ಮೂರೂರು ಅಂದರೆ ಅದೇಕೋ ಖುಶಿ. ಹಬ್ಬದ ದಿನಗಳೇ ಇರಲಿ, ಖಾಲಿ ದಿನಗಳೇ ಇರಲಿ ಮೂರೂರು ಸದಾ ಚಟುವಟಿಕೆಯಿಂದ ಕೂಡಿರುತ್ತದೆ. ಈಗ ನಾನು ಮೂರೂರು ಬಿಟ್ಟು ಮೂರ್ ನಾಲ್ಕು ವರ್ಷಗಳೇ ಆಯಿತು. ಆದರೂ ಮೂರೂರು ಮಾತ್ರ ಸದಾ ಅಚ್ಚುಮೆಚ್ಚು.
ಮೊನ್ನೆ ದೀಪಾವಳಿಗೆ ಊರಿಗೆ ಹೋಗಿದ್ದಾಗ ಮೂರೂರಿಗೂ ಹೋಗಿದ್ದೆ. ಮೂರೂರು ಬಸ್ ನಿಲ್ದಾಣದಲ್ಲಿ ಸೋಲ್ಗಾಯಿ ಒಡೆಯೋ (ಒಂದು ಸಣ್ಣ ತೆಂಗಿನ ಕಾಯನ್ನು ಇಟ್ಟು, ನಿಗದಿತ ದೂರದಿಂದ ವ್ಯಕ್ತಿಗಳು ಕಲ್ಲುಎಸೆದು ಆ ತೆಂಗಿನ ಕಾಯನ್ನು ಒಡೆಯಬೇಕು. ೫ ರೂ. ನೀಡಿದರೆ ೩ ಕಲ್ಲು. ಆದರಲ್ಲಿ ೧ ಕಲ್ಲು ತಾಗಿಸಿದರೆ ಇನ್ನೊಂದು ಚಾನ್ಸು ಫ್ರೀ.) ಕಾರ್ಯ ನಡೆಯುತ್ತಿತ್ತು. ಈಗ ನನ್ನ ಊರಾದ ಕತಗಾಲದಲ್ಲಿ ಅಂತಹ ಯಾವುದೇ ಚಟುವಟಿಕೆ ಇರಲಿಲ್ಲ. ಬೋರ್ ಬೋರ್. ಮೂರೂರಿನ ಬಸ್ ನಿಲ್ದಾಣದಲ್ಲಿ ದೀಪಾವಳಿಯ ೩ ದಿನವೂ ಸೋಲ್ಗಯಿ ಒಡೆಯೋದು ನಡೆಯುತ್ತಲೇ ಇರುತ್ತದೆ. ಅದರ ಜತೆಗೇ ಹಲವು ಮನೆಗಳ ಜನರು ಒಟ್ಟಾಗಿ ತಮ್ಮ ಕೇರಿಯಲ್ಲೇ ಇಂತಹ ಆಟಗಳನ್ನು ಆಡುತ್ತಿರುತ್ತಾರೆ.
ಮೊದಲೆಲ್ಲ (ನಾನು ಸಣ್ಣವನಿದ್ದಾಗ) ದೀಪಾವಳಿಯ ಸಂದರ್ಭದಲ್ಲಿ ಮೂರೂರಿನಲ್ಲಿ ಕಬಡ್ಡಿ ಪಂದ್ಯಾವಳಿಯೇ ನಡೆಯುತ್ತಿತ್ತು. ಆಸುಪಾಸಿನ ಊರಿನ ತಂಡಗಳೆಲ್ಲ ಬರುತ್ತಿದ್ದವು. ಸಾವಿರಾರು ಜನ ಸೇರುತ್ತಿದ್ದರು. ಜಗಳಗಳೂ ಆಗುತ್ತಿದ್ದವು ಎನ್ನಿ. ಆದರೂ ಹಬ್ಬದ ಸಮಯದಲ್ಲಿ ಒಂದಷ್ಟು ಚಟುವಟಿಕೆ, ಮನೋರಂಜನೆ ಇರುತ್ತಿತ್ತು. ಹಾಗಾಗಿಯೇ ದೀಪಾವಳಿ ಬಂತೆಂದರೆ ಖುಶಿ ಖುಶಿ.
ಇನ್ನು ಚೌತಿ ಹಬ್ಬವಾದರೆ ಸಾರ್ವಜನಿಕ ಗಣಪತಿ, ವಾಲಿಬಾಲ್ ಪಂದ್ಯಾವಳಿ ಇರುತ್ತದೆ. ತುಳಸಿ ಐನದ ಸಂದರ್ಭದಲ್ಲಿ ಆಸುಪಾಸಿನ ಮನೆಯವರು ಸೇರಿಯೇ ಪಟಾಕಿ ಹೊಡೆಯುತ್ತಾರೆ. ಇದ್ಯಾವುದೂ ಇಲ್ಲ ಆಂದುಕೊಳ್ಳಿ, ನಾವೆಲ್ಲ ಮೂರೂರು ಹೈಸ್ಕೂಲಲ್ಲೋ, ಗೋಳಿಬೈಲು ಹಕ್ಕಲಿನಲ್ಲೋ (ಮೈದಾನ) ಸೇರಿ ಕ್ರಿಕೆಟ್ ಆಡುತ್ತಿದ್ದೆವು. ಒಂದಲ್ಲ ಒಂದು ಚಟುವಟಿಕೆ ಇದ್ದೇ ಇರುತ್ತಿತ್ತು. ಇದ್ಯಾವುದೂ ಇಲ್ಲದಿದ್ದರೆ ಸಾರಾಯಿ ಕುಡಿದು ಗಲಾಟೆ ಮಾಡುವುದನ್ನಾದರೂ ನೋಡಬಹುದಿತ್ತು.
ಹೀಗಾಗಿಯೇ ನನಗೆ ಮೂರೂರು ಅಚ್ಚುಮೆಚ್ಚು. ಇಂದಿಗೂ. ಕೆಲಸಕ್ಕೆ ರಜೆ ಹಾಕಿ ಊರಿಗೆ ಹೋದಾಗ ಒಮ್ಮೆಯಾದರೂ ಮೂರೂರಿಗೆ ಹೋಗದೇ ಇದ್ದರೆ ಮನಸಿಗ್ಯಾಕೋ ಕಿರಿಕಿರಿ.
ದೇಹ ಮಾತ್ರ ಮೂರೂರು ಬಿಟ್ಟು ಕತಗಾಲಕ್ಕೆ ತೆರಳಿದೆ. ಮನಸಿನ್ನೂ ಮೂರೂರಲ್ಲೇ ಇದೆ. ಎಷ್ಟಾದರೂ ಹುಟ್ಟಿ ಬೆಳೆದ ಊರಲ್ಲವೇ? ಆದಕ್ಕೇ ಊರು ಬಿಟ್ಟರೂ ನನ್ನ ಹೆಸರಿನೊಂದಿಗೆ ವಿನಾಯಕ ಭಟ್ಟ ಮೂರೂರು ಎಂದು ಊರು ಇನ್ನೂ ಉಳಿದುಕೊಂಡಿದೆ.
Saturday, November 17, 2007
Subscribe to:
Posts (Atom)