Monday, December 24, 2007

ಚುಕುಬುಕು ಚುಕುಬುಕು ರೈಲೆ ಆಹಾ ನಿನ್ನ ಸ್ಟೈಲೆ


ತಿರುವುಗಳಲ್ಲಿ ಬಳುಕುತ್ತ, ಘಾಟಿಯಲ್ಲಿ ತೇಕುತ್ತ, ಎಡಕುಮೇರಿಯಲ್ಲಿ ತೆವಳುತ್ತ, ಪಶ್ಚಿಮ ಘಟ್ಟವನ್ನು ಬಳಸುತ್ತ ಮಂಗಳೂರು- ಬೆಂಗಳೂರು ರೈಲೆಂಬ ಸಿಂಗರಿತ ಚೆಲುವೆ ಮೆಲ್ಲಗೆ...


ಬಿಂಕದ ಸಿಂಗಾರಿ

ಮೈ ಡೊಂಕಿನ ವಯ್ಯಾರಿ...

ಎಂದು ಘಾಟಿ ಹತ್ತುತ್ತಿದ್ದರೆ ರೋಮಾಂಚನ!
೧೧ ವರ್ಷದ ನಂತರ ಆರಂಭವಾದ ಮಂಗಳೂರು- ಬೆಂಗಳೂರು ರೈಲಿನ ಮೊದಲ ಪ್ರಯಾಣದಲ್ಲೇ ಆದ ಅನುಭವಗಳು, ಕಂಡ ದೃಶ್ಯಗಳು ಅಧ್ಬುತ. ಅತ್ಯಧ್ಬುತ!! ಕೆಲವು ದೃಶ್ಯಗಳು ರುದ್ರ ರಮಣೀಯ!
ಮೊದಲ ರೈಲು ಮಂಗಳೂರಿನಿಂದ ಮಧ್ಯಾಹ್ನ ೩.೦೦ ಗಂಟೆಗೆ ಬಿಟ್ಟಿದ್ದರಿಂದಸುಂದರ ದೃಶ್ಯಗಳು ನೋಡಲು ಸಿಕ್ಕವು.ಒಟ್ಟು ೬೭೦ ಸೇತುವೆಗಳು, ೫೭ ಸುರಂಗಗಳು, ಹಚ್ಚಹಸಿರಿನ ಪಶ್ಚಿಮ ಘಟ್ಟದ ಗಿರಿಗಳು. ಸಮುದ್ರ ಮಟ್ಟದಲ್ಲಿರುವ ಮಂಗಳೂರಿನಿಂದ ಹೊರಡುವ ರೈಲು ಸಮುದ್ರ ಮಟ್ಟದಿಂದ ೯೬೭ ಮೀ. ಎತ್ತರದಲ್ಲಿರುವ ಸಕಲೇಶಪುರಕ್ಕೆ ಹತ್ತುವ ಪರಿ ನೀವೊಮ್ಮೆ ನೋಡಬೇಕು. ನೋಡಲೇಬೇಕು.ಸುಬ್ರಹ್ಮಣ್ಯ- ಸಕಲೇಶಪುರದ ನಡುವಿನ ೫೫ ಕಿ.ಮೀ. ಹಳಿ ಮಂಗಳೂರು- ಬೆಂಗಳೂರು ರೈಲಿನ ಹೈಲೈಟ್. ಈ ೫೫ ಕಿ.ಮೀ. ವ್ಯಾಪ್ತಿಯಲ್ಲಿ ೫೭ ಸುರಂಗಗಳಿವೆ. ಒಟ್ಟು ಸುರಂಗಳ ಮಾರ್ಗದ ಉದ್ದ ೧೧ ಕಿ.ಮೀ. ರೈಲಿನ ಹಿಂಭಾಗ ಒಂದು ಸುರಂಗದಿಂದ ಹೊರಬಿದ್ದಿರುವುದಿಲ್ಲ ಆಗಲೇ ಮುಂಭಾಗ ಇನ್ನೊಂದು ಸುರಂಗ ಹೊಕ್ಕಿರುತ್ತದೆ.
