತಿದ್ದಲು ಸಾದ್ಯವಿಲ್ಲ!


* ಕೈ ಬರಹ ಚೆನ್ನಾಗಿದ್ದವರ ಹಣೆ ಬರಹವೂ ಚೆನ್ನಾಗಿರುತ್ತದೆ ಎನ್ನಲಾಗುವುದಿಲ್ಲ!


* ಹಣೆ ಬರಹ ಬರೆದವನ ಕೈ ಬರಹ ಕೆಟ್ಟದಾಗಿದ್ದರೆ ಹಣೆ ಬರಹವೂ ಕೆಟ್ಟದಾಗಿರುತ್ತದೆ!


* ಅಕ್ಷರಸ್ಥ ಕೂಡ ಹಣೆಬರಹ ಓದಲಾರ!


* ಹಣೆ ಬರಹ ಓದಬಲ್ಲವನೇ ನಿಜವಾದ ಅಕ್ಷರಸ್ಥ!

* ಹಾಗಾದರೆ ಜಗತ್ತಿನ ತುಂಬ ಅನಕ್ಷರಸ್ಥರೆ!

* ಹಣೆಬರಹ ಬರೆಯಲು ದೇವರು ಅದೆಷ್ಟು ಮೊದಲೇ ಪರ್ಮನೆಂಟ್ ಮಾರ್ಕರ್ ಪೆನ್ನು ಕಂಡುಹಿಡಿದಿದ್ದ!

* ಹಣೆಬರಹ ಕೆಟ್ಟದಾಗಿದ್ದರೂ ಕೈ ಬರಹ ಕೆಟ್ಟದಾಗಿರಬೇಕಿಲ್ಲ!

* ಹಣೆಬರಹ ಬರೆಯುವುದೇ ನಿನ್ನ ಹಣೆಬರಹ ಅಂತ ಆತನ ಹಣೆಮೇಲೆ ಬರೆದವರಾರು!

Thursday, March 19, 2009

ನಗ್ಮ ದರ್ಶನ!



ಫೇಮಸ್ ಚಿತ್ರನಟಿಯೊಬ್ಬರು ದಿಢೀರನೆ ಸಿಕ್ಕರೆ ನೀವೇನು ಮಾಡುತ್ತೀರಿ? ಹೋಗಿ ಕೈ ಕುಲುಕುತ್ತೀರಿ. ಫೋಟೋ ತೆಗೆಸಿಕೊಳ್ಳಲು ಅತ್ತಿತ್ತ ಫೋಟೋಗ್ರಫರ್‌ಗಾಗಿ ಹುಡುಕುತ್ತೀರಿ. ಅವರ ಆಟೋಗ್ರಾಫ್ ತೆಗೆದುಕೊಳ್ಳುತ್ತೀರಿ. ಚಿತ್ರನಟಿಯರ ಕಂಡಾಗೆಲ್ಲ ಮುತ್ತಿಕೊಳ್ಳುವ ಜನರನ್ನು, ಅವಳ ಒಂದು ಟಚ್ ಗಾಗಿ, ಒಂದು ಸಹಿಗಾಗಿ ಅದೆಷ್ಟು ಕಷ್ಟಪಡುತ್ತಾರೆ ನೀವೇ ನೋಡಿದ್ದೀರಲ್ಲ.

ಅಂತಹ ನಟಿಯೊಬ್ಬಳು ನಮ್ಮ ಮಲ್ಲಿಕಾರ್ಜುನ ಖರ್ಗೆಯನ್ನು ಭೇಟಿಯಾಗಲು ಬಂದಾಗ ಅವರು ಕೇಳಿದ ಮೊದಲ ಪ್ರಶ್ನೆಯೇನು ಗೊತ್ತೇ ‘ನಿಮ್ಮ ಹೆಸರೇನು?’

ಹೌದು. ನೀವು ನಂಬಲೇ ಬೇಕು!

ಸೋಲಿಲ್ಲದ ಸರದಾರ, ಸಿದ್ದುಗಾಗಿ ಪ್ರತಿಪಕ್ಷ ನಾಯಕನ ಸ್ಥಾನ ತೆರವು ಮಾಡಿ, ತ್ಯಾಗಮಯಿ ಅನ್ನಿಸಿಕೊಳ್ಳಲು ಮನಸಿಲ್ಲದ ಮನಿಸಿನಿಂದಲೇ ಸಿದ್ದರಾಗುತ್ತಿರುವ ಮಲ್ಲಿಕಾರ್ಜುನ ಖರ್ಗೆ ಒಂದು ದಿನ ಕರ್ನಾಟಕ ಭವನದ ಕೊಠಡಿಯಲ್ಲಿ ಕುಳಿತಿದ್ದರು. ಪ್ರತಿಪಕ್ಷ ನಾಯಕನ ಸ್ಥಾನ ತಪ್ಪಿಸುವ ಮುನ್ಸೂಚನೆಯಾಗಿ ಖರ್ಗೆಗೆ ಮಹಾರಾಷ್ಟ್ರದ ಅಭ್ಯರ್ಥಿ ಆಯ್ಕೆ ಸಮಿತಿ ಅಧ್ಯಕ್ಷತೆ ವಹಿಸಲಾಗಿದೆ.

ಅದೃಷ್ಟ ನೋಡಿ!

ಚಿತ್ರ ನಟಿ ನಗ್ಮಾ ಖರ್ಗೆ ಭೇಟಿಗೆಂದು ತಾವೇ ಹುಡುಕಿಕೊಂಡು ಬಂದುಬಿಡಬೇಕೆ!

ಮುಂಬಯಿ ಪಶ್ಚಿಮ ಕ್ಷೇತ್ರದಿಂದ ನಗ್ಮಾ ಟಿಕೆಟ್ ಬಯಸಿದ್ದಾರೆ. ಬಹಳ ಪ್ರಯತ್ನವನ್ನೂ ನಡೆಸಿದ್ದಾರೆ. ಈ ಪ್ರಯತ್ನದ ಭಾಗವಾಗಿಯೇ ನಗ್ಮಾ ಅವರು ಖರ್ಗೆ ಭೇಟಿಗೆ ಆಗಮಿಸಿದ್ದರು. ನಗ್ಮಾ ಎಷ್ಟೆಂದರೂ ಫೇಮಸ್ ಅಲ್ಲವೆ. ಬಹುಶಃ ಖರ್ಗೆ ತನ್ನನ್ನು ಗುರುತಿಸಬಹುದು ಅಂದುಕೊಂಡಿದ್ದರು.

ಆದರೆ ಖರ್ಗೆ ಅಮಾಯಕರಂತೆ ನಿಮ್ಮ ಹೆಸರೇನಮ್ಮಾ ಅಂದಾಗ ದಂಗಾಗಿ ಹೋದಳು ನಗ್ಮಾ!

