ಅಬ್ತಕ್ ಚಪ್ಪನ್, ರಿಸ್ಕ್, ಶೂಟ್‌ಔಟ್ ಎಟ್ ಲೋಖಂಡ್ವಾಲಾ, ಎ ವೆನ್ಸಡೆ, ಗಂಗಾಜಲ್...
ಓಹ್! ಗಂಗಾಜಲ್, ಅಬ್ತಕ್ ಚಪ್ಪನ್ ಪಿಚ್ಚರ್ಗಳನ್ನು ಹಲವು ಬಾರಿ ನೋಡಿದ್ದೇನೆ. ನೀವು ಇನ್ನೊಮ್ಮೆ ತೋರಿಸಿದರೂ ಮೊದಲ ಸಾರಿ ನೋಡಿದಾಗಿನಿಗಿಂತ ಹೆಚ್ಚು ಆಸಕ್ತಿಯಿಂದ ನೋಡುತ್ತೇನೆ. ನನಗೆ ಇಷ್ಟವಾಗೋ ಪಿಚ್ಚರ್(ಸಿನಿಮಾ)ಗಳ ಲೀಸ್ಟು ನೋಡಿದರೆ ಎಲ್ಲವೂ ಒಂದೇ ಥರದವು. ಅವುಗಳ ಕತೆ, ಅಲ್ಲಿನ ತಿರುವುಗಳಲ್ಲಿ ವ್ಯತ್ಯಾಸ ಇದೆಯಾದರೂ ಹೆಚ್ಚಿನವೆಲ್ಲ ಪೊಲೀಸರಿಗೆ ಸಂಬಂಧಿಸಿದ ಕತೆಗಳು. ಅದರಲ್ಲೂ ನಿಯತ್ತಿನ, ಧಕ್ಷ ಪೊಲೀಸ್ ಅಧಿಕಾರಿಗಳ ಕತೆಗಳು. ಒಳ್ಳೆ ಪೊಲೀಸರ ಕತೆಗಳು!
ಒಂದು ಕಾಲದಲ್ಲಿ ಪೊಲೀಸರು ಅಂದರೆ ಕೆಟ್ಟವರು. ಎಲ್ಲ ಮುಗಿದ ಮೇಲೆ ಬರುವವರು. ಲಂಚ ತಿನ್ನುವವರು. ಖಾಕಿ ಧಾರಿ ಗೂಂಡಾಗಳು ಎಂದು ಬಿಂಬಿಸುವ ಪಿಚ್ಚುಗಳೇ ಬರುತ್ತಿದ್ದವು. ಅವುಗಳನ್ನೂ ನೋಡಿದ್ದೇನೆ. ಈಗಿನ ಪೊಲೀಸ್ ಪರ ಪಿಚ್ಚರ್ ಗಳನ್ನೂ ನೋಡುತ್ತಿದ್ದೇನೆ.
ಚಿಕ್ಕನಿರುವಾಗ ನನ್ನ ಫೇವರಿಟ್ ಹೀರೊ ದೇವರಾಜ್! ಯಾಕೆಂದರೆ ಆತ ದಕ್ಷ ಪೊಲೀಸ್ ಅಧಿಕಾರಿಗಳ ಪಾತ್ರ ಮಾಡುತ್ತಿದ್ದ. ಒರಿಜಿನಲ್ ಸಾಂಗ್ಲಿಯಾನಾ ಇಷ್ಟವಾಗದಿದ್ದರೂ ಶಂಕರ್‌ನಾಗ್‌ನ ಎಸ್ಪಿ ಸಾಂಗ್ಲಿಯಾನಾ ಪಿಚ್ಚರ್ ಇಷ್ಟವಾಗಿತ್ತು! ನಂತರ ಸಾಯಿಕುಮಾರ್ ಬಂದ. ಪೊಲೀಸ್‌ಸ್ಟೋರಿ ಮೂಲಕ ಇಷ್ಟವಾದ.
