ಒಂದು ಸಾಧಾರಣ ಊರು. ಬಹುಶಃ ಕೇರಳ ರಾಜ್ಯದ್ದು. ಆ ಊರಿಗೊಂದೇ ಶಾಲೆ. ಅದೂ ಖಾಸಗಿ. ಆ ಊರಿನ ಒಬ್ಬ ಬಡ ಮುದುಕ ತನ್ನ ಮೊಮ್ಮಗಳು ಲಕ್ಷ್ಮಿರಾಧಾಳನ್ನು ಆ ಶಾಲೆಗೆ ಸೇರಿಸಲು ಹೋಗುತ್ತಾನೆ. ಆದರೆ ಅಲ್ಲಿ ಕಂಡದ್ದು ಎಡ್ಮಿಶನ್ ಫುಲ್ ಬೋರ್ಡು. ಮುದಕಪ್ಪನಿಗೆ ಅದನ್ನು ಓದಲು ಬಾರದೆ ಶಾಲೆಯ ಒಳಗೆ ಹೋಗಲು ನೋಡಿದಾಗ, ಅಲ್ಲಿನ ಒಬ್ಬ ಮಾಸ್ತರ ಅಜ್ಜನಿಗೆ ಸೀಟಿಲ್ಲ ಎಂದು ಹೇಳಿ ಕಳುಹಿಸುತ್ತಾನೆ.
ಇದನ್ನು ಆ ಶಾಲೆಯ ಮುಖ್ಯಸ್ಥ ಫಾದರ್ ನೋಡುತ್ತಾನೆ. ಆತನಿಗೆ ಆ ಮುದುಕಪ್ಪನ ಮೊಮ್ಮಗಳನ್ನು ಶಾಲೆಗೆ ಸೇರಿಸಿಕೊಳ್ಳಲಾಗದಿರುವುದಕ್ಕೆ ಬೇಸರವಾಗುತ್ತದೆ. ಅಂತಹವರಿಗೂ ಕಲಿಯಲು ಅವಕಾಶ ಸಿಗುವಂತಾಗಬೇಕು ಎಂದು ಆಶಿಸುತ್ತಾನೆ. ಅದಕ್ಕೆ ಆತ ಒಂದು ಐಡಿಯಾ ಮಾಡುತ್ತಾನೆ. ತನ್ನ ಶಾಲೆಯಲ್ಲಿ ಶಿಕ್ಷಕರು ಕಲಿಸುವಾಗ ಅವರ ಎದುರು ಮೊಬೈಲ್ಗಳನ್ನು ಇಡುತ್ತಾನೆ. ಈ ಮೊಬೈಲ್ನಲ್ಲಿ ಹಳ್ಳಿಯ ಕೆಲವೆಡೆ ಜಾಗ ಗುರುತಿಸಿ, ಅಲ್ಲಿಟ್ಟ ಮೊಬೈಲ್ಗೆ ಸಂಪರ್ಕ ಕಲ್ಪಿಸುತ್ತಾನೆ. ಮೊಬೈಲ್ ಎದುರು ಮಕ್ಕಳು ಕುಳಿತು ಶಾಲೆ ಕಲಿಯುತ್ತಾರೆ. ಹೀಗೆ ಮೊಬೈಲ್ ಎದುರಲ್ಲಿ ಕುಳಿತು ಕಲಿತ ಲಕ್ಷ್ಮಿ ರಾಧಾ ಉತ್ತಮ ವಿದ್ಯಾರ್ಥಿನಿ ಬಹುಮಾನ ಗೆಲ್ಲುತ್ತಾಳೆ.
ಇಷ್ಟು ಕಾನ್ಸೆಪ್ಟು. ಅದಕ್ಕೆ ಅಂದವಾದ ಹಿನ್ನೆಲೆ ಸಂಗೀತ. ಓಹೊಹೊ ಓಹೊಹೊ ಓಹೊಹೋಹೊ ಎಂಬ ಮಕ್ಕಳ ಧ್ವನಿ. ಒಂದಷ್ಟು ಇಷ್ಟವಾಗಬಲ್ಲ ದೃಶ್ಯ. ಅಭಿಷೇಕ್ ಬಚ್ಚನ್ಗೆ ಇಲ್ಲಿ ಫಾದರ್ ಪಾತ್ರ.
