ಪ್ರಪಂಚದ ಜನರಿಗೆಲ್ಲ ಮೆಲ್ಟ್ ಡೌನಿನ ಚಿಂತೆ. ನನ್ನ ಮನೇಲೋ ಶಟ್ ಡೌನಿನ ಕಂತೆ!
ಎಲ್ಲರೂ ಸಾಮಾನ್ಯ ಜೀವನಕ್ಕೆ ಹಣ ಹೊಂದಿಸುವ ಹರಿಬರಿ. ನನಗೋ ಶಟ್ ಡೌನಾದ ವಸ್ತುಗಳ ದುರಸ್ತಿಯ ತರಾತುರಿ!
ನಾನು ಸೆಪ್ಟೆಂಬರ್ನಲ್ಲಿ ಊರಿಗೆ ಹೋಗಿ ಬಂದಾಗಿಬನಿಂದ ದುರಸ್ತಿ ಮಾಡಿಸಿದ ವಸ್ತುಗಳ ಪಟ್ಟಿ ನೋಡಿದರೆ, ಸರಿಯಿರುವ ನನ್ನ ತಲೆಯೂ ಹಾಳಾಗುತ್ತದೆ! ನಿಮ್ಮದೂ ಹಾಳಾಗಬಹುದು!!
ಊರಿಂದ ಬಂದ ದಿನವೇ ಮನೆಗೆ ಬಂದು ಮೊಬೈಲ್ ಚಾರ್ಜ್ ಹಾಕಿದರೆ, ಚಾರ್ಜೇ ಆಗುವುದಿಲ್ಲ. ಎಷ್ಟು ಕಷ್ಟಪಟ್ಟರೂ! ಮೊಬೈಲ್ ಬಳಸಬೇಕಾದರೆ ಚಾರ್ಜರ್ ಬೇಕೇ ಬೇಕು. ತಕ್ಷಣ ಅಂಗಿ ಹಾಕಿ ಹೊರಟೆ. ಮನೆಯಿಂದ ೧.೫ ಕಿ.ಮೀ. ದೂರವಿರುವ ಮಾರುಕಟ್ಟೆಗೆ ಹೋಗಿ, ಸೋನಿ ಶೋರೂಂ ಹುಡುಕಿ, ಸಮಸ್ಯೆ ಹೇಳಿದೆ. ಚಾರ್ಜರ್ ಹಾಳಾಗಿದೆ ಸರ್ ಎಂದ. ಸರಿ ೫೦೦ ರೂ. ಕೊಟ್ಟು ಚಾರ್ಜರ್ ಖರೀದಿಸಿದೆ.
ಕಿಸೆಯ ಚಾರ್ಜ್ ಕಡಿಮೆಯಾದರೂ, ಮೊಬೈಲ್ ಫುಲ್ ಚಾರ್ಜ್ ಆಯಿತು!
ಸ್ವಲ್ಪ ದಿನ ಯಾವ ಸಮಸ್ಯೆಯೂ ಇರಲಿಲ್ಲ. ಅಷ್ಟೊತ್ತಿಗೆ ಬಂತು ನೋಡಿ ವಿಶ್ವ ಆರ್ಥಿಕ ಹಿಂಜರಿತ ಅಲಿಯಾಸ್ ಮೆಲ್ಟ್ ಡೌನು! ಜತೆಗೆ ಚಳಿ.