ಈಗಲ್ಲ. ಚಿಕ್ಕವನಿರುವಾಗಿನಿಂದಲೂ ನನಗೆ ಪೊಲೀಸರ ಕತೆಯ ಪಿಚ್ಚರ್‌ಗಳೆಂದರೆ ಇಷ್ಟ. ಕೊಂಚ ಮಟ್ಟಿಗೆ ಭೂಗತಲೋಕದ ಕತೆಗಳು ಕೂಡ! ಸೈನಿಕರ ಕತೆಗಳು ಇಷ್ಟವಾಗುತ್ತವಾದರೂ ಪೊಲೀಸರ ಕತೆಗಳಷ್ಟು ಅವು ನನ್ನನ್ನು ಸೆಳೆಯಲಿಲ್ಲ. ಮನಸಲ್ಲಿ ನಿಲ್ಲಲಿಲ್ಲ.
ಯಾಕೆ?
ನಾನಗೆ ಪೊಲೀಸ್ ಆಗಬೇಕೆಂಬ ಆಸೆ ಇದ್ದದ್ದಕ್ಕಾ? ಆ ಮೂಲಕ ಸಮಾಜಕ್ಕೆ ಒಂದಷ್ಟಾದರೂ ಒಳ್ಳೆಯದು ಮಾಡಬೇಕು ಅಂದುಕೊಂಡಿದ್ದಕ್ಕಾ? ಸೈನಿಕನಾಗಿ ಹೊರಗಿನ ಶತ್ರುಗಳ ವಿರುದ್ಧ ಹೋರಾಡುವುದಕ್ಕಿಂತ ಪೊಲೀಸ್ ಅಧಿಕಾರಿಯಾಗಿ ದೇಶದೊಳಗಿನ ಶತ್ರುಗಳ ವಿರುದ್ಧ ಹೋರಾಡುವ ಮನಸ್ಸಿದ್ದಿದ್ದಕ್ಕಾ? ಅಥವಾ ಇಂಥ ಪಿಚ್ಚರ್ ನೋಡಿಯೇ ನಾನೂ ಒಬ್ಬ ದಕ್ಷ ಪೊಲೀಸ್ ಅಧಿಕಾರಿ ಆಗಬೇಕು ಅನ್ನಿಸಿತಾ?
ಇವತ್ತಿಗೂ ನನಗೆ ಈ ಪ್ರಶ್ನೆಗಳಿಗೆ ಸರಿಯಾದ ಉತ್ತರ ಸಿಕ್ಕಿಲ್ಲ. ಆದರೂ ನಾನು ಒಬ್ಬ ಒಳ್ಳೆ ಪೊಲೀಸ್ ಅಧಿಕಾರಿಯಾಗಬೇಕು ಅದುಕೊಂಡಿದ್ದು ಸತ್ಯ. ಹಲವು ಕಾರಣಗಳು. ಅದಾಗಲಿಲ್ಲ. ಬದಲಾಗಿ ಪತ್ರಕರ್ತನಾದೆ. ಈ ಮೂಲಕವೂ ಸಮಾಜಕ್ಕೆ ಸೇವೆ ಸಲ್ಲಿಸಬಹುದಲ್ಲ ಎಂಬ ಸಮಾದಾನ. ಅಷ್ಟೇ ಅಲ್ಲ ಕ್ರೈಂ ವರದಿಗಾರನೂ ಆದೆ. ಆ ಮೂಲಕ ಮತ್ತೆ ನನಗಿಷ್ಟವಾದ ಪೊಲೀಸ್ ಇಲಾಖೆ ಸಂಪರ್ಕ ಪಡೆದೆ.