ಇದು ಇವತ್ತಷ್ಟೇ ಇಡುಗಡೆಯಾದ (ಚಿತ್ರವಲ್ಲ) ಜಾಹೀರಾತು. ಐಡಿಯಾ ಮೊಬೈಲ್ನದ್ದು. ಬಹುಶಃ ನನಗೆ ಗೊತ್ತಿರುವ ಮಟ್ಟಿಗೆ ಇದೇ ಮೊದಲ ಬಾರಿಗೆ ಚಲನಚಿತ್ರ ಬಿಡುಗಡೆ ಮಾಡುವಾಗ ಜಾಹೀರಾತು ಪ್ರಕಟಿಸುತ್ತಾರಲ್ಲ ಹಾಗೆ ಜಾಹೀರಾತು ಪ್ರಕಟಿಸಿದ್ದರು. ಇಂದು ರಾತ್ರಿ ೯.೩೦ಕ್ಕೆ ಬಿಡುಗಡೆ ಎಂದು ಇಲ್ಲಿನ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಸೋಮವಾರ (೩೦-೦೬-೦೮) ರಾತ್ರಿ ಟಿವಿ ಚಾನಲ್ಗಳಲ್ಲಿ (ನಾನು ನೋಡಿದ್ದು ಫಿಲ್ಮಿ ಚಾನಲ್) ೧೦-೧೫ ನಿಮಿಷ ನಿರಂತರವಾಗಿ ಈ ಜಾಹೀರಾತನ್ನು ಮತ್ತೆ ಮತ್ತೆ ತೋರಿಸಲಾಯಿತು.
ರಾತ್ರಿ ಈ ಜಾಹೀರಾತು ನೋಡಿದಾಗ ಅರೆ ಹೊಸತು ಅನ್ನಿಸಿತು. ಇಷ್ಟವಾಯಿತು. ಮತ್ತೆ ಮತ್ತೆ ಅದನ್ನೇ ನೋಡುತ್ತ ನೋಡುತ್ತ ಬೆಳಗ್ಗೆ ಪತ್ರಿಕೆಯಲ್ಲಿ ನೋಡಿದ ಜಾಹೀರಾತು ನೆನಪಾಯಿತು. ಥಟ್ಟನೆ ಪತ್ರಿಕೆ ತೆಗೆದುನೋಡಿದೆ. ಹೌದು ಅದೇ ಜಾಹೀರಾತು. ವ್ಹಾಟೆ ಎನ್ ಐಡಿಯಾ ಸರ್ ಜಿ!
ಏನು ಐಡಿಯಾ ನೋಡಿ!
ನಾನು ಕಲಿತ ಪತ್ರಿಕೋದ್ಯಮ ಪದವಿಯಲ್ಲಿ ಜಾಹೀರಾತು ಒಂದು ವಿಷಯ. ಈಗಲೂ ಪತ್ರಿಕೋದ್ಯಮದಲ್ಲಿದ್ದರೂ ನನಗೆ ಜಾಹೀರಾತಿನ ಬಗ್ಗೆ ಯಾಕೋ ವಿಶೇಷ ಆಸಕ್ತಿ. ನೀವೆಲ್ಲ ರಿಮೋಟ್ ಹಿಡಿದೇ ಟಿವಿ ಮುಂದೆ ಕುಳಿತುಕೊಳ್ಳುತ್ತೀರಿ. ಜಾಹೀರಾತು ಬಂದಾಕ್ಷಣ ಚಾನಲ್ ಬದಲಿಸಲು. ಆದರೆ ನಾನು? ಚಾನಲ್ ಬದಲಿಸುವುದು ಕಡಿಮೆ. ಜಾಹೀರಾತನ್ನೂ ಕಾರ್ಯಕ್ರಮದಷ್ಟೇ ಅಥವಾ ಅದಕ್ಕಿಂತ ಹೆಚ್ಚು ಆಸಕ್ತಿಯಿಂದ ನೋಡುತ್ತೇನೆ. ನೀವೂ ಸರಿಯಾಗಿ ಗಮನಿಸಿ ನೋಡಿ ದಾರಾವಾಹಿ ಅಥವಾ ಇತರೆ ಕಾರ್ಯಕ್ರಮ ನಿರ್ಮಿಸಿರುವುದಕ್ಕಿಂತ ಹೆಚ್ಚಿನ ಬುದ್ದಿವಂತಿಕೆ ಮತ್ತು ಚಾಕಚಕ್ಯತೆಯಿಂದ ಜಾಹೀರಾತು ನಿರ್ಮಿಸಿರುತ್ತಾರೆ.