ಚಳೀಗೆ ಹೆದರಿಯೋ, ಆರ್ಥಿಕ ಹಿಂಜರಿತದ ಜರಿತಕ್ಕೊ ನನ್ನ ಟಿವಿ ಕಣ್ಮುಚ್ಚಿತು. ಹಿಂದಿನ ದಿನ ರಾತ್ರಿವರೆಗೂ ಸರಿಯಾಗೇ ಉರಿಯುತ್ತಿದ್ದ ಟಿವಿ, ಮರುದಿನ ಮಧ್ಯಾಹ್ನ ಹಚ್ಚಿದರೆ ಸಣ್ಣ ಸೌಂಡೂ ಹೊರಹಾಕಲಿಲ್ಲ! ಏನೋ ಸಣ್ಣ ಸಮಸ್ಯೆ ಇರಬಹುದು ಅಂತ ಹತ್ತಿರವೇ ಇರುವ ಎಲೆಕ್ಟ್ರೀಷಿಯನ್ ಕರೆಸಿದೆ. ಆತ ಬಂದು ನೋಡಿ, ಸರ್ ಟಿವಿ ಅಂಗಡಿಗೇ ತೆಗೆದುಕೊಂಡು ಹೋಗಬೇಕು ಅಂದ. ಹಾಗೆಲ್ಲ ಅವನ ಅಂಗಡಿಗಳಿಗೆ ಕಳುಹಿಸುವುದು ಸರಿಯಲ್ಲ. ಒಮ್ಮೊಮ್ಮೆ ಅಂಗಡಿಗೆ ಹೋಗಿ ಕುಳಿತ ಟಿವಿ ಮರಳುವುದೇ ಇಲ್ಲ. ಹೀಗಾಗಿ ಹೆದರಿದ ನಾನು ಬೇಡ ಬಿಡು. ಕಂಪನಿಯ ಸರ್ವೀಸ್ ರೂಂನಲ್ಲೇ ದುರಸ್ತಿ ಮಾಡಿಸುತ್ತೇನೆ ಅಂದೆ. ೧೦೦ ರೂ. ಕೊಟ್ಟು ಕಳುಹಿಸಿದೆ. ಸರಿ ಪಿಲಿಫ್ಸ್ ಕಸ್ಟಮರ್ ಕೇರ್ ಗೆ ಫೋನಾಯಿಸಿದೆ. ಮರುದಿನ ಒಬ್ಬ ಎಕ್ಸಿಕ್ಯುಟೀವ್ ರೂಪದ ಎಲೆಕ್ಟ್ರೀಷಿಯನ್ ಬಂದ. ನೋಡಿ, ಸರ್ ಟಿವಿ ಸರ್ವೀಸ್ ರೂಮಿಗೆ ತನ್ನಿ ಎಂದ. ಮನೆ ಬಳಿಯ ಎಲೆಕ್ಟ್ರೀಚಿಯನ್ ಹೇಳಿದ್ದನ್ನೇ ಆತನೂ ಹೇಳಿದ್ದ. ಈತನ ಚಾರ್ಜು ೨೮೦ ರೂ!
ಮರುದಿನ ಕಾರಲ್ಲಿ ಟಿವಿ ತುಂಬಿ ಸರ್ವೀಸ್ ರೂಂ ಹುಡುಕಿ ಹೋದೆ. ೫ ದಿನದ ನಂತರ ಟಿವಿ ಮನೆಗೆ ಬಂತು. ಒಟ್ಟು ೯೦೦ ರೂ. ಕಿಸೆಯಿಂದ ಹೋಗಿತ್ತು!
ಈ ನಡುವೆ ಕಾರಿನ ಸರ್ವೀಸಿಂಗ್ ಬಾಕಿ ಇತ್ತು. ಅಲ್ಲಿಗೆ ಹೋದರೆ ಸರ್ ೬೦,೦೦೦ದ ಸರ್ವೀಸು. ಮೇಜರ್ರು ಅಂದ. ಬಿಲ್ಲು ಮೇಜರ್ ಆಗೇ ಇತ್ತು. ೮೦೦೦ ರೂ. ತೆತ್ತು ಗಾಡಿ ತಂದೆ. ಮರುದಿನ ಬೆಳಗ್ಗೆ ಕಾರು ಸ್ಟಾರ್ಟ್ ಮಾಡಿದರೆ ಹಳೆ ಫಿಯೆಟ್ ಗಾಡಿಯಂತೆ ಸ್ಟಾರ್ಟ್ ಆಗಲು ನಿರಾಕರಿಸಿತು! ಅಂತೂ ೨-೩ ಬಾರಿ ಪ್ರಯತ್ನಿಸಿದ ಮೇಲೆ ಸ್ಟಾರ್ಟ್ ಆಯಿತು. ಅವತ್ತೇನೋ ಕೆಲಸ. ಶೋರೂಂಗೆ ಹೋಗಲಾಗಲಿಲ್ಲ. ಮತ್ತೆ ಮರುದಿನ ಇದೇ ಕತೆ. ಹಿಂದಿನ ದಿನ ಕೊಂಚ ಪ್ರಯತ್ನಿಸಿದ ಮೇಲೆ ಸ್ಟಾರ್ಟ್ ಆಗಿದ್ದರಿಂದ ನಾನೂ ಚಲಬಿಡದೆ ಪ್ರಯತ್ನಿಸಿದೆ! ಕಾರೂ ಚಲಬಿಡಲಿಲ್ಲ!