ಆಗ ಖರ್ಗೆ ಪಕ್ಕದಲ್ಲಿದ್ದ ಅವರ ಸ್ನೇಹಿತ ಕೊಂಡಯ್ಯ ಅವರು ಖರ್ಗೆ ಕಿವಿಯಲ್ಲಿ ‘ಸರ್ ಅವಳ ಹೆಸರು ನಗ್ಮಾ ಅಂತ. ಅವಳು ಫೇಮಸ್ ಚಿತ್ರನಟಿ ಸರ್. ಅವಳ ಹೆಸರಿನಲ್ಲಿ ತಮಿಳುನಾಡಿನಲ್ಲಿ ದೇವಸ್ಥಾನಗಳನ್ನೆಲ್ಲ ಕಟ್ಟಿಸಿದ್ದಾರೆ. ಅವಳಿಗೆ ಮುಂಬಯಿನಿಂದ ಟಕೆಟ್ ಬೇಕಂತೆ’ ಎಂದು ಉಸುರಿದರು.

ಆಗ ದಂಗಾಗುವ ಪಾಳಿ ಖರ್ಗೆಯದ್ದು!

ಹೌದಾ? ನಾನು ಅವಳ ಒಂದೂ ಸಿನಿಮಾ ನೋಡಿಲ್ಲಲ್ಲೊ ಎಂದು ಖರ್ಗೆ ಅಮಾಯಕರಂತೆ ನುಡಿದಾಗ ಕೊಠಡಿಯಲ್ಲಿದ್ದವರೆಲ್ಲ ಕಂಗಾಲು. ಆದರೂ ಸಾವರಿಸಿಕೊಂಡ ಖರ್ಗೆ ‘ರಾಜಕೀಯದ ಅನುಭವ ಎಷ್ಟಿದೆ? ನೀನು ಮಾಡಿದ ಸಾಮಾಜಿಕ ಕಾರ್ಯವೇನು?’ ಎಂದೆಲ್ಲ ಕೇಳಿದಾಗ ಚುನಾವಣೆಗೆ ಸ್ಪರ್ಧಿಸಲು ಇದೆಲ್ಲ ಅಗತ್ಯವಿದೆಯಾ ಎಂಬ ಪ್ರಶ್ನಾರ್ಥಕ ಚಿಹ್ನೆ ನಗ್ಮಾಳ ಮುಖದಲ್ಲಿ ಮೂಡಿತು. ಆ ಪ್ರಶ್ನೆ ಹೊತ್ತೇ ಅವರು ಖರ್ಗೆ ಕೊಠಡಿಯಿಂದ ಹೊರಹೋಗಬೇಕಾಯಿತು.

ಇದು ನಡೆದಾಗ ಕೆಲವರೇ ಇದ್ದರು ಕೊಠಡಿಯಲ್ಲಿ. ಆದರೂ ಈ ಸುದ್ದಿ ಹೇಗೋ ಹೊರಗೆ ನುಸುಳಿ ಬಂದುಬಿಟ್ಟಿದೆ. ನಾವೇನೋ ಕನ್ನಡ ಪತ್ರಕರ್ತರು ಇದನ್ನು ಕೇಳಿ, ನಕ್ಕು, ಜೋಕೆಂಬಂತೆ ಕೆಲವರ ಬಳಿ ಹೇಳಿ ಸುಮ್ಮನಿದ್ದೆವು. ಆದರೆ ‘ಮಿಡ್ ಡೇ’ ಪತ್ರಿಕೆಯವರು ಮುಖಪುಟದಲ್ಲಿ ಖರ್ಗೆಗೆ ನಗ್ಮಾ ಪರಿಚಯವೇ ಇಲ್ಲ ಎಂದು ಬರೆದು, ಜಗಜ್ಜಾಹೀರು ಮಾಡಿದರು.

ಅದಕ್ಕೆ ಪಾಪ ಖರ್ಗೆ "ಅಲ್ಲೊ ಹೆಸರೇನು ಅಂತ ಕೇಳಿದರೆ ನನಗೆ ಅವಳ ಪರಿಚವೇ ಇಲ್ಲ ಬರೆದುಬಿಡೋದಾ' ಅಂತ ಕನ್ನಡ ಪರ್ತಕರ್ತರೊಬ್ಬರ ಬಳಿ ದುಃಖ ತೋಡಿಕೊಂಡರಂತೆ.

ಚಿತ್ರನಟಿ ನಗ್ಮಾ ಅವರು ಖರ್ಗೆ ಭೇಟಿಗೆ ಬಂದಿದ್ದಾರೆ ಅಂತ ನನಗೆ ಫೋನ್ ಬಂದಾಗ ನನಗನ್ನಿಸಿತು..... ಖರ್ಗೆ ಜನ್ಮ ಸಾರ್ಥಕವಾಯಿತು ಬಿಡಿ ಅಂತ. ‘ಪ್ರತಿಪಕ್ಷ ನಾಯಕನ ಸ್ಥಾನ ಹೋದರೆ ಹೋಗಲಿ’ ಅಂತ ನಗ್ಮಾ ಭೇಟಿ ನಂತರ ಖರ್ಗೆ ಅವರೇ ಅಂದುಕೊಂಡಿರಬಹುದು ಅಂದುಕೊಂಡು ಮನಸೊಳಗೇ ನಕ್ಕಿದ್ದೆ.

ಒಂದು ಭೇಟಿ ಇಷ್ಟೆಲ್ಲ ಸುದ್ದಿ, ನಗು ಸೃಷ್ಟಿಸಿತು ನೋಡಿ.

Friday, March 13, 2009

ಪ್ರಗತಿ ಪರರೇ ನೀವು ನಿಜವಾಗಿಯೂ ಪ್ರಗತಿ ಪರವೇ?