ವಿಐಪಿ ಸೂಟ್ಕೇಸ್ ಜಾಹೀರಾತು ನಂಗಿನ್ನೂ ನೆನಪಿದೆ. ಹಡುಗಿಯೊಟ್ಟಿಗೆ ಒಬ್ಬ ಹುಡುಗ ಕಾರಿನಲ್ಲಿ ಹೋಗುತ್ತಿರುತ್ತಾನೆ. ಕಾರು ಕೆಟ್ಟು ನಿಲ್ಲುತ್ತದೆ. ಕೊಂಚ ಹೊತ್ತಿನಲ್ಲಿ ಬಂದ ಹುಡುಗನ ಬೈಕ್ ಹತ್ತಿ ಹುಡುಗಿ ಕಾರಿನ ಹುಡುಗನಿಗೆ ಟಾಟಾ ಮಾಡುತ್ತಾಳೆ. ಅದರ ನಂತರ ಈತ ಕಾರಿನಲ್ಲಿದ್ದ ಸೂಟ್ಕೇಸ್ ತೆಗೆದು, ಬಂದ ಲಾರಿಗೆ ಚತ್ರಿ ಮೂಲಕ ಸಂಪರ್ಕ ಕಲ್ಪಿಸಿ, ಸೂಟ್ಕೇಸ್ ಮೇಲೆ ತಾನು ಕುಳಿತುಕೊಳ್ಳುತ್ತಾನೆ. ಅದು ಚಕ್ರ ಇರುವ ಸೂಟ್ಕೇಸ್. ಸ್ವಲ್ಪ ದೂರ ಹೋಗುವಷ್ಟರಲ್ಲಿ ಲಾರಿ ಟಾಟಾ ಮಾಡಿ ಹೋಗಿದ್ದ ಹುಡುಗಿ ಕುಳಿತಿದ್ದ ಬೈಕನ್ನು ಓವರ್ಟೇಕ್ ಮಾಡುತ್ತದೆ. ಈತ ಅವಳಿಗೆ ಟಾಟಾ ಮಾಡುತ್ತಾನೆ. ಅದಕ್ಕೆ ಹಿಂದಿಯ ಹಳೆಯ ಹಾಡಾದ ಸುಹಾನಾ ಸಫರ್ ಹೇ ಯೆ ಮೋಸಂ ಹಸಿ... ಹಾಡು.
ನೋಡಿ ಎಂತಹ ಅದ್ಭುತ ಕಲ್ಪನೆ. ಹಾಗಾಗಿಯೇ ಇಂದಿಗೂ ಮರೆತಿಲ್ಲ.
ಬ್ರು ಕಾಫೀಯ, ಓಟು ಕೇಳಲು ಬಂದ ರಾಜಕಾರಣಿಗೇ ಪ್ರಶ್ನೆ ಕೇಳುವ ಚಹಾದ ಜಾಹೀರಾತುಗಳು ಇಂದಿಗೂ ನೆನಪಿನಲ್ಲಿವೆ. ಆತ ಸಹಾರಾ ವಿಮೆ ಮಾಡಿಸುತ್ತಾನೆ. ನಂತರ ಸ್ಕೂಟರ್ ಹತ್ತಿ ಬೆಟ್ಟದ ಬಳಿ ಹೋಗಿ ಕುಳಿತು ಸಾಂಬಾ, ವಾಂಬಾ ಎಲ್ಲಿದ್ದೀಯಾ ಇಳಿದು ಬಾ. ನಿನ್ನಮ್ಮನ ಎದೆ ಹಾಲು ಕುಡಿದಿದ್ದರೆ ಇಳಿದು ಬಾ ಎಂದು ಸವಾಲು ಹಾಕುವ ಸಹಾರಾ ಸಂಸ್ಥೆ ಜಾಹೀರಾತೂ ತಕ್ಕಮಟ್ಟಿಗಿದೆ.
ಜಾಹೀರಾತು ವಲಯದಲ್ಲಿ ಕೆಲವರನ್ನು ಆಕರ್ಷಿಸಿದ ಮತ್ತು ಖುಶಿ ಕೊಟ್ಟಿದ್ದು ಪೆಪ್ಸಿ, ಕೋಕ್ ಸಂಸ್ಥೆಗಳ ಜಾಹೀರಾತು ಸಮರ. ಅದು ಇಂದಿಗೂ ಮುಂದುವರೆದಿದೆ. ಥಮ್ಸ್ ಅಪ್ಗಾಗಿ ಅಕ್ಷಯ್ ಕುಮಾರ್ ಮಂಗನಂತೆ ಎಲ್ಲೆಲ್ಲೊಂದೋ ಹಾರಿ, ಮೆಟ್ಟಿಲ ಮೇಲೆ ಜಾರಿ, ರಸ್ತೆಗಳ ನಡುವೆ ತೂರಿ ಲಾರಿಯಲ್ಲಿದ್ದ ಬಾಟಲಿ ಎಗರಿಸುತ್ತಾನೆ. (ಕುರ್ಕುರೆ ಜಾಹೀರಾತಿನಲ್ಲಿ ಜೂಹಿ ಹೀಗೆ ಪ್ಯಾಂಕು ಪ್ಯಾಂಕು ಎಂಬ ಮೀನು ಮಾರಾಟದ ಹಾರ್ನು ಕೇಳಿ ಯಾಹೀ ಅಂತ ಹಾರಿದ್ದೂ ನಿಮಗೆ ನೆನಪಿರಬಹುದು) ಇದೇ ಜಾಹೀರಾತು ಇರಿಸಿಕೊಂಡು ಪೆಪ್ಸಿಯವರು ಈಗ ಹೊಸ ಜಾಹೀರಾತು ಮಾಡಿದ್ದಾರೆ.