ಸಮೀಪದ ಗ್ಯಾರೇಜಿನಿಂದ ಮೆಕ್ಯಾನಿಕ್ ಕರೆತಂದು ಆತನಿಗೆ ೧೦೦ ರೂ. ಕೊಟ್ಟಮೇಲೆಯೇ ಕಾರು ಸ್ಟಾರ್ಟ್ ಆಗಿದ್ದು!
ಸೀದಾ ಶೋ ರೂಮಿಗೆ ಹೋಗಿ ದಬಾಯಿಸಿದೆ. ಕಾರಿಟ್ಟು ಹೋಗಿ ಸರ್. ನಾಳೆ ಎಲ್ಲಾ ಕರೆಕ್ಟ್ ಆಗಿರುತ್ತೆ ಅಂತ ತಲೆಸವರಿ ಕಳುಹಿಸಿದರು. ಮರುದಿನ ಹೋದೆ. ಯಾವುದೇ ಕರ್ಚಿಲ್ಲದೆ ರಿಪೇರಿ ಮಾಡಿಟ್ಟಿದ್ದರು. ಉಸ್ಸಪ್ಪ, ಬದುಕಿದೆಯಾ ಬಡ ಜೀವವೆ (೨ ದಿನದ ಹಿಂದಷ್ಟೇ ೮೦೦೦ ಕೊಟ್ಟು ಬಡವಾಗಿದ್ದರಿಂದ!) ಅಂತ ಮನೆಗೆ ಬಂದೆ. ಮರುದಿನ ಬೆಳಗ್ಗೆ ಎದ್ದು ಕಚೇರಿಗೆ ಹೊರಟರೆ ಸೆಂಟ್ರಲ್ ಲಾಕಿಂಗ್‌ನ ರಿಮೋಟ್ ಬಟನ್ ಒತ್ತಿದರೂ ಕಾರು ಕುಂಯ್ ಅನ್ನಲಿಲ್ಲ. ಹಲವು ಬಾರಿ ಪ್ರಯತ್ನಿಸಿದೆ. ಕೊನೆಗೆ ಚಾವಿ ಮೂಲಕ ತೆಗೆದು ಒಳಗೆ ಕೂತರೆ, ಸೈರನ್ ಹೊಡೆದುಕೊಳ್ಳಲಾರಂಭಿಸಿತು!
ಪಾಪ. ನನ್ನ ಹೆಂಡತಿ ಸಮೀಪದ ಮಾರುಕಟ್ಟೆಗೆ ಹೋಗಿ ಸೆಂಟ್ರಲ್ ಲಾಕಿಂಗ್ ರಿಮೋಟ್ಗೆ ಸೆಲ್ ಹಾಕಿಸಿ ತಂದಳು. ನನ್ನ ಗೃಹಚಾರಕ್ಕೆ ರಿಮೋಟ್ ನ ಸೆಲ್ ಸತ್ತೇ ಹೋಗಿತ್ತು!