ಇಂತಹ ಮಾಹಿತಿ ಯುಗದಲ್ಲೂ ಇದೊಂದು ಸುದ್ದಿ ನಿಮ್ಮ ಕಣ್ತಪ್ಪಿಹೋಗಿರಬಹುದು!
ಯಾಕೆಂದರೆ ಮಂಗಳೂರಿನ ಪಬ್ ದಾಳಿಯನ್ನು ದೇಶವೊಂದರ ಮೇಲಿನ, ಇಡೀ ಮಹಿಳಾ ಸಮಾದ ಮೇಲೆ ನಡೆದ ದಾಳಿ ಎಂಬಂತೆ ಬಿಂಬಿಸಿದ, ವೆಲಂಟೈನ್ಸ್ ಡೇ ಆಚರಣೆಗೆ ಅಡ್ಡಿಪಡಿಸುವ ಶ್ರೀರಾಮ ಸೇನೆ ಹೇಳಿಕೆಯನ್ನು ಸ್ವಾತಂತ್ರ್ಯೋತ್ಸವಕ್ಕೆ ಅಡ್ಡಿಪಡಿಸಿದಷ್ಟು ಗಂಭೀರವಾಗಿ ಪಡಿಗಣಿಸಿದ ರಾಷ್ಟ್ರೀಯ ಮಾಧ್ಯಮಗಳು, ಈ ಸುದ್ದಿಯನ್ನು ಯಾವಾಗ ಪ್ರಕಟಿಸಿದವೊ ಗೊತ್ತಾಗಲೇ ಇಲ್ಲ.
೩ ವಾರದ ಹಿಂದೆ ಕೋಲ್ಕತ್ತ ನಗರದಲ್ಲಿ ದಾಂಧಲೆಗಳು ನಡೆದವು. ‘ದಿ ಸ್ಟೇಟ್ಸ್‌ಮೆನ್’ ಪತ್ರಿಕೆ ಸಂಪಾದಕ ರವೀಂದ್ರ ಕುಮಾರ್ ಹಾಗೂ ಪ್ರಕಾಶಕ ಆನಂದ ಸಿನ್ಹಾ ಅವರನ್ನು ಬಂಧಿಸಿದ ನಂತರವೇ ಗದ್ದಲ ತಣ್ಣಗಾಯಿತು. ಇದಕ್ಕೆ ಕಾರಣವಿಷ್ಟೆ. ‘ಇಂಡಿಪೆಂಡೆಂಟ್’ ಎಂಬ ಪತ್ರಿಕೆಯಲ್ಲಿ ಜೋಹಾನ್ ಹರಿ ಎಂಬವರು ಬರೆದ ಲೇಖನವನ್ನು ‘ದಿ ಸ್ಟೇಟ್ಸ್‌ಮೆನ್’ ಮರುಮುದ್ರಿಸಿತ್ತು. ಅದರಲ್ಲಿ ಇಸ್ಲಾಂ ಕುರಿತು ಟೀಕೆ ಇತ್ತು. ಅದೇ ಗಲಾಟೆಗೆ ಕಾರಣ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ ಆರೋಪದಲ್ಲಿ ಸಂಪಾದಕ ಮತ್ತು ಪ್ರಕಾಶನನ್ನು ಬಂಧಿಸಬೇಕು ಎಂಬ ಆಗ್ರಹವೇ ಗಲಾಟೆಗೆ ಮೂಲ.
ಜೋಹಾನ್ ಹತಿ ಬ್ರಿಟನ್‌ನ ಪ್ರಗತಿಪರ ಚಿಂತಕ, ಜಾತ್ಯಾತೀತವಾದಿ. ಆದರೆ ಡೋಂಗಿಯಲ್ಲ. ಈತ ಜಾತ್ಯತೀತ ನಿಲುವಿಗಾಗಿ ಪ್ರಶಸ್ತಿಯನ್ನೂ ಪಡೆದಿದ್ದಾನೆ ಎಂಬುದು ಗಮನಾರ್ಹ. ಹಿಂದೆ ಹಲವು ಬಾರಿ ಈತ ಇಸ್ಲಾಂ ಸಮರ್ಥಿಸಿ ಕೂಡ ಲೇಖನ ಬರೆದ ದಾಖಲೆಗಳಿವೆ. ಈತ ಇಂಡಿಪೆಂಡೆಂಟ್ ಎಂಬ ಪತ್ರಿಕೆಯಲ್ಲಿ ‘why should I respect opressive religions?’ (ದಬ್ಬಾಳಿಕೆ ನಡೆಸುವ ಧರ್ಮಗಳನ್ನು ನಾನ್ಯಾಕೆ ಗೌರವಿಸಲಿ?) ಎಂಬ ಹೆಡ್‌ಲೈನ್ ನೀಡಿ ಒಂದು ಲೇಖನ ಬರೆದಿದ್ದ. ಅದನ್ನು ‘ದಿ ಸ್ಟೇಟ್ಸ್‌ಮೆನ್’ ಯಥಾವತ್ತಾಗಿ ಪ್ರಕಟಿಸಿತ್ತು.
ಈ ಲೇಖನದಲ್ಲಿ ಮುಖ್ಯವಾಗಿ ವಾಕ್ ಮತ್ತು ಅಭಿವ್ಯಕ್ತಿ ಸಾತಂತ್ರ್ಯದ ಬಗ್ಗೆ ಜೊಹಾನ್ ಹರಿ ಪ್ರತಿಪಾದಿಸಿದ್ದ. ವಿಶ್ವಸಂಸ್ಥೆ ವಾಕ್ ಸ್ವಾತಂತ್ರ್ಯವನ್ನು ಪ್ರಮುಖವಾಗಿ ಪ್ರತಿಪಾದಿಸುತ್ತಿದೆ. ಆದರೆ ಕೆಲವು ಮುಸ್ಲಿಂ ರಾಷ್ಟ್ರಗಳು ಅದಕ್ಕೆ ತದ್ವಿರುದ್ಧವಾಗಿ ವರ್ತಿಸುತ್ತಿವೆ. ಅವು ಧರ್ಮ ಹಾಗೂ ಸ್ತ್ರೀ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ವಾಕ್ ಸ್ವಾತಂತ್ರ್ಯದ ಮೇಲೆ ನಿಯಂತ್ರಣ ಇರಬೇಕು. ಯಾಕೆಂದರೆ ಅದು ಇಸ್ಲಾಂನಲ್ಲಿ ಸಮ್ಮತವಲ್ಲ ಎಂದು ವಾದಿಸುತ್ತಿವೆ. (ಇತ್ತೀಚೆಗೆ ಸ್ವಾತ್ ಪ್ರದೇಶದಲ್ಲಿ ಇಸ್ಲಾಂನ ಶೆರಿಯತ್ ಕಾನೂನು ಜಾರಿ ಮಾಡಲು ಪಾಕಿಸ್ತಾನ ಸರಕಾರ ಸಮ್ಮತಿಸಿದ್ದನ್ನು ನೆನಪಿಸಿಕೊಳ್ಳಬಹುದು.)