ಈ ದಾರಿಯಲ್ಲಿ ಒಟ್ಟು ೨೪೧ ಸೇತುವೆಗಳಿವೆ. ಇವು ಬರೇ ಸೇತುವೆಗಳಲ್ಲ ಮೈನವಿರೇಳಿಸುವ ತಾಣಗಳು, ಎಂಜಿನಿಯರಿಂಗ್‌ನ ಅಧ್ಬುತ ನಿರ್ಮಾಣಗಳು. ೧೦೦-೨೦೦ ಅಡಿ ಎತ್ತರದ ಸಿಮೆಂಟ್ ಕಂಬಗಳನ್ನು ನಿರ್ಮಿಸಿ ಅದರ ಮೇಲೆ ಹಳಿ ಹಾಕಿ ರೈಲು ಓಡಿಸುವುದು ಸಾಮಾನ್ಯಾದ ಕೆಲಸವೇ? ಇಂತಹ ಎತ್ತರದ ಸೇತುವೆಗಳ ಮೇಲೆ ಹೋಗುವಾಗ ಕೆಳಗಿನ ಪ್ರಪಾತ ನೋಡಿದರೋ ಹೃದಯ ಬಾಯಿಗೆ ಬರುವುದು ಅಂದರೇನು ಎಂಬುದು ಅರ್ಥವಾಗುತ್ತದೆ. ಅಲ್ಲದೆ ಪ್ರಯಾಣಿಕರ ರೈಲು ಓಡಿಸಲು ಅಧಿಕಾರಿಗಳು ಯಾಕಿಷ್ಟು ಹಿಂಜರಿಯುತ್ತಾರೆ ಎಂಬುದೂ ಅರಿವಿಗೆ ಬರುತ್ತದೆ.
ಘಾಟಿಯಲ್ಲಿ ೧೧೦ ತಿರುವುಗಳಿವೆ, ಎಡಕುಮೇರಿ ಕಮರಿಯನ್ನು ಸುತ್ತು ಬಳಸುವಾಗ ರೈಲು ಸರಿಯಾಗಿ ಅರ್ಧಚಂದ್ರಾಕೃತಿಯಾಗಿ ಮಾರ್ಪಾಡಾಗುತ್ತದೆ. ಆಗ ಇಡೀ ಗಿರಿಗಳ ಸಾಲಿಗೆ ಸಣ್ಣದೊಂದು ಅರ್ಧಚಂದ್ರದ ನೆಕ್ಲೆಸ್ ತೊಡಿಸಿದಂತೆ ಕಾಣುತ್ತದೆ!
ಹತ್ತು ಹಲವು ಅಚ್ಚರಿಗಳು
ಸುಬ್ರಹ್ಮಣ್ಯದಿಂದ ಸಕಲೇಶಪುರ ನಡುವೆ ೭ ನಿಲ್ದಾಣಗಳಿವೆ. ಇವುಗಳಲ್ಲಿ ೩ ನಿಲ್ದಾಣಗಳಿಗೆ ರೈಲ್ವೆ ಹಳಿ ಬಿಟ್ಟರೆ ಬೇರೆ ಸಂಪರ್ಕ ರಸ್ತೆಗಳೇ ಇಲ್ಲ! ಐದು ನಿಲ್ದಾಣಗಳಿಗೆ ವಿದ್ಯುತ್ ಸಂಪರ್ಕವೇ ಇಲ್ಲ. ಈ ನಿಲ್ದಾಣಗಳು ಜನರೇಟರ್ ಅಥವಾ ಸೋಲಾರ್ ಬೆಳಕಿನ ಆಧಾರದಲ್ಲಿ ಕೆಲಸ ನಿರ್ವಹಿಸುತ್ತವೆ. ಎಡಕುಮೇರಿ ನಿಲ್ದಾಣ ಭಾರತೀಯ ರೈಲ್ವೆಯ ಮೊದಲ ಸೋಲಾರ್ ಆಧಾರಿತ ನಿಲ್ದಾಣ ಎಂಬ ಹೆಗ್ಗಳಿಗೆ ಪಾತ್ರವಾಗಿರುವುದು ನಿಮಗೆ ಗೊತ್ತೇ ಇರಬಹುದು. ಎಡಕುಮೇರಿ ರೈಲು ನಿಲ್ದಾಣವಂತೂ ಸುತ್ತಣ ಸುಂದರ ಪರಿಸರದಿಂದಾಗಿ ಒಂದೊಳ್ಳೆ ರೆಸಾರ್ಟಿನಂತೆ ಕಂಗೊಳಿಸುತ್ತದೆ.