ಒಳ್ಳೆ ಅಧಿಕಾರಿಗಳ ಪರಿಚಯವಾಯಿತು. ಹೆಸರು ಬರೆಯುತ್ತ ಹೋದರೆ ಸಾಕಷ್ಟಿದೆ. ಹಾಗೆ ಬರೆದರೂ ಅವರಿಗೂ ಹಾನಿ! ಅಂತೂ ಒಳ್ಳೆ ಅಧಿಕಾರಿಗಳ ಪರಿಚಯವೇ ಆಯಿತು. ಯಾರಿಗೂ ಗೊತ್ತಾಗದ ಅದೆಷ್ಟೋ ಸಂಗತಿಗಳು ಕಿವಿಗೆ ಬೀಳತೊಡಗಿದವು. ಕಿವಿಗೆ ಬಿದ್ದಿದ್ದು ಕಣ್ಣಿಗೂ ಕಂಡವು. ಏನೇ ಹೇಳಿ ನನಗಂತೂ ಸಾಕಷ್ಟು ಒಳ್ಳೆ ಅಧಿಕಾರಿಗಳೇ ಕಂಡರು. ಅಥವಾ ನನ್ನ ಮನಸ್ಸಲ್ಲಿ ಒಳ್ಳೆಯದೇ ಇದ್ದಿದ್ದಕ್ಕೆ ಅವರಲ್ಲಿದ್ದ ಒಳ್ಳೆಯದನ್ನಷ್ಟೇ ಕಂಡೆನೊ? ಕೆಲವು ವಿಷಯದಲ್ಲಿ ಪತ್ರಕರ್ತನಾಗಿ ಅವರಿಗೆ ಸಹಾಯವನ್ನೂ ಮಾಡಿದೆ. ಆ ಮೂಲಕ ಸಮಾಜಕ್ಕೂ ಅಂತ ಅಂದುಕೊಂಡೆ. ಈಗಲೂ ಅವರೊಂದಿಗೆ ಗೆಳತನ ನನಗಿಷ್ಟ.
ಇಂದಿಗೂ ಅದೆಷ್ಟೋ ಒಳ್ಳೆ ಅಧಿಕಾರಿಗಳಿದ್ದಾರೆ. ಅವರನ್ನೆಲ್ಲ ಅರ್ಧ ಹಾಳು ಮಾಡುತ್ತಿರುವವರು ನಮ್ಮ ರಾಜಕಾರಣಿಗಳು. ಅವರ ಲಾಭಕ್ಕೆ ಪೊಲೀಸರು ದಾಳಗಳು. ಸಾರ್ವಜನಿಕರು ನಡೆಸುವ ಕಾಯಿಗಳು. ಕಾನೂನು ಮುರಿಯುವವನಿಗೆ ಯಾವುದೂ ಇಲ್ಲ. ಅದೇ ಕಾನೂನು ಪಾಲಕರು ಸಮಾಜದ ಒಳ್ಳೆಯದಕ್ಕೆ ಎನ್‌ಕೌಂಟರ್ ನಡೆಸಿದರೆ ಮಾನವ ಹಕ್ಕು ನಾಶವಾದ ಬಗ್ಗೆ ಬೊಬ್ಬೆ ಹೊಡೆಯಲಾಗುತ್ತದೆ! ಕಾನೂನು ಪಾಲಿಸದೆ ಸಮಾಜಕ್ಕೆ ಕೆಡುಕುಂಟು ಮಾಡುವವನ ನಾಶಕ್ಕೆ ಕಾನೂನು ಪಾಲಕರು ಕೊಂಚ ಕಾನೂನು ಬಿಟ್ಟು ಹೋದರೆ ತಪ್ಪೇನು?
ನಿಮಗೆ ನೆನಪಿರಬಹುದು, ಶೂಟೌಟ್ ಎಟ್ ಲೋಖಂಡ್ವಾಲಾದಲ್ಲಿ ಪ್ರಕರಣದ ತನಿಖೆ ನಡೆಸುವ ನ್ಯಾಯಾಧೀಶರ ಬಳಿ ಅಮಿತಾಬ್ ಕೊನೆಯಲ್ಲೊಂದು ಪ್ರಶ್ನೆ ಕೇಳುತ್ತಾನೆ... ನೀವು ನ್ಯಾಯಾಲಯದಲ್ಲಿದ್ದೀರಿ. ಹೆಂಡತಿ- ಮಕ್ಕಳು ಮನೆಯಲ್ಲಿದ್ದಾರೆ. ಒಬ್ಬ ವ್ಯಕ್ತಿ ನಿಮ್ಮ ಮನೆಯ ಹೊರಗೆ ಪಿಸ್ತೂಲ್ ಹಿಡಿದು ನಿಂತಿದ್ದಾನೆ. ಆತ ಪೊಲೀಸ್ ಆಗಿರಲಿ ಎಂದು ಬಯಸುತ್ತೀರೊ? ಗೂಂಡಾ ಆಗಿರಲಿ ಎಂದು ಬಯಸುತ್ತೀರೊ?