‘ನೈಜೀರಿಯಾದಲ್ಲಿ ಗಂಡನಿಂದ ತಿರಸ್ಕೃತಳಾದ ಮಹಿಳೆಯನ್ನು ಮನೆಯಿಂದಲೇ ಹೊರಹಾಕಲಾಗುತ್ತದೆ. ಅವರ ಮಕ್ಕಳನ್ನು ನೋಡಲೂ ಅವಕಾಶ ಇಲ್ಲ. ಈ ಪದ್ಧತಿ ವಿರುದ್ಧ ಅನ್ಯಾಯಕ್ಕೊಳಗಾದ ಮಹಿಳೆಯರೆಲ್ಲ ಸೇರಿ ಪ್ರತಿಭಟಿಸಲು ನಿರ್ಧರಿಸಿದರೆ, ಅಲ್ಲಿನ ಪೊಲೀಸರು ಅದು ಇಸ್ಲಾಂಗೆ ವಿರುದ್ಧ ಎಂಬ ಕಾರಣ ನೀಡಿ ಪ್ರತಿಭಟನೆಗೆ ಅವಕಾಶ ನಿರಾಕರಿಸಿದರು. ಈ ಜಿಪ್ತ್‌ನಲ್ಲಿ ಶೆರಿಯತ್ ಕಾನೂನು ಜಾರಿ ಮಾಡದೆ, ಪರಿಷ್ಕೃತ ಇಸ್ಲಾಂ ಕಾನೂನು ಜಾರಿ ಮಾಡಬೇಕು ಎಂಬ ಅಭಿಪ್ರಾಯವನ್ನು ಬ್ಲಾಗ್‌ನಲ್ಲಿ ಪ್ರಕಟಿಸಿದ ಅಬ್ದುಲ್ ರೆಹಮಾನ್‌ನನ್ನು ಬಂಧಿಸಿ, ಬ್ಲಾಗ್ ಮುಚ್ಚಿಸಲಾಯಿತು. ಸೌದಿಯಲ್ಲಿ ವಯಸ್ಸಾದವನೊಬ್ಬ ೧೦ ವರ್ಷದ ಹುಡುಗಿಯನ್ನು ಮದುವೆಯಾಗಲು ಸಮ್ಮತಿಯಿದೆ.’
‘ಇಸ್ಲಾಂ ಸಂಸ್ಕೃತಿಯನ್ನು ಗೌರವಿಸಿ ಎಂದು ಬೊಬ್ಬೆ ಹೊಡೆಯುವ ಪ್ರಗತಿಪರರು, ಗೌರವಿಸಬೇಕಾದ್ದು ಮಹಿಳೆಯರನ್ನೊ? ಬ್ಲಾಗರ್‌ನನ್ನೊ? ಅಥವಾ ಇವರ ಸ್ವಾತಂತ್ರ್ಯ ಹತ್ತಿಕ್ಕುತ್ತಿರುವವರನ್ನೊ? ಎಂಬುದಕ್ಕೆ ಉತ್ತರಿಸಬೇಕು’ ಎಂಬುದು ಜೋಹಾನ್ ಹರಿಯ ಲೇಖನದ ಹೂರಣ. ಹೀಗೆ ಬರೆಯುತ್ತ ಆತ ‘೫೩ ವರ್ಷದವನಿದ್ದಾಗ ೯ ವರ್ಷದ ಬಾಲಕಿಯೊಂದಿಗೆ ಸಂಬಂಧ ಬೆಳೆಸಿದ, ತನ್ನ ಅನುಯಾಯಿಗಳಾಗಲಿಲ್ಲ ಎಂಬ ಕಾರಣಕ್ಕೆ ಇಡೀ ಗ್ರಾಮವೊಂದರ ಜನರನ್ನು ಕೊಲ್ಲುವಂತೆ ಆದೇಶಿಸಿದ ಪ್ರವಾದಿಯ ಮಾತನ್ನು ಅನುಸರಿಸಬೇಕು ಎಂಬ ಕಲ್ಪನೆಯನ್ನು ನಾನು ಗೌರವಿಸುದಿಲ್ಲ’ ಎಂದು ಬರೆದಿದ್ದಾನೆ.
ಇದೇ ವಿವಾದದ ಮೂಲ!
ಈ ವಾಕ್ಯದ ನಂತರ ‘ಜ್ಯೂಯಿಷ್‌ಗಳಿಗೆ ವೆಸ್ಟ್‌ಬ್ಯಾಂಕ್ ಹಸ್ತಾಂತರಿಸಬೇಕು ಮತ್ತು ಪ್ಯಾಲಿಸ್ತೇನಿಗಳನ್ನೆಲ್ಲ ಬಾಂಬ್ ಹಾಕಿ ಕೊಲ್ಲಬೇಕು ಎಂಬ ಭಾವನೆಯನ್ನೂ ಗೌರವಿಸುವುದಿಲ್ಲ. ಹಾಗೆಯೇ ಮಾನವ ಮೊದಲು ಕುರಿ, ಕೋತಿಯಾಗಿದ್ದ ಎಂಬ ನಂಬಿಕೆಯನ್ನೂ ಒಪ್ಪುವುದಿಲ್ಲ’ ಎಂದು ಜೋಹಾನ್ ಹರಿ ಬರೆದಿದ್ದು ಗದ್ದಲ ಮಾಡಿದವರಿಗೆ ಕಂಡಿಲ್ಲ.
ವಿಶ್ವದಲ್ಲಿ ಧರ್ಮಗಳನ್ನು ಟೀಕಿಸಿ ಪ್ರಕಟವಾದ ಪುಸ್ತಕಗಳಿಗೆ ಕೊರತೆಯಿಲ್ಲ. ಇತ್ತೀಚೆಗೆ ಕೇರಳದ ಸನ್ಯಾಸಿನಿಯೊಬ್ಬಳು ‘’ಅಮೆನ್- ಎ ಆಟೊಬಯಾಗ್ರಫಿ ಆಫ್ ನನ್’ ಎಂಬ ಆತ್ಮಚರಿತ್ರೆ ಬರೆದಿದ್ದಾಳೆ.ಅದರಲ್ಲಿ ಸನ್ಯಾಸಿನಿಯರ ಸಲಿಂಗ ಕಾಮ, ಫಾದರ್‌ಗಳ ಲೈಂಗಿಕ ಕಿರುಕುಳದ ಬಗ್ಗೆಲ್ಲ ತನ್ನ ೩೦ ವರ್ಷದ ಅನುಭವ ದಾಖಲಿಸಿದ್ದಾಳೆ. ಸಾಕಷ್ಟು ವಿವಾದ್ಕಕೀಡಾದ ‘ದ ವಿನ್ಸಿಕೋಡ್’ ನಿಮಗೆ ನೆನಪಿರಬಹುದು. ಯಾವುದೇ ವ್ಯಕ್ತಿ ‘ಮಹಾಭಾರತ’ದಲ್ಲಿ ದ್ರೌಪದಿ ಐವರ ಹೆಂಡತಿಯಾಗಿದ್ದಳು ಎಂದೊ, ಕೃಷ್ಣನ ರಾಸಲೀಲೆಗಳು, ಆತ ಗೋಪಿಕೆಯರ ಬಟ್ಟೆ ಕದ್ದದ್ದು, ಸೀತೆಯ ಅಗ್ನಿ ಪರೀಕ್ಷೆ ಮುಂತಾದವುಗಳನ್ನು ಟೀಕಿಸಿ ಬರೆದರೆ ಇಡೀ ಹಿಂದೂ ಸಮಾಜ ಸಿಡಿದೆದ್ದು ಪ್ರತಿಭಟಿಸುತ್ತದೆ ಎಂದು ನನಗನ್ನಿಸುವುದಿಲ್ಲ. ಎಲ್ಲೋ ಕೆಲವು ಸಂಘಟನೆಗಳು ಪ್ರತಿಭಟಿಸಬಹುದು. ಅಷ್ಟೆ. ಆದರೆ ಹೆಚ್ಚಿನವರು ಟೀಕೆಯನ್ನು ಒಪ್ಪಿಕೊಳ್ಳುತ್ತಾರೆ. ಇತ್ತೀಚೆಗೆ ಇಂಗ್ಲೀಷ್ ಪತ್ರಿಕೆಯೊಂದರಲ್ಲಿ ‘ಸೀತೆಯೂ ಮದ್ಯಪಾನ ಮಾಡುತ್ತಿದ್ದಳು’ ಎಂಬ ಲೇಖನ ಪ್ರಕಟವಾಯಿತು.
ಒಂದೇಒಂದು ಪ್ರತಿಭಟನೆಯೂ ನಡೆಯಲಿಲ್ಲ!!