ಘಾಟಿ ಹತ್ತುವ ಧಾಟಿ
ಇಂತಹ ಘಾಟಿಯನ್ನು ರೈಲು ಹೇಗೆ ಹತ್ತುತ್ತದೆ? ನಿಮ್ಮಲ್ಲೊಂದು ಅನುಮಾನ ಇರಬಹುದು. ಪ್ಯಾಸೆಂಜರ್ ರೈಲು ಘಟ್ಟ ಹತ್ತುವಾಗ ಹಿಂದಿನಿಂದ ಎರಡು ಎಂಜಿನ್ ಜೋಡಿಸಲಾಗುತ್ತದೆ. ಇವು ಹಿಂದಿನಿಂದ ರೈಲನ್ನು ಒತ್ತಿಕೊಡುತ್ತವೆ. ಘಾಟಿ ಹತ್ತುವಾಗ ರೈಲಿನ ವೇಗ ಕೇವಲ ೩೦ಕಿ.ಮೀ. ಅದಕ್ಕಿಂತ ಹೆಚ್ಚಿನ ವೇಗ ಹೋಗುವ ಹಾಗಿಲ್ಲ. ಎಂಜಿನ್‌ಗಳಿಗೆ ಅಟೋಮ್ಯಾಟಿಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್) ಅಳವಡಿಸಲಾಗಿದೆ.ಬರುವಾಗ? ೩ ಎಂಜಿನ್‌ಗಳನ್ನು ಮುಂದೆ ಅಳವಡಿಸಲಾಗುತ್ತದೆ. ಹೀಗಾಗಿ ಹೋಗುವಾಗ ಸುಬ್ರಹ್ಮಣ್ಯದಲ್ಲಿ ಹಾಗೂ ಬರುವಾಗ ಸಕಲೇಶಪುರದಲ್ಲಿ ರೈಲಿಗೆ ಹೆಚ್ಚುವರಿ ಎಂಜಿನ್ ಜೋಡಿಸಲಾಗುತ್ತದೆ.ಸುಬ್ರಹ್ಮಣ್ಯದಿಂದ ಸಕಲೇಶಪುರಕ್ಕಿರುವ ಘಾಟಿಯ ೫೫ ಕಿ.ಮೀ. ಕ್ರಮಿಸಲು ರೈಲು ಎರಡೂವರೆ ತಾಸು ತೆಗೆದುಕೊಳ್ಳುತ್ತದೆ. ಒಂದು ಘಾಟಿ ಹತ್ತಲು ಅಥವಾ ಇಳಿಯಲು ಆರಂಭಿಸಿತೆಂದರೆ ಅದು ಘ್ಯಾಟಿಯ ವ್ಯಾಪ್ತಿ ದಾಟುವವರೆಗೆ ಇನ್ನೊಂದು ರೈಲು ಘಾಟಿ ಪ್ರದೇಶ ಪ್ರವೇಶಿಸುವಂತಿಲ್ಲ.
ಒಂದು ರೈಲಿಗೆ ಎರಡೂವರೆ ತಾಸಿನಂತೆ ದಿನಕ್ಕೆ ೮ ರೈಲು ಮಾತ್ರ ಘಾಟಿ ಹತ್ತಿಯಲು ಸಾಧ್ಯ. ಈಗಾಗಲೇ ದಿನಕ್ಕೆ ೫ ಗೂಡ್ಸ್ ರೈಲು ಹಾಗೂ ೨ ಪ್ರಯಾಣಿಕರ ರೈಲು ಓಡಾಡುತ್ತಿದೆ. ಅಂದರೆ ಇನ್ನೊಂದು ರೈಲು ಮಾತ್ರ ಓಡಿಸಲು ಸಾಧ್ಯವಾ?ಹೌದು. ಬೆಳಗ್ಗೆ ಇನ್ನೊಂದು ಮಂಗಳೂರು-ಬೆಂಗಳೂರು ರೈಲು ಆರಂಭವಾದರೆ ಸರಕು ಸಾಗಣೆ ರೈಲು ಓಡಾಟ ಕಡಿತ ಮಾಡಬೇಕಾಗುತ್ತದೆ.