ಸಹಜ. ಆತ ಪೊಲೀಸ್ ಆಗಿರಲಿ ಎಂದೇ ಬಯಸುತ್ತೇವೆ. ಎಲ್ಲದಕ್ಕೂ ಉತ್ತರ ಅಲ್ಲಿಯೇ ಇದೆ. ಎಷ್ಟೇ ಕೆಟ್ಟವರಿರಲಿ, ಪೊಲೀಸರಿಗೆ ಕಾನೂನಿನ ತಡೆಯಿರುತ್ತದೆ. ಆತನನ್ನು ನಿಯಂತ್ರಿಸುವುದು ಕಷ್ಟವಲ್ಲ. ಆದರೆ ಕಾನೂನೇ ಇಲ್ಲದ ಗೂಂಡಾಗಳು ಹಾಗಲ್ಲ. ದುರತವೆಂದರೆ ಅಂಥವರು ಈಗ ಖಾದಿ ಧರಿಸಿ, ನಮ್ಮನ್ನೇ ಆಳುವಂತಾಗಿದ್ದಾರೆ!
ಅದೇನು ನಾನು ಬೆಳೆದ ವಾತಾವರಣವೋ? ನನ್ನಪ್ಪ-ಅಮ್ಮ ನೀಡಿದ ಸಂಸ್ಕಾರವೋ? ಅಥವಾ ಅವರೇ ಸ್ವತಃ ನಿಯತ್ತಿನಿಂದ, ಭಾರತದ ಉತ್ತಮ ಪ್ರಜೆಗಳಾಗಿರುವುದೋ? ನನ್ನ ಮನಸ್ಸಿನಲ್ಲಿ ಚಿಕ್ಕಂದಿನಿಂದಲೂ ಲಂಚ, ಅನ್ಯಾಯ ವಿರೋಧಿ ಮನಸ್ಸು ರೂಪುಗೊಂಡುಬಿಟ್ಟಿದೆ. ಇವತ್ತಿಗೂ ಅನ್ಯಾಯ, ಲಂಚ ಕಂಡರೆ ಅದು ಸಹಿಸದು. ಎಲ್ಲ ಕಡೆ ಲಂಚ ಇದೆ ಅಂತ ಅನ್ನಿಸಿದರೂ ನಾನು ಇವತ್ತಿನವರೆಗೆ ಯಾರಿಗೂ ಲಂಚಕೊಟ್ಟಿಲ್ಲ. ಪತ್ರಕರ್ತನಾಗಿಯೂ, ದೊಡ್ಡ ಪೊಲೀಸ್ ಅಧಿಕಾರಿಗಳ ಪರಿಚಯವಿದ್ದೂ ಪೊಲೀಸರಿಗೆ ದಂಡ ಕಟ್ಟಿದ್ದೇನೆ. ಲಂಚಕೊಟ್ಟಿಲ್ಲ. ಇವತ್ತಿಗೂ ನನಗೆ ಲಂಚಕೋರರನ್ನು, ಕೊಳಕು ರಾಜಕಾರಣಿಗಳನ್ನು ಕಂಡರೆ ಎಲ್ಲಿಲ್ಲದ ದ್ವೇಷ. ಅಂಥವರ ವಿರುದ್ಧ ಬರೆಯಲು ಸಿಕ್ಕ ಒಂದು ಅವಕಾಶವನ್ನೂ ನಾನು ಇವತ್ತಿನವರೆಗೆ ಸುಮ್ಮನೆ ಬಿಟ್ಟಿಲ್ಲ. ನನಗೆ ಅವರ ಮೇಲೆ ಸೇಡು ತೀರಿಸಿಕೊಳ್ಳು ಕಾನೂನು ಬದ್ಧವಾಗಿರುವ ಮಾರ್ಗ ಅದು.