ಆದರೆ ಪ್ರವಾದಿಯ ಬಗ್ಗೆ, ಇಸ್ಲಾಂ ಬಗ್ಗೆ ಟೀಕಿಸುವುದು ಬಿಡಿ ಒಂದು ಕಾರ್ಟೂನು, ಒಂದು ವಾಕ್ಯ ಬರೆದರೂ ಸಾಕು ದೊಡ್ಡ ಗಲಾಟೆಗಳಾಗುತ್ತವೆ. ಹಿಂದೊಮ್ಮೆ ವಿದೇಶದಲ್ಲೆಲ್ಲೊ ಪ್ರವಾದಿಯ ಕಾರ್ಟೂನ್ ಪ್ರಕಟಿಸಿದ್ದಕ್ಕೆ ಭಾರತದಲ್ಲಿ ಪ್ರತಿಭಟನೆ, ಗಲಾಟೆಗಳು ನಡೆದಿದ್ದವು. ಡ್ಯಾನಿಷ್ ಕಾರ್ಟೂನ್‌ಗಾಗಿ ಕ್ಷಮೆ ಕೇಳಿ ಇಲ್ಲವೇ ಆತನ ತಲೆದಂಡಕ್ಕಾಗಿ ಬಹುಮಾನ ಘೋಷಣೆ ಮಾಡುತ್ತೇವೆ ಎಂಬ ಘೋಷಣೆ ಹೊರಬಿತ್ತು. ಕರ್ನಾಟಕದ್ದೇ ಪತ್ರಿಕೆಗೆ ಹಿಂದೆ ಇಂಥದ್ದೇ ಅನುಭವವಾಗಿದೆ. ಲೇಖಕಿ ತಸ್ಲೀಮಾ ನ್ರೀನ್‌ಗೆ ಭಾರತದಲ್ಲಿ ಯಾವ ಸ್ಥಿತಿ ನಿರ್ಮಾಣ ಮಾಡಿದರು ಎಂಬುದು ನಿಮಗೆ ಗೊತ್ತೇ ಇದೆ. ಜಾತ್ಯತೀತ ಎಂದು ಹೇಳಿಕೊಳ್ಳುವ ಭಾರತದಲ್ಲಿರುವ ಕೋಲ್ಕತ್ತಾದಿಂದಲೇ ಅವಳ್ನನು ಹೊರಗಟ್ಟಲಾಯಿತು. ಸಲ್ಮಾನ್ ರಶ್ದಿಗೆ ಕೊಲೆ ಬೆದರಿಕೆ ಹಾಕಲಾಗಿತ್ತು.
ಶಾರದೆಯನ್ನು ಬೆತ್ತಲೆಯಾಗಿ ಚಿತ್ರಿಸಿದ ಎಂ.ಎಫ್. ಹುಸೇನ್ ಮೇಲೆ ದಾಳಿಗಳು ನಡೆದಾಗ ಅದನ್ನು ಪ್ರಗತಿಪರರು ವಿರೋಧಿಸಿದರು. ಆ ಪ್ರಗತಿಪರರೆಲ್ಲ ಇಂತಹ ಘಟನೆಗಳನ್ನೂ ಯಾಕೆ ವಿರೋಧಿಸುವುದಿಲ್ಲ? ಈಗ ಯಾಕೆ ‘ದಿ ಸ್ಟೇಟ್ಸ್‌ಮೆನ್’ ಪತ್ರಿಕೆ ಸಂಪಾದಕ ಹಾಗ ಲೇಖಕ ಜೋಹಾನ್ ಹರಿ ಪರವಾಗಿ ಯಾಕೆ ಮಾತನಾಡುವುದಿಲ್ಲ. ಅವರ ವಿರುದ್ಧ ಹಿಂಸೆಗಿಳಿದವರನ್ನು ಯಾಕೆ ಖಂಡಿಸುವುದಿಲ್ಲ?ತನಗೆ ಇಷ್ಟಬಂದಂತೆ ಚಿತ್ರ ರಚಿಸುವುದು ಕಲಾವಿದನ ಹಕ್ಕು. ಅದನ್ನು ಒಪ್ಪದವರು ಚಿತ್ರ ನೋಡದಿದ್ದರಾಯಿತು ಎಂಬುದು ಹುಸೇನ್ ಮೇಲಿನ ಹಲ್ಲೆ ವಿರೋಧಿಸುವವರ ವಾದ. ಸರಿ ಒಪ್ಪಿಕೊಳ್ಳೋಣ. ಅಕಸ್ಮಾತ್ ಹುಸೇನ್ ಅವರೇ ಪ್ರವಾದಿಯ ಅಶ್ಲೀಲ ಚಿತ್ರ ಬೇಡ ಸಾದಾ ಚಿತ್ರ ಬಿಡಿಸಿದ್ದರೆ? ದೊಡ್ಡ ಗದ್ದಲವೇ ಆಗುತ್ತಿತ್ತೇನೊ. ಆಗ ಪ್ರಗತಿಪರರು ‘ಇಸ್ಲಾಂನಲ್ಲಿ ಪ್ರವಾದಿಯ ಯಾವುದೇ ಬಗೆಯ ಚಿತ್ರೀಕರಣ ಮಾನ್ಯವಲ್ಲ. ಆದ್ದರಿಂದ ಅವರು ಮಹಾಪರಾಧ ಮಾಡಿದ್ದಾರೆ’ ಎಂದು ಚಿತ್ರ ಬಿಡಿಸಿದವರನ್ನೇ ಖಂಡಿಸುತ್ತಿದ್ದರು. ಮುಸ್ಲಿಮರ ಪ್ರಕಾರ ಪ್ರವಾದಿಯ ಚಿತ್ರೀಕರಣ ನಿಷಿದ್ಧ. ಆದರೆ ಬೇರೆ ಧರ್ಮದವರೂ ಅವರ ನಿಯಮಗಳಿಗೆ ಬದ್ಧರೆ? ಮುಸ್ಲಿಮರು ಖುರಾನ್‌ಗೆ, ಮುಲ್ಲಾಗರಳ ಆದೇಶಕ್ಕೆ ಬದ್ಧರಾಗಿರಬೇಕು. ಆ ವಿಷಯದಲ್ಲಿ ವಾಕ್ ಸ್ವಾತಂತ್ರ್ಯ ಹೊಂದಿರಬಾರದು. ಆದರೆ ಬೇರೆ ಧರ್ಮದವರೂ ಅದನ್ನು ಪಾಲಿಸಬೇಕೆಂದೇನೂ ಇಲ್ಲವಲ್ಲ. ಎಂ.ಎಫ್. ಹುಸೇನ್ ಕಲಾಕಾರನ ಕಲ್ಪನೆಯಿಂದ ಶಾರದೆಯನ್ನು ಕಲ್ಪಿಸಿದರೊ, ಹಾಗೆಯೇ ಬೇರೊಬ್ಬ ಕಲಾಕಾರನ ದೃಷ್ಟಿಗೆ ಪ್ರವಾದಿ ಕೂಡ ಹಾಗೆಯೇ ಕಾಣಬಹುದು. ಆಗ?