ಅಂಕಲ್ ಈ ವಯಸ್ಸಿನಲ್ಲಿ ಕೋಲ್ಡ್ಡ್ರಿಂಕ್ಸ್ಗಾಗಿ ಕಟ್ಟಡದಿಂದ ಕಟ್ಟಡಕ್ಕೆ ಹಾರಿ ಕೈಕಾಲು ಮುರಿದುಕೊಳ್ಳಬೇಡ. ಯಾಕೆಂದರೆ ವಯಸ್ಸಾದ ಮೇಲೆ ಮುರಿದ ಎಲುಬು ಕೂಡಿಕೊಳ್ಳುವುದು ಲೇಟು. ಅದನ್ನು ಪೆಪ್ಸಿ ಕುಡಿ. ಎಲ್ಲ ಕಡೆ ಸಿಗುತ್ತೆ ಎಂದು ಜಾಹೀರಾತು ಮಾಡಿ ಥಮ್ಸ್ಅಪ್ಗೆ ಟಾಂಗ್ ನೀಡಿದ್ದಾರೆ.
ಕೆಲವು ವರ್ಷದ ಹಿಂದಂತೂ ಇದು ಪರಾಕಾಷ್ಠೆಯ ತುದಿ ತಲುಪಿತ್ತು. ನೋಡುಗರಾದ ನಮಗೋ ಮಜವೊ ಮಜಾ.
ಮಾನ ಹಕ್ಕು, ನಾಯಿ ಹಕ್ಕುಗಳು ಏನೇ ಹೇಳಲಿ ನಂಗಂತೂ ಹಚ್ ಜಾಹೀರಾತು ಇಷ್ಟ. ಹಚ್ ಸಂಸ್ಥೆಯ ಗ್ರಾಹಕ ಸೇವಾ ಕೇಂದ್ರ ಯಾವಾಗಲೂ ನಿಮಗೆ ಸಹಾಯ ಮಾಡಲು ಸಿದ್ಧವಾಗಿರುತ್ತದೆ ಎಂದು ನಾಯಿಯ ಸಹಾಯದ ಮೂಲಕ ಎಷ್ಟು ಅಂದವಾಗಿ ತೋರಿಸಿದ್ದಾರೆ. ಅದನ್ನು ನೋಡಿ ಖುಶಿ ಪಡುವುದು ಬಿಟ್ಟು ಅದ್ಯಾರೋ ಕೇಸು ಹಾಕಿದ್ದಾರಂತೆ. ಅದರ ಪರಿಣಾಮ ಹಚ್ ಕಂಪನಿಯವರು ಕೆಲವು ದಿನ ಕಂಪ್ಯೂಟರ್ ನಾಯಿಯನ್ನೂ ತೋರಿಸಿ ಚಟ ತೀರಿಸಿಕೊಂಡರು. ಈಗ ಮತ್ತೆ ಜೀವಂತ ನಾಯಿಯನ್ನೇ ತೋರಿಸುತ್ತಿದ್ದಾರೆ.