ಎಲ್ಲರೂ ಕಳ್ಳರು. ಲಂಚ ಎಲ್ಲೆಲ್ಲೂ ಆವರಿಸಿದೆ ಅಂತ ಎಷ್ಟೇ ಅಂದರೂ ನನಗೆ ಈಗಲೂ ನಂಬಿಕೆಯಿದೆ. ಅದೇನೆಂದರೆ ಇವತ್ತಿಗೂ ನಿಯತ್ತಿನ ಜನ ಇದ್ದಾರೆ. ಧಕ್ಷ ಅಧಿಕಾರಿಗಳಿದ್ದಾರೆ. ರಾಜಕಾರಣಿಗಳೂ! ಸಂಖ್ಯೆ ಕಡಿಮೆ ಇರಬಹುದು. ಹೆಚ್ಚಿದ್ದರೂ ನಮಗೆ ಕಡಿಮೆ ಅನ್ನಿಸಬಹುದು. ಅವರಿಗೆ ಕೆಟ್ಟವರು ಕಿರಿಕಿರಿ ನೀಡಬಹುದು. ಅದೇನಾದರೂ ಇರಲಿ. ನಾವು ನಮ್ಮಷ್ಟಕ್ಕೆ ನಿಯತ್ತಿನಿಂದ ಇರಬೇಕು. ಇಲ್ಲಿದ್ದುಕೊಂಡೇ ಕೈಲಾದಷ್ಟು ಬದಲಾವಣೆ ಮಾಡಬಹುದು ಅಥವಾ ನಿಯತ್ತು ಇನ್ನಷ್ಟು ಕೆಡದಂತೆ, ಭಷ್ಟತೆ ಹರಡದಂತೆ ತಡೆಯಬಹುದು.
ನಾವು ಮಾಡಬೇಕಾದ್ದಿಷ್ಟೆ, ನಾವು ನಿಯತ್ತಿನಿಂದಿರಬೇಕು. ಲಂಚ ಕೊಡಬಾರದು. ನಮ್ಮ ಮಕ್ಕಳೂ ನಿಯತ್ತಾಗಿ ಭಾರತದ ಉತ್ತಮ ಪ್ರಜೆಯಾಗುವಂತೆ ನೋಡಿಕೊಳ್ಳಬೇಕು. ಅಷ್ಟು ಸಾಕು. ಅದೇ ನಾವು ದೇಶಕ್ಕೆ ಕೊಡಬಹುದಾದ ಕೊಡುಗೆ. ಅದಕ್ಕಾಗಿ ನಮಗೆ ಯಾರೂ ಭಾರತ ರತ್ನ ಪ್ರಶಸ್ತಿ ನೀಡಬೇಕಿಲ್ಲ. ಯಾರೂ ನಮ್ಮನ್ನು ಗುರುತಿಸಬೇಕಾಗಿಯೂ ಇಲ್ಲ.
(ವಿ.ಸೂ: ಇವತ್ತು (೧೪-೧೦-೦೮) ರಾತ್ರಿ ಯುಟಿವಿಯಲ್ಲಿ ರಿಸ್ಕ್ ಸಿನಿಮಾ ನೋಡ್ತಾ ಇದ್ದೆ. ನನಗೆ ಪೊಲೀಸ್ ಸಿನಿಮಾಗಳು ಇಷ್ಟವಾಗುವ ಬಗ್ಗೆ ಯಾಕೊಂದು ಚಿಕ್ಕ ಬರಹ ಬ್ಲಾಗಿಸಬಾರದು ಅನ್ನಿಸಿತು. ಪಿಚ್ಚರ್‌ನೋಡುತ್ತ, ಜಾಹೀರಾತು ಬಂದಾಗ ಬರೆಯುತ್ತ ಹೋದೆ. ಪಿಚ್ಚರ್ ಬಗ್ಗೆ ಬರೆಯಬೇಕು ಅದುಕೊಂಡು ಹೊರಟವ, ಅದು ಎಲ್ಲಿಗೋ ಹೋಯಿತು. ತುಂಬ ಸೀರಿಯಸ್ ಅನ್ನಿಸಿ ಬೋರು ಹೊಡೆಸಿದ್ದರೆ, ಬಯ್ಯಬೇಡಿ. ಬರೆಯುತ್ತ ನನ್ನ ಬಗ್ಗೇ ಹೆಚ್ಚು ಹೊಗಳಿಕೊಂಡಿದ್ದೇನೆ ಅನ್ನಿಸಿದರೆ ಕ್ಷಮಿಸಿ. ನಿಯತ್ತಿನ ಮನುಷ್ಯನಾಗಿ ನನಗಷ್ಟು ನೈತಿಕ ಅಧಿಕಾರ ಇದೆ ಅಂದುಕೊಳ್ಳುತ್ತೇನೆ.)