ಶಾರದೆಯ ಚಿತ್ರವನ್ನು ಅಭಿವ್ಯಕ್ತಿ ಸ್ವಾತಂತ್ರ್ಯವೆಂದು ಸಹಿಸಿಕೊಳ್ಳಿ ಎನ್ನುವವರು ಇನ್ನೊಬ್ಬ ಕಲಾಕಾರ ಬಿಡಿಸಿದ ಪ್ರವಾದಿಯ ಚಿತ್ರವನ್ನು ಸಹಿಸಿಕೊಳ್ಳಲೂ ಸಿದ್ಧರಿರಬೇಕಲ್ಲವೆ? ಈ ಪಗ್ರತಿಪರರು ವಾಕ್ ಮತ್ತು ಅಭಿವ್ಯಕಿ ಸ್ವಾತಂತ್ರ್ಯವನ್ನು ಬೆಂಬಲಿಸುತ್ತಾರೆ. ಆದರೆ ದುರಭಿಮಾನಿಗಳೂ, ಅಂಧಾಭಿಮಾನಿಗಳು ವಿರೋಧಿಸುವ ವಿಷಯದ ಬಗ್ಗೆ ಮಾತನಾಡಿದರೆ, ಆಗ ಸರೀ ವಿರುದ್ಧ ನಿಲುವು ತಾಳುತ್ತಾರೆ. ಗಲಾಟೆಗೆ ಪ್ರಚೋದಿಸಿದ್ದೇ ಹಿಂಸೆಗೆ ಮೂಲ ಕಾರಣ ಎಂದು ದೂರುತ್ತಾರೆ. ಇದೇ ಜನರ ಬಳಿ ‘ಕರಾವಳಿಯಲ್ಲಿ ಅಕ್ರಮ ದನ ಸಾಗಾಟವೇ ಕೋಮು ಗಲಭೆಗೆ ಮೂಲ ಕಾರಣ’ ಎಂದು ಹೇಳಿನೋಡಿ. ಆಗ ಅವರು ‘ಇಲ್ಲಾ ಅದನ್ನು ಬಜರಂಗದಳದವರು ತಡೆದು ತಾವೇ ಪೊಲೀಸರಾಗ ಹೊರಟಿರುವುದೇ ಗಲಭೆಗೆ ಕಾರಣ’ ಅನ್ನುತ್ತಾರೆ.
ರಾಮಜನ್ಮಭೂಮಿ ಸಮಸ್ಯೆಯನ್ನೇ ನೋಡಿ. ಅಲ್ಲಿ ರಾಮ ಮಂದಿರ ನಿರ್ಮಿಸಲು ಯತ್ನಿಸುವ ಮೂಲಕ ಮುಸ್ಲಿಮರನ್ನು ಪ್ರಚೋದಿಸುವ ಕೆಲಸ ನಡೆಯುತ್ತಿದೆ. ಅದಕ್ಕಾಗಿ ಯಾವನಾದರೂ ಒಬ್ಬ ಬುದ್ದಿಜೀವಿ ‘ನೋಡಿ ರಾಮಜನ್ಮಭೂಮಿ ನಿಷ್ಪ್ರಯೋಜಕ ಎಂಬುದು ನನಗೂ ಗೊತ್ತು. ಆದರೇನು ಮಾಡುವುದು ಈ ವಿವಾದದಿಂದ ಬಿಜೆಪಿಗೆ ಲಾಭವಾಗುತ್ತದೆ. ದಿನದಿಂದ ದಿನಕ್ಕೆ ಅದರ ಜನಪ್ರಿಯತೆ ಹೆಚ್ಚುತ್ತಿದೆ. ಅದರ ಬದಲು ರಾಮಂದಿರ ನಿರ್ಮಾಣಕ್ಕೆ ಅವಕಾಶ ಮಾಡಿಕೊಡೋಣ. ಆ ಮೂಲಕ ನಾವು ಕೋಮು ಸಮಾರಸ್ಯಕ್ಕೆ ಮೊದಲ ಹೆಜ್ಜೆ ಇಡೋಣ. ಬಿಜೆಪಿಗೆ ಪ್ರಚಾರ ಪಡೆಯಲೂ ಅವಕಾಶ ಇಲ್ಲದಂತಾಗುತ್ತದೆ. ಹೇಗೂ ಬಾಬರಿ ಮಸೀದಿ ನಮಾಜ್‌ಗೆ ಬಳಕೆಯಾಗುತ್ತಿಲ್ಲ’ ಎಂದುಬಿಟ್ಟರೆ. ಹೀಗೆ ಯಾವನಾದರೂ ಹೇಳಿದರೆ ಅಂತ ನಾನು ಬರೆದಿದ್ದಕ್ಕೇ ವಿಚಾರವಾದಿಗಳು ಸಿಟ್ಟಿಗೇಳುವ ಸಾದ್ಯತೆಯಿದೆ.
ಮಂಗಳೂರು ಪಬ್ ದಾಳಿಗೆ ರಾಷ್ಟ್ರೀಯ ಮಾಧ್ಯಮಗಳು ಎಷ್ಟೆಲ್ಲ ಪ್ರಚಾರ ನೀಡಿದವುಎಂಬುದು ನಿಮಗೆ ಗೊತ್ತೇ ಇದೆ. ಆಗ ಕೇಂದ್ರ ಮಹಿಳಾ ಆಯೋಗದಿಂದ ತನಿಖೆಗೆ ಆಗಮಿಸಿ ಸಮಿತಿಯ ನೇತೃತ್ವ ವಹಿಸಿದ್ದ ನಿರ್ಮಲಾ ವೆಂಕಟೇಶ್ ಅವರನ್ನು ಅದೇ ಮಾಧ್ಯಮಗಳು ದಿನಾ ತೋರಿಸಿದವು. ಆದರೆ ಅದೇ ನಿರ್ಮಲಾ ವೆಂಕಟೇಶ್ ಅವರ ಸಮಿತಿ ನೀಡಿದ ವರದಿಯನ್ನು ಕೇಂದ್ರ ಸರಕಾರ ತಿರಸ್ಕರಿಸಿತು. ತನಗೆ ಬೇಕಾದಂತೆ ವರದಿ ನೀಡಲಿಲ್ಲ ಎಂಬ ಕಾರಣಕ್ಕೆ, ನಿರ್ಮಲಾ ವೆಂಕಟೇಶ್ ಅವರು ರಾಜೀನಾಮೆ ಸಲ್ಲಿಸಿದ್ದರೂ, ಅವರನ್ನು ವಜಾ ಮಾಡಿ ಆದೇಶ ಹೊರಡಿಸಿತು. ಇದು ಮಹಿಳೆಯರ ಮೇಲಿನ ದೌರ್ಜನ್ಯವಲ್ಲವೇ? ಪಬ್‌ನಲ್ಲಿ ದಾಳಿಗೊಳಗಾದ ಮಗಿಳೆಯರ ಪರ ವಕಾಲತ್ತು ವಹಿಸಿದ ಮಾಧ್ಯಮಗಳು, ಮಹಿಳಾ ಪರ ಹೋರಾಟಗಾರರೆಲ್ಲ ಸ್ಥಾನ ಕಳೆದುಕೊಂಡ ನಿರ್ಮಲಾ ವೆಂಕಟೇಶ್ ಪರ ಯಾಕೆ ನಿಲ್ಲಲಿಲ್ಲ? ನಿರ್ಮಲಾ ವೆಂಕಟೇಶ್ ಅವರನ್ನು ವಜಾ ಮಾಡಿದ್ದು ಅನಗತ್ಯ ಎಂದು ಯಾಕೆ ವಾದಿಸಲಿಲ್ಲ?
ಪ್ರಗತಿಪರರೇ ಯಾಕೀ ದ್ವಿಮುಖ ನೀತಿ? ಜಾತ್ಯತೀತ ಸಮಾಜಕ್ಕೆ ಇದು ತಕ್ಕುದಲ್ಲ. ಪ್ರಗತಿಪರರ ನಿಲುವು ಸರಿಯಾಗಿರಬೇಕು. ಎಲ್ಲ ವಿಷಯದಲ್ಲೂ ಸಮನಾದ, ಜಾತ್ಯತೀತ, ವಿಷಯ ನಿಷ್ಟ ನಿಲುವು ವ್ಯಕ್ತಪಡಿಸಬೇಕು. ಪ್ರಗತಿಪರರ ನಿಲುವುಗಳೂ ಧರ್ಮ, ಜಾತಿ ಅವಲಂಬಿಸುವಂತಾದರೆ ‘ಜಾತ್ಯತೀತ’ ಎಂಬ ಶಬ್ದಕ್ಕೆ ಅರ್ಥವಿರುವುದಿಲ್ಲ. ಪ್ರಗತಿಪರರು ಹೆಸರಿಗೆ ಮಾತ್ರ ಪ್ರಗತಿಪರರಾಗಿರುತ್ತಾರೆ. ಆಗ ‘ಪ್ರಗತಿಪರರೇ ನೀವು ನಿಜವಾಗಿಯೂ ಪ್ರಗತಿಪರವೇ’ ಎಂಬ ಅನುಮಾನ ಮೂಡುತ್ತದೆ.