ಸರಿಯಾಗಿ ಗಮನಿಸಿ ನೋಡಿ. ಜಾಹೀರಾತು ಮಾಡಲು ಭಾರೀ ಬುದ್ದಿವಂತಿಕೆ ಬೇಕು. ನಿಮ್ಮ ಕಲ್ಪನೆಗಳು ಏನೇ ಇದ್ದರೂ ೧-೨ ನಿಮಿಷದಲ್ಲಿ ಮುಗಿಸಬೇಕು. ಅದು ಗ್ರಾಹಕರ ಮನಸ್ಸಿನ ಮೇಲೆ ಪರಿಣಾಮ ಬೀರಿ, ಅವರು ಆ ವಸ್ತುವನ್ನು ಕೊಳ್ಳುವಂತಾಗಬೇಕು. ನನಗಂತೂ ಬಹುತೇಕ ಜಾಹೀರಾತುಗಳು ಅದ್ಭುತ ಅಂತಲೇ ಅನ್ನಿಸುತ್ತವೆ. ಮೊದಲಾದರೆ ಒಂದು ಜಾಹೀರಾತು ಮಾಡಿದರೆ ಕನಿಷ್ಟ ೬ ತಿಂಗಳು, ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚು ಸಮಯ ನಿಭಾಯಿಸಹುದಿತ್ತು. ಆದರೆ ಈಗ ಹಾಗಿಲ್ಲ. ಒಂದೆರಡು ತಿಂಗಳು. ಅಷ್ಟಕ್ಕೆ ಅದು ಹಳೆತು. ಮತ್ತೆ ಹೊಸ ಸ್ಲೋಗನ್, ಹೊಸ ಕಲ್ಪನೆ, ಹೊಸ ಜಾಹೀರಾತು. ಒಂದೊಂದು ಸಂಸ್ಥೆಯೂ ಜಾಹೀರಾತಿನ ಮೇಲೆ ಕೋಟಿಗಟ್ಟಲೆ ದುಡ್ಡು ಚೆಲ್ಲುತ್ತಿವೆ.
ಇದರ ಪರಿಣಾಮ ಬೇಕಾದಷ್ಟು ಜಾಹೀರಾತು ಏಜೆನ್ಸಿಗಳು ಹುಟ್ಟಿಕೊಂಡಿವೆ. ಒಂದು ಸ್ಲೋಗನ್ಗೆ, ಒಂದು ಕಲ್ಪನೆಗೆ ಇಲ್ಲಿ ಕೋಟಿಗೂ ಮೀರಿದ ಬೆಲೆಯಿದೆ. ಇದಕ್ಕೇ ಇರಬೇಕು ನನಗೂ ಜಾಹೀರಾತಿನತ್ತ ಸೆಳೆತ!
ಹಾಗಂತ ಕೆಟ್ಟ ಜಾಹೀರಾತುಗಳೇ ಇಲ್ಲವೆಂದಲ್ಲ. ಲೇಯ್ಸ್ ಚಿಪ್ಸ್ನ ಬಾಯಿ ಕಳೆದು ಆ... ಎಂದರಚುವ ಹೊಸ ಜಾಹೀರಾತು ಸ್ವಲ್ಪವೂ ಚೆನ್ನಾಗಿಲ್ಲ. ಅವರ ಮುಸುಡಿಗಳನ್ನು ನೋಡಿದರೆ ಲೇಯ್ಸ್ ಬಿಡಿ ಜನ ಬೇರೆ ಯಾವ ಚಿಪ್ಸೂ ತಿನ್ನದಂತಾಗಿದೆ. ಒಳ್ಳೆಯ ಜಾಹೀರಾತುಗಳು ಇಂತಹ ಕೆಟ್ಟ ಜಾಹೀರಾತುಗಳನ್ನು ಮರೆಸಿ ಮನಸ್ಸಿಗೆ ಮುದ ನೀಡುತ್ತವೆ. ಅದೇ ಸಂತೋಷ.
(ನನಗೆ ಈ ಮೇಲ್ ಮೂಲಕ ಬಂದಿದ್ದ, ಸಂಗ್ರಹಿಸಿಟ್ಟಿದ್ದ ಕೆಲವು ಉತ್ತಮ ಜಾಹೀರಾತು ಫೋಟೋಗಳಿದ್ದವು. ಅವುಗಳನ್ನು ಈ ಲೇಖನದ ಜತೆ ಪ್ರಕಟಿಸಿದ್ದೇನೆ. ನೀವಾ ಹೇರ್ ಕ್ರೀಂ ಜಾಹೀರಾತು ನೋಡಿ,ನೀವು ಸತ್ತು ಮಣ್ಣಲ್ಲಿ ಮಣ್ಣಾದರೂ ಕೂದಲು ಹಾಗೇ ಇರುತ್ತದೆ! ಪೆಡಿಗ್ರೀ ತಿಂದರೆ ನಾಯಿ ಹೆಗ್ಗಣದಂತೆ ಟಾರ್ ರಸ್ತೆಯನ್ನೂ ಅಗೆದು ತೆಗೆಯಲ್ಲದು... ಹೀಗೆ. ನಿಮಗೆ ಇಷ್ಟವಾಗಬಹುದು ಅಂದುಕೊಂಡಿದ್ದೇನೆ)