ಇದಾದ ಸ್ವಲ್ಪ ದಿನಕ್ಕೆ ನನ್ನ ಲ್ಯಾಪ್ಟಾಪ್ ಸಮಸ್ಯೆ ಕೊಡತೊಡಗಿತು. ನನ್ನ ಕಚೇರಿಯಲ್ಲಿರುವ ಕಂಪ್ಯೂಟರ್ ತಜ್ಞನಿಗೆ ಕೊಟ್ಟೆ. ಆತ ಅದೇನೋ ಮಾಡಿಸಿ ತಂದ. ೫೦೦ ರೂ. ಕೊಡಿ ಅಂದ. ಅದಾದ ೩ ದಿನ ಲ್ಯಾಪ್ಟಾಪ್ ಸ್ಟಾರ್ಟ್ ಆಗಲು ನಿರಾಕರಿಸಿತು. ಈ ಕಿರಿಕಿರಿ ಬೇಡ. ದರ ಹೆಚ್ಚಾದರೂ ತೊಂದರೆಯಿಲ್ಲ ಏಸರ್ ಸರ್ವೀಸ್ ರೂಂನಲ್ಲೇ ದುರಸ್ತಿ ಮಾಡಿಸೋಣ. ಒಮ್ಮೆ ಸಮಸ್ಯೆ ಬಗೆಹರಿಯುತ್ತದಲ್ಲ ಎಂದು ಅಲ್ಲಿಗೇ ಕೊಟ್ಟೆ. ಮರುದಿನ ಸರ್ ಮದರ್ ಬೋರ್ಡ್ ಹೋಗಿದೆ. ೧೩,೦೦೦ ಆಗುತ್ತೆ ಅಂತ ಫೋನ್ ಬಂತು!
ಹಳೆ ಲ್ಯಾಪ್ಟಾಪ್ ಮಾರಾಟ ಮಾಡಿದರೆ ನೆಟ್ಟಗೆ ೫೦೦೦ ಸಿಗುವುದು ಅನುಮಾನ. ಅದಕ್ಕೆ ೧೩,೦೦೦ ಕೊಟ್ಟು ದುರಸ್ತಿ ಮಾಡಿಸುವುದೇ? ಅಂತ ಈಗ ೨೦,೫೦೦ ರೂ. ಕೊಟ್ಟು ಹೊಸ ಕಂಪ್ಯೂಟರ್ ತಂದಿರಿಸಿಕೊಂಡಿದ್ದೇನೆ. ನನ್ನ ಗೃಹಚಾರಕ್ಕೆ ಅದೂ ಸಮಸ್ಯೆ ಕೊಡಬೇಕೆ!
ಅಂತೂ ನೆಹರುಪ್ಲೇಸಿಗೆ (ಏಷ್ಯಾದ ದೊಡ್ಡ ಕಂಪ್ಯೂಟರ್ ಮಾರುಕಟ್ಟೆ) ತಿರುಗಾಡಿ ಅದನ್ನಂತೂ ಸರಿ ಮಾಡಿಸಿದ್ದೇನೆ. ಟ್ರಿಪಲ್ ಕೋರ್ ಪ್ರೊಸೆಸರ್ ಹಾಕಿಸಿದ್ದಕ್ಕೇ ಇರಬೇಕು ಹೊಸ ಕಂಪ್ಯೂಟರ್ ಸರಿಯಾಗಿ ಕೆಲಸ ಮಾಡಲು ನೆಹರೂ ಪ್ಲೇಸಿಗೆ ೩ ಬಾರಿ ಹೋಗಬೇಕಾಯಿತು! ಈಗ ಅದರ ಮೂಲಕವೇ ಬ್ಲಾಗಿಸುತ್ತಿರುವುದು. ಲ್ಯಾಪ್ಟಾಪ್ ಇನ್ನೂ ತಂದಿಲ್ಲ.