Tuesday, March 10, 2009

ಹೀಗೊಂದು ನಂಬಲಾಗದ ಕತೆ

ಇಂತಹ ಕತೆ ನಾನು ಹಿಂದೆಂದೂ ಕೇಳಿರಲಿಲ್ಲ. ಬಹುಶಃ ಮುಂದೆಯೂ ಕೇಳಲಿಕ್ಕಿಲ್ಲ. ನೀವೂ ಕತೆ ಓದಿದ ನಂತರ ಹೀಗೇ ಹೇಳುತ್ತೀರಿ. ಯಾಕೆಂದರೆ ಹಾಗಿದೆ ಈ ಕತೆ.
ದೆಹಲಿ ಕರ್ನಾಟಕದ ಸಂಘದಲ್ಲೊಂದು ಕಾರ್ಯಕ್ರಮ. ಕರ್ನಾಟಕ ವಾರ್ತಾ ಇಲಾಖೆಯಲ್ಲಿ ದೆಹಲಿ ಕಚೇರಿಯಲ್ಲಿ ವಾರ್ತಾಧಿಕಾರಿಯಾಗಿರುವ ವೀರಣ್ಣ ಆಗಾಗ ದೆಹಲಿ ಕನ್ನಡಿಗರಿಗಾಗಿ ಕನ್ನಡ ಸಿನಿಮಾ ತೋರಿಸುತ್ತಿರುತ್ತಾರೆ. ಹಾಗೇ ಒಮ್ಮೆ ಸಿನಿಮಾ ತೋರಿಸುತ್ತೇನೆ ಬನ್ನಿ ಎಂದು ಕರೆದಿದ್ದರು. ಹೋಗಿದ್ದೆ. ಅಂತಹ ಅವಕಾಶ ತಪ್ಪಿಸುವುದಿಲ್ಲ.
ಯಾಕೆಂದರೆ ದೆಹಲಿಯಲ್ಲಿ ಕನ್ನಡ ಸಿನಿಮಾ ಅಂದರೆ ಸಮುದ್ರದ ನಡುವೆ ಸಿಹಿನೀರು ಸಿಕ್ಕಂತೆ!