ಶೇ.೧೦೦ರಷ್ಟು ಬ್ರೇಕ್ ಸರಿ ಇದ್ದರೆ ಮಾತ್ರ ರೈಲು ಬಿಡಬೇಕು. ಘಾಟಿ ಇಳಿಯುವಾಗ ೩ ಎಂಜಿನ್‌ಗಳನ್ನು ಮುಂದೆ ಇರಿಸಿದ್ದರೂ ರೈಲು ನಿಯಂತ್ರಣಕ್ಕೆ ಬಾರದಿದ್ದಲ್ಲಿ ನಿಲ್ಲಿಸಲೆಂದು ೨ ನಿಲ್ದಾಣಗಳಲ್ಲಿ ಕ್ಯಾಚ್ ಸ್ಲೈಡಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಘಾಟಿಯಲ್ಲಿರುವ ಎಲ್ಲ ನಿಲ್ದಾಣಗಳನ್ನೂ ಇದನ್ನು ನಿರ್ಮಿಸಬೇಕಿದೆ. ಅಕಸ್ಮಾತ್ ರೈಲು ಬ್ರೇಕು ಸರಿಯಾಗಿ ಹಿಡಿಯದೇ ಇದ್ದಲ್ಲಿ ಕ್ಯಾಚ್ ಸ್ಲೈಡಿಂಗ್ ಹಳಿಯಲ್ಲಿ ಹೋಗಿ ಉಸುಕಿನಲ್ಲಿ ಹುಗಿಯುತ್ತದೆ.. ಇದರಿಂದ ಎಂಜಿನ್ ಮತ್ತು ಮೊದಲೆರಡು ಭೋಗಿಗೆ ಕೊಂಚ ಹಾನಿಯಾಗಬಹುದು. ಉಳಿದವುಗಳಿಗೆ ಏನೂ ಹಾನಿಯಿಲ್ಲ.
ಮಂಗಳೂರು- ಬೆಂಗಳೂರು ಮೊದಲ ರೈಲಿನಲ್ಲಿ ಕುಳಿತು ಪ್ರಯಾಣಿಸುತ್ತಿದ್ದರೆ ಒಳಗೊಳಗೇ ಖುಶಿ. ಆಗಾಗ ರೋಮಾಂಚನ. ಜನ ಹಳಿಯುದ್ದಕ್ಕೂ ಅಲ್ಲಲ್ಲಿ ನಿಂತು ರೈಲಿಗೆ ಕೈಬೀಸುತ್ತಿದ್ದರು. ಎಷ್ಟು ವಿಚಿತ್ರ ಅಂದರೆ ಒಂದು ರೈಲೆ ಆರಂಭ ನಮ್ಮನ್ನೆಲ್ಲ ಅದೆಷ್ಟು ಸಂತೋಷಕ್ಕೆ ಈಡುಮಾಡಿದೆ ನೋಡಿ. ರೈಲು ಆರಂಭವಾಗುತ್ತಿದ್ದಂತೆ ನಾವು ರೈಲು ವಿಳಂಬವಾಗಿರುವುದನ್ನು, ಅದರಿಂದ ನಾವು ಪಟ್ಟ ಪಾಡನ್ನು ಮರೆತಿದ್ದೇವೆ. ಒಂದು ಸಾರ್ಥಕ್ಯದ ಭಾವ ಮೂಡಿದೆ. ಆದರೆ ಘಾಟಿಯ ಸೌಂದರ್ಯ ಸವಿಯೇಕೆಂದರೆ ನೀವು ಬೆಳಗ್ಗಿನ ಸಮಯದಲ್ಲಿ ಓಡಾಡುವ ರೈಲು ಬರುವವರೆಗೆ ಕಾಯಲೇಬೇಕು.