ಈ ನಡುವೆ ಟಿವಿ ಒಂದು ಶುಭ ಮುಂಜಾನೆ ಅರ್ಥಾತ್ ಹೊಸ ವರ್ಷದ ೨ನೇ ದಿನ ಮತ್ತೆ ಕೆಲಸ ಮಾಡುವುದನ್ನು ನಿಲ್ಲಿಸಿತು. ಅದಕ್ಕೆ ಹೊಸ ವರ್ಷದಲ್ಲಿ ಹೊಸದಾಗಿ ದುರಸ್ತಿ ಮಾಡಿಸಿಕೊಳ್ಳುವಾಸೆ! ಮೊದಲು ಮಾಡಿದ ತಪ್ಪುಗಳಿಂದ ಪಾಠ ಕಲಿತಿದ್ದ ನಾನು ಸೀದ ಶೋರೂಮಿಗೆ ಟಿವಿ ತೆಗೆದುಕೊಂಡು ಹೋದೆ. ರಿಪೇರಿ ಮಾಡಿಕೊಟ್ಟು ೧ ತಿಂಗಳಿನ್ನೂ ಆಗಿಲ್ಲ ಎಂಬ ಕಾರಣಕ್ಕೋ ಏನೋ ಹಾಳಾಗಿದ್ದ ಬಿಡಿ ಭಾಗದ ೨೦೦ ರೂ. ಮಾತ್ರ ಪಡೆದು ರಿಪೇರಿ ಮಾಡಿಕೊಟ್ಟರು.
ಇಷ್ಟಕ್ಕೇ ಮುಗಿದಲ್ಲ ನನ್ನ ವ್ಯಥೆ!
ಫ್ರಿಜ್ಜು ಸದ್ಯಕ್ಕೆ ಹಾಳಾಗಿದೆಯೋ ಇಲ್ಲವೋ ಗೊತ್ತಿಲ್ಲ. ಅದೇನು ದಿಲ್ಲಿಯ ತಂಪು ಫ್ರಿಡ್ಜಿಗಿಂತ ಜಾಸ್ತಿ ತಂಪಿರುವುದರಿಂದಲೋ ಏನೋ ಫ್ರಿಡ್ಜು ತಂಪೇ ಆಗುತ್ತಿಲ್ಲ ಎಂಬ ಅನುಮಾನ ನಮಗೆ, ಈಗ ಚಳಿ ಇರುವುದರಿಂದ ಅದಕ್ಕೆ ಸದ್ಯ ರೆಸ್ಟ್ ನೀಡಿದ್ದೇವೆ. ಬೇಸಿಗೆ ಬಂದ ಮೇಲೆ ಅದರ ಬಗ್ಗೆ ತಲೆಬಿಸಿ ಮಾಡಿಕೊಳ್ಳುವ ಅಂತ!
ಇದೆಲ್ಲ ಓದಿದ ಮೇಲೆ ಸದ್ಯಕ್ಕೆ ವಿನಾಯಕನ ಮನೆಯಲ್ಲಿ ಸರಿ ಇರುವುದು ಅವನ ಮತ್ತು ಹೆಂಡತಿಯ ತಲೆ ಮಾತ್ರ ಅಂತ ನಿಮಗೆ ಅನ್ನಿಸಿದರೂ ಅಚ್ಚರಿಯಿಲ್ಲ. ಯಾಕೆಂದರೆ ನನಗೇ ಎಷ್ಟೋ ಸಾರಿ ಹಾಗನ್ನಿಸಿದೆ!
ನಾನು ದಿಲ್ಲಿಗೆ ಬಂದು ೭ ತಿಂಗಳಷ್ಟೇ ಆಗಿದೆ. ಈ ಅವಧಿಯಲ್ಲಿ ನಿನ್ನ ಸಾಧನೆಯೇನು ಅಂತ ಯಾರಾದರೂ ಕೇಳಿದರೆ, ಯಾವುದೇ ವಸ್ತು ಕೊಡಿ ನಾನು ದುರಸ್ತಿ ಮಾಡಿಸಿ ತರಬಲ್ಲೆ ಎಂದು ಧೈರ್ಯದಿಂದ ಹೇಳಬಲ್ಲೆ!
ಸದ್ಯಕ್ಕೆ ನನ್ನ ಈ ‘ಹಾಳು’ ಪುರಾಣ ಮುಗಿಸುತ್ತೇನೆ. ಮತ್ತೇನಾದರೂ ಹಾಳಾದರೆ ಬರೆದು ತಿಳಿಸುತ್ತೇನೆ ಎಂದು ಈ ಮೂಲಕ ನಿಮ್ಮನ್ನು ಹೆದರಿಸುತ್ತಿದ್ದೇನೆ!