ಹಾಗೆ ಸಿನಿಮಾ ನೋಡೋಕೆ ಅಂತ ಕೆಲವು ತಿಂಗಳ ಹಿಂದೆ ಹೋದಾಗ ಒಂದು ಸಭಾ ಕಾರ್ಯಕ್ರಮ ಇಟ್ಟುಕೊಂಡಿದ್ರು. ಅದು ಪಾಪ ವೀರಣ್ಣ ಅವರ ಕುಕೃತ್ಯವಾಗಿರಲಿಲ್ಲ. ಆದರೆ ಅವರು ಅದನ್ನು ತಪ್ಪಿಸುವಂತೆಯೂ ಇರಲಿಲ್ಲ. ಅನಿವಾರ್ಯ ಕರ್ಮ. ಕಾರ್ಯಕ್ರಮಕ್ಕೆ ತಲೆಕೊಟ್ಟವು. ಭಾಷಣ ಕೇಳುವ ಆಸಕ್ತಿ ಯಾರಿಗೂ ಇರಲಿಲ್ಲ. ಆದರೆ ಕೇಳದೆ ಇರುವಂತೆಯೂ ಇರಲಿಲ್ಲ.
ಆಗ ಭಾಷಣ ಮಾಡಿದ ಒಬ್ಬರು ಒಂದು ಕತೆ ಹೇಳಿದರು ನೋಡಿ. ಕೇಳಿ ನಾನು ದಂಗಾಗಿ ಹೋದೆ. ಅರೆ ಇಂತಹ ಕತೆಯೂ ಇದೆಯಾ? ಇದನ್ನು ಇಷ್ಟೆಲ್ಲ ಜನರ ಎದುರು ಹೇಳಲು ಅವರಿಗೆಷ್ಟು ಧೈರ್ಯ? ಏನು ನಮ್ಮನ್ನೆಲ್ಲಾ ದಡ್ಡರೆಂದು ಅವರು ಅಂದುಕೊಂಡಿದ್ದೀರಾ? ಅಥವಾ ಅವರೇ ದಡ್ಡರು ಎಂಬುದನ್ನು ಸಾಬೀತು ಮಾಡಲು ಅವರು ಹೊರಟಿದ್ದರಾ?
ಒಂದೂ ಅರ್ಥವಾಗಲಿಲ್ಲ!
ಕತೆ ಹೀಗಿತ್ತು....
ಅವರು ಒಮ್ಮೆ ಬೆಂಗಳೂರು ಹೊರಭಾಗದಲ್ಲಿ ಒಂದು ಬಸ್ಸಿನಲ್ಲಿ ಹೋಗುತ್ತಿದ್ದಂತೆ. ಅದು ಆ ಊರಿಗಿರುವ ಒಂದೇ ಒಂದು ಬಸ್. ಬಸ್ಸು ತುಂಬ ರಶ್ಶಿತ್ತು. ಅಷ್ಟು ರಶ್ಶಿದ್ದ ಬಸ್ಸಿಗೆ ಮಗು ಕರೆದುಕೊಂಡಿದ್ದ ಒಬ್ಬ ಹೆಂಗಸು ಕೈ ಮಾಡಿದಳು. ನಮ್ಮದು ಎಷ್ಟೆಂದರೂ ಕೈ ತೋರಿಸಿದಲ್ಲಿ ನಿಲ್ಲುವ ವಾಹನವಲ್ಲವೆ? ಬಸ್ಸು ನಿಂತಿತು. ಹೇಗೇಗೋ ಪ್ರಯತ್ನ ಮಾಡಿ ಆಕೆ ಬಸ್ಸು ಹತ್ತಿದಳು. ಸ್ವಲ್ಪ ದೂರ ಹೋದ ನಂತರ ಬಸ್ಸಿನಿಂದ ಏನೋ ಬಿದ್ದಂತಾಯಿತು. ಏನು? ಏನು? ಏನು? ಅಂತ ಎಲ್ಲರೂ ನೋಡಿದ್ದೇ ನೋಡಿದ್ದು. ೧-೨ ಕಿ.ಮೀ ಹೋದ ಮೇಲೆ ಅದು ಮಗುವೇ ಇರಬೇಕು ಎಂಬ ಅನುಮಾನ ತಾಯಿಗೆ ಆರಂಭವಾಯಿತು.
ನೋಡಿದರೆ ಹೌದು!
ತಾಯಿ ಮಗುವನ್ನು ಬುಟ್ಟಿಯಲ್ಲಿ ಹಾಕಿ ಬಸ್ಸಿನ ಟಾಪ್ ಮೇಲಿಟ್ಟಿದ್ದಳು. ಬಸ್ಸಿನ ಓಲಾಡುವಿಕೆಯಲ್ಲಿ ಮಗು ಕೆಳಗೆ ಬಿದ್ದಿತ್ತು. ಬಸ್ಸು ನಿಲ್ಲಿಸಿ ತಾಯಿ ಇಳಿದಳು. ಅವಳ ಜತೆ ನಮಗೆ ಕತೆ ಹೇಳಿದವರು ಹಾಗೂ ಮತ್ತೊಂದಿಬ್ಬರು ಬಸ್ ಇಳಿದರಂತೆ. ನಡೆದುಕೊಂಡು ಹೋಗಿ ನೋಡಿದರೆ ಮಗು ರಸ್ತೆ ಬದಿಗೆ ಬಿದ್ದಿತ್ತಂತೆ. ಬುಟ್ಟಿಯಲ್ಲಿದ್ದಿದ್ದರಿಂದ ಗಾಯವೇನೂ ಆಗಿರಲಿಲ್ಲ.
ಇಷ್ಟೇ ಅವರ ಕತೆ. ಅಲ್ಲಲ್ಲ ಸತ್ಯ ಘಟನೆ.
ನನ್ನ ಸಂಶಯ ಇಷ್ಟೆ. ಯಾವ ತಾಯಿಯೂ ಬಸ್ ಟಾಪ್ ಮೇಲೆ ಮಗುವನ್ನಿಟ್ಟು ತಾನು ಮಾತ್ರ ಒಳಗೆ ಕೂರುವುದಿಲ್ಲ. ಒಂದೋ ಆಕೆಯೂ ಮಗುವಿನ ಜತೆಯೇ ಬಸ್ ಟಾಪಿನ ಮೇಲೆ ಕೂರುತ್ತಾಳೆ. ಕರುನಾಡಲ್ಲಿ ಇನ್ನೂ ಅಂತಹ ತಾಯಂದಿರು ಇಲ್ಲ ಎಂಬುದು ನನ್ನ ಭಾವನೆ. ಹೀಗಿರುವಾಗ ಆ ಹಿರಿಯರು ಹೇಳಿದ ಘಟನೆ ಸತ್ಯಾಸತ್ಯತೆ ಬಗ್ಗೇ ನನಗೆ ಅನುಮಾನವಿದೆ. ಅವರು ಏನೋ ಹೇಳಲು ಹೋಗಿ ಏನೋ ಹೇಳಿದ್ದರು. ಯಾಕೆ ಕೆಲವರು ದೊಡ್ಡ ಸ್ಥಾನದಲ್ಲಿದ್ದರೂ ಹೀಗೆಲ್ಲ ಮಾತನಾಡುತ್ತಾರೊ? ಅಥವಾ ಮಾತನಾಡುವ ತೆವಲು ಅವರಿಂದ ಹೀಗೆಲ್ಲ ಆಡಿಸುತ್ತದೊ? ಒಂದೂ ಅರ್ಥವಾಗುತ್ತಿಲ್ಲ. ಅಂತೂ ಅವರ ಕತೆಯಿಂದಾಗಿ ನಿಷ್ಪ್ರಯೋಜಕ ಕಾರ್ಯಮವೊಂದು ನಮ್ಮನ್ನು ಚಿಂತೆಗೆ ಹಚ್ಚಿದ್ದು ಸುಳ್ಳಲ್ಲ.
ಈ ಕತೆ ನಿಮ್ಮನ್ನೂ ಚಿಂತೆಗೆ ಹಚ್ಚಿದರೆ ನಾನು ಅದಕ್ಕೆ ಕಾರಣವಲ್ಲ ಎಂದು ಈ ಮೂಲಕ ಸ್ಪಷ್ಟಪಡಿಸುತ್ತೇನೆ. ಆ ಕೀರ್ತಿ ಏನಿದ್ದೂ ಕತೆ ಹೇಳಿದವರಿಗೇ ಸೇರಬೇಕು.